ನವದೆಹಲಿ: ದೇಶದ ಪ್ರಧಾನಿಯಾಗಿ ಎರಡನೇಯ ಬಾರಿಗೆ ಪ್ರಮಾಣವಚನವನ್ನು ಸ್ವೀಕರಿಸಿದ ಒಂದು ವಾರಗಳ ತರುವಾಯ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಕೇರಳದ ಗುರುವಾಯೂರಿನಲ್ಲಿನ ಶ್ರೀಕೃಷ್ಣ ದೇಗುಲಕ್ಕೆ ಭೇಟಿಯನ್ನು ನೀಡುತ್ತಿದ್ದಾರೆ. ಅಲ್ಲದೇ, ದೇವರ ನಾಡಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಶುಕ್ರವಾರವೇ ಅವರು ಕೇರಳಕ್ಕೆ ಬಂದಿಳಿದಿದ್ದು, ಕೊಚ್ಚಿಯಲ್ಲಿ ರಾತ್ರಿಯನ್ನು ಕಳೆದಿದ್ದಾರೆ. ಇಂದು ಬೆಳಗ್ಗೆಯೇ ದೇಗುಲಕ್ಕೆ ತೆರಳಿ ದೇವರ ದರ್ಶನವನ್ನು ಪಡೆದುಕೊಂಡಿದ್ದಾರೆ. 2008ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಮೋದಿ ಈ ದೇಗುಲಕ್ಕೆ ಆಗಮಿಸಿದ್ದರು.
ಗುರುವಾಯೂರು ದೇಗುಲದಲ್ಲಿ ಮೋದಿಯವರು ‘ತುಲಾಭಾರ’ ಸೇವೆಯನ್ನು ನಡೆಸಲಿದ್ದಾರೆ ಎಂದು ಗುರುವಾಯೂರು ದೇವಸ್ವಂ ಬೋರ್ಡ್ ಅಧ್ಯಕ್ಷ ಕೆ.ಬಿ ಮೋಹನ್ದಾಸ್ ಹೇಳಿದ್ದಾರೆ. ಈ ಸೇವೆಗಾಗಿ ದೇಗುಲವು 112 ಕೆಜಿ ತಾವರೆ ಹೂವನ್ನು ತಮಿಳುನಾಡಿನ ನಗರ್ಕೊಯ್ಲ್ನಿಂದ ತರಿಸಲಾಗಿದೆ.
ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಪ್ರಧಾನಿ ಸಚಿವಾಲಯವು ದೇಗುಲ ಮಂಡಳಿಯನ್ನು ಮನವಿ ಮಾಡಿಕೊಂಡಿದೆ ಎನ್ನಲಾಗಿದೆ. ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಪ್ರಧಾನಿ ದೇಗುಲದಲ್ಲಿ ಇರಲಿದ್ದು, ಈ ವೇಳೆ ಭದ್ರತಾ ಕಾರಣದಿಂದಾಗಿ ಯಾರನ್ನೂ ದೇಗುಲದೊಳಗೆ ಬಿಡದಿರಲು ನಿರ್ಧರಿಸಲಾಗಿದೆ. ಮೋದಿ ದೇಗುಲದಲ್ಲಿ ಅರ್ಧ ಗಂಟೆಗಳ ಕಾಲ ಇರಲಿದ್ದಾರೆ. ಪಕ್ಕದಲ್ಲೇ ಇರುವ ಮಮ್ಮಿಯೂರ್ ಶಿವ ದೇಗುಲದಲ್ಲೂ ಅವರು ಪ್ರಾರ್ಥನೆಯನ್ನು ಸಲ್ಲಿಸಲಿದ್ದಾರೆ.
ದೇಗುಲ ಭೇಟಿಯ ನಂತರ ಅವರು ತ್ರಿಶೂರ್ ಮತ್ತು ಮಲಪ್ಪುರಂನಲ್ಲಿನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಕೃಷ್ಣ ಸ್ಕೂಲ್ ಗ್ರೌಂಡ್ಸ್ನಲ್ಲಿ ಮಾತನಾಡಲಿದ್ದಾರೆ. ಈ ಸಭೆಗೆ ‘ಅಭಿನಂದನ್ ಸಭಾ’ ಎಂದು ಹೆಸರಿಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.