“ಯಾರಾದರೂ ನಿಧನರಾದಾಗ, ಅಪಘಾತಗಳಾದಾಗ ಹೆಣದ ಫೋಟೋ ಹಾಕಿ ನೀವು ಜನರ ಸಂವೇದನೆಯನ್ನೇ ಕೊಲ್ಲುತ್ತಿದ್ದೀರಿ. ಪತ್ರಿಕೆ ಖರೀದಿಸಿ ಮನೆಯ ಟೀಪಾಯಿ ಮೇಲೆ ಇಡುವಾಗ ಯೋಚಿಸುವಂತಾಗಿದೆ” ಎಂದು ಸಾಹಿತಿ, ಕವಿ ಜಯಂತ ಕಾಯ್ಕಿಣಿ ಅವರು ಸಂಪಾದಕರುಗಳಿಗೆ ಬಹಿರಂಗ ಪತ್ರ ಬರೆದಿದ್ದದು ‘ಹೊಸ ದಿಗಂತ’ದಲ್ಲಿ ಉಲ್ಲೇಖವಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಪತ್ರಿಕೆಯ ಸಂಪಾದಕರು ‘ಇನ್ನು ಮೇಲೆ ನಾವು ಯಾವುದೇ ಕಾರಣಕ್ಕೂ ಹೆಣದ, ಭೀಕರವಾದ ಫೋಟೋಗಳನ್ನು ಬಳಸುವುದಿಲ್ಲ’ ಎಂದು ಘೋಷಿಸಿದ ಸುದ್ದಿಯೂ ಪ್ರಕಟವಾಗಿತ್ತು (ಹೊ.ದಿ. 2.8.2019, ಮುಖಪುಟ).
ಸಂವೇದನಾಶೀಲರಾದ ಯಾರಿಗಾದರೂ ಬೆಳ್ಳಂಬೆಳಗ್ಗೆ ಪತ್ರಿಕೆಗಳ ಮುಖಪುಟದಲ್ಲಿ ಮೃತದೇಹದ ಚಿತ್ರ, ಸಾವಿನ ವೈಭವೀಕರಣ, ಅತ್ಯಾಚಾರದ ವರ್ಣನೆಯಂತಹ ಸುದ್ದಿಗಳನ್ನು ನೋಡುವುದು, ಓದುವುದೆಂದರೆ ಮನಸ್ಸಿಗೆ ಬಲು ಹಿಂಸೆಯ ವಿಚಾರವೇ. ಓದುಗರ ಮನಸ್ಸಿಗೆ ಬೆಳಗ್ಗೆ ಮುಂಚೆಯೇ ಹಿಂಸೆ ನೀಡುವುದು ಪತ್ರಿಕಾಧರ್ಮವಂತೂ ಖಂಡಿತ ಅಲ್ಲ. ಹಾಗಿದ್ದರೆ ಕೊಲೆ, ಅತ್ಯಾಚಾರ, ಹಿಂಸಾಚಾರ ಮೊದಲಾದ ವಿದ್ಯಮಾನಗಳ ಮಾಹಿತಿಯನ್ನು ಓದುಗರಿಗೆ ಒದಗಿಸುವುದು ತಪ್ಪೆ? ಎಂದು ಪತ್ರಕರ್ತ ಮಿತ್ರರು ಪ್ರಶ್ನಿಸಬಹುದು. ಅಂತಹ ವಿದ್ಯಮಾನಗಳ ಮಾಹಿತಿಯನ್ನು ನೀಡುವುದು ಖಂಡಿತ ತಪ್ಪಲ್ಲ. ಆದರೆ ಅದಕ್ಕೆ ಮುಖಪುಟವೇ ಏಕೆ? ಒಳಗಿನ ಪುಟಗಳಿಲ್ಲವೇ? ಅದೂ ಅಲ್ಲದೆ ಅಂತಹ ವಿದ್ಯಮಾನಗಳ ವರದಿಯನ್ನು ಎಷ್ಟು ಅಗತ್ಯವೋ ಅಷ್ಟಕ್ಕೆ ಸೀಮಿತಗೊಳಿಸದೆ, ಅದನ್ನು ವೈಭವೀಕರಿಸಿ, ಕೆಲವೊಮ್ಮೆ ಅತಿಯಾಗಿ ರಂಜಿಸಿ, ಮಸಾಲೆ ಬೆರೆಸಿ ಓದುಗರಿಗೆ ಉಣಬಡಿಸುವುದು ಪತ್ರಿಕಾ ಧರ್ಮಕ್ಕೆ ಅಪಚಾರವೆಸಗಿದಂತಲ್ಲವೆ? ಇದು ಅನೇಕ ಪ್ರಜ್ಞಾವಂತ, ಸಂವೇದನಾಶೀಲ ಓದುಗರನ್ನು ಕಾಡುತ್ತಿರುವ ಪ್ರಶ್ನೆ.
ಪತ್ರಿಕೆಯ ಪ್ರಸಾರ ಸಂಖ್ಯೆ ಹೆಚ್ಚಿಸುವ ತವಕದಲ್ಲಿ, ವಾಹಿನಿಗಳ ಟಿಆರ್ಪಿ ಮೇಲೇರಬೇಕೆಂಬ ಆತುರದಲ್ಲಿ ಒಂದು ಸಾವಿನ ಸುದ್ದಿಯನ್ನು ಎಳೆಎಳೆಯಾಗಿ ದಿನವಿಡೀ (ಕೆಲವೊಮ್ಮೆ 24×7) ಪ್ರಸಾರ ಮಾಡುವುದು ಇಂದಿನ ಬಹುತೇಕ ಕನ್ನಡ ವಾಹಿನಿಗಳ ಚಾಳಿಯಾಗಿ ಬಿಟ್ಟಿದೆ. ಸಿದ್ದಾರ್ಥ ಎಂಬ ಉದ್ಯಮಿ ನೇತ್ರಾವತಿ ನದಿಗೆ ಹಾರಿದ ವಿದ್ಯಮಾನದಿಂದ ತೊಡಗಿ, ಆತನ ಕುರಿತಂತೆ ಶೋಧನಾ ಕಾರ್ಯ, ಅನಂತರ ಮೃತದೇಹ ಪತ್ತೆಯಾಗಿದ್ದುದರ ಲೈವ್ ಪ್ರಸಾರ, ಮೃತದೇಹವನ್ನು ಹುಟ್ಟೂರಿಗೆ ಕೊಂಡೊಯ್ದದ್ದು, ಅಲ್ಲಿ ಅಂತಿಮಸಂಸ್ಕಾರ ನೆರವೇರಿಸಿದ್ದು, ಶವದಹನದ ಸಂದರ್ಭದಲ್ಲಿ ಕಾಣುವ ಹೊಗೆ, ಬೆಂಕಿಯ ಉರಿ, ಇದೂ ಸಾಲದೆಂಬಂತೆ ಮಗನ ಅಕಾಲ ಮರಣದಿಂದ ಅತೀವ ದುಃಖಿತರಾಗಿ ಮಾತೇ ಹೊರಡದಂತಹ ಸಿದ್ಧಾರ್ಥ ಅವರ ತಾಯಿಯ ಮುಖದ ಮುಂದೆ ಮೈಕ್ ಹಿಡಿದು ‘ಮಗನನ್ನು ಕಳೆದುಕೊಂಡ ನಿಮಗೆ ಈಗ ಏನನಿಸುತ್ತದೆ?” ಎಂದು ನಿರ್ಭಾವುಕತೆಯಿಂದ ಪ್ರಶ್ನಿಸುವುದು, ಮೃತದೇಹದ ಅಂತಿಮ ಸಂಸ್ಕಾರ ನಡೆಯುತ್ತಿರುವಾಗ ‘ಎಲ್ಲಿಗೋ ಪಯಣ…’ ಎಂಬ ಚಿತ್ರಗೀತೆಯ ಹಿನ್ನೆಲೆ ಧ್ವನಿಯ ಮಸಾಲೆ ಬೆರೆಸುವುದು… ಅಬ್ಬಬ್ಬಾ, ಇಡೀ ದಿನ ಇದನ್ನೆಲ್ಲ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಟಿವಿ ವೀಕ್ಷಕರ ಪಾಡು ಏನಾಗಬೇಡ! ತಮ್ಮ ಮಗನನ್ನು ಬೇರೆ ಬೇರೆ ಕಾರಣಗಳಿಗಾಗಿ ಕಳೆದುಕೊಂಡ ತಾಯಂದಿರಿಗಂತೂ ಟಿವಿಯಲ್ಲಿ ಇಂತಹ ದೃಶ್ಯ ನೋಡಿ ಎದೆಯೊಡೆದು ಹೋಗದೆ ಇರಲು ಸಾಧ್ಯವೆ? 18ರ ಹರೆಯದ ಮಗನನ್ನು ಇದೇ ರೀತಿ ಕಳೆದುಕೊಂಡಿದ್ದ ನನ್ನ ಹೆಂಡತಿಯಂತೂ ಮೊನ್ನೆ ಸಿದ್ದಾರ್ಥ ಅವರ ಸಾವಿನ ಸುದ್ದಿಯ ದೃಶ್ಯಗಳು ಟಿವಿಯಲ್ಲಿ ಪ್ರಸಾರವಾಗುತ್ತಿರುವಾಗ ‘ಟಿವಿ ಬಂದ್ ಮಾಡಿ. ನನಗೆ ನೋಡಲಾಗುತ್ತಿಲ್ಲ’ ಎಂದು ಎದ್ದು ಹೋಗಿದ್ದಳು. ನನಗೂ ಆ ದೃಶ್ಯಗಳನ್ನು ನೋಡಲಾಗದೆ ಟಿವಿ ಬಂದ್ ಮಾಡಿದ್ದೆ.
ಒಬ್ಬನ ಸಾವನ್ನು ವೈಭವೀಕರಿಸುವುದು, ಮೃತದೇಹದ ಚಿತ್ರವನ್ನು ಪದೇಪದೇ ತೋರಿಸುವುದು ಯಾವ ಸೀಮೆಯ ಪತ್ರಿಕೋದ್ಯಮ? ಮೃತದೇಹದ ಕರಾಳ ಚಿತ್ರ ಅಥವಾ ದೃಶ್ಯವನ್ನು ನೋಡುವ ಎಳೆಯ ಮನಸ್ಸುಗಳ ಮೇಲೆ ಆಗುವ ದುಷ್ಪರಿಣಾಮ ಬಗ್ಗೆ ಮಾಧ್ಯಮ ಲೋಕ ಎಂದಾದರೂ ತಮ್ಮ ಡೈಲಿ ಮೀಟಿಂಗ್ಗಳಲ್ಲಿ ಕಾಳಜಿಯಿಂದ ಚರ್ಚೆ ಮಾಡಿದ್ದಿದೆಯೇ? ವಾಹಿನಿಗಳ ಟಿಆರ್ಪಿ ದರ ಏರಬೇಕು, ನಿಜ. ಆದರೆ ಅದಕ್ಕೆ ಬೆಲೆ ತೆರುವವರು ಸಾವಿಗೀಡಾದವರು ಆಗಬೇಕೆ? ಅತ್ಯಾಚಾರಕ್ಕೆ ಒಳಗಾದವರು ಬೆಲೆ ತೆರಬೇಕೆ?
ಕೆಲವು ವರ್ಷಗಳ ಹಿಂದೆ ಪ್ರತಿಭಾ ಎಂಬ ಕಾಲ್ ಸೆಂಟರ್ ಉದ್ಯೋಗಿಯನ್ನು ಅದೇ ಕಂಪೆನಿಯ ಕ್ಯಾಬ್ ಡ್ರೈವರ್ ಶಿವಕುಮಾರ್ ಎಂಬಾತ ರಾತ್ರಿ ಆಕೆಯನ್ನು ಮನೆಗೆ ತಲಪಿಸುವ ವೇಳೆ ಅತ್ಯಾಚಾರವೆಸಗಿ, ಅನಂತರ ಸಾಯಿಸಿದ್ದ. ಅನಂತರ ಆತನ ಬಂಧನವಾಗಿ, ತನಿಖೆ, ವಿಚಾರಣೆ ನಡೆದು ಆರೋಪ ಸಾಬೀತಾಗಿ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ನೀಡಿತ್ತು. ತೀರ್ಪು ಪ್ರಕಟವಾದ ದಿನ ನ್ಯಾಯಾಲಯದ ಆವರಣದಲ್ಲಿದ್ದ ಪ್ರತಿಭಾಳ ತಾಯಿ ದುಃಖದಿಂದ ‘ಪ್ರತಿಭಾ, ಈಗಲಾದ್ರೂ ನಿನಗೆ ಸಮಾಧಾನ ಆಯ್ತೇನೆ? ನಿನ್ನನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ ಆಯ್ತಲ್ಲ’ ಎಂದು ಬಿಕ್ಕಿ ಬಿಕ್ಕಿ ಆಳುತ್ತಿದ್ದರು. ಇನ್ನೊಂದೆಡೆ ಶಿಕ್ಷೆಗೆ ಗುರಿಯಾದ ಶಿವಕುಮಾರ್ ಪತ್ನಿ ತಲೆಗೆ ಹೂ ಮುಡಿದು, ಶಿಸ್ತಾಗಿ ಸೀರೆಯುಟ್ಟು ಬಂದು “ನನ್ನ ಗಂಡನಿಗೆ ಅನ್ಯಾಯವಾಗಿದೆ. ಇನ್ನು ನನಗೆ ಯಾರು ಗತಿ ? ನನ್ನನ್ನು ಯಾರು ನೋಡಿಕೊಳ್ತಾರೆ ? ನೀವು ನನ್ನನ್ನು ನೋಡಿಕೊಳ್ತೀರೇನ್ರಿ?” ಎಂದು ಅಲ್ಲಿದ್ದ ದೃಶ್ಯ ಮಾಧ್ಯಮದ ವರದಿಗಾರರಿಗೆ ಪ್ರಶ್ನಿಸುತ್ತಿದ್ದಳು. ಟಿವಿ ಕ್ಯಾಮೆರಾಗಳು ತಕ್ಷಣ ತಿರುಗಿದ್ದು ಶಿವಕುಮಾರ್ ಪತ್ನಿಯತ್ತ. ಮಗಳನ್ನು ಕಳೆದುಕೊಂಡ ಪ್ರತಿಭಾಳ ತಾಯಿಯ ಮುಗಿಲು ಮುಟ್ಟುವ ರೋಧನ , ಆಕ್ರಂದನ ಟಿವಿ ಕ್ಯಾಮೆರಾ ಕಣ್ಣುಗಳಿಗೆ ಕಾಣಿಸಲೇ ಇಲ್ಲ! ಟಿವಿ ವಾಹಿನಿಗಳಲ್ಲಿ ಈ ಕುರಿತು ಪ್ರಸಾರವಾದ ಸುದ್ದಿಯಲ್ಲಿ ಶಿವಕುಮಾರ್ ಪತ್ನಿಯ ಆಕ್ರೋಶವೇ ಹೆಚ್ಚು ಹೈಲೈಟ್ ಆಗಿತ್ತು. ಪ್ರತಿಭಾಳ ತಾಯಿಯ ಆಕ್ರಂದನ ಕೇಳಿ ಬರಲೇ ಇಲ್ಲ.
ದಂತಚೋರ, ಕಾಡುಗಳ್ಳ ವೀರಪ್ಪನ್ನನ್ನು ಪೊಲೀಸರು ಕೊಂದು ಹಾಕಿದಾಗಲೂ ಆತನ ಪತ್ನಿಯ ಶೋಕವನ್ನೇ ಟಿವಿ ಮಾಧ್ಯಮಗಳು ವರ್ಣರಂಜಿತವಾಗಿ ಹೈಲೈಟ್ ಮಾಡಿದ್ದವು. ವೀರಪ್ಪನ್ನಿಂದ ಹತರಾದ ಅದೆಷ್ಟೋ ಪೊಲೀಸರ ತಂದೆ, ತಾಯಿ, ಅಕ್ಕ, ಹೆಂಡತಿಯರ ಆರ್ತನಾದ ಮಾಧ್ಯಮಗಳಿಗೆ ಮುಖ್ಯವೆನಿಸಲಿಲ್ಲ. ಮಾಧ್ಯಮ ಲೋಕದ ಸಂವೇದನಾಶೀಲತೆ ಕಳೆದುಹೋಗಿರುವುದಕ್ಕೆ ಇದಕ್ಕಿಂತ ಉಜ್ವಲ ನಿದರ್ಶನ ಬೇರೆ ಬೇಕೆ?
ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಒಮ್ಮೆ ಪ್ರಕಟವಾಗಿದ್ದ ಸುದ್ದಿಯೊಂದರ ಶೀರ್ಷಿಕೆ ಹೀಗಿತ್ತು : ‘ಮರದ ಕೊಂಬೆ ಉರುಳಿ ದಲಿತ ಮಹಿಳೆಯ ಸಾವು’. ಮರದ ಕೊಂಬೆಗೆ ಸಾವಿಗೀಡಾದ ಮಹಿಳೆ ದಲಿತಳು ಎಂದು ಗೊತ್ತಾಗಿದ್ದಾದರೂ ಹೇಗೆ? ‘ಮರದ ಕೊಂಬೆ ಉರುಳಿ ಮಹಿಳೆಯ ಸಾವು’ ಎಂದಷ್ಟೇ ಶೀರ್ಷಿಕೆ ನೀಡಿದ್ದರೆ ಸಾಕಿತ್ತಲ್ಲವೇ? ಸಾವಿನ ಸುದ್ದಿ ವರದಿಯಲ್ಲೂ ಜಾತಿಯನ್ನು ಎಳೆದು ತರುವ ಹಪಾಹಪಿ ಪತ್ರಿಕಾಲೋಕಕ್ಕೆ ಶೋಭೆ ತರುತ್ತದೆಯೆ? ದಲಿತ ಯುವತಿಯ ಮೇಲೆ ಅತ್ಯಾಚಾರ ಎಂದು ಸಲೀಸಾಗಿ ಶೀರ್ಷಿಕೆ ನೀಡುವ ಪತ್ರಕರ್ತರಿಗೆ ಅತ್ಯಾಚಾರ ಯಾವ ಜಾತಿಯ ಯುವತಿಯ ಮೇಲೆ ನಡೆದರೂ ಅದು ಅತ್ಯಾಚಾರವೇ, ಅತ್ಯಾಚಾರ ನಡೆದಾಗ ಯಾವುದೇ ಜಾತಿಯ ಯುವತಿ ಅನುಭವಿಸುವ ನೋವು, ಸಂಕಟ ಒಂದೇ ತೆರನಾಗಿದೆ ಎಂಬ ಸಾಮಾನ್ಯ ಜ್ಞಾನ, ಸಂವೇದನಾಶೀಲತೆ ಯಾಕಿರುವುದಿಲ್ಲ?
ಕೆಲವು ವರ್ಷಗಳ ಹಿಂದೆ ಹರೀಶನೆಂಬ ಯುವಕ ನೆಲಮಂಗಲ ಸಮೀಪದ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಬದುಕು-ಸಾವಿನ ನಡುವೆ ವಿಲವಿಲ ಒದ್ದಾಡುತ್ತ ‘ಹೆಲ್ಪ್ , ಹೆಲ್ಪ್’ ಎಂದು ದೀನನಾಗಿ ಮೊರೆಯಿಡುತ್ತಿದ್ದರೂ ಸುತ್ತ ಸೇರಿದ್ದ ಜನರು ತಮ್ಮ ಮೊಬೈಲ್ನಲ್ಲಿ ವೀಡಿಯೋ ದೃಶ್ಯ ಸೆರೆ ಹಿಡಿಯುವುದರಲ್ಲಿ ಬ್ಯುಸಿಯಾಗಿದ್ದರು! ಆತನನ್ನು ಆಸ್ಪತ್ರೆಗೆ ಸೇರಿಸಿ ಬದುಕಿಸುವ ಪ್ರಯತ್ನ ಯಾರೂ ಮಾಡಲೇ ಇಲ್ಲ. ಹರೀಶನ ಅಂತಿಮ ಕ್ಷಣದ ವಿಲ ವಿಲ ನರಳಾಟದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದೇ ಘನಾಂದಾರಿ ಕಾರ್ಯ ಎಂದು ಅಲ್ಲಿದ್ದವರಿಗೆ ಅನಿಸಿತ್ತು! ಕೊನೆಗೂ ಹರೀಶ ಬದುಕಲೇ ಇಲ್ಲ. ರಸ್ತೆಯಲ್ಲೇ ಹೆಣವಾಗಿ ಹೋದ. ಸುತ್ತಲಿದ್ದವರ ಸಂವೇದನಾಶೂನ್ಯತೆಯನ್ನು ಕಂಡು ಆ ಕ್ಷಣದಲ್ಲಿ ಆತ ಅದೆಷ್ಟು ಮರುಗಿರಬಹುದೋ ಏನೋ…
ಮಾಜಿ ರಾಷ್ಟ್ರಪತಿ ದಿವಂಗತ ಡಾ. ಅಬ್ದುಲ್ ಕಲಾಂ ಅವರು ಇಸ್ರೇಲ್ನ ಟೆಲ್ಅವೀವ್ಗೆ ಹೋಗಿದ್ದಾಗ ನಡೆದ ಪ್ರಸಂಗ. ಕಲಾಂ ಅವರು ಎಂದಿನಂತೆ ಆ ದಿನದ ದಿನಪತ್ರಿಕೆ ಕೈಗೆತ್ತಿಕೊಂಡು ಓದುತ್ತಿದ್ದರು. ಹಿಂದಿನ ದಿನವಷ್ಟೇ ಅಲ್ಲಿ ಉಗ್ರಗಾಮಿಗಳಿಂದ ಭಾರೀ ಸ್ಫೋಟ ಪ್ರಕರಣ ನಡೆದಿತ್ತು. ಸಾಕಷ್ಟು ಸಾವು ನೋವು ಕೂಡ ಸಂಭವಿಸಿತ್ತು. ಆದರೆ ಅವರೋದುತ್ತಿದ್ದ ಪತ್ರಿಕೆಯ ಮುಖಪುಟದಲ್ಲಿ ಅದೊಂದು ಮುಖ್ಯ ಸುದ್ದಿಯಾಗಿ ಪ್ರಕಟವಾಗಿರಲಿಲ್ಲ. ಇಸ್ರೇಲ್ನ ಅಭಿವೃದ್ಧಿ ಕುರಿತ ಸುದ್ದಿಗಳು ಮುಖಪುಟದಲ್ಲಿದ್ದು. ಕಲಾಂ ಅವರು ಕುತೂಹಲದಿಂದ ಒಳಪುಟಗಳತ್ತ ಕಣ್ಣು ಹಾಯಿಸಿದಾಗ , ಅಲ್ಲಿ ಅವರಿಗೆ ಉಗ್ರಗಾಮಿಗಳು ನಡೆಸಿದ ಸ್ಫೋಟ ಪ್ರಕರಣದ ಸುದ್ದಿ ದೊರಕಿತ್ತು. ಈ ಉದಾಹರಣೆಯನ್ನು ಕಲಾಂ ಅವರು ತಮ್ಮ ಭಾಷಣಗಳಲ್ಲಿ ಆಗಾಗ ಉಲ್ಲೇಖಿಸುತ್ತಿದ್ದರು. ಪತ್ರಿಕೆ ಕೈಗೆತ್ತಿಕೊಂಡ ಕೂಡಲೇ ಓದುಗರನ್ನು ಗಾಬರಿ, ಆತಂಕಕ್ಕೆ ತಳ್ಳುವಂಥ ಸುದ್ದಿಗಳನ್ನು, ಚಿತ್ರಗಳನ್ನು ಪ್ರಕಟಿಸುವುದು ಯುಕ್ತವಲ್ಲ ಎಂಬುದಕ್ಕೆ ಅವರು ಇಸ್ರೇಲ್ನ ಈ ನಿದರ್ಶನವನ್ನು ನೀಡುತ್ತಿದ್ದರು.
ಸಂವೇದನಾಶೀಲತೆ ಮನುಕುಲದ ಪ್ರಾಣವಾಯು ಇದ್ದಂತೆ. ಪತ್ರಕರ್ತರಿರಲಿ, ಯಾವುದೇ ರಂಗದವರಿರಲಿ ಸಂವೇದನಾರಹಿತ ನಡವಳಿಕೆ ತೋರಿದರೆ ಅದು ಅತ್ಯಂತ ಘಾತಕ ಹಾಗೂ ಮಾರಕ. ಕುವೆಂಪು ಅವರ ವಾಣಿಯಂತೆ, ‘ಮರುಕಕ್ಕೆ ಪ್ರೇಮಕ್ಕೆ ಚಿರತೆರದ ಎದೆಯೊಂದು; ಅನ್ಯಾಯಕೆಂದೆಂದು ಬಾನದೆಚ್ಚರವೊಂದು’ ಎಲ್ಲರೊಳಗೂ ಸದಾ ಇರಬೇಕು. ಸಂವೇದನಾಶೀಲ ಸೂಕ್ಷ್ಮ ಮನಸ್ಸು ನಮ್ಮೆಲ್ಲರದಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.