ನವದೆಹಲಿ: ಭಾರತೀಯ ಸೇನೆಯು ಇತಿಹಾಸದಲ್ಲೇ ಮೊದಲ ಬಾರಿಗೆ ಜವಾನ್ ಹುದ್ದೆಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳುತ್ತಿದೆ, ಇದಕ್ಕೆ ಮಹಿಳೆಯರಿಂದ ಅಭೂತಪೂರ್ವ ಸ್ಪಂದನೆಯೂ ವ್ಯಕ್ತವಾಗುತ್ತಿದೆ. ಕಾರ್ಪ್ಸ್ ಆಫ್ ಮಿಲಿಟರಿ ಪೋಲಿಸ್ (ಸಿಎಂಪಿ)ನಲ್ಲಿನ 100 ಹುದ್ದೆಗಳಿಗೆ ಎರಡು ಲಕ್ಷ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ಪೋಸ್ಟ್ಗಳಿಗೆ ಅರ್ಜಿಗಳನ್ನು ಆನ್ಲೈನ್ ಪೋರ್ಟಲ್ ಮೂಲಕ ಸಲ್ಲಿಸುವಂತೆ ತಿಳಿಸಲಾಗಿದೆ. ಭಾರತೀಯ ಸೇನೆಯು ಅಧಿಕಾರಿ ಶ್ರೇಣಿಯ (ಪಿಬಿಒಆರ್) ವಿಭಾಗದಲ್ಲಿ 1,700 ಮಹಿಳೆಯರನ್ನು ನೇಮಕ ಮಾಡುವ ಬಗ್ಗೆಯೂ ಯೋಜನೆ ರೂಪಿಸುತ್ತಿದೆ. ಯುದ್ಧಯೇತರ ಕಾರ್ಯಗಳ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಈಗಾಗಲೇ ಅನುಮತಿ ಇದೆ, ಮತ್ತು ಅನೇಕ ಮಹಿಳೆಯರು ಸೇನೆಯ ಮೆಡಿಕಲ್ ಕಾರ್ಪ್ಸ್, ಜಡ್ಜ್ ಅಡ್ವೊಕೇಟ್ ಜನರಲ್ ಡಿಪಾರ್ಟ್ಮೆಂಟ್ ಮತ್ತು ಕಾರ್ಪ್ಸ್ ಆಫ್ ಮಿಲಿಟರಿ ಇಂಟೆಲಿಜೆನ್ಸ್ ಸೇರಿದಂತೆ ಇತರ ಶಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
“ಪ್ರತಿವರ್ಷ 100 ಮಂದಿಯನ್ನು ನೇಮಕಗೊಳಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ, ಮಹಿಳೆಯರು ಕಾರ್ಪ್ಸ್ ಆಫ್ ಮಿಲಿಟರಿ ಪೋಲಿಸ್ನಲ್ಲಿ ಶೇ. 20ರಷ್ಟು ಪ್ರಾತಿನಿಧ್ಯ ಹೊಂದಿದ್ದಾರೆ. ಟೆರಿಟೋರಿಯಲ್ ಆರ್ಮಿಯ ಮೊದಲ ಮಹಿಳಾ ಪ್ರೊವೋಸ್ಟ್ ಯುನಿಟ್ನ ಕಾರ್ಯ ದಕ್ಷತೆಯನ್ನು ಗಮನಿಸಿ ಬಳಿಕ ಅಂತಹ ಹೆಚ್ಚಿನ ಯುನಿಟ್ಗಳ ಅಗತ್ಯವಿದೆಯೇ ಎಂಬ ಬಗ್ಗೆ ನಿರ್ಧರಿಸುತ್ತೇವೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟೆರಿಟೋರಿಯಲ್ ಆರ್ಮಿಯ ಭಾಗವಾಗಿ ಸೇನೆಯು ‘ಮಹಿಳಾ ಪ್ರೊವೊಸ್ಟ್ ಯುನಿಟ್’ ಅನ್ನು ರಚಿಸಲು ಪ್ರಯತ್ನಿಸುತ್ತಿದೆ, ಆದರೂ ಅಧಿಕೃತ ಅನುಮೋದನೆ ಇನ್ನೂ ಸಿಗದೆ ಬಾಕಿ ಉಳಿದಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.