ಇಂದು ರಾಷ್ಟ್ರೀಯ ವಿದ್ಯಾರ್ಥಿ ದಿವಸ್. 1949 ಜುಲೈ 9 ರಂದು ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಒಳಗೊಂಡು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನು ಸ್ಥಾಪಿಸಲಾಯಿತು. ಹೀಗಾಗಿ ಪ್ರತಿ ವರ್ಷ ಜುಲೈ 9 ಅನ್ನು ಎ.ಬಿ.ವಿ.ಪಿ.ಯು ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಗಿ ಆಚರಿಸುತ್ತಾ ಬರುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಬಲರಾಜ್ ಮೋಧಕ್ ಅವರು ಇದರ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಎಬಿವಿಪಿ ಭಾರತದ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ ಇಂದು ಬೆಳೆದು ನಿಂತಿದೆ. ಮೂಲತಃವಾಗಿ 1948 ಎಬಿವಿಪಿ ಹುಟ್ಟಿತ್ತು. ಅದನ್ನು ನೊಂದಾಯಿಸಿದ್ದು 1949ರಲ್ಲಿ. ತದ ನಂತರ ಕೆಲವು ವರ್ಷಗಳ ಕಾಲ ಈ ವಿದ್ಯಾರ್ಥಿ ಸಂಘಟನೆಯ ಅಷ್ಟು ಬೆಳವಣಿಗೆಯನ್ನು ಕಾಣದಿದ್ದರೂ 1958ರ ಬಳಿಕ ಪ್ರೋ. ಯಶವಂತ ರಾವ್ ಕೇಳ್ಕರ್ ಅವರು ಎ.ಬಿ.ವಿ.ಪಿ.ಯನ್ನು ಪ್ರಬಲವಾಗಿ ಬೆಳಸಿ ಅದಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಕೇಳ್ಕರ್ ಅವರನ್ನು ಎಬಿವಿಪಿಯ ಶಿಲ್ಪಿ ಎಂದೇ ಬಣ್ಣಿಸಲಾಗುತ್ತದೆ.
ಎಬಿವಿಪಿ ಜ್ಞಾನ, ಶೀಲ, ಏಕತೆ ಎಂಬ ಮೂರು ತತ್ವದಡಿ ಕಾರ್ಯೋನ್ಮುಖವಾಗಿದೆ. ಇದುವೇ ಅದರ ಮೂಲ ಸಿದ್ಧಾಂತ. ಇದು ದೇಶದ ಹಲವು ಮುಖ್ಯ ಸಂದರ್ಭಗಳಲ್ಲಿ ತನ್ನ ಹೋರಾಟವನ್ನು ರೂಪಿಸಿದ್ದಲ್ಲದೆ, ರಾಷ್ಟ್ರೀಯ ಚಿಂತನೆಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿದೆ. ವಿದ್ಯಾರ್ಥಿ ಸಮುದಾಯದಲ್ಲಿ ರಾಷ್ಟ್ರೀಯವಾದವನ್ನು ಸೃಜಿಸುವಲ್ಲಿ ಎಬಿವಿಪಿಯು ಬಹುಮುಖ್ಯ ಪಾತ್ರವನ್ನು ವಹಿಸುತ್ತಾ ಬಂದಿದೆ. ಇಂದಿಗೂ ವಿದ್ಯಾರ್ಥಿಗಳ ಸಮಸ್ಯೆ ಬಂದಾಗ, ಶೈಕ್ಷಣಿಕ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿಯಾದಾಗ ಮೊದಲು ಧ್ವನಿ ಎತ್ತುವುದೇ ಎಬಿವಿಪಿ. ರಾಷ್ಟ್ರ ಮತ್ತು ರಾಷ್ಟ್ರೀಯ ಸಿದ್ಧಾಂತಗಳಿಗೆ ಧಕ್ಕೆಯುಂಟಾದಾಗಲೂ ಮುಂಚೂಣಿಯಲ್ಲಿ ನಿಂತು ಹೋರಾಟದ ನೇತೃತ್ವವನ್ನು ಎಬಿವಿಪಿ ವಹಿಸುತ್ತದೆ.
1975 ತುರ್ತುಪರಿಸ್ಥಿತಿ ಸಂದರ್ಭ ಎ.ಬಿ.ವಿ.ಪಿ.ಯ 10,000 ಸಾವಿರ ಕಾರ್ಯಕರ್ತರು ಜೈಲು ಪಾಲಾಗಿದ್ದರು. ಅಲ್ಲದೇ 1978 ರಲ್ಲಿ ಗ್ರಾಮೋತ್ಥಾನಕ್ಕಾಗಿ ವಿದ್ಯಾರ್ಥಿಗಳು ಎಂಬ ಕಾರ್ಯಕ್ರಮದಡಿ 350 ಗ್ರಾಮಗಳಲ್ಲಿ ಯಶಸ್ವಿ ಜಾಗೃತಿ ಕ್ರಾರ್ಯಕ್ರಮಗಳನ್ನು ಈ ವಿದ್ಯಾರ್ಥಿ ಸಂಘಟನೆ ನಡೆಸಿಕೊಟ್ಟಿತು. ಅಲ್ಲದೇ 2006 ರಲ್ಲಿ ಬಾಂಗ್ಲಾ ನುಸುಳುಕೋರರ ವಿರುದ್ಧ ಆಂದೋಲನ ಮಾಡಿ ರಾಷ್ಟ್ರಮಟ್ಟದಲ್ಲಿ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಹೀಗೆ ಸರಕಾರ, ಸಮಾಜ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಾಳಜಿಯನ್ನು ರೂಪಿಸುವಲ್ಲಿ ಎ.ಬಿ.ವಿ.ಪಿ ಬಹಳ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ.
ಎಡ ವಿದ್ಯಾರ್ಥಿ ಸಂಘಟನೆಗಳೇ ದೇಶದಾದ್ಯಂತದ ಶಾಲಾ ಕಾಲೇಜುಗಳಲ್ಲಿ ಪ್ರಾಬಲ್ಯವನ್ನು ಮೆರೆಯುತ್ತಿದ್ದ ವೇಳೆ, ಆ ಸಂಘಟನೆಗಳಿಗೆ ಸೆಡ್ಡು ಹೊಡೆದು ನಿಂತು ಬೃಹದಾಕಾರವಾಗಿ ಎಬಿವಿಪಿ ಬೆಳೆದು ನಿಂತಿದೆ. ದೇಶದ ಬಗ್ಗೆ ನಕರಾತ್ಮಕ ಚಿಂತನೆಗಳನ್ನೇ ಮೂಡಿಸುವ ಎಡ ಸಂಘಟನೆಗಳ ಪ್ರಾಬಲ್ಯವನ್ನು ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಕುಂಠಿತಗೊಳಿಸಿದ ಕೀರ್ತಿ ಎಬಿವಿಪಿಗೆ ಸಲ್ಲುತ್ತದೆ. ರಾಷ್ಟ್ರೀಯ ಚಿಂತನೆಗಳು, ದೇಶದ ಬಗೆಗಿನ ಗೌರವ ಭಾವನೆಗಳು ಇಂದು ಕಾಲೇಜುಗಳಲ್ಲಿ ಮೂಡಿ ಬರುತ್ತಿವೆ ಎಂದರೆ ಅದರಲ್ಲಿ ಎಬಿವಿಪಿ ಕೊಡುಗೆಯೂ ಬಹಳಷ್ಟಿದೆ.
ದೇಶದ ಪ್ರಮುಖ ರಾಜಕಾರಣಿಗಳಾಗಿ ಹೆಸರು ಮಾಡಿರುವ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವಿಜಯ್ ಗೋಯಲ್, ನಿತಿನ್ ಗಡ್ಕರಿ ಮುಂತಾದ ಅನೇಕರು ಎಬಿವಿಪಿ ಹಿನ್ನಲೆಯಿಂದಲೇ ಬಂದವರಾಗಿದ್ದಾರೆ. ಎಬಿವಿಪಿ ಸಂಘಟನೆಯಲ್ಲಿದ್ದ ಅನೇಕರು ಇಂದು ಅನೇಕ ಕ್ಷೇತ್ರಗಳಲ್ಲಿ ದೇಶಕ್ಕೆ ಕೊಡುಗೆಗಳನ್ನು ನೀಡುತ್ತಿದ್ದಾರೆ. 2003ರಲ್ಲಿ ಸುಮಾರು 11 ಲಕ್ಷ ಕಾರ್ಯಕರ್ತರನ್ನು ಹೊಂದಿದ್ದ ಎಬಿವಿಪಿ, 2014ರಲ್ಲಿ ತನ್ನ ಕಾರ್ಯಕರ್ತರನ್ನು ಸಂಖ್ಯೆಯನ್ನು 32 ಲಕ್ಷಕ್ಕೆ ಹೆಚ್ಚಿಸಿಕೊಂಡಿತ್ತು. ಈಗ ಅದರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗಿದೆ.
ರಾಷ್ಟ್ರೀಯ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿರುವ ಎಬಿವಿಪಿ ಇನ್ನಷ್ಟು ಬೆಳೆಯಲಿ ಎಂಬುದು ಎಲ್ಲರ ಆಶಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.