ಇಂದು ವಿಶ್ವ ಮಾದಕದ್ರವ್ಯ ವಿರೋಧಿ ದಿನ. ಜಗತ್ತಿನಾದ್ಯಂತ ಯುವಜನತೆ ಅಮಲಿನ ಭಯಾನಕ ಲೋಕದಲ್ಲಿ ತೇಲಾಡುವುದನ್ನು ತಪ್ಪಿಸಿ, ಅವರಿಗೆ ಹೊಸತೊಂದು ಜೀವನವನ್ನು ಕಟ್ಟಿಕೊಡುವ ಸಲುವಾಗಿ, ಮಾದಕದ್ರವ್ಯಗಳ ವಿರುದ್ಧದ ಹೋರಾಟವನ್ನು ಗಟ್ಟಿಗೊಳಿಸುವ ಸಲುವಾಗಿ ಜನ್ಮತಾಳಿದ ದಿನ. ಮಾದಕದ್ರವ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ವಿಶ್ವಸಂಸ್ಥೆ ಈ ದಿನವನ್ನು ಆಚರಣೆಗೆ ತಂದಿತು. 1989 ರಿಂದ ಪ್ರತಿ ವರ್ಷ ಜೂನ್ 26 ರಂದು ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಮಾದಕ ವ್ಯಸನ ಒಂದು ಅನಿಷ್ಟದಂತೆ ಹಬ್ಬುತ್ತಿದೆ. ಹೆಚ್ಚು ಹೆಚ್ಚು ಯುವಜನತೆ, ಅದರಲ್ಲೂ ಹದಿಹರೆಯದ ಪ್ರಾಯದಲ್ಲೇ ಇದಕ್ಕೆ ದಾಸರಾಗುತ್ತಿದ್ದಾರೆ. ಅತ್ಯಂತ ನಿಗೂಢವಾಗಿ ನಡೆಯುತ್ತಿದ್ದ ಇದರ ಕಳ್ಳದಂಧೆಗಳು ಇತ್ತೀಚಿನ ದಿನಗಳಲ್ಲಿ ಎಗ್ಗಿಲ್ಲದಂತೆ ನಡೆಯುತ್ತಿರುವುದು ಅಪಾಯದ ಮುನ್ಸೂಚನೆ ನೀಡಿದೆ. ಕಾನೂನು, ಪೊಲೀಸ್ ವ್ಯವಸ್ಥೆ ದುರ್ಬಲವಾಗಿರುವುದೇ ಇದಕ್ಕೆ ಮುಖ್ಯ ಕಾರಣ.
ವಿಶ್ವಸಂಸ್ಥೆಯ ಡ್ರಗ್ಸ್ ಆಂಡ್ ಕ್ರೈಂ ವರದಿಯ ಪ್ರಕಾರ ಜಗತ್ತಿನಾದ್ಯಂತ 200 ಮಿಲಿಯನ್ ಜನ ಡ್ರಗ್ಸ್ ವ್ಯಸನಕ್ಕೆ ದಾಸರಾಗಿದ್ದಾರೆ. ಒಂದು ಬಾರಿ ಇದಕ್ಕೆ ದಾಸರಾದರೆ ಜೀವನಪೂರ್ತಿ ಅಮಲಿನ ಲೋಕದಲ್ಲಿ ತೇಲಾಡುತ್ತಾ ವಾಸ್ತವ ಜಗತ್ತನ್ನು ಮರೆತುಬಿಡುವ ಮಟ್ಟಕ್ಕೆ ಜನರನ್ನು ಇದು ಕೊಂಡೊಯ್ಯುತ್ತದೆ. ಕೊಲೆ, ಅತ್ಯಾಚಾರದಂತಹ ಗಂಭೀರ ಅಪರಾಧಗಳು ಕೂಡ ಮಾದಕ ವ್ಯಸನಿಗಳಿಂದ ನಡೆಯುತ್ತದೆ. ಒಂದು ಕುಟುಂಬದ ಒಬ್ಬ ಇದಕ್ಕೆ ದಾಸನಾದರೆ ಕುಟುಂಬದ ಎಲ್ಲರ ಬದುಕೂ ವಿನಾಶಕ್ಕೀಡಾಗುತ್ತದೆ.
ಹೈಸ್ಕೂಲ್ ಹಂತದಲ್ಲೇ ಮಾದಕ ವ್ಯವಸನಗಳಿಗೆ ಬಲಿಯಾಗಿ ಅದರಿಂದ ಹೊರ ಬರಲಾಗದೆ ಜೀವನವನ್ನೇ ಅಂತ್ಯಗೊಳಿಸಿದ ಎಷ್ಟೋ ವಿದ್ಯಾರ್ಥಿಗಳ ಉದಾಹರಣೆ ನಮ್ಮ ಮುಂದೆ ಇದೆ. ಶಾಲಾ ಕಾಲೇಜುಗಳ ಮಕ್ಕಳನ್ನು ಈ ವ್ಯಸನಕ್ಕೆ ದೂಡಿ ಹಣಮಾಡುವ ದೊಡ್ಡ ಮಾಫಿಯಾವೇ ಇದೆ. ಮೊದಮೊದಲು ಆಸಕ್ತಿಗಾಗಿ ಡ್ರಗ್ಸ್ ಸೇವನೆ ಮಾಡುವ ಮಕ್ಕಳು ಬರುಬರುತ್ತಾ ಅದಕ್ಕೆ ಅಂಟಿಕೊಂಡು ಬಿಡುತ್ತಾರೆ. ಸರಿಯಾದ ಸಮಯದಲ್ಲಿ ಇಂತಹ ಮಕ್ಕಳಿಗೆ ಪೋಷಕರ, ಹಿರಿಯರ ನೆರವು ಸಿಗದೇ ಹೋದರೆ ಅವರ ಬದುಕು ಕಮರಿ ಹೋಗುತ್ತದೆ.
ಶಾಲಾ-ಕಾಲೇಜುಗಳ ಆವರಣಗಳಲ್ಲೇ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದ್ದು, ಅಮಲಿನ ನಶೆಯ ಪರಿಣಾಮವಾಗಿ ಹಲವಾರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿರುವ ಘಟನೆಗಳೂ ಆಗಾಗ ನಡೆಯುತ್ತಿದೆ. ಈ ಬಗ್ಗೆ ನಮ್ಮ ಆಡಳಿತ ವ್ಯವಸ್ಥೆ ಕಣ್ಣಿದ್ದೂ ಕುರುಡಾಗಿದೆ.
ಗಾಂಜಾ, ಕೊಕೇನ್ ಮುಂತಾದುವುಗಳು ಮಾತ್ರವಲ್ಲ ಮದ್ಯ ಸೇವನೆ, ತಂಬಾಕು ಸೇವನೆ ಕೂಡ ಮಾದಕ ವ್ಯಸನಗಳ ಪೈಕಿ ಒಂದಾಗಿದ್ದು, ಇದು ನಮ್ಮ ಸಮಾಜವನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ. ಮದ್ಯಸೇವನೆಯಿಂದ ಏನೆಲ್ಲಾ ಅನಾಹುತ ಸಂಭವಿಸುತ್ತದೆ ಎಂಬುದನ್ನು ಹೆಚ್ಚಾಗಿ ವಿವರಿಸುವ ಅಗತ್ಯವೇ ಇಲ್ಲ.
ಪಾಕಿಸ್ಥಾನ, ಅಫ್ಘಾನಿಸ್ತಾನದಂತಹ ರಾಷ್ಟ್ರಗಳಿಂದ ಭಾರತಕ್ಕೆ ಕಳ್ಳದಂಧೆಯ ಮೂಲಕ ಗಾಂಜಾ, ಹೆರಾಯಿನ್, ಕೊಕೆನ್ಗಳಂತಹ ಮಾದಕ ವಸ್ತುಗಳನ್ನು ಸಾಗಾಣೆಯಾಗುತ್ತಿದೆ. ಇದೇ ಕಾರಣದಿಂದ ಗಡಿ ರಾಜ್ಯಗಳಲ್ಲಿ ಅದರಲ್ಲೂ ಪಂಜಾಬ್ನಲ್ಲಿ ಮಾದಕವ್ಯಸನ ಹೆಚ್ಚಿನ ಪ್ರಮಾಣದಲ್ಲಿ ಯುವ ಜನರನ್ನು ಬಲಿಪಡೆಯುತ್ತಿದೆ.
ಮಾದಕವ್ಯಸನದಂತಹ ಗಂಭೀರ ಸಮಸ್ಯೆಯನ್ನು ಲಘುವಾಗಿ ಪರಿಗಣಿಸದೆ ಅದರ ವಿರುದ್ಧ ಕಠಿಣ ಹೋರಾಟವನ್ನು ಆರಂಭಿಸಿ, ಕ್ರಮಕೈಗೊಳ್ಳಬೇಕಾದ ಜವಾಬ್ದಾರಿ ಸರ್ಕಾರ ಮತ್ತು ನಾಗರಿಕರೆಲ್ಲರ ಮೇಲೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.