ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜನೆಗೊಳಿಸುತ್ತಿದೆ. ಈಗಾಗಲೇ 10,000 ಯೋಧರನ್ನು ಹೆಚ್ಚುವರಿಯಾಗಿ ಆ ರಾಜ್ಯಕ್ಕೆ ಕಳುಹಿಸಿರುವ ಕೇಂದ್ರ, ಇದೀಗ ಮತ್ತೆ 25 ಸಾವಿರ ಯೋಧರನ್ನು ಕಳುಹಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಗುರುವಾರ ಬೆಳಗ್ಗಿನಿಂದಲೇ ಪ್ಯಾರಾಮಿಲಿಟರಿ ಪಡೆಗಳ ಯೋಧರು ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ ನಿಯೋಜನೆಗೊಳ್ಳುತ್ತಿದ್ದಾರೆ.
ಕಾಶ್ಮೀರದಲ್ಲಿ ಭದ್ರತೆಯನ್ನು ಬಲಪಡಿಸುವ ಸಲುವಾಗಿ 100 ಕಂಪನಿಗಳನ್ನು (ಪ್ರತಿ ಕಂಪನಿಯು ಸುಮಾರು 100 ಸೈನಿಕರನ್ನು ಹೊಂದಿದೆ) ಕಳುಹಿಸಿಕೊಡಲಾಗಿದೆ ಎಂದು ಸರ್ಕಾರ ಕಳೆದ ವಾರ ಹೇಳಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಳೆದ ವಾರ ಕಾಶ್ಮೀರ ಕಣಿವೆಗೆ ಎರಡು ದಿನಗಳ ಭೇಟಿಯನ್ನು ನೀಡಿ ಹಿಂದಿರುಗಿದ ನಂತರ ಭಾರೀ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕಾಶ್ಮೀರದ ಹಿರಿಯ ಅಧಿಕಾರಿಗಳನ್ನು ದೋವಲ್ ಭೇಟಿಯಾಗಿದ್ದಾರೆ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಕಾಶ್ಮೀರದಲ್ಲಿ ಕಡಿಮೆ ಸೈನಿಕರಿದ್ದಾರೆ ಮತ್ತು ಅದಕ್ಕಾಗಿ ಅಲ್ಲಿ ಹೆಚ್ಚುವರಿ ಪಡೆಗಳ ಅವಶ್ಯಕತೆಯಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಕಳೆದ ವಾರ ಹೇಳಿದ್ದರು.
ಕಾಶ್ಮೀರದಲ್ಲಿ ಸೇನೆಯನ್ನು ಹೆಚ್ಚುವರಿಯಾಗಿ ನಿಯೋಜನೆ ಮಾಡಿರುವುದು ಹಲವಾರು ಉಹಾಪೋಹಗಳಿಗೆ ಕಾರಣವಾಗಿದೆ. ಕಲಂ 35ಎ ಅನ್ನು ನಿಷೇಧ ಮಾಡಬಹುದೇ ಎಂಬ ಬಗ್ಗೆ ಕುತೂಹಲಗಳು ಜನರಲ್ಲಿ ಗರಿಗೆದರಿವೆ. ಆದರೆ ಬುಧವಾರ, ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು, ರಾಜ್ಯದ ಖಾಯಂ ನಿವಾಸಿಗಳನ್ನು ವ್ಯಾಖ್ಯಾನಿಸುವ ಮತ್ತು ಹೊರಗಿನವರಿಗೆ ಆಸ್ತಿಯನ್ನು ಖರೀದಿಸುವುದನ್ನು ನಿಷೇಧಿಸಿರುವ 35ಎ ವಿಧಿಯನ್ನು ರದ್ದುಗೊಳಿಸುವ ಯಾವುದೇ ಯೋಜನೆ ನಮ್ಮ ಮುಂದೆ ಇಲ್ಲ ಎಂದು ಹೇಳಿದ್ದಾರೆ.
ಈ ನಡುವೆ, ಅಮರನಾಥ ಯಾತ್ರೆಯನ್ನು ಆಗಸ್ಟ್ 4 ರವರೆಗೆ ಸ್ಥಗಿತಗೊಳಿಸಲಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಯಾತ್ರೆ ಸ್ಥಗಿತಗೊಳಿಸಲು ಕಾರಣವೆಂದು ಸರ್ಕಾರ ಹೇಳಿದೆ, ಆದರೆ ಹವಾಮಾನ ಇಲಾಖೆಯು ಹಲಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಯನ್ನು ಇದುವರೆಗೆ ಗ್ರಹಿಸಿಲ್ಲ. ಅಧಿಕೃತ ಮೂಲಗಳ ಪ್ರಕಾರ, ಯಾತ್ರೆಗಾಗಿ ನಿಯೋಜಿಸಲಾದ ಸೈನ್ಯದ ಒಂದು ಭಾಗವನ್ನು ಸಹ ಕಾನೂನು ಮತ್ತು ಸುವ್ಯವಸ್ಥೆಗಾಗಿ ಬೇರೆ ಕಡೆ ಕರ್ತವ್ಯಕ್ಕಾಗಿ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.
ಸುಮಾರು 40,000 ಸಿಬ್ಬಂದಿಗಳನ್ನು ಹೊಂದಿರುವ ಸುಮಾರು 400 ಕಂಪನಿಗಳನ್ನು ಯಾತ್ರೆಯ ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಒಟ್ಟಿನಲ್ಲಿ ಕಳೆದ ವಾರ 10 ಸಾವಿರ ಸೈನಿಕರನ್ನು, ಈ ವಾರ 25 ಸಾವಿರ ಸೈನಿಕರನ್ನು ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿದ್ದು ದೇಶದ ಜನರಲ್ಲಿ ಭಾರೀ ಕುತೂಹಲಗಳನ್ನು ಹುಟ್ಟು ಹಾಕಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.