ತಿರುವನಂತಪುರಂ: ಕೇರಳ ಸರ್ಕಾರವು ದೇಶದ ಮೊತ್ತ ಮೊದಲ ಆನೆ ಪುನರ್ವಸತಿ ಕೇಂದ್ರವನ್ನು ತನ್ನ ರಾಜ್ಯ ರಾಜಧಾನಿ ತಿರುವನಂತಪುರಂ ಬಳಿಯ ಪರಿಸರ ಪ್ರವಾಸೋದ್ಯಮ ಗ್ರಾಮವಾದ ಕೊಟ್ಟೂರಿನಲ್ಲಿ ನಿರ್ಮಾಣ ಮಾಡುತ್ತಿದೆ. 105 ಕೋಟಿ ರೂ.ಗಳ ಯೋಜನೆಯ ಇದಾಗಿದ್ದು, ಇದರ ಮೊದಲ ಹಂತ ಕಾಮಗಾರಿಗೆ ಕಳೆದ ತಿಂಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚಾಲನೆ ನೀಡಿದ್ದಾರೆ.
ಈ ಆನೆ ಪುನರ್ವಸತಿ ಕೇಂದ್ರವು, ಆನೆ ವಸ್ತುಸಂಗ್ರಹಾಲಯ, ಮಾವುತರ ತರಬೇತಿ ಕೇಂದ್ರ, ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ, ನಿವೃತ್ತಿ ಮನೆ ಮತ್ತು ಪ್ರಾಣಿಗಳ ಸ್ಮಶಾನವನ್ನು ಹೊಂದಿರಲಿದೆ. ಅನಾಥ, ಗಾಯಗೊಂಡ ಮತ್ತು ವಯಸ್ಸಾದ ಆನೆಗಳಿಗೆ ಈ ಕೇಂದ್ರವು ಆಶ್ರಯ ಒದಗಿಸಲಿದೆ. ಶ್ರೀಲಂಕಾದ ಪಿನ್ನವಾಲಾ ಆನೆ ಅನಾಥಾಶ್ರಮದ ಮಾದರಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ.
ಇದುವರೆಗೆ ಈ ಕೇಂದ್ರದಲ್ಲಿ ಕೇವಲ 15 ಆನೆಗಳು ಇವೆ. ಮೂಲಸೌಕರ್ಯಗಳ ಕೆಲಸ ಪೂರ್ಣಗೊಂಡ ಬಳಿಕ ಆನೆಗಳ ಸಂಖ್ಯೆಗಳು ಹೆಚ್ಚಾಗುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ಅನಾಥ ಮತ್ತು ಮಾಲೀಕರಿಂದ ಹೊರ ಹಾಕಲ್ಪಟ್ಟ ಆನೆಗಳಿಗೆ ಉತ್ತಮ ಆರೈಕೆ ಮತ್ತು ರಕ್ಷಣೆ ನೀಡುವುದರ ಜೊತೆಗೆ ಜನರಿಗೆ ಆನೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅವಕಾಶವನ್ನು ನೀಡಲು ನಾವು ಯೋಜಿಸುತ್ತಿದ್ದೇವೆ. ಜನರು ಆನೆಗಳ ನಡವಳಿಕೆ ಮತ್ತು ಜೀವನ ವಿಧಾನವನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ ” ಎಂದು ತಿರುವನಂತಪುರಂ ವನ್ಯಜೀವಿ ವಾರ್ಡನ್ ವೈ ಎಂ ಶಾಜಿ ಕುಮಾರ್ ಹೇಳಿದ್ದಾರೆ.
“ನಾವು ಹಲವು ಸಮಯದಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಈ ಆನೆ ಪುನರ್ವಸತಿ ಕೇಂದ್ರವು ವನ್ಯಜೀವಿ ಸಂಶೋಧಕರು ಮತ್ತು ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ” ಎಂದು ಆನೆ ತಜ್ಞ ಪಿ.ಎಸ್. ಈಸಾ ಹೇಳಿದ್ದಾರೆ.
ಬಂಧನದಲ್ಲಿರುವ ಆನೆಗಳನ್ನು ಈ ಕೇಂದ್ರಕ್ಕೆ ಸೇರಿಸಲು ಅರಣ್ಯ ಇಲಾಖೆ ಯೋಜಿಸಿದೆ. ಕೊನೆಯ ಆನೆ ಜನಗಣತಿಯ ಪ್ರಕಾರ, ಕೇರಳ ರಾಜ್ಯದಲ್ಲಿ 507 ಬಂಧಿಸಲ್ಪಟ್ಟ ಆನೆಗಳು ಇವೆ. ಗುರುವಾಯೂರ್ ಪಟ್ಟಣದ ಶ್ರೀ ಕೃಷ್ಣ ದೇವಸ್ಥಾನದಲ್ಲಿ 59 ಆನೆಗಳು ಇವೆ.
ನಿರ್ಮಾಣ ಕಾರ್ಯ ಕಾರ್ಯಗತಗೊಂಡ ನಂತರ, 65 ಎಕರೆ ನೈಸರ್ಗಿಕ ಅರಣ್ಯಗಳಲ್ಲಿ ವ್ಯಾಪಿಸಿರುವ ಈ ಕೇಂದ್ರವು ಪ್ರವಾಸಿಗರನ್ನು ಆಕರ್ಷಿಸಲು ಆನೆ ಸಫಾರಿ ಮತ್ತು ಇತರ ಚಟುವಟಿಕೆಗಳನ್ನು ಪ್ರಾರಂಭಿಸಲಿದೆ.
ಈ ಕೇಂದ್ರವು ಮಾವುತರುಗಳಿಗೆ ತರಬೇತಿ ಕೇಂದ್ರದ ಜೊತೆಗೆ ವಸತಿ ಸೌಕರ್ಯವನ್ನು ಸಹ ಒದಗಿಸಲಿದೆ. ದೇಶದಲ್ಲಿ ಮಾವುತರಿಗೆ ಯಾವುದೇ ಅಧಿಕೃತ ತರಬೇತಿ ಕೇಂದ್ರಗಳಿಲ್ಲ, ಇದು ಪ್ರಾಣಿಗಳ ಕೆಟ್ಟ ಆರೈಕೆಗೆ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕೇರಳ ಅರಣ್ಯ ಸಚಿವ ಕೆ. ರಾಜು ಅವರು, ಈ ಕೇಂದ್ರವನ್ನು ನಾವು ವಿಶ್ವ ದರ್ಜೆಯ ಕೇಂದ್ರವನ್ನಾಗಿ ಮಾಡುತ್ತೇವೆ. ಇದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಲಿದೆ ಎಂಬ ಭರವಸೆಯನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.