ಜೀವನದಲ್ಲಿ ಎಲ್ಲವೂ ನಾವಂದುಕೊಂಡಂತೆ ನಡೆಯುವುದಿಲ್ಲ. ಕೆಲವೊಮ್ಮೆ ನಮ್ಮ ಯೋಜನೆಗಳಿಗೆ ವಿರುದ್ಧವಾಗಿಯೇ ಎಲ್ಲವೂ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಕೈಹಿಡಿಯುವುದು ಆತ್ಮವಿಶ್ವಾಸ ಮಾತ್ರ. ಎಲ್ಲವನ್ನೂ ಕಳೆದುಕೊಂಡೆ, ಇನ್ನೆಂದೂ ನಾನು ಮೇಲಕ್ಕೆ ಬರಲಾರೆ ಎಂಬ ಯೋಚನೆಗಳು ಮನುಷ್ಯನನ್ನು ಖಿನ್ನತೆಗೆ ದೂಡುತ್ತದೆ. ಖಿನ್ನತೆ ಆತ್ಮಹತ್ಯೆಗೂ ಪ್ರೇರಣೆ ನೀಡುವ ಸಾಧ್ಯತೆಗಳು ಇರುತ್ತವೆ. ಆದರೆ ಬಿದ್ದಾಗಲೂ ದೃಢವಾದ ಸಂಕಲ್ಪದೊಂದಿಗೆ ಎದ್ದು ನಿಲ್ಲುವವನು ಮಾತ್ರ ಜಗತ್ತನ್ನು ಗೆಲ್ಲುತ್ತಾನೆ. ಹಿಂದೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದ ಆಟೋ ಚಾಲಕನೊಬ್ಬ ಇಂದು ಸಾವಿರಾರು ನಿರ್ಗತಿಕರಿಗೆ ಅನ್ನದಾನ ಮಾಡುವ ಮೂಲಕ ಸಮಾಜಕ್ಕೊಂದು ಮಾದರಿಯಾದ ಕಥೆ ಇಲ್ಲಿದೆ.
1992ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ತಮಿಳುನಾಡಿನ ಮುರುಘನ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಆಗ ಜೀವನವೇ ಅವರಿಗೆ ಬೇಡ ಎಂದೆನಿಸಿಬಿಟ್ಟಿತ್ತು. ಮನೆಯಿಂದ ಓಡಿ ಹೋದರು, ಕೈಯಲ್ಲಿ ಬರಿ 300 ರೂಪಾಯಿ ಇತ್ತು. ಬಸ್ ಎಲ್ಲಿ ತನಕ ಹೋಗುತ್ತೋ ಅಲ್ಲಿ ತನಕ ಹೋಗುವ, ನಂತರ ಆತ್ಮಹತ್ಯೆ ಮಾಡಿಕೊಳ್ಳುವ ಎಂದು ಅವರು ಯೋಜನೆ ಹಾಕಿಕೊಂಡಿದ್ದರು. ಬಸ್ ಕೊಯಂಬತ್ತೂರಿನ ಸಿರ್ಮುಘೈನಲ್ಲಿ ಬಂದು ನಿಂತಿತ್ತು, ಅವರ ತವರು ಚೆನ್ನೈನಿಂದ 500 ಕಿಮೀ ದೂರ. ಪ್ರಯಾಣದುದ್ದಕ್ಕೂ ಅವರ ಮನಸ್ಸಿನಲ್ಲಿ ಕಾಡಿದ್ದು ಒಂದೇ, ಅದು ಅವರ ವೈಫಲ್ಯ. ಫುಟ್ಪಾತ್ನಲ್ಲಿ ಇಳಿದು ಒಂದು ಕಡೆ ಕುಳಿತಿದ್ದ ಅವರಿಗೆ ಚಮ್ಮಾರರೊಬ್ಬರು ಬಂದು ಆಶ್ರಯ ಒದಗಿಸಿದರು.
ಚಮ್ಮಾರನ ಒಂದು ದಿನದ ಆಶ್ರಯ ಅವರ ಯೋಚನೆಯನ್ನೇ ಬದಲಾಯಿಸಿಬಿಟ್ಟಿತು. ಬೇರೆಯವರಿಗೆ ಸಹಾಯ ಮಾಡುವ ಸಾಮರ್ಥ್ಯವಿದ್ದರೂ ಆತ್ಮಹತ್ಯೆ ಮಾಡಿಕೊಳ್ಳುವುದು ನಿಜಕ್ಕೂ ಕೆಟ್ಟ ಯೋಚನೆ ಎಂದು ಅವರಿಗನಿಸಿತು. ಅಲ್ಲಿಂದ ಮುರುಘನ್ ಅವರ ಬದುಕೇ ಬದಲಾಯಿತು.
“ಆ ರಾತ್ರಿ ಮತ್ತು ಆ ವಯಸ್ಸಾದ ವ್ಯಕ್ತಿಯನ್ನು ನಾನೆಂದೂ ಜೀವನದಲ್ಲಿ ಮರೆಯಲಾರೆ, ಅವರು ನನ್ನ ಜೀವನವನ್ನೇ ಬದಲಾಯಿಸಿದರು” ಎಂದು ಮುರುಘನ್ ಹೇಳುತ್ತಾರೆ.
“ನನ್ನನ್ನು ಚೆನ್ನೈಗೆ ಮರಳಿ ಕಳುಹಿಸಿಕೊಡುವ ಸಲುವಾಗಿ ಸಿರ್ಮುಗೈ ಬಸ್ ನಿಲ್ದಾಣದಲ್ಲಿ ಭಿಕ್ಷಕರು ಹಣ ಸಂಗ್ರಹ ಮಾಡಿದರು. ಆದರೆ ನಾನದನ್ನು ಅವರಿಗೆ ವಾಪಾಸ್ ನೀಡಿ, ಅಲ್ಲೇ ನೆಲೆಸಿ ಏನಾದರು ಒಳ್ಳೆಯದನ್ನು ಮಾಡಲು ನಿರ್ಧರಿಸಿದೆ” ಎನ್ನುತ್ತಾರೆ.
ಅಲ್ಲಿ ಸ್ಥಳಿಯ ಹೋಟೆಲ್ವೊಂದರಲ್ಲಿ ಕೆಲಸಕ್ಕೆ ಸೇರಿದ ಅವರು, ಅಲ್ಲಿ ಟೇಬಲ್ ಕ್ಲೀನ್ ಮಾಡುವ, ವೇಟರ್ ಆಗಿ ಕೆಲಸ ಮಾಡುವ ಕಾರ್ಯ ಮಾಡಿದರು. “ಅಲ್ಲಿ ನನಗೆ ಮೂರು ಹೊತ್ತಿನ ಊಟ ಸಿಗುತ್ತಿತ್ತು. ಅಲ್ಲೇ ಇದ್ದು, ಕೆಲಸ ಮಾಡಲಾರಂಭಿಸಿದೆ. ಬೆಳಿಗ್ಗೆ 4 ಗಂಟೆಗೆ ಎದ್ದು, ಪಕ್ಕದ ಕೆರೆಯಲ್ಲಿ ಸ್ನಾನ ಮಾಡಿ ಕೆಲಸಕ್ಕೆ ಅಣಿಯಾಗುತ್ತಿದ್ದೆ. 6 ತಿಂಗಳುಗಳ ಕಾಲ ಅದನ್ನು ಮುಂದುವರೆಸಿದೆ. ಬಳಿಕ ನನಗೆ ಪ್ರತಿ ನಿತ್ಯ ಬೆಳಿಗ್ಗೆ ಪತ್ರಿಕೆ ಹಂಚುವ ಕೆಲಸ ಸಿಕ್ಕಿತು. ನನ್ನ ಬಳಿ ಬಂದ ಕೆಲಸಗಳನ್ನೆಲ್ಲಾ ಮಾಡಿದೆ”
ಆದರೆ ಒಂದು ದಿನ ಅವರನ್ನು ಕೆಲಸಕ್ಕೆ ನಿಯೋಜಿಸಿದ ಸಂಸ್ಥೆ ಮುಚ್ಚಿ ಹೋಯಿತು. ಇದರಿಂದ ಅವರಿಗೆ ಡ್ರೈವಿಂಗ್ ಲೈಸೆನ್ಸ್ಗೆ ಅರ್ಜಿ ಹಾಕಲು ಪ್ರೇರಣೆಯಾಯಿತು.
ಬಳಿಕ ಅವರು ಆಟೋ ಚಾಲಕರಾದರು. ಆಟೋ ಓಡಿಸಿ ಬಂದ ಹಣವನ್ನು ಬಡ ಬಗ್ಗರಿಗೆ ಆಹಾರ ನೀಡಲು ವಿನಿಯೋಗಿಸಿದರು.
ಆ ಸಮಯದಲ್ಲಿ ಅವರು ಮಾಸಿಕವಾಗಿ ಸರಾಸರಿ 3 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಆ ಹಣದಿಂದ ಅವರು ತರಕಾರಿ, ಅಕ್ಕಿ, ಇತರ ಸಾಮಾನುಗಳನ್ನು ಖರೀದಿ ಮಾಡುತ್ತಿದ್ದರು. ಸ್ಥಳಿಯ ಶಾಲೆಯ ದಿವ್ಯಾಂಗ ಮಕ್ಕಳಿಗಾಗಿ ಆಹಾರ ತಯಾರಿಸುತ್ತಿದ್ದರು ಮತ್ತು ಹಂಚುತ್ತಿದ್ದರು. ಅವರ ಉದ್ಯೋಗ ಬದಲಾಗುತ್ತಾ ಹೋದರೂ ಅಗತ್ಯವಿರುವವರಿಗೆ ಆಹಾರ ನೀಡುವ ಕಾಯಕವನ್ನು ಅವರು ನಿಲ್ಲಿಸಿಲ್ಲ. ಅವರಿಂದ ಆಹಾರ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಅವರ ಕಾಯಕದಿಂದ ಪ್ರೇರಣೆಯನ್ನು ಪಡೆದುಕೊಂಡು ಇತರ ಮೂರು ಮಂದಿ ಅವರಿಗೆ ಕೈಜೋಡಿಸಿದರು. ಅವರು ತಲಾ ರೂ.100ಗಳನ್ನು ಕೊಡುಗೆಯಾಗಿ ನೀಡುತ್ತಾರೆ. ಮುರುಘನ್ ಅವರು ನಿಝಾಲ್ ಮಯೈಮ್ (ನಿರ್ಗತಿಕರಿಗೆ ನೆರಳು) ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದಾರೆ.
ನಿಧಾನಕ್ಕೆ ಇನ್ನಷ್ಟು ಮಂದಿ ಅವರ ಕಾಯಕಕ್ಕೆ ಕೈಜೋಡಿಸಲು ಆರಂಭಿಸಿದ್ದಾರೆ, ಇಂದು ಈ ಸಂಸ್ಥೆಯ ಪ್ರತಿ ಭಾನುವಾರ ಸುಮಾರು 1,300 ಮಂದಿ ಅನ್ನ ಸಾಂಬಾರ್ ಅನ್ನು ಪೂರೈಕೆ ಮಾಡುತ್ತಿದೆ.
“ಸೋಮವಾರದಿಂದ ಶನಿವಾರದವರೆಗೆ ದುಡಿದು ಹಣ ಮಾಡುತ್ತೇವೆ. ಬಳಿಕ ಆ ಹಣ ಬಳಸಿ ಅಡುಗೆ ಮಾಡುತ್ತೇವೆ ಮತ್ತು ಅದನ್ನು 25 ಆಶ್ರಯ ಮನೆಗಳಿಗೆ ತೆರಳಿ ಅಲ್ಲಿರುವ ಜನರಿಗೆ ನೀಡುತ್ತೇವೆ. ಶನಿವಾರ ರಾತ್ರಿಯಿಂದಲೇ ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೇವೆ, ಹಂಚುವ ಕಾರ್ಯ ಭಾನುವಾರ ನಡೆಯುತ್ತದೆ. ನನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳು ಕೂಡ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ” ಎಂದು ಮುರುಘನ್ ಹೇಳುತ್ತಾರೆ.
“ನನ್ನ ದುಡಿಮೆಯ ಹಣ ಇದಕ್ಕೆ ಸಾಕಾಗುವುದಿಲ್ಲ, ಆದರೆ ಸಾಕಷ್ಟು ಹಿತೈಷಿಗಳು ನಮಗೆ ಸಹಾಯ ಮಾಡುತ್ತಿದ್ದಾರೆ. ಶಬ್ಬೀರ್ ಇಮಾನಿ ಎಂಬುವವರು ಪ್ರತಿ ತಿಂಗಳು ಹಣ ನೀಡುತ್ತಾರೆ. ಅವರನ್ನು ನಮ್ಮ ಬಳಿ ದೇವರೇ ಕಳುಹಿಸಿದ್ದಾನೆ” ಎನ್ನುತ್ತಾರೆ.
ಅಡುಗೆಗೆ ಸಾಮಾನು ಖರೀದಿ ಮಾಡಲು ಪ್ರಸ್ತುತ ಮುರುಘನ್ ಅವರು ಮಾಸಿಕ ರೂ.20 ಸಾವಿರವನ್ನು ವ್ಯಯ ಮಾಡುತ್ತಾರೆ. ಒಬ್ಬ ವ್ಯಕ್ತಿಯಿಂದ ಆರಂಭಗೊಂಡ ಅವರ ಮಿಷನ್ ಈಗ 50 ಮಂದಿ ಸ್ವಯಂಸೇವಕರನ್ನು ಒಳಗೊಂಡಿದೆ.
“ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನದನ್ನು ಮಾಡಬಲ್ಲೆವು ಎಂಬುದನ್ನು ಜೀವನದ ಒಂದು ತಿರುವು ನಮಗೆ ಕಲಿಸಿಕೊಡುತ್ತದೆ. ಘಟಿಸುವ ಏರಿಳಿತಗಳೊಂದಿಗೆ ಮುನ್ನಡೆಯುವುದಕ್ಕೆ ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕಷ್ಟೇ” ಎಂಬುದು ಮುರುಘನ್ ಅವರ ಅಭಿಪ್ರಾಯ.
ನಿಝಾಲ್ ಮಯೈಮ್ ಸಂಸ್ಥೆಯ ಮೂಲಕ ಹಸಿವು ನೀಗಿಸುತ್ತಿರುವ ಅವರಿಗೆ ಪ್ರಶಸ್ತಿಗಳನ್ನೂ ನೀಡಿ ನಾಗರಿಕ ಸಮಾಜ ಗೌರವಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.