ಮೊರಾದಬಾದ್: ಪ್ರತಿಯೊಂದು ಪೊಲೀಸ್ ಠಾಣೆ ಕೂಡ ಕನಿಷ್ಠ 10 ನಟೋರಿಯಸ್ ಅಪರಾಧಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು ಮತ್ತು ಪೊಲೀಸ್ ಅಧಿಕಾರಿಗಳು ಆ ಅಪರಾಧಿಗಳನ್ನು ಬಂಧಿಸಲು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆದೇಶಿಸಿದ್ದಾರೆ.
ಮೊರದಬಾದಿನಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ಅಪರಾಧಿ ಶಿಕ್ಷೆಗೊಳಪಟ್ಟಾಗ ಮಾತ್ರ ಜನರು ಪೊಲೀಸರನ್ನು ನಂಬುತ್ತಾರೆ. ಹೀಗಾಗಿ ಪೊಲೀಸರು ಅಪರಾಧಿಗಳನ್ನು ಹಿಡಿಯುವುದು ಮಾತ್ರವಲ್ಲ, ಅವರಿಗೆ ಏನು ಶಿಕ್ಷೆ ನೀಡಿದ್ದೇವೆ ಎಂಬ ಬಗ್ಗೆ ಬಹಿರಂಗಪಡಿಸಬೇಕು” ಎಂದಿದ್ದಾರೆ.
ಸಭೆಯ ವೇಳೆ ಯೋಗಿ ಆದಿತ್ಯನಾಥ ಅವರು, ಮೊರದಬಾದ್, ರಾಂಪುರ, ಬಿಜ್ನೋರ್, ಸಂಭಲ್ ಮತ್ತು ಅಮ್ರೋಹ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಿದರು. ಅಲ್ಲದೇ, ಅಪರಾಧಿಗಳ ಮೇಲೆ ಸದಾ ಕಣ್ಣಿಡಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಂತೆ ಅವರು ಸೂಚಿಸಿದರು.
“ಅಪರಾಧೀಗಳು ಅಪರಾಧ ಮಾಡುವುದನ್ನು ತಡೆಯಲು ಅತ್ಯಾಧುನಿಕ ತಂತ್ರಜ್ಞಾನಗಳ ಸಹಾಯವನ್ನು ಪಡೆಯಿರಿ. ಅಪರಾಧಿ ಅಪರಾಧ ಮಾಡುವ ತನಕ ಕಾಯುವ ಅಗತ್ಯವಿಲ್ಲ. ಅಪರಾಧಿಯನ್ನು ಗುರುತಿಸಿ ಆತನು ಮಾಡಲು ಹೊರಟಿರುವ ಅಪರಾಧವನ್ನು ತಡೆಗಟ್ಟಿರಿ” ಎಂದಿದ್ದಾರೆ.
“ರಾಜ್ಯದ ಅಪರಾಧ ಪ್ರಮಾಣವನ್ನು ಅತ್ಯಂತ ಕಡಿಮೆ ಮಟ್ಟಕ್ಕೆ ಕೊಂಡೊಯ್ಯುವ ಅಗತ್ಯವಿದೆ. ಇದಕ್ಕಾಗಿ ನಾವು ಫೂಟ್ ಪ್ಯಾಟ್ರೋಲಿಂಗ್ ಅನ್ನು ಹೆಚ್ಚಿಸಬೇಕು. ಪಶ್ಚಿಮ ಉತ್ತರಪ್ರದೇಶದಲ್ಲಿ ಅಪರಾಧ ಪ್ರಮಾಣ ಇಳಿಸುವಲ್ಲಿ ನಾವು ಯಶಸ್ವಿಯಾಗಿದ್ದರೂ ಕೂಡ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು” ಎಂದಿದ್ದಾರೆ.
ಶಾಲೆ, ಕಾಲೇಜುಗಳು ಪುನರಾರಂಭಗೊಂಡಿರುವುದರಿಂದ ಆ್ಯಂಟಿ ರೋಮಿಯೋ ಸ್ಕ್ವ್ಯಾಡ್ ಅನ್ನು ಸಕ್ರಿಯಗೊಳಿಸುವಂತೆ ಅವರು ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.