ಪಾಟ್ನಾ: ನಾಪತ್ತೆಯಾಗಿರುವ 346 ಮಕ್ಕಳನ್ನು ಪತ್ತೆ ಮಾಡುವುದಕ್ಕಾಗಿ ಬಿಹಾರದಲ್ಲಿ ಒಂದು ವಿಶಿಷ್ಟ ಕಾರ್ಯಾಚರಣೆಯನ್ನು ಆರಂಭಿಸಲಾಗುತ್ತಿದೆ. ಅದುವೇ ‘ಆಪರೇಶನ್ ಸ್ಮೈಲ್’.
ಮಕ್ಕಳನ್ನು ಕಳೆದುಕೊಂಡು ದುಃಖತಪ್ತರಾಗಿರುವ ಪೋಷಕರ ಮುಖದಲ್ಲಿ ನಗುವನ್ನು ಮೂಡಿಸುವುದೇ ಈ ಆಪರೇಶನ್ ಸ್ಮೈಲ್ನ ಮುಖ್ಯ ಉದ್ದೇಶ. ಪೋಷಕರಿಂದ ದೂರವಾಗಿರುವ 346 ಮಕ್ಕಳ ಪತ್ತೆಗಾಗಿ ನಡೆಸುತ್ತಿರುವ ಒಂದು ತಿಂಗಳ ಕಾರ್ಯಾಚರಣೆ ಇದಾಗಿದೆ.
ಸುಪ್ರೀಂಕೋರ್ಟ್ನ ನಿರ್ದೇಶನದಂತೆ ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತದೆ, ಜುಲೈ 1ರಿಂದ 31ರವರೆಗೆ ಇದು ಮುಂದುವರೆಯಲಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
2013ರ ಜನವರಿಯಿಂದ 2014ರ ಸೆಪ್ಟಂಬರ್ವರೆಗೆ ಬಿಹಾರದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಒಟ್ಟು 2,874ಮಕ್ಕಳು ಕಾಣೆಯಾಗಿದ್ದಾರೆ, ಇದರಲ್ಲಿ 2,528 ಮಕ್ಕಳನ್ನು ಪತ್ತೆ ಮಾಡಿ ವಾಪಾಸ್ ಕರೆತರಲಾಗಿದೆ. ಇದೀಗ ಆಪರೇಶನ್ ಸ್ಮೈಲ್ ಮೂಲಕ ಉಳಿದ 346 ಮಕ್ಕಳನ್ನು ಪತ್ತೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ.ದೂರಿನ ಆಧಾರದಲ್ಲಿ ನಾಪತ್ತೆಯಾದ ಮಕ್ಕಳ ಸಂಖ್ಯೆಯನ್ನು ನಿರ್ಧರಿಸಲಾಗಿದೆ, ಆದರೆ ದೂರು ದಾಖಲಾಗದೆಯೇ ಇರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.
ನಾಪತ್ತೆಯಾದ ಮಕ್ಕಳು ಮಾನವ ಕಳ್ಳ ಸಾಗಾಣೆ ಸುಳಿಗೆ ಸಿಲುಕುವ, ಜೀತದಾಳುಗಳಾಗುವ, ಅಂಗಾಂಗ ವ್ಯಾಪಾರ ಜಾಲಕ್ಕೆ ಸಿಲುಕುವ ಅಥವಾ ಅಪಾಯಕಾರಿ ಕೈಗಾರಿಕೆಗಳಲ್ಲಿ ದುಡಿಯುವ ಅಪಾಯವಿದೆ. ಹೀಗಾಗಿ ಮಕ್ಕಳನ್ನು ರಕ್ಷಿಸುವ ಸಲುವಾಗಿ ದೇಶದಾದ್ಯಂತ ಕೂಡ ಇಂತಹ ಕಾರ್ಯಾಚರಣೆಗಳನ್ನು ನಡೆಸಬೇಕಾದ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.