ಬೆಂಗಳೂರು : ಪದ್ಮಶ್ರಿ ಪುರಸ್ಕೃತೆ ಹಾಗೂ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರು ಮಕ್ಕಳಂತೆ ಬೆಳೆಸಿ, ಪೋಷಿಸಿ ದೊಡ್ಡದಾಗಿ ಮಾಡಿದ ಕುದೂರು ಹಾಗೂ ಹುಲಕಲ್ ಗ್ರಾಮದ ನಾಲ್ಕು ಕಿ.ಮಿ ರಸ್ತೆಯ 287 ಆಲದ ಮರಗಳನ್ನು ರಾಜ್ಯ ಹೆದ್ದಾರಿ 94 ರ ಅಗಲೀಕರಣದ ನೆಪದಲ್ಲಿ ಧರೆಗೆ ಉರುಳಿಸುವ ಯೋಜನೆಯೊಂದು ತಯಾರಿಗಿದ್ದು, ಇದಕ್ಕೆ ಪರಿಸರವಾದಿಗಳ ಉಗ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಆ ಮರಗಳು ಹೆಮ್ಮರವಾಗಿ ಬೆಳೆದು ರಸ್ತೆಯ ಎರಡು ಬದಿಯಿಂದ ಪ್ರಾರಂಭವಾಗಿ ಬಿಸಿಲು ಕೆಳಗೆ ನಿಲುಕದಂತೆ ಒಂದನ್ನೊಂದು ಬೆಸೆದು ಅಲ್ಲಿಯ ದಾರಿಹೋಕರಿಗೆ, ಪ್ರವಾಸಿಗರಿಗೆ ನೆರೆಳು ಮತ್ತು ಆಶ್ರಯದ ತಾಣವಾಗಿವೆ. ಅಷ್ಟೇಅಲ್ಲದೆ, ಹಲವಾರು ಪಕ್ಷಿ ಹಾಗೂ ಅಳಲಿನಂತ ಸಸ್ತನಿಗಳಿಗೆ ಸೂರು ನೀಡಿವೆ. ಅದರೊಂದಿಗೆ ಆ ತಾಯಿಯ ಅದ್ಭುತ ಸೇವೆಯ ಪ್ರತೀಕವಾಗಿರುವ ಈ ಮರಗಳು ಆ ತಾಯಿ ಬದುಕಿರುವಾಗಲೇ ಅವುಗಳ ಮರಣ ಮೃದಂಗಕ್ಕೆ ಸಾಕ್ಷಿಯಾಗುವ ಯೋಜನೆಯನ್ನು ಸರಕಾರ ತಯಾರಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ಪರಿಸವಾದಿಗಳು ನೋವು ವ್ಯಕ್ತಪಡಿಸುತ್ತಿದ್ದಾರೆ. ಸರಕಾರ ಆ ತಾಯಿ ಹಾಗೂ ಮರಗಳ ಬಗ್ಗೆ ನಿಜವಾಗಿಯೂ ಖಾಳಜಿ ಇದ್ದರೆ, ಹಲವಾರು ಪರ್ಯಾಯ ವ್ಯವಸ್ಥೆಗಳನ್ನು ಮಾಡಬಹುದಿತ್ತು. ಆದರೆ ಈ ಮರಗಳ ಮೇಲೆಯೇ ತಮ್ಮ ವಕ್ರದೃಷ್ಟಿಯನ್ನು ಬೀರಿದ್ದು ದುರದೃಷ್ಟಕರ ಎಂದು ಖೇದ ವ್ಯಕ್ತಪಡಿಸಿದ್ದಾರೆ. ಸರಕಾರ ಈ ಮರಗಳನ್ನು ಉಳಿಸಿಕೊಂಡು ಯೋಜನೆಯನ್ನು ಹೇಗೆ ಕೈಗೊಳ್ಳಬಹುದೆಂಬ ಪರ್ಯಾಯ ಮಾರ್ಗಗಳ ಬಗ್ಗೆಯೂ ಪರಿಸರ ಪ್ರೇಮಿಗಳು ಸಲಹೆಗಳನ್ನು ನೀಡಿದ್ದಾರೆ.
⭕ ಈ ರಸ್ತೆಗೆ ಹೊಂದಿಕೊಂಡಿರುವ ಎರಡೂ ಬದಿಯಲ್ಲಿ ಹೊಲಗಳಿದ್ದು ಈ ಮರಗಳಿಗೆ ಧಕ್ಕೆಯಾಗದಂತೆ ಆ ಜಮೀನನ್ನು ಬಳಸಿಕೊಂಡು ರಸ್ತೆಅಗಲೀಕರಣವನ್ನು ಕೈಗೊಳ್ಳಬಹುದು. ಇದು ಬಹುಶಃ ಒಂದು ಸರಳ ಉಪಾಯ. ಯಾವುದೋ ದೇವಸ್ಥಾನ, ಗುಡಿ, ಚರ್ಚು, ಮಸೀದಿಗಳು, ರಾಜಕೀಯ ನಾಯಕರ ಮನೆಗಳು ಬಂದರೆ ಇಂತಹ ಪರ್ಯಾಯ ವ್ಯವಸ್ಥೆ ಮಾಡುವ ಸರಕಾರ ಕಲ್ಪವೃಕ್ಷವಾದ ಮರಗಳೆಂದರೆ ಇಷ್ಟೇಕೆ ತಾತ್ಸಾರ?
⭕ ಇತ್ತೀಚೆಗೆ ತಾನೆ, 3000 ಕ್ಕೂ ಹೆಚ್ಚಿನ ಎಕರೆಯಷ್ಟು ಭೂಮಿಯನ್ನು ಜಿಂದಾಲ್ ಕಂಪನಿಗೆ ನೀಡಲು ಮುಂದಾಗಿರುವ ಸರಕಾರ ಹಸಿರು ಪ್ರದೇಶವನ್ನು ಹೆಚ್ಚಿಸಲು ಮಾಡಬೇಕಾದ ಯಾವುದೇ ರೂಪರೇಷೆಗಳನ್ನು ಮಾಡುವುದಿಲ್ಲ, ಮಾಡಿದರೂ ಅದು ಕಾರ್ಯರೂಪಕ್ಕೆ ಬರುವುದಿಲ್ಲ. ಆದರೆ, ಈ ಬಡ ತಾಯಿ ಈ ಮರಗಳೇ, ತನ್ನ ಮಕ್ಕಳೆಂದು ಬೆಳೆಸಿ, ಪೋಷಿಸಿ ಹಸಿರನ್ನು ಹಂಚಿದ್ದಕ್ಕೆ, ಅವರ ಮುಂದೆಯೇ, ಅವುಗಳ ಮಾರಣ ಹೋಮದ ತಯಾರಿ ಎಷ್ಟು ಸರಿ?
⭕ ಈ ತಾಯಿಯ ಇಂತಹ ಕಾರ್ಯಕ್ಕಾಗಿಯೇ, ಘನತೆವೆತ್ತ ಪದ್ಮಶ್ರೀ ಪುರಸ್ಕಾರ ಹಾಗೂ ರಾಜ್ಯ ಪ್ರಶಸ್ತಿಗಳಷ್ಟೇ ಅಲ್ಲದೇ, ಈ ತಾಯಿಯ ಸಾಧನೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ನಾವು ಮಕ್ಕಳಿಗೆ ಬೋಧಿಸುತ್ತೇವೆ. ಹಾಗಾದರೆ, ಈ ಮರಗಳನ್ನೇ ತೆಗೆದು ಹಾಕಿದರೆ, ಇನ್ನಾವ ಪಾಠವನ್ನು ನಾವು ಮಕ್ಕಳಿಗೆ ಬೋಧಿಸಲು ಸಾಧ್ಯ?
ನಮ್ಮ ಕರ್ನಾಟಕದ ಹಾಗೂ ದೇಶದ ಪರಿಸರದ ಉಳಿವಿಗಾಗಿ ಒಂದು ಮಾದರಿಯ ಕಾರ್ಯ ಮಾಡಿದ ಸಾಲುಮರದ ತಿಮ್ಮಕ್ಕನವರ ಆ ನಾಲ್ಕು ಕಿಲೋಮಿಟರ್ ರಸ್ತೆಯ ಮಾರ್ಗವನ್ನು “ಸಾಲುಮರದ ತಿಮ್ಮಕ್ಕನ ಸ್ಮಾರಕ” ಎಂದು ಸರಕಾರ ಘೋಷಿಸಿ ಅದರ ಉಳಿವಿಗಾಗಿ ಬೇಕಾದ ಎಲ್ಲ ವ್ಯವಸ್ಥೆ ಮಾಡಬೇಕು. ವಿಶ್ವ ಪರಿಸರ ದಿನಾಚರಣೆಯ ಈ ಸಂದರ್ಭದಲ್ಲಿ ಈ ಘೋಷಣೆ ಮಾಡಿ ಆ ವೃಕ್ಷ ಮಾತೆಯ ಮರಗಳನ್ನು ಶಾಶ್ವತವಾಗಿ ಉಳಿಯುವಂತೆ ಮಾಡಬೇಕು. ಇಲ್ಲವಾದಲ್ಲಿ, ರಾಜ್ಯಾದ್ಯಂತ ಎಲ್ಲ ಪರಿಸರ ಪ್ರೇಮಿಗಳು ಹಾಗೂ ಹೋರಾಟಗಾರರು ಉಗ್ರ ಪ್ರತಿಭಟನೆಯನ್ನು ಕೈಗೊಳ್ಳುವುದು ನಿಶ್ಚಿತ ಎಂದು ಪರಿಸರ ಪ್ರೇಮಿಗಳಾದ ಪ್ರಕಾಶ ಗೌಡರ, ಕೆ.ಎಚ್ ನಾಯಕ, ಸಂಜೀವ ಹಿರೇಮಠ, ಉಮೇಶ ತೇಲಿ, ವೃಕ್ಷ ಕ್ರಾಂತಿ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.