ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ವಿಧಾನಸಭೆಯಲ್ಲಿ ತನ್ನ ಬಹುಮತ ಸಾಬೀತು ಮಾಡಿ ರಾಜ್ಯದ ನನ್ನಂತಹ ಅಸಂಖ್ಯಾತ ಕಾರ್ಯಕರ್ತರ, ಹಿತೈಷಿಗಳ, ಸಹೃದಯರ ಸಂತಸವನ್ನು ಇಮ್ಮಡಿಗೊಳಿಸಿದೆ. ಈ ಕಾರ್ಯ 14 ತಿಂಗಳ ಮುನ್ನವೇ ಆಗಬೇಕಿತ್ತು ಎಂಬುದು ಇವರೆಲ್ಲರ ಮನದ ಇಂಗಿತ.
14 ತಿಂಗಳ ಮೈತ್ರಿ ರಹಿತ ಅಪನಂಬಿಕೆಯಿಂದ ಕೂಡಿದ್ದ ಸಮ್ಮಿಶ್ರ ಸರಕಾರದ ಆಡಳಿತ (?) ಕೊನೆಗೊಂಡಿತು. ಯಾರಿಗೆ, ಯಾರಿಗೋಸ್ಕರ ನಡೆಯುತ್ತಿದ್ದ ಯಾರ ಸರಕಾರ ಇದು ಎಂಬುದು ಯಾರಿಗೂ ಸ್ಪಷ್ಟವಾಗದೆ ಗೊಂದಲಮಯವಾಗಿತ್ತು.
ಈ ಅಸಂಖ್ಯಾತ ಸಹೃದಯರ ಮನದ ಇಂಗಿತ ಮತ್ತೊಂದಿದೆ. ಇವರೆಲ್ಲರೂ ಬಹುಮತ ಸಾಧಿಸಿದ ಸರಕಾರ ತಮ್ಮದೇ ಎಂದು ಬಲವಾಗಿ ನಂಬಿದ್ದಾರೆ. ಇವರ ಮನದಾಳದ ಭಾವನೆಗಳು ಹೀಗಿವೆ ;
(ನನಗೆ ನೇರವಾಗಿ, ಮೇಲ್ ಮೂಲಕ, ವಾಟ್ಸಪ್ ಮೂಲಕ, ಫೇಸ್ ಬುಕ್ನ ಅನೇಕ ಬರಹಗಳಲ್ಲಿ ಮತ್ತು ಕಾರ್ಯಕರ್ತರ ಮೂಲಕ ಗೊತ್ತಾಗಿರುವ ಅನಿಸಿಕೆಗಳಿವು).
⭕ ಕಳೆದ 14 ತಿಂಗಳ ಆಡಳಿತಕ್ಕೆ ಸಂಪೂರ್ಣವಾಗಿ ವಿಭಿನ್ನವಾದ ಮತ್ತು ಉತ್ತಮವಾದ ದಕ್ಷ, ಸ್ವಚ್ಛ, ಜನಪರ ಆಡಳಿತ ನಮ್ಮದಾಗಬೇಕು.
⭕ ನಮ್ಮ ಪ್ರತಿ ಕಾರ್ಯಕ್ರಮವೂ ಉದ್ದೇಶಿತ ಫಲಾನುಭವಿಗಳ ಮನೆ ತಲುಪಬೇಕು. ಅದಕ್ಕಾಗಿ ಎಲ್ಲಾ ರೀತಿಯ ತಂತ್ರಜ್ಞಾನದ ಬಳಕೆಯಾಗಬೇಕು.
⭕ ರಾಜ್ಯದ ಪ್ರತಿ ವ್ಯಕ್ತಿಗೂ ಅನಿಸಬೇಕು, “ಇದು ನನ್ನ ಸರಕಾರ, ನನ್ನ ಹಿತಕ್ಕೋಸ್ಕರ ಕೆಲಸ ಮಾಡುತ್ತಿರುವ ಸರಕಾರ”ವೆಂದು. ಕಟ್ಟಕಡೆಯ ಮನುಷ್ಯನ ಕಂಬನಿ ಒರೆಸಿ ಅವನಲ್ಲಿ ಭರವಸೆ ತುಂಬುವ ಸರ್ಕಾರ ಇದಾಗಬೇಕು.
⭕ ಸರಕಾರ ನಡೆಸುವವರ ಪ್ರತಿ ನಡೆ, ಪ್ರತಿ ನುಡಿ ರಾಜ್ಯದ ಪ್ರತಿ ವ್ಯಕ್ತಿಯ ಮೇಲ್ಕಂಡ ಅನಿಸಿಕೆಯನ್ನು ದೃಢಗೊಳಿಸುತ್ತಾ ಹೋಗಬೇಕು.
⭕ ನಮ್ಮ ಹಿಂದಿನ ಆಡಳಿತದಲ್ಲಿ ನಡೆದುಹೋದ, ನಮ್ಮ ವಿರೋಧಿಗಳಿಗೆ ಪ್ರತಿಬಾರಿಯೂ ನಮ್ಮನ್ನು ಮೂದಲಿಸಲಿಕ್ಕೆ ಸಾಧನವಾಗಿರುವ ಆ ಕೆಲ ಕಹಿ ಅಹಿತಕರ ಘಟನೆಗಳು ಯಾವುದೇ ಕಾರಣಕ್ಕೂ ಮರುಕಳಿಸದಂತೆ ಎಚ್ಚರ ವಹಿಸಬೇಕು.
⭕ ಕಳೆದ 14 ತಿಂಗಳ ಆಡಳಿತದಲ್ಲಿ ಆ ಎರಡೂ ಪಕ್ಷಗಳ ಶಾಸಕರು ಆತ್ಮೀಯತೆಯ ಕೊರತೆ ಅನುಭವಿಸುತ್ತಿದ್ದರು. ಅವರ ಭಾವನೆಗಳನ್ನು, ಅಗತ್ಯಗಳನ್ನು ಆಲಿಸಿ ಸ್ಪಂದಿಸುವ ವ್ಯವಸ್ಥೆ ಇರಲಿಲ್ಲವೆಂದು ಇದೀಗ ರಾಜಿನಾಮೆ ಕೊಟ್ಟಿರುವ ಆ ಎಲ್ಲಾ ಶಾಸಕರು ಅಸಮಧಾನ ತೋರಿರುವುದು. ಆ ಕೊರತೆ ನಮ್ಮಲ್ಲಿ ಉಂಟಾಗದಂತೆ ಕ್ರಮ ವಹಿಸಿ ಒಂದು ವಿಧಾನ ಸೃಜಿಸಬೇಕು.
⭕ ರೈತರ ಮೊಗದಲ್ಲಿ ಸಂತಸ ತರುವ ಎಲ್ಲಾ ಪ್ರಯತ್ನಗಳೂ ನಿರಂತರವಾಗಿ ಆಗಬೇಕು ಮತ್ತು ಕೃಷಿಯನ್ನು ಉತ್ಪಾದಕ ಕ್ಷೇತ್ರವನ್ನಾಗಿ ಮಾಡಲು ಈ ರೈತನಾಯಕನ ನೇತೃತ್ವದ ಸರಕಾರ ಶ್ರಮಿಸಬೇಕು. ಅನ್ನದಾತನ ಆತ್ಮಹತ್ಯೆ ಎಂಬ ಸುದ್ದಿ ಇನ್ನೆಂದಿಗೂ ನಾವು ಕೇಳದಂತೆ ಎಚ್ಚರ ವಹಿಸಿ. ಅದೇ ರೀತಿ ಕೃಷಿ ಕಾರ್ಮಿಕರ ಬಾಳು ಹಸನವಾಗಲು ಕ್ರಮ ಜರುಗಿಸಬೇಕು.
⭕ ಇನ್ನಷ್ಟು ಶ್ರಮಜೀವಿಗಳಾದ ನೇಕಾರರು, ಮೀನುಗಾರರ, ರಸ್ತೆಬದಿ ವ್ಯಾಪಾರಿಗಳ, ಆಟೋಚಾಲಕರ, ಕೂಲಿ ಕಾರ್ಮಿಕರ…..ತಕ್ಷಣದ ಸಮಸ್ಯೆಗಳನ್ನು ನಿವಾರಿಸಲು ಚಿಂತನೆ ನಡೆಸಬೇಕು.
⭕ ರಸ್ತೆ, ನೀರು, ನೈರ್ಮಲ್ಯ, ನೆಮ್ಮದಿಯ ಜೀವನಕ್ಕೆ ಆದ್ಯತೆ ದೊರಕಬೇಕು. ವಿಶೇಷವಾಗಿ ಬೆಂಗಳೂರಿನಲ್ಲಿ ಕುಸಿಯುತ್ತಿರುವ ಮೂಲಭೂತ ಸೌಲಭ್ಯಗಳು, ಆತಂಕಕ್ಕೆ ಎಡೆ ಮಾಡಿಕೊಡುತ್ತಿರುವ ಮುಂಬರುವ ದಿನಗಳ/ವರ್ಷಗಳ ಕುಡಿಯುವ ನೀರಿನ ಸ್ಥಿತಿ, ವಾಯು ಮಾಲಿನ್ಯ…ಇವುಗಳ ಬಗ್ಗೆ ಸಮರೋಪಾದಿಯಾಗಿ ಯೋಜನೆ ನಡಯಬೇಕು. ಮುಖ್ಯವಾಗಿ ಬೆಂಗಳೂರಿನ ಕೆರೆಗಳನ್ನು ರಕ್ಷಿಸಿ ಉಳಿಸಿ, ಅಂತರ್ಜಲ ಹೆಚ್ಚಿಸುವ ಕಾರ್ಯಕ್ಕೆ ಪ್ರಾಶಸ್ತ್ಯ ಇಂದು ಅತ್ಯಗತ್ಯ.
⭕ ಮಹಿಳೆಯರಿಗೆ ಆತಂಕರಹಿತ ಬದುಕು ದೊರೆಯುವಂತೆ ಮಾಡುವುದು ಸರಕಾರದ ಆದ್ಯ ಕರ್ತವ್ಯ. ಅದೇ ರೀತಿ ಶಾಲಾ ಮಕ್ಕಳ ಬೆಳವಣಿಗೆ ಆರೋಗ್ಯಕರ ವಾತಾವರಣದಲ್ಲಿ ಆಗುವಂತೆ ಕ್ರಮ ವಹಿಸುವುದು ಅಗತ್ಯ.
⭕ ಸಾಮಾನ್ಯ ಜನಕ್ಕೆ ಇಂದು ಇಲ್ಲದ ಆದರೆ ಅಗತ್ಯವಾಗಿ ಬೇಕಿರುವ ಸರಕಾರದ ಮೇಲಿನ #ವಿಶ್ವಾಸಾರ್ಹತೆ ಹೆಚ್ಚಿಸುವ ಪ್ರಯತ್ನ ಪ್ರತಿ ಕ್ಷಣ, ಪ್ರತಿ ಸಂದರ್ಭ ಮತ್ತು ಪ್ರತಿ ಮಾತಿನಲ್ಲಿ ಕಾಣಬೇಕು.
⭕ ನಮ್ಮ ಕಾರ್ಯಕರ್ತರೆಲ್ಲ ಯಾವುದೇ ಕಾರಣಕ್ಕೆ ತಲೆತಗ್ಗಿಸುವುದಕ್ಕೆ ಅವಕಾಶ ಕೊಡದೆ ಬದಲಿಗೆ ಎದೆ ಎತ್ತಿ ಓಡಾಡಿ “ಇದು ನಮ್ಮ ಸರಕಾರ, ಇದು ನಮ್ಮ ಕಾರ್ಯಕ್ರಮ” ಎಂದು ಹೆಮ್ಮೆಯಿಂದ ಮನೆಗಳಿಗೆ ಹೋಗಿ ಹೇಳುವಂತಹ ಸನ್ನಿವೇಶವೇ ನಮ್ಮ ಸಂಘಟನೆಗೆ ಪುಷ್ಟಿ ಕೊಡುವಂತಹ ಸಂಗತಿ.
Accountability, Responsiveness ಮತ್ತು Transparency (ಉತ್ತರದಾಯಿತ್ವ, ಸ್ಪಂದನಾಶೀಲತೆ ಮತ್ತು ಪಾರದರ್ಶಕ) – ನಮ್ಮ ಸರಕಾರದ ಆಡಳಿತ ಲಾಂಛನಗಳಾಗಬೇಕು.
✍ ಸುರೇಶ್ ಕುಮಾರ್, ಬಿಜೆಪಿ ಶಾಸಕರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.