ಬದಲಾವಣೆ ಪ್ರಗತಿಯ ಸಂಕೇತ ಎನ್ನುತ್ತಾರೆ. ನಿಜ. ಆದರೆ, ಅದು ಸಕಾರಾತ್ಮಕವಾಗಿರಬೇಕು. ಅದಕ್ಕೆ ತಕ್ಕಂತೆ ನಮ್ಮ ಜೀವನಶೈಲಿಯೂ ಬದಲಾಗುತ್ತದೆ. ಅದು ಅವಶ್ಯಕ ಮತ್ತು ಅನಿವಾರ್ಯ ಸಹ. ವರ್ತಮಾನದ ವಿಚಾರಗಳನ್ನು, ವಾಸ್ತವತೆಯನ್ನು ಅರಿತು ಸಮಯದ ಜೊತೆ ಜೊತೆಗೆ ಸಾಗುತ್ತ ಸಮಾಜದೊಂದಿಗೆ ಬೆರೆಯಬೇಕಾಗುತ್ತದೆ. ಮನುಷ್ಯನ ಬೌದ್ಧಿಕ ಬೆಳವಣಿಗೆಯು ಸತತವಾದ ಅವನ ಆವಿಷ್ಕಾರ ಮನೋಭಾವದಿಂದಾಗಿ ಹಲವು ಹಂತಗಳನ್ನು ಏರುತ್ತಲೇ ಇದೆ. ಅಂತೆಯೇ ವಿಜ್ಞಾನಯುಗ, ಯಂತ್ರಯುಗ, ಕಂಪ್ಯೂಟರ್ ಯುಗ ಎಂಬ ಪ್ರಕಾರಗಳನ್ನು ಕಾಣುತ್ತಾ ಬಂದಿದ್ದೇವೆ. ಇವೆಲ್ಲದರ ಪರಿಣಾಮವಾಗಿ ಇಂದು ನಮ್ಮ ಜೀವನ ಸೌಲಭ್ಯಗಳೂ ಸಹ ಅತ್ಯಾಧುನಿಕವಾಗುತ್ತಿವೆ. ಅವುಗಳನ್ನೆಲ್ಲ ಬಳಸುವುದು ಬದುಕನ್ನು ಸುಲಲಿತವಾಗಿಯೂ, ಅನುಕೂಲಕರವಾಗಿಯೂ ನಡೆಸುತ್ತ ಉತ್ತಮವಾದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನೂ ರಕ್ಷಿಸಿಕೊಳ್ಳುವುದಕ್ಕಾಗಿ ಎಂಬುದನ್ನು ಮಾತ್ರ ಮರೆಯುವಂತಿಲ್ಲ. ಇದು ಸಮಾಜದ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಇದೇ ಹಲವು ಸಮಸ್ಯೆಗಳನ್ನು ಈಗ ಎದುರಿಸುತ್ತಿದೆ.
ಮಾತೆಯೇ ಮಗುವಿನ ಮೊದಲ ಗುರು ಎಂಬುದು ಎಲ್ಲರಿಗೂ ತಿಳಿದದ್ದೇ. ಆಕೆ ಕೊಡುವ ಪ್ರಾರಂಭಿಕ ಶಿಕ್ಷಣವೇ ಮಗುವಿನ ಉತ್ತಮ ವ್ಯಕ್ತಿತ್ವಕ್ಕೆ ಭದ್ರಬುನಾದಿಯಾಗುತ್ತದೆ. ಚಿಕ್ಕಂದಿನಿಂದಲೇ ಬೆಳೆಸಿಕೊಳ್ಳಬೇಕಾದ ಆತ್ಮವಿಶ್ವಾಸ, ಆತ್ಮಗೌರವ, ಮಾನವೀಯತೆ, ಸಮಾಜಮುಖೀ ಚಿಂತನೆ ಮುಂತಾದ ಎಲ್ಲ ಗುಣಗಳು ಅಂತರ್ಗತವಾಗಲು ಆ ಮೊದಲ ಗುರುವಿನ ಮಾರ್ಗದರ್ಶನ, ಉತ್ತೇಜನ ಅತಿಮುಖ್ಯ. ಅದು ಸರಿಯಾದ ದಾರಿಯಲ್ಲಿ ನಡೆಯಬೇಕು.
ಈ ಎಲ್ಲ ಪೀಠಿಕೆಯೊಂದಿಗೆ ನಾವೀಗ ವರ್ತಮಾನದಲ್ಲಿ ಕಾಣುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳನ್ನು ಕುರಿತು ವಿಚಾರ ಮಾಡಬೇಕಿದೆ. ವಿದ್ಯಾವಂತ ಮಹಿಳೆಯರ ಪ್ರಜ್ಞಾವಂತಿಕೆಯ ಕುರಿತು ಚಿಂತಿಸಬೇಕಾಗಿದೆ.
ಕಲಿಕೆ ಎನ್ನುವುದು ಮಗುವಿಗೆ ಯಾವತ್ತೂ ಒಂದು ಹೊರೆ ಅಥವಾ ಶಿಕ್ಷೆ ಅನಿಸಬಾರದು. ಅದು ಪ್ರೀತಿ ಎಂಬ ಎಳೆಯ ಮೇಲೇ ನಡೆಯುವ ಕ್ರಿಯೆಯಾಗಬೇಕು. ಆಗ ಅದಕ್ಕೆ ಶ್ರದ್ಧೆ ಎನ್ನುವುದು ತಾನಾಗಿಯೇ ಜೊತೆಗೂಡುತ್ತದೆ. ಸಂಗಡವೇ ಪ್ರಾಮಾಣಿಕ ಪ್ರಯತ್ನವೂ ತನ್ನ ಕೊಡುಗೆಯನ್ನು ನೀಡುತ್ತದೆ. ಇವೆಲ್ಲ ಸೇರಿದಾಗ ಉತ್ತಮ ಪ್ರತಿಫಲ ದೊರಕುವುದರಲ್ಲಿ ಸಂದೇಹವೆಲ್ಲಿ?
ಪ್ರಸ್ತುತ ಸಂಪರ್ಕ ಮಾಧ್ಯಮಗಳನ್ನು ಕುರಿತು ನಡೆಯುತ್ತಿರುವ ನಿರಂತರ ಸಂಶೋಧನೆಯಿಂದಾಗಿ ನಾವು ಬಳಸುತ್ತಿರುವ ಉಪಕರಣಗಳು ಬಹುಬೇಗ ಸುಧಾರಣೆಯೊಂದಿಗೆ ಬದಲಾಗುತ್ತಿವೆ. ವೈವಿಧ್ಯಮಯವಾದ ಸಾಧನೆಗಳು ಮಾರುಕಟ್ಟೆಗೆ ಬರುತ್ತಲೇ ಇವೆ. ಸಾಮಾಜಿಕ ಜಾಲತಾಣವೆಂಬ ತ್ರಿವಿಕ್ರಮನಂತೆ ಬೆಳೆದುನಿಂತಿರುವ ಮಾಧ್ಯಮ ಕ್ಷೇತ್ರವಂತೂ ತನ್ನ ಕಬಂಧಬಾಹುಗಳನ್ನು ಚಾಚುತ್ತ ಎಲ್ಲರನ್ನೂ ತನ್ನ ಗಡಿಯೊಳಗಡೆಗೇ ಸೇರಿಸಿಕೊಳ್ಳುತ್ತಿದೆ. ಫೇಸ್ಬುಕ್, ವಾಟ್ಸ್ಯಾಪ್, ಟ್ವಿಟರ್, ಇನ್ಸ್ಟಾಗ್ರಾಂಗಳಲ್ಲಿ ಮಾಹಿತಿಗಳು, ಛಾಯಾಚಿತ್ರಗಳು, ಸುದ್ದಿಗಳು ನಿರಂತರವಾಗಿ, ಸ್ವಚ್ಛಂದವಾಗಿ ಅಲೆದಾಡುವ ಕ್ಷೇತ್ರಗಳಾಗಿಬಿಟ್ಟಿವೆ. ಮುಖ್ಯ ಅಮುಖ್ಯ ಎಂಬ ಪರಿವೆಯಿಲ್ಲದೆ ಅವಶ್ಯಕತೆಗಿಂತ ಹೆಚ್ಚಾಗಿ ವೈಯಕ್ತಿಕತೆಯ ಗಡಿಯನ್ನೂ ದಾಟುತ್ತಿವೆ. ಆಧುನಿಕತೆಯ ಭ್ರಮೆಯಿಂದ ಗೆಳೆಯರೊಂದಿಗೆ, ಬಂಧು ಬಾಂಧವರೊಂದಿಗೆ ಸಂವಹನ ನಡೆಸುವಾಗ ಹಂಚಿಕೊಳ್ಳುವ ಅನಿಸಿಕೆಗಳು ಬಾಲಿಶವಾಗಬಹುದೆಂಬ ಯೋಚನೆಯೂ ಇರುವುದಿಲ್ಲ. ಅನುಕರಣೆಯನ್ನು ಕಲಿಕೆಯ ಒಂದು ಪ್ರಮುಖ ಮಾಧ್ಯಮ ವನ್ನಾಗಿಸಿಕೊಳ್ಳುವ ಮಗುವಿಗೆ ಇದೂ ಒಂದು ಪಾಠವಾಗುತ್ತದಲ್ಲವೇ? ವಿದ್ಯಾವಂತ ಮಹಿಳೆಯ ಪ್ರಜ್ಞಾವಂತಿಕೆ ಇಲ್ಲಿ ಶೂನ್ಯವಾಗಿಬಿಡುತ್ತದೇನೋ!
ಇದೇ ರೀತಿಯಲ್ಲಿ ನಾವಿಂದು ಕಾಣುತ್ತಿರುವ ಮತ್ತೊಂದು ವಿಪರೀತದ ಚಿತ್ರಣವೆಂದರೆ ಶಾಲೆಯಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸದ ಗತಿಯನ್ನು ತಾಯಂದಿರು ಗಮನಿಸುತ್ತಿರುವ ಅಥವಾ ಟ್ರ್ಯಾಕ್ ಇಡುತ್ತಿರುವ ವೈಖರಿ ಇಲ್ಲಿ ಇವರಿಗೆ ನೆರವಾಗುವುದು (ಹಾಗೆಂದು ಅವರ ಭ್ರಮೆ) ನಮ್ಮ ಸಾಮಾಜಿಕ ಜಾಲತಾಣಗಳು ಅವರ ಆತಂಕಭರಿತ ಅನಿಸಿಕೆಗಳ ವಿನಿಮಯ ಪ್ರಾರಂಭವಾಗುವುದು ಆ ಮಕ್ಕಳು ಒಂದನೇ ತರಗತಿಯಲ್ಲಿ ಅಭ್ಯಾಸ ಮಾಡುವಾಗಲೇ ಎಂದರೆ ಅತಿಶಯೋಕ್ತಿಯಲ್ಲ. ಮಕ್ಕಳ ಆತಂಕವನ್ನು ದೂರಮಾಡಿ, ಹಗುರ ಮನಸ್ಸಿನಿಂದ ಕಲಿಯುವುದರಲ್ಲಿ ಆಸಕ್ತಿ ಮೂಡಿಸಬೇಕಾದ ತಾಯಂದಿರು ಸ್ವತಃ ಸದಾ ಆತಂಕದಲ್ಲಿರುತ್ತ, ಮಕ್ಕಳಲ್ಲಿಯೂ ಅಧೈರ್ಯವನ್ನು, ಹಿಂಜರಿತವನ್ನು ಉಂಟುಮಾಡುತ್ತಾರೆ. ಶಾಲೆಯೆಂಬ ಹೊಸ ಆವರಣವನ್ನು ಹೊಕ್ಕ ಮಗು ಅಲ್ಲಿಯ ಪರಿಸರಕ್ಕೆ ಹೊಂದಿಕೊಂಡು ಕಲಿಕೆಯೆಂಬ ಹೊಸ ಕಾರ್ಯಕ್ಕೆ ಸಜ್ಜಾಗಬೇಕಾಗುತ್ತದೆ. ಆ ಸಮಯದಲ್ಲಿ ಅದರ ಮನಸ್ಸಿನಲ್ಲಿ ಯಾವುದೇ ಅಳುಕು, ಆತಂಕ ಇಲ್ಲದಂತೆ ಮಾಡುವುದು ತಾಯಿಯ ಕರ್ತವ್ಯವಾಗಿರುತ್ತದೆ. ತರಗತಿಯಲ್ಲಿ ಮಾಡಿದ ಪಾಠಗಳು, ಕೊಟ್ಟ ಮನೆಗೆಲಸ ಮುಂದೆ ಮಾಡಲಿರುವ ಪರೀಕ್ಷೆಗಳು ಅಥವಾ ಮಾಡಬೇಕಾಗುವ ಪ್ರಾಜೆಕ್ಟ್ ಕೆಲಸಗಳು, ಬರಲಿರುವ ಅಂಕಗಳು ಇತ್ಯಾದಿ ಎಲ್ಲದರ ಬಗೆಗೆ, ಅಂಕಗಳನ್ನು ಹೆಚ್ಚು ಹೆಚ್ಚಾಗಿ ತಮ್ಮ ಮಕ್ಕಳು ಪಡೆಯುವ ದಾರಿಯ ಬಗೆಗೆ ಚರ್ಚೆ, ಅಂಕ ಕಡಿಮೆಯಾದರೆ ಮುಂದೆ ಭವಿಷ್ಯವೇ ಇಲ್ಲವೆಂಬ ಆತಂಕವನ್ನು ಹೊತ್ತು ಅನಿಸಿಕೆಗಳು ಎಲ್ಲವೂ ಈ ವಾಟ್ಸ್ಯಾಪ್ನ ಮೂಲಕ ವಿನಿಮಯವಾಗುತ್ತಿರುತ್ತವೆ, ಆಗುತ್ತಲೇ ಇರುತ್ತವೆ.
ಇಷ್ಟೇ ಅಲ್ಲ. ಮಕ್ಕಳು ಓದಬೇಕಿರುವ ಪಠ್ಯದ ಗಾತ್ರದ ಕುರಿತಾಗಲೀ, ಓದುವ ಪ್ರಮಾಣದ ಬಗೆಗೆ ಅಥವಾ ಕ್ರಮದ ಬಗೆಗೆ ಅಸಂತೃಪ್ತಿಯನ್ನೋ, ಆತಂಕವನ್ನೋ ವ್ಯಕ್ತಪಡಿಸುವುದಾಗಲೀ ನಿರಂತರವಾಗಿ ನಡೆದೇ ಇರುತ್ತದೆ. ಕಳವಳದ ಸಂಭಾಷಣೆಗಳೂ ನಡೆಯುತ್ತಲೇ ಇರುತ್ತವೆ. ಮಕ್ಕಳ ಮೇಲೆ ಅಂಕಗಳಿಸಬೇಕೆಂಬ, ಪಠ್ಯವಿಷಯದಲ್ಲಿ ಪೂರ್ಣ ಜ್ಞಾನ ಹೊಂದಿರಬೇಕೆಂಬ ಅಂಶಕ್ಕೆ ಸಂಬಂಧಿಸಿದಂತೆ ಒತ್ತಡ ಹೇರುವುದಂತೂ ಇದ್ದೇ ಇರುತ್ತದೆ. ಹಲವು ಮೂಲಗಳಿಂದ ಪಡೆಯುವ ಪ್ರಶ್ನೆ ಪತ್ರಿಕೆಗಳ ಪರಸ್ಪರ ವಿನಿಮಯ, ಹತ್ತಾರು ಕಡೆಗಳಲ್ಲಿ ಸಂಘ ಸಂಸ್ಥೆಗಳು ನಡೆಸುವ ಬಗೆಬಗೆಯ ಸ್ಪರ್ಧೆಗಳ ವಿವರ ಎಲ್ಲವೂ ಹರಿದಾಡುತ್ತಲೇ ಇರುತ್ತವೆ. ಎಲ್ಲದರಲ್ಲಿಯೂ ತಮ್ಮ ಮಕ್ಕಳು ಪಾಲ್ಗೊಳ್ಳಬೇಕು, ಬಹುಮಾನಿತ ರಾಗಬೇಕು ಎಂಬ ಅಪೇಕ್ಷೆಯನ್ನು ಹೊತ್ತ ಒತ್ತಾಯದ ಬಾಣ ನಾಟುವುದು ಮಕ್ಕಳ ಮೇಲೆ. ಇಂದಿನ ಮಕ್ಕಳಲ್ಲಿ ಗ್ರಹಣ ಸಾಮರ್ಥ್ಯ ತುಂಬ ಹೆಚ್ಚಾಗಿದೆ, ನಿಜ. ಆದರೆ ಹಾಗೆಂದು ಮಿತಿಮೀರಿದ ಒತ್ತಡವನ್ನು ಹೇರುವುದು ಸಾಧುವಲ್ಲ. ಶಾಲೆಯ ಬಾಗಿಲಲ್ಲಿ ಪ್ರಾರಂಭವಾಗುವ ಕಳವಳದ ಸಂಭಾಷಣೆಗಳು ಮುಂದುವರಿದ ಭಾಗವಾಗಿ ಮನೆಗೆ ಬಂದು ಮಗುವಿನ ಜೊತೆ ನಡೆಯುತ್ತದೆ. ಸಹಪಾಠಿಗಿಂತ ಕಲಿಕೆಯ ವೇಗ ನಿಧಾನವಾಗಿದೆಯಲ್ಲವೇ? ಸ್ಪರ್ಧೆಗಳಲ್ಲಿ ಭಾಗವಹಿಸಿದವರೊಂದಿಗೆ ಸೇರಲಿಲ್ಲವೇಕೆ? ಇತ್ಯಾದಿ ಪ್ರಶ್ನೆಗಳು ಉದುರುತ್ತವೆ.
ಇವೆಲ್ಲ ಮಗುವಿನಲ್ಲಿ ಖಿನ್ನತೆಯನ್ನು ಮೂಡಿಸಬಹುದಲ್ಲವೇ? ಕಲಿಯುವ ಮನಸ್ಸು ನಿರಾತಂಕವಾಗಿರಬೇಕೆಂಬುದಾಗಲೀ, ಅದರಲ್ಲಿ ಆತ್ಮವಿಶ್ವಾಸ ತುಂಬಬೇಕೆಂಬ ಅಂಶವಾಗಲೀ ಅವರ ಅರಿವಿಗೇ ಬಂದಿರುವುದಿಲ್ಲ. ವಿದ್ಯಾವಂತ ತಾಯಂದಿರಲ್ಲಿ ಮಾತ್ರ ಈ ಎಲ್ಲ ಸಾಮಾನ್ಯ ಜ್ಞಾನದ ಕೊರತೆಯನ್ನು ಕಾಣುತ್ತಿಲ್ಲ. ಅನೇಕ ಶಿಕ್ಷಕಿಯರಲ್ಲೂ ಆ ಸ್ವಭಾವವನ್ನು ಕಾಣುತ್ತಿದ್ದೇವೆ. ಸಹೋದ್ಯೋಗಿಗಳ ಅಥವಾ ಬಂಧುಗಳು, ಪರಿಚಿತರ ಮಕ್ಕಳಿಗಿಂತ ತಮ್ಮ ಮಕ್ಕಳ ಅಂಕ ಕಡಿಮೆಯಾಗಿಬಿಟ್ಟರೆ ತಲೆಎತ್ತಿ ನಿಲ್ಲುವುದು ಹೇಗೆಂಬ ಆತಂಕವನ್ನು ತುಂಬಿಕೊಂಡಿರುತ್ತಾರೆ.
ಮಗು ಪಡೆಯಬೇಕಾದುದು ಸುಸಂಸ್ಕೃತ ವ್ಯಕ್ತಿತ್ವವನ್ನು ಎಂಬುದನ್ನು ಬದಿಗೆ ಇಟ್ಟು ಅಂಕಾಧಾರಿತ ಶಿಕ್ಷಣಕ್ಕೇ ಪ್ರಾಶಸ್ತ್ಯ ನೀಡುತ್ತಾರೆ. ವಿಜ್ಞಾನದ ಕೊಡುಗೆಗಳು ನಮ್ಮ ಜೀವನವನ್ನು ಅಭಿವೃದ್ಧಿಯ ಪಥದಲ್ಲಿ ಕರೆದೊಯ್ಯುತ್ತಿರುವುದು ನಿಜ. ಶಿಕ್ಷಣ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರಬೇಕೆಂಬುದು ನಿಜ. ಆದರೆ ಎಂತಹ ಶಿಕ್ಷಣ ನಮ್ಮದಾಗಬೇಕು, ಅದನ್ನು ಗಳಿಸುವ ಕ್ರಮ ಯಾವುದು ಎಂಬ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡರೆ, ವಿಜ್ಞಾನವು ನೀಡುತ್ತಿರುವ ಕೊಡುಗೆಗಳನ್ನು ನಮ್ಮ ನಿಯಂತ್ರಣದ ಬಂಧದಲ್ಲಿ ಬಳಸುವುದನ್ನು ಅರಿತರೆ ಒಳ್ಳೆಯದು. ನಮ್ಮ ಮಕ್ಕಳು ಆತಂಕ ದೂರವಾದ ಪ್ರೀತಿಯ, ಆಸಕ್ತಿಯ, ನಿರಾಳವಾದ ದಾರಿಯಲ್ಲಿ ನಡೆಯುತ್ತ ಶಿಕ್ಷಣವನ್ನು, ಮಾನವತೆಯನ್ನು ಮೈಗೂಡಿಸಿಕೊಂಡ, ಮೈದುಂಬಿಸಿಕೊಂಡ ಶಿಕ್ಷಣವನ್ನು ಪಡೆದು ಸಮಾಜಮುಖಿಯಾದ ಪ್ರಜೆಯಾಗಲು ಸಾಧ್ಯ.
✍ ನಂ. ನಾಗಲಕ್ಷ್ಮಿ, ನಿವೃತ್ತ ಕನ್ನಡ ಉಪನ್ಯಾಸಕರು, ಬೆಂಗಳೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.