ಹತ್ತೊಂಬತ್ತನೆಯ ಶತಮಾನವು ಭಾರತೀಯ ಇತಿಹಾಸದಲ್ಲಿ ಹಲವು ಬಗೆಯ ಸುಧಾರಣೆಗಳಿಗೆ ಸಾಕ್ಷಿಯಾದ ಕಾಲಘಟ್ಟವಾಗಿದೆ. ಮುಖ್ಯವಾಗಿ ಸಾಮಾಜಿಕ ಜಡತೆಯನ್ನು ಪ್ರಶ್ನಿಸಿ ಉದಾತ್ತ ಯೋಚನೆಗಳನ್ನು ಸಮಾಜದಲ್ಲಿ ನೆಲೆಗೊಳಿಸುವುದಕ್ಕೆ ಪರಿಶ್ರಮಿಸಿದ ಕಾಲಘಟ್ಟ. ಮುಂದೆ ಇದೊಂದು ನಿರಂತರ ಪರಿಶ್ರಮವಾಗಿ ಬೇರೆ ಬೇರೆಯವರಿಂದ ಮುಂದುವರಿದುದನ್ನು ಕಾಣಬಹುದು. ಒಂದೆಡೆ ನಾಡನ್ನು ಪಾರತಂತ್ರ್ಯದಿಂದ ಪಾರುಮಾಡಲು ಹುರಿಗೊಂಡ ಹೋರಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ನಾಡಿನೊಳಗೆ ಶತಮಾನಗಳಿಂದ ನ್ಯಾಯವಂಚಿತರಾದ ಆತ್ಮಾಭಿಮಾನವನ್ನು ಬಲಿಗೊಟ್ಟು ಬದುಕುತ್ತಿದ್ದ ಸಮಾಜದ ತಳವರ್ಗದಲ್ಲಿ ಎಚ್ಚರವನ್ನು ಮೂಡಿಸುವ ಪ್ರಯತ್ನವೂ ನಡೆಯುತ್ತಿತ್ತು. ಒಂದು ಹೋರಾಟ ಬಾಹ್ಯ ಶತ್ರುಗಳ ವಿರುದ್ಧ ನಡೆಯುತ್ತಿದ್ದರೆ, ಇನ್ನೊಂದು ಹೋರಾಟ ನಾಡಿನೊಳಗಿನ ಕಂದಾಚಾರದ ವಿರುದ್ಧ ನಡೆಯುತ್ತಿತ್ತು.
ನಾರಾಯಣ ಗುರುಗಳು, ಜ್ಯೋತಿಬಾ ಪುಲೆ, ವಿವೇಕಾನಂದ, ಗಾಂಧಿ, ಅಂಬೇಡ್ಕರ್ ಮೊದಲಾದವರು ಸಾಮಾಜಿಕ ಜಡತೆಯನ್ನು ನಿವಾರಿಸುವಲ್ಲಿ ನಿರಂತರವಾಗಿ ಶ್ರಮಿಸಿದ್ದರು. ಈ ಸುಧಾರಕರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲಬಹುದಾದವರಲ್ಲಿ ಕುದ್ಮಲ್ ರಂಗರಾಯರೂ ಒಬ್ಬರು. ದಲಿತರು, ಹಿಂದುಳಿದ ಜನಜಾತಿಗಳ ಪಾಲಿಗೆ ಜಡಗೊಂಡಿದ್ದ ಭಾರತೀಯ ಸಾಮಾಜಿಕ ವ್ಯವಸ್ಥೆಯೊಳಗೆ ಶಿಕ್ಷಣ-ಹೋರಾಟ-ಸಂಘಟನೆಯ ಮೂಲಕ ಪರಿವರ್ತನೆಯ ಬೆಳಕು ಹಚ್ಚಿದ ಸಾಮಾಜಿಕ ಕ್ರಾಂತಿಸೂರ್ಯ ಅಂಬೇಡ್ಕರ್ ಹುಟ್ಟುವ ಕಾಲಕ್ಕಾಗಲೇ (1891), ತನ್ನ ಸಂಸ್ಥಾನದ ಎಲ್ಲಾ ಹುದ್ದೆಗಳಲ್ಲಿ 50% ದಷ್ಟು ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟು ಬಹಿಷ್ಕೃತರ ಬಾಳಿಗೆ ಸುಧಾರಣೆಯ ಚಿಕಿತ್ಸೆ ನೀಡಹೊರಟ ಕೊಲ್ಹಾಪುರದ ಮಹಾರಾಜನಾಗಿ ಅಧಿಕಾರವಹಿಸಿದ ಶಾಹು ಮಹಾರಾಜ ಇನ್ನೂ ಪಟ್ಟಾಭಿಷಿಕ್ತನಾಗುವ ಮೊದಲೇ (1894), ಕೇರಳದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸುಧಾರಣೆಯ ಬೀಜ ಬಿತ್ತಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಕಾಲೀನರೂ (1856-1928)ಆದ ಕುದ್ಮಲ್ ರಂಗರಾಯರು ದಲಿತೋದ್ಧಾರಕ್ಕಾಗಿ ದುಡಿದ ಮಾಹಾತ್ಮರೇ ಹೌದು.
ಕುದ್ಮಲ್ ರಂಗರಾಯರು ಕಾಸರಗೋಡು ಜಿಲ್ಲೆಯ ಕುದ್ಮಲ್ ಎಂಬ ಊರಿನಲ್ಲಿ 29/06/1859 ರಲ್ಲಿ ಪ್ರತಿಷ್ಠಿತ ಸಾರಸ್ವತ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದರು.ವಕೀಲಿ ವೃತ್ತಿಯನ್ನು ಕ್ಯಗೊಂಡ ಇವರು ಬಡವರ ವಕೀಲರೆಂದೇ ಖ್ಯಾತರಾಗಿದ್ದರು. ತಮ್ಮ ಕಾಲದಲ್ಲಿ ರೂಢಿಯಲ್ಲಿದ್ದ ಸಾಮಾಜಿಕ ಅಸಮಾನತೆಯ ರೋಗವನ್ನು ಕಂಡು ತೀವ್ರ ಸಂಕಟವನ್ನು ಪಟ್ಟಿದ್ದರು. ಮಂಗಳೂರಿನ ಕೋರ್ಟಿನಲ್ಲಿ ಆಂಗ್ಲ ನ್ಯಾಯಾಧೀಶರೊಬ್ಬರು ದಲಿತನೊಬ್ಬನನ್ನು ತನ್ನ ಕಛೇರಿಯ ಜವಾನನನ್ನಾಗಿ ನೇಮಿಸಿಕೊಂಡಾಗ ಅಂದು ನ್ಯಾಯಾಲಯದಲ್ಲಿದ್ದ ಸವರ್ಣಿಯ ಸಿಬ್ಬಂದಿ, ವಕೀಲರೂ ಸೇರಿದಂತೆ ಎಲ್ಲರೂ ವಿರೋಧಿಸಿದ್ದರು. ಈ ಘಟನೆಯಿಂದ ರಂಗರಾಯರು ದಲಿತೊದ್ಧಾರ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಮನಗಂಡಿದ್ದರು.
ಈ ಹಿನ್ನೆಲೆಯಿಂದ ಮಂಗಳೂರಿನಲ್ಲಿ 1892ರಲ್ಲಿ ರಂಗರಾಯರು ದಲಿತರಿಗಾಗಿ ಒಂದು ಶಾಲೆಯನ್ನು ಆರಂಭಿಸಿದ್ದರು. ಬಳಿಕ ಮಂಗಳೂರು, ಕಂಕನಾಡಿ, ಮೂಲ್ಕಿ ಚೇಳೂರು, ಉಡುಪಿ, ಬನ್ನಂಜೆ,ಅತ್ತಾವರ ಮೊದಲಾದ ಕಡೆ ಶಾಲೆಗಳನ್ನು ತೆರೆದರು. ಈ ಶಾಲೆಗಳನ್ನು ‘ಪಂಚಮಶಾಲೆ’ ಗಳೆಂದು ಕರೆಯಲಾಗುತ್ತಿತ್ತು. ದಲಿತರ ಶಾಲೆಗಳಿಗೆ ಪಾಠಮಾಡಲು ಮೆಲ್ವರ್ಗದ ಅಧ್ಯಾಪಕರು ಬರಲೊಪ್ಪದಾಗ ಕ್ರೈಸ್ತರನ್ನು ಅಧ್ಯಾಪಕರನ್ನಾಗಿ ನೇಮಿಸಿಕೊಂಡರು. ಆದರೆ ದಲಿತರ ಮಕ್ಕಳು ಶಾಲೆಗೆ ಹೋಗುವ ದೃಶ್ಯವನ್ನು ಕಲ್ಪಿಸಿಕೊಳ್ಳಲೂ ತಯಾರಿಲ್ಲದೆ ಹೋಗಿದ್ದ ಕಾಲಘಟ್ಟವದು. ಕುಪಿತ ಸವರ್ಣಿಯ ಜನ ಆ ಶಾಲಾ ವಠಾರದಲ್ಲಿ ಹೊಲಸು ಕಸಗಳನ್ನು ಹಾಕಿ, ಮುಳ್ಳುಗಳನ್ನು ಸುರಿದು, ಶಾಲೆಗೆ ಕಲ್ಲೆಸೆದು, ಶಾಲೆಗೆ ಬಂದ ಬಾಲಕರನ್ನು ಮುಳ್ಳುಕೋಲುಗಳಿಂದ ಹೊಡೆದು ಹಿಂಸಿಸುವ ಮೂಲಕ ರಂಗರಾಯರ ಕೆಲಸಗಳಿಗೆ ಅಡ್ಡಿಯುಂಟು ಮಾಡಲಾರಂಭಿಸಿದರು. ದಲಿತರು ಶಿಕ್ಷಣ ಪಡೆಯುವುದನ್ನು ತಪ್ಪಿಸಲು ಸವರ್ಣಿಯ ಮನಸುಗಳು ನಡೆಸಿದ ಎಲ್ಲಾ ಬಗೆಯ ಯತ್ನಗಳ ಹೊರತಾಗಿಯೂ ರಂಗರಾಯರು ಧೃತಿಗೆಡಲಿಲ್ಲ. ದಲಿತೋದ್ಧಾರದ ಕಾರ್ಯಕ್ಕೆ ತುಡಿಯುತ್ತಿದ್ದ ರಂಗರಾಯರು ಇನ್ನಷ್ಟು ಗಟ್ಟಿಯಾದರು.
ಸ್ವಾಭಿಮಾನಿ ಬದುಕಿನ ಕನಸು ಕಾಣುವ ಚೈತನ್ಯವೂ ಇಲ್ಲವಾಗಿದ್ದ ಜನಗಳಲ್ಲಿ ಸ್ವಾವಲಂಬೀ ಬದುಕಿನ ಕನಸಿನ ಬೀಜಗಳನ್ನು ಬಿತ್ತಿದರು. ಆದರೆ ಈ ಕನಸಿನ ಬೀಜಗಳು ಸಸಿಯೊಡೆದು ಬೆಳೆಯದಂತೆ ಮೊಳಕೆಯಲ್ಲೇ ಚಿವುಟಿ ಹಾಕುವ ಯತ್ನಗಳ ನಡುವೆ ರಂಗರಾಯರು ತಮ್ಮನ್ನು ಅಗ್ನಿದಿವ್ಯಕ್ಕೆ ಒಡ್ಡಿಕೊಂಡವರಂತೆ ಇನ್ನಷ್ಟು ಸ್ಫುಟಗೊಂಡಿದ್ದರು. ತಮ್ಮ ಮಕ್ಕಳ ಮೇಲೆ ನಡೆಯುತ್ತಿದ್ದ ಹಲ್ಲೆ ಹಿಂಸೆಗಳಿಂದ ಹೆದರಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಲು ಹೆತ್ತವರು ನಿರಾಕರಿಸಿದಾಗ ಅಂತವರ ಮನಃಪರಿವರ್ತನೆ ಮಾಡಿ ಶಾಲೆಯ ಕಡೆಗೆ ಸೆಳೆದರು. ತಾವು ನಡೆಸುತ್ತಿದ್ದ ಪಂಚಮ ಶಾಲೆಗಳ ನಿರ್ವಹಣೆಗಾಗಿ ಡಿಪ್ರೆಸ್ಡ್ ಕ್ಲಾಸಸ್ ಮಿಷನ್ (ಡಿ.ಸಿ.ಎಂ.) ಎಂಬ ಸಂಸ್ಥೆಯನ್ನು ಆರಂಬಿಸಿ ತಾವು ಕೈಗೊಂಡ ಸುಧಾರಣಾ ಕಾರ್ಯಕ್ಕೆ ಒಂದು ಸಾಂಸ್ಥಿಕ ರೂಪವನ್ನು ನೀಡಿದರು. ತಮ್ಮ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸ್ವಾವಲಂಬಿಗಳಾಗಿ ಬದುಕಬೇಕು ಎಂಬ ಉದ್ದೇಶದಿಂದ ವಿವಿಧ ಬಗೆಯ ವೃತ್ತಿ ತರಬೇತಿಗಳನ್ನು ನೀಡಿದ್ದಲ್ಲದೇ ಪರಸ್ಪರರಲ್ಲಿ ಸಹಕಾರಿ ಮನೋಭಾವವನ್ನು ವೃದ್ಧಿಸುವುದಕ್ಕಾಗಿ ‘ಆದಿ ದ್ರಾವಿಡ ಸಹಕಾರಿ ಸಂಘ’ ವನ್ನು ಸ್ಥಾಪಿಸಿದರು.
ರಂಗರಾಯರು ದಲಿತರನ್ನು ಮನೆಯೊಳಗಷ್ಟೇ ಸೇರಿಸಿಕೊಂಡದ್ದಲ್ಲ. ತಮ್ಮ ಮನಸ್ಸಿನೊಳಗೆ ಪ್ರವೇಶ ನೀಡಿದ್ದರು. ದಲಿತರೊಂದಿಗಿನ ಅವರ ಒಡನಾಟ ಯಾವುದೋ ಒಂದು ವಾರ್ಷಿಕ ಕಾರ್ಯಕ್ರಮದ ಭಾಗವಾಗಿರಲಿಲ್ಲ. ಅವರೊಂದಿಗಿನ ಸ್ನೇಹಾಚಾರ ಯಾವುದೇ ಕಾರ್ಯತಂತ್ರದ ಭಾಗವಾಗಿರಲಿಲ್ಲ. ರಂಗರಾಯರು ಅಸ್ಪೃಶ್ಯ ಮಕ್ಕಳ ಮೈ ಮನಗಳನ್ನು ತೊಳೆದು ಅದನ್ನು ಶುಚಿಗೊಳಿಸಿ ಅವರಲ್ಲಿ ಸ್ವಾಭೀಮಾನದ ಕನಸನ್ನು ಬಿತ್ತಿದರು. ಅವರ ಗುಡಿಸಲುಗಳಿಗೇ ತೆರಳಿ ಅವರ ಜೊತೆಯೇ ಉಂಡು ಅಲ್ಲೇ ಮಲಗಿ ತನ್ನನ್ನು ಅವರಲ್ಲೊಬ್ಬನನ್ನಾಗಿಸಿಕೊಂಡರು. ಶತಮಾನಗಳಿಂದ ಸವರ್ಣಿಯ ಸಮಾಜವು ದೂರವೇ ಇರಿಸಿದ್ದ ದಲಿತರ ನಡುವೆ ತಾನು ಉಳಿದು ಅವರ ವಿಶ್ವಾಸವನ್ನು ಗಳಿಸಿದ್ದರು. ಆದರೆ ಇದೆಲ್ಲದರ ಪರಿಣಾಮವಾಗಿ ರಂಗರಾಯರು ತಮ್ಮ ಸಾರಸ್ವತ ಬ್ರಾಹ್ಮಣ ಸಮುದಾಯದಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾಯಿತು. ಅವರಿಗೆ ಬಂಧುಗಳ ಮನೆ, ದೇವಾಲಯಗಳ ಪ್ರವೇಶವನ್ನು ನಿರಾಕರಿಸಲಾಯಿತು. ಜಾತಿಕೆಟ್ಟ ರಂಗರಾಯರಿಗೆ ಮಡಿವಂತರೆನ್ನಿಸಿಕೊಂಡವರು ಯಾವುದೇ ಸೇವೆಯನ್ನು ನೀಡುವುದಕ್ಕೆ ನಿರಾಕರಿಸಿದರು. ಇಂತಹ ಅವಮಾನ ಕಿರುಕುಳಗಳಿಂದ ರಂಗರಾಯರು ಹಿಂದಡಿಯಿಡಲಿಲ್ಲ. ವ್ಯಕಿಗತ ಬದುಕಿನ ಎಲ್ಲಾ ಸುಖಗಳನ್ನು ತ್ಯಾಗ ಮಾಡಿದ ರಂಗರಾರರು ಶೋಷಿತರ ಸ್ವಾಭಿಮಾನದ ಬದುಕಿಗೆ ದಾರಿದೀಪವಾದರು.
ದೇಶದಲ್ಲಿನ್ನೂ ರಾಜಕೀಯ ಮೀಸಲಾತಿಯ ಪರಿಕಲ್ಪನೆ ಹುಟ್ಟಿ ದಲಿತ ಸಮುದಾಯಕ್ಕೆ ಅಧಿಕಾರದ ಅವಕಾಶ ಸಿಗುವ ಮೊದಲೇ ಮಂಗಳೂರಿನ ಜಿಲ್ಲಾ ಬೋರ್ಡ್ ಹಾಗೂ ಪುರಸಭೆಯಂತಹ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ದಲಿತರೂ ಸದಸ್ಯರಾಗುವಂತೆ ಮಾಡಿದರು.” ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ, ದೊಡ್ಡವರಾಗಿ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು. ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ” ಎನ್ನುವುದು ರಂಗರಾಯರ ಕನಸಾಗಿತ್ತು. ಇಂತಹ ಮಹಾತ್ಮನ ಜೀವಿತಾವಧಿಯ ಶ್ರೇಷ್ಠ ಸೇವಾ ಕಾರ್ಯಕ್ಕೆ ಅಂದಿನ ಸರ್ಕಾರ ‘ ರಾವ್ ಸಾಹೇಬ್ ‘ ಬಿರುದನ್ನು ನೀಡಿತ್ತು. ಇವರ ಸಾಮಾಜಿಕ ಪರಿವರ್ತನಾ ಕಾರ್ಯಕ್ಕೆ ಕಾರ್ನಾಡ್ ಸದಾಶಿವ ರಾಯರು, ಗೋಪಾಲ ಕೃಷ್ಣ ಗೋಖಲೆ, ಮಹರ್ಷಿ ಕರ್ವೆ, ಹೆನ್ರಿ ಫೋರ್ಡ್, ಸಿ.ಎಸ್.ಆಂಡ್ರೂಸ್ ಮೊದಲಾದವರು ಸಹಾಯವನ್ನು ನೀಡಿ ಕೈಜೋಡಿಸಿದ್ದರು.
1928 ರಲ್ಲಿ ತಾನು ಮರಣಿಸುವ ಮೊದಲೇ ತನ್ನ ಮರಣಾ ನಂತರ ಪಾರ್ಥೀವ ಶರೀರವನ್ನು ಅಂದಿನ ಕಾಲದಲ್ಲೇ ಅತ್ಯಂತ ಹಿಂದುಳಿದಿದ್ದ ಸಮುದಾಯಗಳಲ್ಲಿ ಒಂದಾದ ಜಾಡಮಾಲಿಗಳಿಂದ (ತೋಟಿ) ಅಂತ್ಯ ಸಂಸ್ಕಾರವನ್ನು ಮಾಡಿಸಬೇಕು ಎಂದು ವಿಲ್ ಬರೆದಿದ್ದರು. ರಂಗರಾಯರು ಗತಿಸಿದ 6 ವರ್ಷಗಳ ಬಳಿಕ 1934 ರಲ್ಲಿ ಮಹಾತ್ಮ ಗಾಂಧೀಜಿಯವರು ಮಂಗಳೂರಿಗೆ ಬಂದಾಗ ರಂಗರಾಯರು ಆರಂಭಿಸಿದ ಡಿ.ಸಿ.ಎಂ. ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ್ದರು. ರಂಗರಾಯರ ಬದುಕಿನ ಶ್ರೇಷ್ಠ ಕಾರ್ಯವನ್ನು ನೋಡಿದ ಗಾಂಧೀಜಿ ಅಚ್ಚರಿ ಪಟ್ಟಿದ್ದರು. ಆಗ ಗಾಂಧೀಜಿಯವರು ” ಪೂಜ್ಯ ರಂಗರಾಯರು ಗೈದ ರಚನಾತ್ಮಕ ಮಾನವೀಯ ಸೇವಾ ಕಾರ್ಯಗಳಿಂದ ನಾನು ಹಲವು ಸಂಗತಿಗಳನ್ನು ಅರಿತುಕೊಂಡೆ. ರಂಗರಾಯರು ನಮಗೆಲ್ಲಾ ಒಂದು ಉತ್ತಮವಾದ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದ್ದಾರೆ. ಅಸ್ಪೃಶ್ಯ ಜನಾಂಗದ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪುನರುತ್ಥಾನದ ಕಾರ್ಯದಲ್ಲಿ ಸ್ಫೂರ್ತಿಯನ್ನು ನೀಡಿದ್ದಾರೆ. ಅಸ್ಪೃಶ್ಯತಾ ನಿವಾರಣಾ ಕಾರ್ಯದಲ್ಲಿ ಹಾಗೂ ದಲಿತೊದ್ಧಾರದ ಕಾರ್ಯದಲ್ಲಿ ರಂಗರಾಯರೇ ನನ್ನ ಗುರುಗಳು” ಎಂದು ಮುಕ್ತ ಕಂಠದಿಂದ ಹೊಗಳಿದ್ದರು.
ರಂಗರಾಯರು ಮಾಡಿದ್ದು ನಿಶ್ಚಿತವಾಗಿಯೂ ಒಂದು ದೊಡ್ಡ ಕ್ರಾಂತಿಯೇ ಹೌದು. ಆದರೆ ಅಲ್ಲಿ ಅವರಿಗೆ ಯಾರ ಬಗ್ಗೆಯೂ ದ್ವೇಷದ ಭಾವನೆ ಇರಲಿಲ್ಲ. ಶುದ್ಧ ಪ್ರೀತಿಯೇ ಅವರ ಕಾರ್ಯದ ಸಾಧನವಾಗಿತ್ತು. ಅಸಮಾನತೆ, ಅಸ್ಪೃಶ್ಯತೆಯಂಥ ಸಾಮಾಜಿಕ ಕಾಯಿಲೆಯಿಂದ ಮಲೀನಗೊಂಡಿದ್ದ ಹಿಂದೂ ಸಮಾಜವನ್ನು ಅದರ ಕೊಳೆಯನ್ನು ತೆಗೆದು ಶುದ್ದೀಕರಿಸುವ ಕಾರ್ಯದಲ್ಲಿ ಅಹರ್ನಿಶಿ ದುಡಿದರು. ಕೈಯಲ್ಲಿ ಕತ್ತಿ – ಕೋವಿ ಹಿಡಿಯದೇ, ರಕ್ತ ಚೆಲ್ಲದೇ ಅವರು ಹುಟ್ಟುಹಾಕಿದ ಕ್ರಾಂತಿ ಪಥ ಬುದ್ಧಿಯ ಕಾಯಕವಷ್ಟೇ ಆಗದೆ ಅದು ಹೃದಯದ ಭಾವ ಪಥವಾಗಿದ್ದರಿಂದ ರಂಗರಾಯರು ಎಲ್ಲಾ ಕಾಲಕ್ಕೂ ಆದರಣೀಯರು.
✍ ರೋಹಿಣಾಕ್ಷ ಶಿರ್ಲಾಲು
ಕನ್ನಡ ಪ್ರಾಧ್ಯಾಪಕ, ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು.ದ.ಕ
9449663744
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.