ನವದೆಹಲಿ: ಪಾಕಿಸ್ಥಾನದ ಬಾಲಕೋಟ್ ಮೇಲೆ ಭಾರತವು ವೈಮಾನಿಕ ದಾಳಿಯನ್ನು ನಡೆಸಿದ ಬಳಿಕ ಗಡಿಯಲ್ಲಿ ಅಕ್ರಮ ನುಸುಳುಕೋರತನ ಶೇ. 43 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಂಗಳವಾರ ಮಾಹಿತಿ ನೀಡಿದೆ. ಭದ್ರತಾ ಪಡೆಗಳ ಸಂಯೋಜಿತ ಮತ್ತು ಕೇಂದ್ರೀಕೃತ ಕಾರ್ಯದಿಂದಾಗಿ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿಗಳು ಸುಧಾರಣೆಗೊಂಡಿವೆ. 2018ರ ಮೊದಲಾವಧಿಗಿಂತ 2019ರ ಮೊದಲಾವಧಿಯಲ್ಲಿ ಪರಿಸ್ಥಿತಿಗಳಲ್ಲಿ ಸಾಕಷ್ಟು ಸುಧಾರಣೆಗೊಂಡಿದೆ ಎಂದು ಸರ್ಕಾರ ತಿಳಿಸಿದೆ.
“ಗಡಿಯಲ್ಲಿನ ಅಕ್ರಮ ಒಳನುಸುಳುವಿಕೆಯ ಬಗ್ಗೆ ಸರ್ಕಾರ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದೆ. ಭದ್ರತಾ ಪಡೆಗಳ ಸಂಘಟಿತ ಮತ್ತು ಸಂಯೋಜಿತ ಪ್ರಯತ್ನಗಳಿಂದಾಗಿ, ಕಣಿವೆ ರಾಜ್ಯದ ಭದ್ರತಾ ಪರಿಸ್ಥಿತಿಯು ಈ ವರ್ಷದ ಮೊದಲಾರ್ಧದಲ್ಲಿ 2018 ಅವಧಿಯ ಮೊದಲಾರ್ಧಕ್ಕಿಂತ ಸುಧಾರಣೆಯಾಗಿದೆ. ಒಟ್ಟು ಒಳನುಸುಳುವಿಕೆ ಶೇ.43 ರಷ್ಟು ಕಡಿಮೆಯಾಗಿದೆ. ಅಲ್ಲದೇ, ಗಡಿಯಲ್ಲಿನ ಒಳನುಸುಳುವಿಕೆಯನ್ನು ನಿಯಂತ್ರಿಸಲು ಭಾರತ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಬಹುಮುಖಿ ವಿಧಾನಗಳನ್ನು ಅಳವಡಿಸಿಕೊಂಡಿದೆ” ಎಂದಿದ್ದಾರೆ.
ಅಂತಾರಾಷ್ಟ್ರೀಯ ಗಡಿ ರೇಖೆಯ ಉದ್ದಕ್ಕೂ ಬಹು ಪದರದ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಗಡಿ ಬೇಲಿ, ಸುಧಾರಿತ ಗುಪ್ತಚರ ಮತ್ತು ಸಂಯೋಜಿತ ಕಾರ್ಯಚರಣೆ, ಸರ್ವ ಸಜ್ಜಿತ ಭದ್ರತಾ ಪಡೆಗಳ ನಿಯೋಜನೆಗಳನ್ನು ಅಳವಡಿಸಲಾಗಿದೆ ಎಂದಿದ್ದಾರೆ.
ಗುಪ್ತಚರ ವರದಿಯ ಪ್ರಕಾರ, ಪಾಕಿಸ್ಥಾನ ತನ್ನ ಮಿಲಿಟರಿ ಸ್ಥಾಪನೆಗಳ ಸುರಕ್ಷತೆಯನ್ನು ಬಲಪಡಿಸುತ್ತಿದೆ ಮತ್ತು ಭವಿಷ್ಯದಲ್ಲಿ ಭಾರತದಿಂದ ಹೆಚ್ಚಿನ ಆಕ್ರಮಣ ನಡೆಯಬಹುದೆಂದು ಹೆದರಿ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಿದೆ.
ಬಾಲಕೋಟ್ ದಾಳಿಯ ಬಳಿಕ ಪಾಕಿಸ್ಥಾನದಲ್ಲಿನ ಉಗ್ರ ಶಿಬಿರಗಳನ್ನು ಅಫ್ಘಾನಿಸ್ಥಾನಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ವರದಿಗಳು ತಿಳಿಸಿದ್ದು, ಇದರ ಪರಿಣಾಮ ಗಡಿಯಲ್ಲಿ ಅಕ್ರಮ ಒಳನುಸುಳುವಿಕೆಯ ಪ್ರಮಾಣ ಕುಗ್ಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.