ಇತ್ತೀಚಿನ ದಿನಗಳಲ್ಲಿ ನಗರ ತೋಟಗಾರಿಕೆ ವೇಗವನ್ನು ಪಡೆದುಕೊಳ್ಳುತ್ತಿದೆ. ವಿಶಾಲವಾದ ಬಾಲ್ಕನಿ ಅಥವಾ ಟೆರೇಸ್ನಂತಹ ಸೌಕರ್ಯ ಇರುವವರು ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಬೆಳೆಯುವಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಪ್ರಾಯೋಗಿಕವಾಗಿ ಸಮರ್ಪಕವಾಗಿದೆ ಎಂದು ಅನಿಸುವ ಯಾವುದೇ ಜಾಗದಲ್ಲೂ ಸ್ವ-ಕೃಷಿಯನ್ನು ಮಾಡುವತ್ತ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದಕ್ಕೆ ಮೊದಲನೇಯ ಕಾರಣವೆಂದರೆ, ತಮ್ಮ ದೈನಂದಿನ ಅಡುಗೆ ಮನೆ ಅಗತ್ಯಗಳಲ್ಲಿ ಸ್ವಾವಲಂಬಿತನವನ್ನು ಪಡೆದುಕೊಳ್ಳುವುದು. ಎರಡನೇಯದ್ದು, ಸಾವಯವ ಉತ್ಪನ್ನಗಳಿಗೆ ನೀರಿನಂತೆ ಹಣ ಖರ್ಚು ಮಾಡುವ ಅಗತ್ಯವಿರುವುದಿಲ್ಲ ಎಂಬುದು. ಹಲವಾರು ಮಂದಿ ನಗರವಾಸಿಗಳು ಇಂದು ತೋಟಗಾರಿಕೆಯಲ್ಲಿ ನಿರತರಾಗಿದ್ದು, ಒಬ್ಬೊಬ್ಬರ ತೋಟಗಾರಿಕೆಯ ಹಿಂದೆಯೂ ಸೊಗಸಾದ ಕಥೆಯಿದೆ. ಅಂತಹ ಒಂದು ವಿಶಿಷ್ಟವಾದ ಕಥೆಯನ್ನು ಈ ಲೇಖನ ಪ್ರಸ್ತುಪಡಿಸುತ್ತಿದೆ.
ಹೈದರಾಬಾದಿನ ಶ್ರೀನಿವಾಸ್ ಮತ್ತು ಪದ್ಮ ಪಿನ್ನಕ ನಗರದಲ್ಲಿ ಹಸಿರು ಕ್ರಾಂತಿ ಮಾಡಿದ ಹಲವು ಮಂದಿಯಲ್ಲಿ ಒಬ್ಬರು.
2014 ರವರೆಗೆ ಹೈದರಾಬಾದಿನಲ್ಲಿನ ತಮ್ಮ ಅಪಾರ್ಟ್ಮೆಂಟಿನ ಬಾಲ್ಕನಿಯಲ್ಲಿ ಈ ದಂಪತಿ ಸಣ್ಣ ಉದ್ಯಾನವನ್ನು ಅತ್ಯಂತ ಕಾಳಜಿಯಿಂದ ಬೆಳೆಸಿದ್ದರು. ಮನೆ ಸಣ್ಣದಾಗಿದ್ದ ಕಾರಣ ಅವರಿಗೆ ತಮ್ಮ ಉದ್ಯಾನವನ್ನು ಇನ್ನಷ್ಟು ವಿಸ್ತರಿಸಲು ಅವಕಾಶವಿರಲಿಲ್ಲ.
ಈ ಬಗ್ಗೆ ಮಾನಾಡಿರುವ ಶ್ರೀನಿವಾಸ್, “ನಾವು ದೊಡ್ಡದಾದ ಟೆರೇಸ್ ಉದ್ಯಾನವನ್ನು ನಿರ್ಮಾಣ ಮಾಡಬೇಕೆಂದು ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದೆವು. ಆದರೆ ಹತ್ತು ವರ್ಷಗಳ ಕಾಲ ನಮ್ಮ ಆಸಕ್ತಿಯನ್ನು ಬಾಲ್ಕನಿಯಲ್ಲಿರುವ ಕೆಲವು ಹೂಕುಂಡುಗಳಿಗಷ್ಟೇ ನಾವು ಸೀಮಿತಗೊಳಿಸಿಕೊಳ್ಳಬೇಕಾಯಿತು. ಪದ್ಮ ತೋಟಗಾರಿಕೆಯನ್ನು ಅತೀವವಾಗಿ ಪ್ರೀತಿಸುತ್ತಾಳೆ. ಮನೆಯಲ್ಲಿ ನೆಟ್ಟಿದ್ದ ಹೂವು ಗಿಡಗಳ ಸಂಖ್ಯೆಯನ್ನು ಏರಿಸಬೇಕೆಂದು ಆಕೆ ಬಯಸಿದ್ದಳು. 2014 ರಲ್ಲಿ ನಾವು ಹೊಸ ಮನೆಗೆ ಸ್ಥಳಾಂತರಗೊಂಡೆವು, ಅಲ್ಲಿ ಅವಳು ಕೊನೆಗೂ ತಾನು ಹಂಬಲಿಸುತ್ತಿದ್ದ ಸಾವಯವ ಹಸಿರು ಸ್ವರ್ಗವನ್ನುನಿರ್ಮಾಣ ಮಾಡುವ ಕಾರ್ಯವನ್ನು ಆರಂಭಿಸಿದಳು”.
ಇಂದು, ಈ ದಂಪತಿ ತಮ್ಮ ಸ್ವಂತ ಮನೆಯ ಟೆರೇಸ್ನಲ್ಲಿ 40 ವಿವಿಧ ಜಾತಿಯ ಹಣ್ಣು ಮತ್ತು ತರಕಾರಿಗಳ 500 ಕ್ಕೂ ಹೆಚ್ಚು ಸಸ್ಯಗಳನ್ನು ಬೆಳೆಸಿದ್ದಾರೆ. ಇವರ ಸಾವಯವ ಟೆರೇಸ್ ಉದ್ಯಾನವು ಹೈದರಾಬಾದ್ ಜನರ ಅಗಾಧವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇದರಿಂದ ಉಲ್ಲಾಸಿತಗೊಂಡಿರುವ ದಂಪತಿಗಳು ತಮ್ಮ ಹಸಿರು ಕಾರ್ಯದ ಮಾಹಿತಿಯನ್ನು, ಸಲಹೆಗಳನ್ನು ಹಂಚಿಕೊಳ್ಳಲು ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು.
ಕೇವಲ ಎರಡು ತಿಂಗಳ ಹಳೆಯ, ಪದ್ಮ ಪಿನ್ನಕ ಅವರ ಯ್ಯೂಟ್ಯೂಬ್ ಚಾನೆಲ್ ‘ಪೊ ಪಲ್ಲೆತುರತ್ನಂ ಲು’ ಈಗಾಗಲೇ 12,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಅವರ ಪ್ರತಿ ವೀಡಿಯೊ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಪದ್ಮ ಅವರ ಮನೆಯ ಉದ್ಯಾನದಲ್ಲಿ ಸುಮಾರು 500 ಸಸ್ಯಗಳಿವೆ, ಅವರಿಗೆ ಕಡಿಮೆ ಬಜೆಟ್, ಕಡಿಮೆ-ತ್ಯಾಜ್ಯ ಮಾದರಿಯಲ್ಲಿ ಹೆಚ್ಚು ನಂಬಿಕೆ ಇದೆ. ಕುಂಡಗಳಿಂದ ಹೆಚ್ಚುವರಿಯಾಗಿ ಹರಿಯುವ ನೀರನ್ನು ಸಂಗ್ರಹಿಸಲು ಅವರು ಪ್ರತಿಯೊಂದು ಕುಂಡದ ಕೆಳಗೆ ಒಂದು ಬಟ್ಟಲನ್ನು ಇಡುತ್ತಾರೆ. ಬೇಸಿಗೆಯಲ್ಲಿ, ಗಣನೀಯ ಪ್ರಮಾಣದ ನೀರನ್ನು ದೊಡ್ಡ ಕ್ಯಾನ್ ಮೂಲಕ ಒಂದೇ ಬಾರಿ ಹಾಕುವ ಬದಲು ದಿನಕ್ಕೆ ಮೂರು ಬಾರಿ ಸಸ್ಯಗಳ ಮೇಲೆ ನೀರನ್ನು ಸಿಂಪಡಿಸಲು ಅವರು ಆದ್ಯತೆ ನೀಡುತ್ತಾರೆ.
ಸಸ್ಯಗಳಿಗೆ ಪ್ರತಿದಿನ 150 ಲೀಟರ್ ನೀರು ಸಾಕು. ಸಸ್ಯಗಳಿಗೆ ನೀರುಣಿಸುವ ಜವಾಬ್ದಾರಿ ಪದ್ಮರದ್ದಾದರೆ, ಕೀಟಗಳನ್ನು ದೂರವಿಡುವ ಜವಾಬ್ದಾರಿಯನ್ನು ಶ್ರೀನಿವಾಸ್ ವಹಿಸಿಕೊಂಡಿದ್ದಾರೆ. ತಮ್ಮ ತೋಟಗಾರಿಕೆ ಅಭ್ಯಾಸಗಳು ಜೀವನ ಚಕ್ರ ರೀತಿಯ ತತ್ತ್ವಶಾಸ್ತ್ರವನ್ನು ಪಾಲಿಸುತ್ತದೆ ಎಂದು ಇವರು ನಗುತ್ತಾ ಹೇಳುತ್ತಾರೆ. ಅವರು ಬೆಳೆಸುವ ಹಣ್ಣುಗಳು, ತರಕಾರಿಗಳನ್ನು ಉಪಯೋಗಿಸಿಕೊಂಡ ಬಳಿಕ ಉಳಿಯುವ ತ್ಯಾಜ್ಯವನ್ನು ಸಸ್ಯಗಳಿಗೆ ವರ್ಮಿಕಾಂಪೋಸ್ಟ್ ಆಗಿ ಪರಿವರ್ತಿಸುತ್ತಾರೆ.
ಭಾರೀ ಸಂಖ್ಯೆಯ ಸಸ್ಯಗಳನ್ನು ಬೆಳಸಲು ನಮ್ಮಲ್ಲಿ ವಿಸ್ತಾರವಾದ ಟೆರೇಸ್ ಇಲ್ಲ. ನಾವು ಪಾಟ್ ಇನ್ ಪಾಟ್ ತಂತ್ರವನ್ನು ಸಹ ಪ್ರಯತ್ನಿಸಿದ್ದೇವೆ, ಈ ತಂತ್ರದಲ್ಲಿ ದೊಡ್ಡದಾದ ಕುಂಡವು ಒಂದೆರಡು ಸಣ್ಣ ಕುಂಡಗಳನ್ನು ತನ್ನೊಳಗೆ ಹೊಂದಿರುತ್ತದೆ. ಇದರಿಂದ ನಮಗೆ ಸಾಕಷ್ಟು ಜಾಗದ ಉಳಿತಾಯವಾಗುತ್ತದೆ. ಅಲ್ಲದೇ ನೀರು ಹಾಕುವಾಗ ದೊಡ್ಡ ಕುಂಡಕ್ಕೆ ಮಾತ್ರ ನೀರು ಹಾಕಬೇಕು, ಉಳಿದೆರಡು ಸಣ್ಣ ಕುಂಡಗಳು ಅದರ ನೀರನ್ನು ಹೀರಿಕೊಳ್ಳುತ್ತದೆ ಎಂದು ಪದ್ಮ ವಿವರಿಸುತ್ತಾರೆ.
“ನಾವು ಹೊಸ ವಿಧಾನಗಳನ್ನು ಪ್ರಯೋಗಿಸುತ್ತೇನೆ. ಹೊಸ ವಿಷಯಗಳನ್ನು ಸಾಮಾಜಿಕ ಮಾಧ್ಯಮದಿಂದ ಕಲಿಯುತ್ತೇವೆ. ಆದರೆ ಉದ್ಯಾನದ ಬಹುಪಾಲು ಭಾಗವು ವರ್ಮಿಕಾಂಪೋಸ್ಟ್ ಮತ್ತು ಅಡಿಗೆ ತ್ಯಾಜ್ಯವನ್ನು ಬಳಸಿ ಫಲವತ್ತಾಗಿಸಲ್ಪಟ್ಟಿದೆ ”ಎಂದು 54 ವರ್ಷದ ಪದ್ಮ ಹೇಳುತ್ತಾರೆ. ಯಾವ ವಿಧಾನಗಳನ್ನೂ ಅನುಸರಿಸುವ ಮೊದಲು ಅವರು ಅದು ರಾಸಾಯನಿಕ ಮುಕ್ತ ಮತ್ತು ಸಂಪೂರ್ಣ ಸಾವಯವ ಎಂದು ಖಚಿತಪಡಿಸಿಕೊಳ್ಳುತ್ತಾರೆ.
ಈ ದಂಪತಿ ತಮ್ಮ ಮನೆ ಉದ್ಯಾನದಲ್ಲಿ ಬೆಳೆದಿರುವ ಹಣ್ಣುಗಳೆಂದರೆ, ಐದು ಬಗೆಯ ಮಾವಿನಹಣ್ಣು, ಎರಡು ಬಗೆಯ ದ್ರಾಕ್ಷಿ, ಆವಕಾಡೊ, ತೆಂಗಿನಕಾಯಿ, ಬಾಳೆಹಣ್ಣು, ಪಪ್ಪಾಯಿ, ಸ್ಟಾರ್ ಫ್ರ್ಯುಟ್, ಡ್ರ್ಯಾಗನ್ ಫ್ರ್ಯುಟ್, ಮಲೇಷ್ಯಾ ಸೇಬು, ಶಿಮ್ಲಾ ಸೇಬು, ಹಲಸಿನ ಹಣ್ಣು, ಪ್ಯಾಶನ್ ಫ್ರ್ಯುಟ್, ವುಡ್ ಆ್ಯಪಲ್, ಸ್ಟ್ರಾಬೆರಿ, ಹುಣಸೆಹಣ್ಣು , ದಾಳಿಂಬೆ, ಸ್ವೀಟ್ ಲೈಮ್, ಎರಡು ಬಗೆಯ ಲೈಮ್ ಮತ್ತು ಕಿತ್ತಳೆ ಇತ್ಯಾದಿಗಳು. ತರಕಾರಿಗಳ ಪೈಕಿ, ಟೊಮ್ಯಾಟೊ, ಬದನೆಕಾಯಿ, ಹಸಿರು ಮೆಣಸಿನಕಾಯಿ, ಕಹಿ ಸೋರೆಕಾಯಿ, ಸೌತೆಕಾಯಿ, ಕೋಸುಗಡ್ಡೆ, ಸೋರೆಕಾಯಿ, ವಿವಿಧ ಸೊಪ್ಪುಗಳು, ಬೆಂಡೆಕಾಯಿ, ಫ್ರೆಂಚ್ ಬೀನ್ಸ್, ಚೆರ್ರಿ ಟೊಮ್ಯಾಟೊ, ಶುಂಠಿ ಮತ್ತು ಅರಿಶಿನ ಇತ್ಯಾದಿಗಳನ್ನು ಬೆಳೆಸಿದ್ದಾರೆ.
ಉದ್ಯಾನವನವನ್ನು ಬೆಳೆಸುವುದು ಮತ್ತು ಪೋಷಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಪದ್ಮ ಹೇಳುತ್ತಾರೆ. ನಾವು ಏನು ತಿನ್ನುತ್ತಿದ್ದೇವೆ ಎಂಬ ಬಗ್ಗೆ ನಮಗೆ ಸಂಪೂರ್ಣ ಅರಿವಿರುತ್ತದೆ, ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದ ಎಂದು ಪದ್ಮ ಕಂಡುಕೊಂಡಿದ್ದಾರೆ. ಇದಲ್ಲದೆ, ತೋಟಗಾರಿಕೆಯು ವ್ಯಾಯಾಮವನ್ನೂ ನೀಡುತ್ತದೆ ಎಂಬುದು ಅವರ ಅಂಬೋಣ.
“ಒಂದು ಸಸ್ಯದಿಂದ ಇನ್ನೊಂದು ಸಸ್ಯಕ್ಕೆ ಹೋಗುವುದು, ದಿನಕ್ಕೆ ಎರಡು ಬಾರಿ ನೀರು ಹಾಕುವುದು ಮತ್ತು ಅವುಗಳ ಬೆಳವಣಿಗೆಯನ್ನು ಗಮನಿಸುವುದು ಅನೇಕ ವಿಧಗಳಲ್ಲಿ ಧ್ಯಾನಸ್ಥ ಅನುಭವವನ್ನು ನೀಡುತ್ತದೆ. ಸಾವಯವ ಉದ್ಯಾನವನ್ನು ಹೊಂದಿರುವುದು ನಮ್ಮ ಮಕ್ಕಳ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂಬ ಅಂಶವನ್ನು ನಾವು ಮರೆಯಬಾರದು ”ಎಂದು ಪದ್ಮ ಹೇಳುತ್ತಾರೆ. ನಮ್ಮ ಆಹಾರದ ಅವಶ್ಯಕತೆಗಳನ್ನು ನಮ್ಮ ಉದ್ಯಾನವೇ ನಮಗೆ ಪೂರೈಸುತ್ತದೆ, ಹೀಗಾಗಿ ಮಾರುಕಟ್ಟೆಯಿಂದ ಕಡಿಮೆ ಖರೀದಿ ಮಾಡುತ್ತೇವೆ ಎಂದು ಇವರು ಹೇಳುತ್ತಾರೆ.
ಈ ದಂಪತಿಯ ಉದ್ಯಾನ ಬೆಳೆದು ಕಂಗೊಳಿಸುತ್ತಿದ್ದಂತೆ ನೆರೆಹೊರೆಯ ಅನೇಕರು ಇವರ ಬಳಿ ಬಂದು ಟೆರೇಸ್ ಉದ್ಯಾನಗಳ ಬಗ್ಗೆ ಸಲಹೆಗಳನ್ನು ಕೇಳಲು ಆರಂಭಿಸಿದ್ದಾರೆ. ಅಪರಿಚಿತರು ಇವರ ಮನೆಗೆ ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಾರೆ. ಸಲಹೆ ಕೇಳಲು ದಿನಕ್ಕೆ 20ರಿಂದ 25 ಕರೆಗಳು ಇವರಿಗೆ ಬರುತ್ತವೆ. ಕೊನೆಗೂ ಇವರ ಮಗ ಇವರಿಗೆ ಯ್ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾನೆ. ಅದನ್ನು ಹೇಗೆ ಆಪರೇಟ್ ಮಾಡಬೇಕೆಂದು ಕಲಿಸಿಕೊಟ್ಟಿದ್ದಾನೆ. ಇದರಿಂದಾಗಿ ಇವರು ಹಸಿರಿನ ಮಹತ್ವವನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ.
ನಗರದಲ್ಲಿ ವಾಸಿಸುತ್ತೇವೆ ಎಂದ ಮಾತ್ರಕ್ಕೆ ಹಸಿರಿನಿಂದ ದೂರ ಉಳಿಯಬೇಕೆಂದಿಲ್ಲ. ಇದ್ದ ಅಲ್ಪಸ್ವಲ್ಪ ಜಾಗದಲ್ಲೂ ಹಸಿರು ಸಿರಿಯನ್ನು ಸಮೃದ್ಧವಾಗಿ ಬೆಳೆಸಬಹುದು. ಇದಕ್ಕೆ ಹೈದರಾಬಾದಿನ ಈ ದಂಪತಿಗಳೇ ಉದಾಹರಣೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.