ಬುಲಂದ್ಶಹರ್: ಮಕ್ಕಳನ್ನು ಸೇನಾಪಡೆ ಮತ್ತು ಪ್ಯಾರಾ ಮಿಲಿಟರಿ ಪಡೆಗಳಿಗೆ ಸೇರಲು ಸಜ್ಜುಗೊಳಿಸುವಂತೆ ಮಾಡುವ ಏಕೈಕ ಉದ್ದೇಶದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಉತ್ತರಪ್ರದೇಶದ ಬುಲಂದ್ಶೆಹರ್ ಸಮೀಪದ ಶಿಖರ್ಪುರದಲ್ಲಿ ಸೈನಿಕ ಶಾಲೆಯೊಂದನ್ನು ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಿದೆ.
ಈ ಶಾಲೆಯಲ್ಲಿ ದೈಹಿಕ ಮತ್ತು ಸೈದ್ಧಾಂತಿಕ ತರಬೇತಿಗಳ ಜೊತೆಗೆ, ಶಸ್ತ್ರಾಸ್ತ್ರ ಪಡೆಗಳಿಗೆ ಸೇರಲು ಬೇಕಾದ ಪ್ರೇರಣೆಯನ್ನೂ ಮಕ್ಕಳಿಗೆ ನೀಡಲಾಗುತ್ತದೆ. 6 ರಿಂದ 12 ತರಗತಿಯವರೆಗೆ ಇಲ್ಲಿ ಕಲಿಸಲಾಗುತ್ತದೆ. ಈ ಶಾಲೆಯನ್ನು ಸಿಬಿಎಸ್ಇಯೊಂದಿಗೆ ಸೇರಿಸಲು ನಿರ್ಧರಿಸಲಾಗಿದೆ. ಎಲ್ಲಾ ಸೌಕರ್ಯಗಳನ್ನು ಹೊಂದಿದ ಪೂರ್ಣಾವಧಿಯ ಬೋರ್ಡಿಂಗ್ ಸ್ಕೂಲ್ ಇದಾಗಲಿದೆ.
“ಆರ್ಎಸ್ಎಸ್ನ ನಾಲ್ಕನೇ ಸರಸಂಘಚಾಲಕರಾದ ಪ್ರೊ. ರಾಜೇಂದ್ರ ಸಿಂಹ್ ಜೀ (ರಜ್ಜೂ ಭೈಯ್ಯಾ) ಅವರ ನೆನಪಿಗಾಗಿ ಈ ಶಾಲೆಗೆ ‘ರಜ್ಜೂ ಭೈಯ್ಯಾ ಸೈನಿಕ್ ವಿದ್ಯಾಲಯ’ ಎಂದು ಹೆಸರಿಡಲಾಗಿದೆ. ಶಾಲೆಯು ಬೋರ್ಡಿಂಗ್ ಶಾಲೆಯಾಗಲಿದ್ದು, 1200-1500 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲಿದೆ. ದಾನ ಮಾಡಲ್ಪಟ್ಟ ಭೂಮಿಯಲ್ಲಿ ಈ ಶಾಲೆಯನ್ನು ನಿರ್ಮಿಸಲಾಗುತ್ತಿದೆ” ಎಂದು ಸ್ಥಳೀಯರಾದ ತುಷಾರ್ ಗುಪ್ತಾ ಹೇಳಿದ್ದಾರೆ.
“ಆರ್ಎಸ್ಎಸ್ ಶಾಲೆಯನ್ನು ಮುನ್ನಡೆಸಲಿದೆ ಮತ್ತು ನಿರ್ವಹಿಸಲಿದೆ. ಇದನ್ನು ಬಿಜೆಪಿ ನಾಯಕ ಡಿಕೆ ಶರ್ಮಾ ಅವರ ನೇತೃತ್ವದ ಟ್ರಸ್ಟ್ ನಿರ್ವಹಣೆ ಮಾಡಲಿದೆ. ಅಧ್ಯಯನಗಳ ಜೊತೆಗೆ ವ್ಯಕ್ತಿತ್ವ ನಿರ್ಮಾಣಕ್ಕೂ ಇಲ್ಲಿ ಒತ್ತು ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಸೇನೆ, ಬಿಎಸ್ಎಫ್, ಸಿಆರ್ಪಿಎಫ್ ಸೇರಲು ಅನುವು ಮಾಡಿಕೊಡುವಂತೆ ತರಬೇತಿ ನೀಡಲಾಗುತ್ತದೆ” ಎಂದು ಶಾಲಾ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಎಂಜಿನಿಯರ್ ಸುರೇಶ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಶಾಲೆಗಾಗಿ ತಮ್ಮ ಭೂಮಿಯನ್ನು ದಾನ ಮಾಡಿರುವ ರಾಜ್ಪಾಲ್ ಸಿಂಗ್ ಅವರು ಮಾತನಾಡಿ, “ಶಾಲೆಯಲ್ಲಿ ಸಿಬಿಎಸ್ಇ ಪಠ್ಯಕ್ರಮವನ್ನು ಅನುಸರಿಸಲಾಗುವುದು. ವಿದ್ಯಾರ್ಥಿಗಳಿಗೆ ರಕ್ಷಣಾ ಪಡೆಗಳಿಗೆ ಸೇರಲು ತರಬೇತಿಯನ್ನು ನೀಡಲಾಗುವುದು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.