ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 17 ರಂದು ಎರಡು ದಿನಗಳ ಭೇಟಿಗಾಗಿ ಭೂತಾನಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. 2017ರಲ್ಲಿ ನಡೆದ ದೋಕ್ಲಾಂ ಬಿಕ್ಕಟ್ಟಿನ ಬಳಿಕ ಮೋದಿಯವರ ಮೊದಲ ಭೂತಾನ್ ಭೇಟಿ ಇದಾಗಿದೆ. ದೋಕ್ಲಾಂ ಭೂತಾನಿನ ಭಾಗವಾಗಿದೆ. ಆದರೆ ಚೀನಾ ಇದನ್ನು ಅತಿಕ್ರಮಣ ಮಾಡುವ ಪ್ರಯತ್ನವನ್ನು ಮಾಡಿತ್ತು. ಈ ಹಿನ್ನಲೆಯಲ್ಲಿ ಭಾರತ ಮತ್ತು ಚೀನಾ ನಡುವೆ ಎರಡು ತಿಂಗಳ ಬಿಕ್ಕಟ್ಟು ಸಂಭವಿಸಿತ್ತು.
ಭೂತಾನಿನ ಹೊಸ ಪ್ರಧಾನಿ ಲೋಟೇ ಶೆರಿಂಗ್ ಅವರು 2018 ರ ಡಿಸೆಂಬರ್ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಬಳಿಕ ಈ ವರ್ಷದ ಮೇ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ಜರುಗಿದ ಪ್ರಧಾನಿ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಅವರು ದೆಹಲಿಗೆ ಆಗಮಿಸಿದ್ದರು.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಇತ್ತೀಚಿಗೆ ಭೂತಾನಿಗೆ ಭೇಟಿ ನೀಡಿದ್ದರು. ವಿದೇಶಾಂಗ ಸಚಿವರಾದ ಬಳಿಕದ ಅವರ ಮೊದಲ ಭೇಟಿ ಇದಾಗಿತ್ತು.
ಭಾರತವು ಭೂತಾನಿನಲ್ಲಿ ಮೂರು ವಿದ್ಯುತ್ ಯೋಜನೆಗಳನ್ನು ನಿರ್ಮಾಣ ಮಾಡುತ್ತಿದೆ. ಜಲವಿದ್ಯುತ್ ಉಭಯ ದೇಶಗಳ ನಡುವಿನ ಬಾಂಧವ್ಯದ ದೊಡ್ಡ ಆಧಾರಸ್ತಂಭಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಭೂತಾನ್ ತನ್ನಲ್ಲಿ ಉತ್ಪಾದನೆಯಾದ ಮೂರನೇ ಒಂದು ಭಾಗದಷ್ಟು ವಿದ್ಯುತ್ ಅನ್ನು ಭಾರತಕ್ಕೆ ರಫ್ತು ಮಾಡುತ್ತದೆ ಮತ್ತು ಉಳಿದವನ್ನು ದೇಶೀಯವಾಗಿ ಬಳಕೆ ಮಾಡುತ್ತದೆ.
2014 ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಧಾನಿ ಮೋದಿಯವರ ಮೊದಲ ವಿದೇಶಿ ಭೇಟಿಯನ್ನು ಭೂತಾನ್ಗೆ ನೀಡಿದ್ದರು. ಆ ಭೇಟಿಯ ಸಮಯದಲ್ಲಿ ಅವರು ಭೂತಾನ್ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದರು. 600 ಮೆಗಾವ್ಯಾಟ್ ಖೊಲೊಂಗ್ಚು ಜಲವಿದ್ಯುತ್ ಯೋಜನೆಗೆ ಅಡಿಪಾಯವನ್ನು ಹಾಕಿದ್ದರು ಮತ್ತು ಭಾರತದ ನೆರೆವಿನಲ್ಲಿ ನಿರ್ಮಿಸಲಾದ ಸುಪ್ರೀಂ ಕೋರ್ಟ್ ಕಟ್ಟಡವನ್ನು ಉದ್ಘಾಟಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.