ತಿರುವನಂತಪುರಂ: ಕೊಚ್ಚಿಯ ಆಶ್ರಯ ಮನೆಯಲ್ಲಿ ಅಪ್ರಾಪ್ತ ಬಾಲಕರನ್ನು ಅತ್ಯಾಚಾರಕ್ಕೀಡು ಮಾಡಿದ ಕ್ಯಾಥೋಲಿಕ್ ಚರ್ಚ್ ಪಾದ್ರಿಯೊಬ್ಬನನ್ನು ಕೇರಳ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಫಾದರ್ ಜಾರ್ಜ್ ಟಿಜೆ ಅಲಿಯಾಸ್ ಜೆರ್ರಿ ಬಂಧಿತ ಪಾದ್ರಿಯಾಗಿದ್ದಾನೆ. ಡಯಾಸಿಸ್ ಆಫ್ ಕೊಚ್ಚಿನ್ ವತಿಯಿಂದ ನಡೆಸಲ್ಪಡುತ್ತಿದ್ದ ಆಶ್ರಯ ಮನೆಯ ನಿರ್ದೇಶಕನಾಗಿ ಈತ ಕಾರ್ಯನಿರ್ವಹಿಸುತ್ತಿದ್ದ. ಸಂತ್ರಸ್ಥ ಬಾಲಕರು ಇಲ್ಲಿ ಆಶ್ರಯ ಪಡೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಹಲವಾರು ತಿಂಗಳುಗಳಿಂದ ಆಶ್ರಯ ಮನೆಯಲ್ಲಿ ಬಾಲಕರ ಮೇಲೆ ಅತ್ಯಾಚಾರವನ್ನು ಈತ ಎಸಗುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ. ಕೆಲವು ಬಾಲಕರು ತಮ್ಮ ತಮ್ಮ ನಡುವೆಯೇ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ವಿಷಯ ಬೆಳಕಿಗೆ ಬಂದಿದೆ. ಮನೋರಮಾ ಆನ್ಲೈನ್ ಸುದ್ದಿಯ ಪ್ರಕಾರ, ಶನಿವಾರ 7 ಮಂದಿ ಬಾಲಕರು ತಮ್ಮ ಮನೆಗಳಿಗೆ ಓಡಿಹೋಗಿದ್ದು, ವಿಷಯವನ್ನು ಪೋಷಕರಿಗೆ ತಿಳಿಸಿದ್ದಾರೆ. ಪೋಷಕರು ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಡಿಸೆಂಬರ್ ತಿಂಗಳಿನಿಂದ ಪಾದ್ರಿ ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ ಎಂದು ಬಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ಬಡ ಕುಟುಂಬದ, ಒಡೆದ ಕುಟುಂಬದ ಸುಮಾರು 15 ಮಂದಿ ಮಕ್ಕಳು ಪಾದ್ರಿಗಳು ನಡೆಸುವ ಈ ಆಶ್ರಯ ಮನೆಯಲ್ಲಿ ಬದುಕುತ್ತಿದ್ದಾರೆ. ರೂ.250 ಅನ್ನು ನೀಡಿ ಈ ಬಾಲಕರನ್ನು ಅವರ ಪೋಷಕರು ಆಶ್ರಯ ಮನೆಗೆ ತಂದು ಸೇರಿಸಿದ್ದಾರೆ. ಇಲ್ಲಿ ವಾಸಿಸುವ ಮಕ್ಕಳು ಸ್ಥಳಿಯ ಶಾಲೆಗೆ ಕಲಿಯಲು ಹೋಗುತ್ತಾರೆ ಎಂದು ಹೇಳಲಾಗಿದೆ.
ಫಾದರ್ ಜಾರ್ಜ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ವಿರುದ್ಧ ಪ್ರಕರಣ ದಾಖಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.
ಕೇರಳದ ಕ್ಯಾಥೊಲಿಕ್ ಚರ್ಚ್ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ ಜಲಂಧರ್ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರು ನನ್ ಮೇಲೆ ಅತ್ಯಾಚಾರ ಎಸಗಿದ್ದರು. ಆತ ಮುಲಕ್ಕಲ್ ಬಂಧನಕ್ಕೊಳಗಾದ ಏಳು ತಿಂಗಳ ನಂತರ ಕೇರಳ ಪೊಲೀಸರು ಏಪ್ರಿಲ್ 9 ರಂದು ಚಾರ್ಜ್ಶೀಟ್ ಸಲ್ಲಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.