ನವದೆಹಲಿ: ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ, ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕರು ಘೋಷಿಸಲ್ಪಟ್ಟ ಉಗ್ರರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸದೇ ಇದ್ದರೆ ಬ್ಲ್ಯಾಕ್ ಲಿಸ್ಟ್ಗೆ ಹಾಕಲಾಗುವುದು ಎಂಬ ಎಚ್ಚರಿಕೆಯನ್ನು ಪಾಕಿಸ್ಥಾನಕ್ಕೆ ಫಿನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(FATF) ನೀಡಿದೆ.
2019ರ ಅಕ್ಟೋಬರ್ ತಿಂಗಳೊಳಗೆ ಉಗ್ರರ ವಿರುದ್ಧ ಮತ್ತು ಅವರ ಸಂಘಟನೆಗಳ ವಿರುದ್ಧ ಕ್ರಮವನ್ನು ಜರುಗಿಸಬೇಕು, ಇದಕ್ಕೆ ತಪ್ಪಿದರೆ FATF ಮುಂದಿನ ಕ್ರಮವನ್ನು ಜರುಗಿಸುತ್ತದೆ ಎಂದು ಪಾಕಿಸ್ಥಾನಕ್ಕೆ ಎಚ್ಚರಿಕೆಯನ್ನು ರವಾನಿಸಲಾಗಿದೆ.
ಭಾರತ ಮತ್ತು FATFನ ಇತರ ಸದಸ್ಯ ರಾಷ್ಟ್ರಗಳು, ಪಾಕಿಸ್ಥಾನವು ಹಫೀಜ್ ಸಯೀದ್, ಮೌಲಾನಾ ಮಸೂದ್ ಅಜರ್ ಮತ್ತು ಇತರ ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಆರೋಪಿಸಿವೆ. ಅದರ ಭಯೋತ್ಪಾದನಾ ವಿರೋಧಿ ಕಾನೂನುಗಳು ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಗದಿಪಡಿಸಿದ ಮಾನದಂಡಗಳೊಂದಿಗೆ ಹೋಲಿಕೆಯಾಗುತ್ತಿಲ್ಲ ಎಂಬುದನ್ನೂ ಬೊಟ್ಟು ಮಾಡಿ ತೋರಿಸಿವೆ.
ಪಾಕಿಸ್ಥಾನ ನಿವಾಸಿಗಳು ಹಾಗೂ ವಿಶ್ವಸಂಸ್ಥೆಯಿಂದ ಘೋಷಿಸಲ್ಪಟ್ಟ ಭಯೋತ್ಪಾದಕರಾದ ಹಫೀಜ್ ಸಯೀದ್ ಮತ್ತು ಅಜರ್ ಮಸೂದ್ ಸೇರಿದಂತೆ ಮುಂತಾದ ಉಗ್ರರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂಬ ವಿಷಯವನ್ನು ಕೂಡ ಹಲವಾರು FATF ಸದಸ್ಯರು ಎತ್ತಿದ್ದಾರೆ. ಲಷ್ಕರ್-ಇ-ತೋಯ್ಬಾ, ಜಮಾತ್-ಉದ್-ದವಾ, ಫಲಹ್-ಇ-ಇನ್ಸಾನಿಯತ್ ಫೌಂಡೇಶನ್ ಮತ್ತು ಜೈಶ್-ಎ-ಮೊಹಮ್ಮದ್ಗೆ ಸೇರಿದ 700 ಕ್ಕೂ ಹೆಚ್ಚು ಆಸ್ತಿಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪಾಕಿಸ್ಥಾನ ವಾದಿಸಿದರೂ, ಭಾರತ ಮತ್ತು ಇತರ FATF ಸದಸ್ಯರು ಪಾಕಿಸ್ಥಾನ ಕೇವಲ ಕಣ್ಣೊರೆಸುವ ತಂತ್ರ ಮಾಡಿದೆ ಎಂದು ಆರೋಪಿಸಿವೆ.
ಈ ಹಿನ್ನಲೆಯಲ್ಲಿ, ಉಗ್ರ ಪ್ರಕರಣಗಳ ಬಗ್ಗೆ ಇನ್ನೂ ಯಾಕೆ ತನಿಖೆ ನಡೆಸಿಲ್ಲ ಎಂದು FATF ಪಾಕಿಸ್ಥಾನಕ್ಕೆ ವಿವರಣೆ ಕೇಳಿದೆ ಎಂದು ಹೇಳಲಾಗಿದೆ. ಪಾಕಿಸ್ಥಾನವು ಉಗ್ರರ ಶಸ್ತ್ರಾಸ್ತ್ರಗಳು, ಯುದ್ಧ ಸಾಮಾಗ್ರಿಗಳು, ಸ್ಫೋಟಕಗಳು ಮತ್ತು ಶಿಬಿರಗಳು ಸೇರಿದಂತೆ ಭಯೋತ್ಪಾದಕರ ಆಸ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿದ್ದನ್ನು ತೋರಿಸಿಲ್ಲ. ಈ ನಿಟ್ಟಿನಲ್ಲಿ FATF ವಿವರವಾದ ವರದಿಗಳನ್ನು ನೀಡುವಂತೆ ಪಾಕಿಸ್ಥಾನಕ್ಕೆ ಸೂಚನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.