ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ರಾಯಲ್ ಬೆಂಗಾಲ್ ಹುಲಿ ಮರಿಯೊಂದಕ್ಕೆ ಭಾರತದ ವೇಗದ ಓಟಗಾರ್ತಿ ಹಿಮಾ ದಾಸ್ ಅವರ ಹೆಸರನ್ನಿಡಲಾಗಿದೆ. ಹಿಮಾ ದಾಸ್ ಅವರು ಈ ತಿಂಗಳು ಯುರೋಪಿಯನ್ ರೇಸ್ಗಳಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ವನಶ್ರೀ ವಿಪಿನ್ ಸಿಂಗ್ ಅವರು, “ಭಾನುವಾರ ಅಂತಾರಾಷ್ಟ್ರೀಯ ಹುಲಿ ದಿನಾಚರಣೆಯ ಪ್ರಯುಕ್ತ ಆರು ತಿಂಗಳ ವಯಸ್ಸಿನ ಬಂಗಾಳ ಹುಲಿ ಮರಿಗೆ ಹಿಮಾದಾಸ್ ಎಂದು ನಾಮಕರಣ ಮಾಡುವ ಮೂಲಕ ಹಿಮಾ ದಾಸ್ ಅವರನ್ನು ಗೌರವಿಸಿದ್ದೇವೆ” ಎಂದಿದ್ದಾರೆ.
“ಹುಲಿ ದಿನವನ್ನು ಆಚರಿಸುವ ಸಲುವಾಗಿ ಉದ್ಯಾನವನದಲ್ಲಿನ ಐದು ಹೆಣ್ಣು ಮತ್ತು ಮೂರು ಗಂಡು ಹುಲಿಗಳನ್ನು ಪುಟ್ಟ ಹಿಮಾದಾಸ್ ಹುಲಿ ಜೊತೆಗೆ ಪ್ರದರ್ಶಿಸುತ್ತಿದ್ದೇವೆ” ಎಂದಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಾಲ್ಕನೇ ಹುಲಿ ಗಣತಿಯ ಪ್ರಕಾರ, ವಿಶ್ವದ ಹುಲಿಗಳ ಜನಸಂಖ್ಯೆಯ ಶೇ. 75 ರಷ್ಟು ಭಾರತದಲ್ಲೇ ಇದೆ.
ಜಕಾರ್ತದಲ್ಲಿ ನಡೆದ 2018 ರ ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆಯಾಗಿರುವ 19 ವರ್ಷದ ಹಿಮಾದಾಸ್ ಅವರು, ಜುಲೈ 20 ರಂದು ಪ್ರೇಗ್ನಲ್ಲಿ ನಡೆದ ನೊವೆ ಮೆಸ್ಟೊ ನಾಡ್ ಮೆಟುಜಿ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ 400 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಜುಲೈ 2ರಂದು ಯುರೋಪಿನಲ್ಲಿ ನಡೆದ ತನ್ನ ಮೊದಲ ಕಾಂಪಿಟಿಟಿವ್ ರೇಸ್ ಪೋಲೆಂಡ್ ಪೊಜ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ 200 ಮೀ ಓಟದಲ್ಲಿ ಹಿಮಾದಾಸ್ ಚಿನ್ನ ಗೆದ್ದುಕೊಂಡಿದ್ದಾರೆ. ನಂತರ ಜುಲೈ 8 ರಂದು ಪೋಲೆಂಡ್ನಲ್ಲಿ ನಡೆದ ಕುಟ್ನೋ ಅಥ್ಲೆಟಿಕ್ಸ್ ಮೀಟ್ನಲ್ಲಿ ತನ್ನ ಎರಡನೇ 200 ಮೀ ಓಟದಲ್ಲೂ ಚಿನ್ನ ಗೆದ್ದಕೊಂಡಿದ್ದಾರೆ. ಜುಲೈ 13 ರಂದು, ಜೆಕ್ ರಿಪಬ್ಲಿಕ್ನಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್ನಲ್ಲಿ ಮೂರನೇ 200 ಮೀ ಓಟದಲ್ಲಿ ಮತ್ತು ಜುಲೈ 17ರಂದು ನಡೆದ ಟ್ಯಾಬೊರ್ ಅಥ್ಲೆಟಿಕ್ಸ್ ಮೀಟ್ನ 200 ಮೀಟರ್ ಓಟದಲ್ಲಿ ನಾಲ್ಕನೇ ಚಿನ್ನವನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತವನ್ನು ಹೆಮ್ಮೆ ಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.