ಭುವನೇಶ್ವರ: ಇತ್ತೀಚಿಗೆ ಸಂಭವಿಸಿದ ಫೋನಿ ಚಂಡಮಾರುತಕ್ಕೆ ಭಾರೀ ಪ್ರಮಾಣದ ಮರಗಳನ್ನು ಕಳೆದುಕೊಂಡಿರುವ ಒರಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿ, ಸರ್ಕಾರಿ ಆಸ್ಪತ್ರೆಗಳು ಕಳೆದುಹೋದ ಹಸಿರು ಹೊದಿಕೆಯನ್ನು ಮರುಪಡೆಯಲು ಒಂದು ವಿಶಿಷ್ಟ ಕಾರ್ಯಕ್ರಮವನ್ನು ಆರಂಭಿಸಿವೆ. ನವಜಾತ ಶಿಶುಗಳ ಪೋಷಕರಿಗೆ ಉಚಿತ ಸಸಿಗಳನ್ನು ವಿತರಣೆ ಮಾಡುತ್ತಿವೆ.
“ತಾಯಿಯ ಭಾವನೆಯನ್ನು ಸಸ್ಯದೊಂದಿಗೆ ಸಂಪರ್ಕಿಸುವ ಯೋಚನೆ ನಮ್ಮದಾಗಿದೆ. ಇದರಿಂದ, ಅವಳು ಮನೆಗೆ ಹೋದಾಗ ತನ್ನ ಕುಟುಂಬಕ್ಕೆ ಇಬ್ಬರು ಹೊಸ ಸದಸ್ಯರ ಆಗಮನವಾಗಿದೆ ಎಂದು ಭಾವಿಸುತ್ತಾಳೆ ಮತ್ತು ಸಸ್ಯವನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾಳೆ. ನಾವು ಜನರಿಗೆ ಸಸ್ಯದ ಕೊಡುಗೆ ಮತ್ತು ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದೇವೆ” ಎಂದು ಭುವನೇಶ್ವರ ಕ್ಯಾಪಿಟಲ್ ಹಾಸ್ಪಿಟಲ್ ನಿರ್ದೇಶಕ ಅಶೋಕ್ ಪಟ್ನಾಯಕ್ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಪೋಷಕರಿಗೆ, ಬೇವು, ಬೇಲ್ ಮತ್ತು ಕದಂಬ ಮುಂತಾದ ಸಸ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. ‘ಒನ್ ಬೇಬಿ ಒನ್ ಟ್ರೀ’ ಎಂಬ ನವೀನ ಯೋಜನೆಯ ಅಡಿಯಲ್ಲಿ ಸಸ್ಯಗಳನ್ನು ವಿತರಿಸಲಾಗುತ್ತಿದೆ.
“ಇತ್ತೀಚಿನ ಫೋನಿ ಚಂಡಮಾರುತದಲ್ಲಿ ನಾವು ಸಾಕಷ್ಟು ಮರಗಳನ್ನು ಕಳೆದುಕೊಂಡಿದ್ದೇವೆ. ಜಿಲ್ಲಾ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಸಹಾಯದಿಂದ ನಾವು ನಮ್ಮ ಪ್ರೀತಿಯ ನಗರದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿರು ಹೊದಿಕೆಯನ್ನು ಪುನರುಜ್ಜೀವನಗೊಳಿಸಲು ಈ ವಿಶಿಷ್ಟ ಪ್ರಯತ್ನವನ್ನು ಕೈಗೊಳ್ಳುತ್ತಿದ್ದೇವೆ” ಎಂದು ಪಟ್ನಾಯಕ್ ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಆಸ್ಪತ್ರೆಯಲ್ಲಿ ಪ್ರತಿದಿನ ಸುಮಾರು 30 ನವಜಾತ ಶಿಶುಗಳನ್ನು ಹೆರಿಗೆ ಮಾಡಲಾಗುತ್ತದೆ. ಆಸ್ಪತ್ರೆಯು ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದು, ತಾಯಿ ಮತ್ತು ಮಗು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದಾಗ ಅದನ್ನು ಅವರಿಗೆ ಹಸ್ತಾಂತರಿಸುತ್ತದೆ.
“ನವ ಪೋಷಕರು ತಮ್ಮ ಮಗುವಿನ ಜನನದ ಸ್ಮರಣಾರ್ಥವಾಗಿ ತಮ್ಮ ಮನೆಗಳಲ್ಲಿ ಗಿಡಗಳನ್ನು ನೆಡುತ್ತಾರೆ. ಅದನ್ನು ಪೋಷಿಸುವ ಜವಾಬ್ದಾರಿ ಅವರ ಮೇಲಿರುತ್ತದೆ. ಮರವು ಬೆಳೆದು ದೊಡ್ಡದಾದಾಗ ಅದು ಆಮ್ಲಜನಕವನ್ನು ಪೂರೈಸುವ ಮೂಲಕ ಸುಮಾರು 400 ಜನರನ್ನು ಪೋಷಿಸುತ್ತದೆ ಎಂದು ನಾವು ಅವರಿಗೆ ತಿಳಿಸಿದ್ದೇವೆ” ಎನ್ನುತ್ತಾರೆ.
ಫೋನಿ ಚಂಡಮಾರುತದಿಂದಾಗಿ ಭುವನೇಶ್ವರ, ಪುರಿಯಾದ್ಯಂತ 30 ಲಕ್ಷ ಮರಗಳು ನೆಲಕ್ಕುರುಳಿವೆ ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.