ಕಾರ್ಕಳ: ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನಿಗೆ ಕರ್ನಾಟಕದ ಮಹಿಳಾ ಆಟಗಾರ್ತಿ ಆಯ್ಕೆಗೊಂಡದ್ದು ಕನ್ನಡಿಗರಿಗೆ ಹೆಮ್ಮೆ ತಂದಿದೆ.
ಕಾರ್ಕಳ ತಾಲೂಕಿನ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಮಲ್ಲಿಕಾ ಶೆಟ್ಟಿ ಜೂನ್ 24 ರಿಂದ ಜು. 1ರ ವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು ಇತ್ತೀಚೆಗೆ ಭಾರತೀಯ ರೈಲ್ವೆಯಲ್ಲಿ ಸರಕಾರಿ ನೌಕರಿ ಪಡೆದಿದ್ದಾರೆ.
ಮಲ್ಲಿಕಾ ಶೆಟ್ಟಿ ದಿ| ವಿಕಾಸ್ ಶೆಟ್ಟಿ ಹಾಗೂ ಸುಮತಿ ಶೆಟ್ಟಿ ಅವರ ಪ್ರಥಮ ಪುತ್ರಿ. ಬಜಗೋಳಿ ಸರಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದವರು. ಆದರೆ ತಂದೆಯ ಕಾಲಾನಂತರ ಶಾಲೆಯನ್ನು ತೊರೆಯಲು ಮುಂದಾದ ಅವರನ್ನು ಶಾಲೆಯ ದೈಹಿಕ ಶಿಕ್ಷಕ ಉಮೇಶ್ ಹಾಗೂ ಶಾಲಾಭಿವೃದ್ಧಿ ಕಮಿಟಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಅವರು ಕಲಿಕೆಯನ್ನು ಮುಂದುವರೆಸುವಂತೆ ಪ್ರೇರಣೆ ನೀಡಿದರು. ಬಳಿಕ ಅವರು ಮೈಸೂರಿನ ತೆರೆಸಿಯನ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಡಿಗ್ರಿ ಪಡೆದರು.
ಮಲ್ಲಿಕಾ ವಾಲಿಬಾಲ್ ಅಲ್ಲದೇ ಕಬಡ್ಡಿ, ಥ್ರೋಬಾಲ್, ಎತ್ತರ ಜಿಗಿತ, ಶಾಟ್ಪುಟ್ ಮುಂತಾದ ಕ್ರೀಡೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. 2007ರಲ್ಲಿ ವಾಲಿಬಾಲ್ ಕೋಚ್ ಪ್ರೇಮ್ಕುಮಾರ್ ಸಹಾಯದೊಂದಿಗೆ ಬೆಂಗಳೂರು ವಿದ್ಯಾನಗರದ ಸ್ಪೋರ್ಟ್ಸ್ ಶಾಲೆಗೆ ಸೇರಿದರು.
ಪಂಜಾಬ್, ಉತ್ತರಪ್ರದೇಶ, ಒಡಿಶಾ, ರಾಜಸ್ಥಾನ್, ಮಹಾರಾಷ್ಟ್ರ, ಕೇರಳ ಮುಂತಾದೆಡೆ ಭಾಗವಹಿಸಿ 5 ಚಿನ್ನದ ಪದಕ, 3 ಬೆಳ್ಳಿ ಹಾಗೂ 6 ಕಂಚಿನ ಪದಕ ಪಡೆದಿದ್ದಾರೆ. ಅವರು ದಸರಾ ಟೂರ್ನಿ ಮತ್ತಿತರ ಕ್ರೀಡೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.