ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬುದು ರಾಜಕೀಯ ಪಕ್ಷವೂ ಅಲ್ಲ, ಧಾರ್ಮಿಕ ಅಥವಾ ಸಾಮಾಜಿಕ ಸಂಘಟನೆಯೂ ಅಲ್ಲ. ಸಂಘ ಎಂಬುದು ಸಂಘವಷ್ಟೇ. ಅದಕ್ಕೆ ಹೋಲಿಕೆ ಮತ್ತೊಂದಿಲ್ಲ. ಹೊರಗಿನಿಂದ ಸಂಘವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದರೊಳಗೆ ಹೊಕ್ಕು ನೋಡಿದರೆ ಮಾತ್ರ ನಮಗೆ ಸಂಘ ಅರ್ಥವಾಗುತ್ತದೆ ಎಂದು RSS ಅಖಿಲ ಭಾರತೀಯ ಸಹ ಸರಕಾರ್ಯವಾಹ ಡಾ. ಮನಮೋಹನ್ ವೈದ್ಯ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಅವರು, “RSS ಅನ್ನು ಕ್ರಿಶ್ಚಿಯನ್ ವಿರೋಧಿ ಅಥವಾ ಇನ್ನಿತರ ಧರ್ಮದ ವಿರೋಧೀ ಎಂದು ಹೇಳುವವರಿಗೆ ನಾನು ಕೇಳುವ ಮೊದಲ ಪ್ರಶ್ನೆಯೆಂದರೆ, ನಿಮಗೆ ಆ ಬಗ್ಗೆ ವೈಯಕ್ತಿಕ ಅನುಭವ ಆಗಿದೆಯೇ?, ಯಾರಾದರೂ ಹಿರಿಯ ಸ್ವಯಂಸೇವಕರೊಂದಿಗೆ ಮಾತುಕತೆಯಲ್ಲಿ ಭಾಗಿಯಾಗಿದ್ದೀರಾ?, RSS ಸಾಹಿತ್ಯವನ್ನು ಓದಿದ್ದೀರಾ? ಎಂದು. ಸಂಘವನ್ನು ಒಳಗಿನಿಂದ ಅರ್ಥ ಮಾಡಿಕೊಳ್ಳಬೇಕೇ ಹೊರತು ಹೊರಗಿನಿಂದಲ್ಲ. ಹೊರಗೆ ಸಂಘದ ಬಗ್ಗೆ ಸಾಕಷ್ಟು ತಪ್ಪು ತಿಳುವಳಿಕೆ ಇದೆ” ಎಂದರು.
ಸಂಘದ ಶಾಖೆಗೆ ಬರುವ ಸ್ವಯಂಸೇವಕರಿಗೆ ಶಿಸ್ತನ್ನು ಕಲಿಸಬಹುದೇ ಹೊರತು ಹೊರಗಿನ ವ್ಯಕ್ತಿಗಳಿಗೆ ಶಿಸ್ತು ಕಲಿಸಲು ಸಂಘಕ್ಕೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ಸಂಘ ಸರ್ಕಾರದ ಮೂಲಕವಲ್ಲ ಸಮಾಜದ ಮೂಲಕ ಕೆಲಸ ಮಾಡುತ್ತದೆ ಎಂದರು.
“ಸಂಘಕ್ಕೆ ಅಧಿಕಾರ ಬೇಡ, ಹಿಂದಿನ ಸೀಟಿನಲ್ಲಿ ಕುಳಿತು ಸರ್ಕಾರವನ್ನು ಮುನ್ನಡೆಸುವ ಕಾರ್ಯವನ್ನು ಸಂಘ ಮಾಡುತ್ತಿಲ್ಲ, ಹಾಗೇನಾದರು ಆಗಿದ್ದರೆ ಅದು ಪಕ್ಷವನ್ನೇ ಕಟ್ಟಿ ಬಿಡುತ್ತಿತ್ತು, ಇದನ್ನು ಯಾರೂ ತಡೆಯುತ್ತಿರಲಿಲ್ಲ. ಸಂಘವು ರಾಜಕೀಯ ಶಕ್ತಿಯಿಂದಾಗದ ಕಾರ್ಯವನ್ನು ಮಾಡುತ್ತಿದೆ. ಅದು ದಣಿವರಿಯದ, ನಿಃಸ್ವಾರ್ಥ, ಪ್ರತಿಫಲಾಪೇಕ್ಷೆ ಇಲ್ಲದ ಕಾರ್ಯ ಮಾಡುತ್ತಿದೆ, ಸಮಾಜದ ಮೂಲಕ ಕಾರ್ಯ ಮಾಡುತ್ತಿದೆ” ಎಂದರು.
“ಬಿಜೆಪಿ ಮತ್ತು ಸಂಘ ಬೇರೆ ಬೇರೆಯಾಗಿದೆ. ಬಿಜೆಪಿಗೆ ಅದರದ್ದೇ ಆದ ಪ್ರಣಾಳಿಕೆ ಇದೆ, ಅದರದ್ದೇ ಆದ ಬೌದ್ಧಿಕ ಕೂಟವಿದೆ. ಎನ್ಡಿಎ ಸರ್ಕಾರಕ್ಕೆ ಈಗ ಉತ್ತಮ ಸಂಖ್ಯಾಬಲವಿದೆ, ಹೀಗಾಗಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಅವರಿಗೆ ಯಾವುದೇ ಸಮಸ್ಯೆಯಿಲ್ಲ. ಅದನ್ನೇ ನಾವು ಬಯಸುತ್ತಿದ್ದೇವೆ’ ಎಂದರು.
“ಬಹುಸಂಖ್ಯಾತ, ಅಲ್ಪಸಂಖ್ಯಾತ ಎಂಬ ಪದಗಳು ಸಂವಿಧಾನದಲ್ಲಿ ಇಲ್ಲ. ಕೆಲವರು ಈ ಶಬ್ದಗಳನ್ನು ಹರಿಬಿಟ್ಟರು ಅದನ್ನು ನಾವು ಸ್ವೀಕರಿಸಿಬಿಟ್ಟೆವು. ತಪ್ಪು ಪದ ಪ್ರಯೋಗಗಳು ತಪ್ಪು ನಿರ್ಧಾರಗಳಿಗೆ ಎಡೆಮಾಡಿಕೊಡುತ್ತದೆ” ಎಂದರು.
“ಭಾರತವು ಆಧ್ಯಾತ್ಮಿಕ ಜೀವನ ದೃಷ್ಟಿಕೋನ ಕೇಂದ್ರಿತ ಸಮಾಜ. ಬೇರೆ ಯಾವ ದೇಶದಲ್ಲೂ ಇದನ್ನು ಕಾಣಲು ಸಾಧ್ಯವಿಲ್ಲ. ವೈವಿಧ್ಯತೆ ನಮ್ಮ ಪರಂಪರೆ. ಹೊರ ದೇಶಗಳು ನಮ್ಮ ಧರ್ಮ ಮಾತ್ರ ಸತ್ಯ ಉಳಿದೆಲ್ಲವೂ ಮಿಥ್ಯೆ ಎನ್ನುತ್ತವೆ. ಆದರೆ ಭಾರತ, ಹಿಂದುತ್ವ ಎಂದಿಗೂ ಅದನ್ನು ಪ್ರತಿಪಾದಿಸುವುದಿಲ್ಲ. ಎಲ್ಲಾ ಮಾದರಿಯ ಆರಾಧನೆಯನ್ನು ಭಾರತ ಗೌರವಿಸುತ್ತದೆ” ಎಂದರು.
“ಧರ್ಮ ವೈಯಕ್ತಿಕ ಆಯ್ಕೆ. ಆದರೆ ಯಾರೂ ಇನ್ನೊಬ್ಬರ ಮೇಲೆ ಬಲವಂತವಾಗಿ ಧರ್ಮವನ್ನು ಹೇರಬಾರದು. ಆಮಿಷಗಳನ್ನೊಡ್ಡಿ ಮತಾಂತರ ಮಾಡಬಾರದು. ಹಿಂದೂ ಧರ್ಮ ಮತಾಂತರದಲ್ಲಿ ನಂಬಿಕೆಯನ್ನು ಇಟ್ಟಿಲ್ಲ” ಎಂದರು.
“ತಮ್ಮನ್ನು ತಾವು ಉದಾರವಾದಿಗಳು ಎಂದು ಕರೆದುಕೊಳ್ಳುವ ಎಡಪಂಥೀಯರು ಪ್ರಣವ್ ಮುಖರ್ಜಿಯವರು ಸಂಘದ ಸಭೆಗೆ ಆಗಮಿಸಿದ್ದನ್ನು ವಿರೋಧಿಸಿದರು, ಆದರೆ ಒಬ್ಬನೇ ಒಬ್ಬ ಸಂಘದ ಸದಸ್ಯ ಇದನ್ನು ವಿರೋಧಿಸಿಲ್ಲ. ಜೈಪುರ ಲಿಟರೇಚರ್ ಫೆಸ್ಟ್ಗೆ ನನ್ನನ್ನು ಹಾಗೂ ದತ್ತಾತ್ರೇಯ ಹೊಸಬಾಳೆ ಅವರನ್ನು ಆಹ್ವಾನಿಸಿದ್ದಕ್ಕೆ ಸೀತಾರಂ ಯೆಚೂರಿಯಂತವರು ಫೆಸ್ಟ್ ಅನ್ನೇ ಬಹಿಷ್ಕರಿಸಿದರು. ಇದು ಯಾವ ರೀತಿಯ ಉದಾರತೆ?” ಎಂದು ಪ್ರಶ್ನಿಸಿದರು.
“ಎಲ್ಲಾ ಧರ್ಮ, ಜಾತಿ, ಜನಾಂಗ, ನಾಗರೀಕತೆಯು ಒಟ್ಟಾಗಿ ಒಂದೇ ಕಡೆ ಬದುಕುವುದನ್ನು ಭಾರತ ಮಾತ್ರ ಕಲಿಸಬಲ್ಲದು, ಯಾಕೆಂದರೆ ಭಾರತಕ್ಕೆ ಆಧ್ಯಾತ್ಮಿಕ ದೃಷ್ಟಿಕೋನ ಇದೆ” ಎಂದರು.
ಭಾರತವನ್ನು ತಿಳಿದು, ಭಾರತದ ವಿಚಾರವನ್ನು ಜನರಿಗೆ ತಿಳಿಸುವಂತಹ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದು ಅವರು ಅಭಿಪ್ರಾಯಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.