ಫಲಿತಾಂಶ ಬಂತು. ಸಂಭ್ರಮ ಆಚರಿಸಿದ್ದೂ ಆಯ್ತು (ಕೆಲವರಿಗೆ ಮಾತ್ರ ಸಂಭ್ರಮ ಆಚರಿಸಲು ಸಾಧ್ಯವಾಗಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಅವರೆಲ್ಲ ಒಂದಲ್ಲ ಒಂದು ಬಗೆಯಲ್ಲಿ ಮನದಾಳದ ಸಿಟ್ಟು, ಉರಿ, ಆಕ್ರೋಶವನ್ನು ಸಾಮಾಜಿಕ ಜಾಲತಾಣ, ಮುದ್ರಣ ಮಾಧ್ಯಮ ಅಥವಾ ಮಾತುಕತೆ ವೇಳೆ ಹೊರಹಾಕುತ್ತಲೇ ಇದ್ದಾರೆ. ಹಾಗೇ ಮಾಡಲಿ ಬಿಡಿ. ಅದರಿಂದಲಾದರೂ ಅವರ ಉರಿ, ಆಕ್ರೋಶ ಶಮನವಾದರೆ ಸಾಕು!)
ಈಗ ಕೇಂದ್ರದಲ್ಲಿ ಹೊಸ ಸರ್ಕಾರವೂ ಸ್ಥಾಪನೆಯಾಗಿ, ಖಾತೆಗಳ ಹಂಚಿಕೆಯೂ ಆಗಿದೆ. ಸಾಧಾರಣವಾಗಿ ಫಲಿತಾಂಶ ಪ್ರಕಟವಾದ ಬಳಿಕ ಮಂತ್ರಿಗಿರಿ ಪಡೆಯಲು ಲಾಬಿ ನಡೆಯುತ್ತದೆ. ಆದರೆ ಈ ಬಾರಿ ಭಾರೀ ಬಹುಮತದ ಗೆಲುವು ದೊರಕಿದ್ದರೂ ಮಂತ್ರಿಗಿರಿ ಪಡೆಯಲು ಲಾಬಿ, ವಶೀಲಿಬಾಜಿ ಮಾಡುವ ಸಾಹಸಕ್ಕೆ ಬಿಜೆಪಿಯ ಯಾವೊಬ್ಬ ಎಂಪಿಯೂ ಮುಂದಾಗಲಿಲ್ಲ. ಮಾಧ್ಯಮಗಳ ಮೊರೆಹೋಗಿ ತಮಗೆ ಮಂತ್ರಿಪದವಿ ಸಿಗುವಂತೆ ಪ್ರಯತ್ನಿಸಿದ ಉದಾಹರಣೆಗಳೂ ಕಂಡುಬರಲಿಲ್ಲ. ಪ್ರಮಾಣವಚನದ ದಿನವಾದ ಮೇ 30 ರ ಮಧ್ಯಾಹ್ನದವರೆಗೆ ಯಾರ್ಯಾರು ಮಂತ್ರಿಯಾಗುತ್ತಾರೆ ಎಂಬ ಸುಳಿವು ಕೂಡ ಸಿಕ್ಕಿರಲಿಲ್ಲ. ಮೋದಿ-ಅಮಿತ್ಶಾ ಜೋಡಿ ಆ ಮಟ್ಟಿನ ಗೌಪ್ಯವನ್ನು ಕಾಪಾಡಿಕೊಂಡಿದ್ದರು. ಜೊತೆಗೆ ಮಂತ್ರಿಗಳಾಗಬೇಕೆಂಬ ಆಕಾಂಕ್ಷಿತರಿಗೆ ಒಂದು ತೆರನ ಭೀತಿಯೂ ಇತ್ತು. ತಾವೇನಾದರೂ ಮಂತ್ರಿಯಾಗಬೇಕೆಂದು ಮಾಧ್ಯಮಗಳಲ್ಲಿ ಬರೆಸಿದರೆ, ಅದು ಮೋದಿಯ ಕಣ್ಣಿಗೆ ಬಿದ್ದು ಮಂತ್ರಿಗಿರಿಯೇ ತಪ್ಪಿಹೋಗಬಹುದೆಂದು ಮೌನಕ್ಕೆ ಶರಣಾಗಿದ್ದುದೂ ಅಷ್ಟೇ ಸತ್ಯ.
ಸಚಿವರಾಗಬೇಕೆಂಬ ಆಸೆ ಬಹುತೇಕ ಎಂಪಿಗಳಿಗೆ ಇರುವುದು ಸಹಜ. ಅದೇನೂ ತಪ್ಪು ಅಲ್ಲ. ಆದರೆ ಮಂತ್ರಿಗಿರಿಗೆ ಅಗತ್ಯವಾದ ಅರ್ಹತೆ ತನಗಿದೆಯೇ ಎಂದು ಇಂಥವರು ಅಷ್ಟಾಗಿ ಯೋಚಿಸಿರುವುದಿಲ್ಲ. ಆದರೆ ಈ ಬಾರಿ ಕೇಂದ್ರ ಸಂಪುಟದಲ್ಲಿ ಮಂತ್ರಿಯಾಗಿರುವವರಲ್ಲಿ ಹೆಚ್ಚಿನವರು ಅರ್ಹರೆಂದೇ ಹೇಳಬಹುದು. ಹಲವರು ಮೊದಲ ಬಾರಿಗೆ ಸಚಿವರಾಗಿದ್ದಾರೆ. ಅವರ ಕಾರ್ಯದಕ್ಷತೆ ಎಂತಹುದು? ತಮ್ಮ ಹುದ್ದೆಗೆ ಅವರು ನ್ಯಾಯ ಸಲ್ಲಿಸುತ್ತಾರಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲು ಕನಿಷ್ಠ ಆರು ತಿಂಗಳವರೆಗಾದರೂ ಕಾದು ನೋಡಬೇಕಾಗಿದೆ.
ಪ್ರಮುಖ ಹುದ್ದೆಗಳಾದ ಗೃಹ, ರಕ್ಷಣೆ, ಹಣಕಾಸು, ರೈಲ್ವೇ, ಹೆದ್ದಾರಿ, ವಿದೇಶಾಂಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಾನೂನು, ಸಂಸದೀಯ ವ್ಯವಹಾರ ಮೊದಲಾದ ಖಾತೆಗಳಿಗೆ ನೇಮಕಗೊಂಡಿರುವ ಸಚಿವರ ಬಗ್ಗೆ ಯಾರೂ ಬೆಟ್ಟು ಮಾಡುವಂತಿಲ್ಲ. ಅದರಲ್ಲೂ ಸುಷ್ಮಾ ಸ್ವರಾಜ್ ಅವರಿಂದ ತೆರವಾಗಿರುವ ವಿದೇಶಾಂಗ ವ್ಯವಹಾರ ಖಾತೆಗೆ ವಿದೇಶಾಂಗ ಕಾರ್ಯದರ್ಶಿಯಾಗಿ, ರಾಯಭಾರಿಯಾಗಿ ಅಪಾರ ಅನುಭವ ಉಳ್ಳ ಐಎಫ್ಎಸ್ ಅಧಿಕಾರಿ ಎಸ್. ಜೈಶಂಕರ್ ಅವರ ನೇಮಕ ಅತ್ಯಂತ ಸ್ವಾಗತಾರ್ಹ. ಲೋಕಸಭೆ, ರಾಜ್ಯಸಭೆಗಳೆರಡಕ್ಕೂ ಸದಸ್ಯರಲ್ಲದ ಜೈಶಂಕರ್ ನೇಮಕ ಪ್ರಧಾನಿಯವರ ದೂರದೃಷ್ಟಿಗೆ ಸಂಕೇತ. ಜೈಶಂಕರ್ ವಿದೇಶಾಂಗ ಖಾತೆ ಸಚಿವರಾಗುತ್ತಾರೆಂದು ಯಾವ ಮಾಧ್ಯಮಗಳೂ ಭವಿಷ್ಯ ನುಡಿದಿರಲಿಲ್ಲ.
ಅರುಣ್ಜೇಟ್ಲಿ ಅವರಿಂದ ತೆರವಾದ ವಿತ್ತ ಖಾತೆಗೆ ಕಳೆದ ಕ್ಯಾಬಿನೆಟ್ನಲ್ಲಿ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರನ್ನು ನೇಮಿಸಬಹುದೆಂದು ಯಾರೂ ಎಣಿಸಿರಲಿಲ್ಲ. ವಿತ್ತ ಖಾತೆಯನ್ನು ಪೂರ್ಣಾವಧಿಗೆ ನಿರ್ವಹಿಸುತ್ತಿರುವ ಮೊದಲ ಮಹಿಳೆ ಆಕೆ. ಹಿಂದೆ ಇಂದಿರಾಗಾಂಧಿ ಒಂದು ವರ್ಷದ ಮಟ್ಟಿಗೆ ಮಾತ್ರ ವಿತ್ತಖಾತೆ ನಿರ್ವಹಿಸಿದ್ದರು. ನಿರ್ಮಲಾ ಅವರಿಗೆ ವಿತ್ತ ಖಾತೆ ಜತೆಗೆ ಕಾರ್ಪೊರೇಟ್ ವ್ಯವಹಾರಗಳ ಖಾತೆಯೂ ದೊರಕಿರುವುದು ಅವರ ಸಾಮರ್ಥ್ಯಕ್ಕಾಗಿ ಸಾಕ್ಷಿ. ಸವಾಲು ಕೂಡ. ಸ್ತ್ರೀವಾದಿಗಳು ನಿರ್ಮಲಾ ಸೀತಾರಾಮನ್ಗೆ ಒಂದು ಅಭಿನಂದನೆ ಹೇಳುವುದನ್ನು ಖಂಡಿತ ಮರೆಯಬಾರದು! ಹಿಂದೆ ರಕ್ಷಣಾ ಸಚಿವರಾಗಿದ್ದಾಗಲೂ ನಿರ್ಮಲಾ ಆ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ರಫೇಲ್ ವಿವಾದಗಳಿಗೆ ಲೋಕಸಭೆಯ ಒಳಗೆ ಹಾಗೂ ಹೊರಗೆ ಸಮರ್ಥ ಉತ್ತರ ನೀಡಿ ಎಲ್ಲರನ್ನೂ ಬೆರಗಾಗಿಸಿದ್ದರು. ಈ ಬಾರಿ ವಿತ್ತ ಖಾತೆಯನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದು ಈಗ ಎಲ್ಲ ಕುತೂಹಲ.
ತೆಂಗಿನ ಗರಿಯ ಗುಡಿಸಲಲ್ಲಿ ವಾಸವಿರುವ, ಸದಾ ಸೈಕಲ್ನಲ್ಲೇ ಪ್ರವಾಸ ಮಾಡುವ, ಎರಡು ಬಾರಿ ಶಾಸಕರಾಗಿದ್ದ, ‘ಒಡಿಶಾದ ಮೋದಿ’ ಎಂದೇ ಖ್ಯಾತ ರಾಗಿರುವ ಒಡಿಶಾದ ಬಾಲಸೋರ್ನ ಬಿಜೆಪಿ ಸಂಸದ ಪ್ರತಾಪ್ಚಂದ್ರ ಸಾರಂಗಿ ಎಂಬ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಮೋದಿ ಸಂಪುಟದಲ್ಲಿ ಸಚಿವರಾಗಿರುವುದು ಪ್ರಜಾತಂತ್ರ ವ್ಯವಸ್ಥೆಯ ವಿಸ್ಮಯಗಳಲ್ಲೊಂದು. ಪ್ರತಾಪಚಂದ್ರ ಸಾರಂಗಿ ಚುನಾವಣೆಯಲ್ಲಿ ಸೋಲಿಸಿದ್ದು ಒಬ್ಬ ಬಹುಕೋಟಿ ಉದ್ದಿಮೆದಾರನನ್ನು! ಇಡೀ ಚುನಾವಣಾ ಪ್ರಚಾರ ಕೈಗೊಂಡಿದ್ದು ಆಟೋರಿಕ್ಷಾದಲ್ಲೇ. ಬಿಳಿ ಕುರ್ತಾ ಪೈಜಾಮ ಧರಿಸಿ, ಕಾಲಿಗೆ ಹವಾಯಿ ಚಪ್ಪಲಿ ಮೆಟ್ಟಿ ಬಿಳಿಗಡ್ಡಧಾರಿ ಸಾರಂಗಿ ಪ್ರಮಾಣವಚನ ಸ್ವೀಕರಿಸಿ ವಾಪಸ್ ಬರುತ್ತಿದ್ದಾಗ ಮೋದಿ, ಅಮಿತ್ ಶಾ ಸೇರಿದಂತೆ ಪ್ರಮುಖರೆಲ್ಲರೂ ಭಾವಪೂರ್ಣವಾಗಿ ಚಪ್ಪಾಳೆ ಹೊಡೆಯುತ್ತಿದ್ದ ದೃಶ್ಯ ಅವಿಸ್ಮರಣೀಯ. ಹಣಬಲ, ತೋಳ್ಬಲ ಉಳ್ಳವರು ಮಾತ್ರ ಮಂತ್ರಿಯಾಗಲು ಸಾಧ್ಯ ಎಂಬ ಭಾರತದ ಅದೇ ಮಾಮೂಲಿ ರಾಜಕೀಯ ಸಮೀಕರಣವನ್ನು ಈ ವಿದ್ಯಮಾನ ಸುಳ್ಳಾಗಿಸಿದೆ.
ಮಂತ್ರಿಗಿರಿ ಬೇಡ ಎಂದರು!
ವಯಸ್ಸು 85 ಆಗಿರಲಿ, ಕೂತರೆ ಏಳಲಾಗದ ಎದ್ದರೆ ಸಲೀಸಾಗಿ ಕೂರಲಾಗದ ಸ್ಥಿತಿ ಇರಲಿ ಮಂತ್ರಿಗಿರಿ ಮಾತ್ರ ತಪ್ಪಬಾರದು ಎಂಬ ಸ್ವಾರ್ಥಿಗಳ ಸಂಖ್ಯೆಯೇ ಭಾರತದ ರಾಜಕಾರಣದಲ್ಲಿ ಹೆಚ್ಚು. ಹಾಗಿರುವಾಗ ತನ್ನನ್ನು ಈ ಬಾರಿ ಸಂಪುಟದಿಂದ ಕೈಬಿಡಿ; ಯಾವ ಕಾರಣಕ್ಕೂ ಮಂತ್ರಿಗಿರಿ ಬೇಡ ಎಂದು ಹಿರಿಯ ಸಚಿವರಾಗಿದ್ದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಉಮಾಭಾರತಿ ಪ್ರಧಾನಿಗೆ ತಿಳಿಸಿ, ಮಂತ್ರಿಗಿರಿಯನ್ನು ತಾವಾಗಿ ತೊರೆದಿರುವುದು ಭಾರತೀಯ ರಾಜಕಾರಣದ ಅಪರೂಪದ ಬೆಳವಣಿಗೆ. ಈ ಮೂವರ ಆರೋಗ್ಯವೂ ಅಷ್ಟೊಂದು ಚೆನ್ನಾಗಿಲ್ಲ. ಅದೇ ಕಾರಣಕ್ಕೆ ಅವರು ಮಂತ್ರಿಗಿರಿಗೆ ನಕಾರ ಸೂಚಿಸಿದ್ದಾರೆ. ಆದರೆ ಕೊಂಚ ಹೊಂದಿಕೊಂಡಿದ್ದರೆ ಈ ಮೂವರಿಗೂ ಮಂತ್ರಿಗಿರಿ ದೊರಕುತ್ತಿತ್ತು. ಅರುಣ್ ಜೇಟ್ಲಿಯವರನ್ನು ಖಾತೆರಹಿತ ಮಂತ್ರಿ ಮಾಡುತ್ತೇನೆಂದು ಮೋದಿ ಹೇಳಿದ್ದರೂ ಅವರು ಮಾತ್ರ ಒಪ್ಪಲಿಲ್ಲ. ಈ ಮೂವರೂ ಹಿಂದಿನ ಮೋದಿ ಸಂಪುಟದಲ್ಲಿ ಚೆನ್ನಾಗಿಯೇ ಕಾರ್ಯ ನಿರ್ವಹಿಸಿದ್ದರು. ಮಂತ್ರಿಗಿರಿ ಬೇಡ ಎನ್ನುವ ಇಂಥವರನ್ನು ಕಾಂಗ್ರೆಸ್ ಪಕ್ಷದಲ್ಲಿ ಹುಡುಕಿದರೂ ಸಿಗುವುದಿಲ್ಲ. ಮಂತ್ರಿಗಿರಿ ಸಿಕ್ಕಿಲ್ಲವೆಂದು ಸಿಟ್ಟಿಗೆದ್ದು ಪಕ್ಷ ತೊರೆಯುವವರು ಬೇಕಿದ್ದರೆ ಅಲ್ಲಿ ಸಿಗುತ್ತಾರೆ!
ವಿಶಿಷ್ಟ ರಾಜಕಾರಣದ ನವೀನ್
ದೇಶದಾದ್ಯಂತ ಪ್ರಚಂಡ ಮೋದಿ ಅಲೆ ಇದ್ದಾಗ್ಯೂ ಒಡಿಶಾದಲ್ಲಿ ಸತತ ಐದನೇ ಬಾರಿಗೆ ಭಾರೀ ಬಹುಮತದೊಂದಿಗೆ ಗೆದ್ದು ಮುಖ್ಯಮಂತ್ರಿಯಾಗಿರುವ ನವೀನ್ ಪಟ್ನಾಯಕ್ ಭಾರತ ಕಂಡ ವಿಶಿಷ್ಟ ರಾಜಕಾರಣಿ. ಭಾರತದಂತಹ ದೇಶದಲ್ಲಿ ಸತತ ಐದು ಬಾರಿ ಒಬ್ಬ ವ್ಯಕ್ತಿ ಯಾವುದೇ ರಾಜ್ಯಕ್ಕೆ ಮುಖ್ಯಮಂತ್ರಿಯಾಗುವುದು ಅಷ್ಟು ಸುಲಭವೇನೂ ಅಲ್ಲ. ಅದೊಂದು ಸಣ್ಣ ಸಾಧನೆಯೂ ಅಲ್ಲ. ಒಡಿಶಾದ ನವೀನ್ ಪಟ್ನಾಯಕ್ ಹೊರತುಪಡಿಸಿದರೆ ಈ ಸಾಧನೆ ಮಾಡಿದವರು ಸಿಕ್ಕಿಂನ ಪವನ್ ಚಾಮ್ಲಿಂಗ್ ಹಾಗೂ ಪಶ್ಚಿಮ ಬಂಗಾಳದ ಜ್ಯೋತಿ ಬಸು. 1997 ರಲ್ಲಿ ತಮ್ಮ ತಂದೆ ಬಿಜು ಪಟ್ನಾಯಕ್ ನಿಧನಾನಂತರ, ವಿದೇಶದಿಂದ ಬಂದು ಪಕ್ಷದ ಚುಕ್ಕಾಣಿ ಹಿಡಿದು ಮುಖ್ಯಮಂತ್ರಿಯಾದ ನವೀನ್ ನಂತರ ಸೋಲನ್ನೇ ಕಂಡಿಲ್ಲ. ಅವರ ಈ ಪರಿ ಜನಪ್ರಿಯತೆಗೆ ಕಾರಣಗಳನ್ನು ಹುಡುಕಿದರೆ ಕಾಣಿಸುವುದು ಸಂನ್ಯಾಸಿಯಂತಹ ನಿಸ್ಪೃಹ ವ್ಯಕ್ತಿತ್ವ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ. ಮದುವೆಯಾಗದೆ, ಕುಟುಂಬದವರನ್ನು ದೂರವಿಟ್ಟು, ಏಕಾಂಗಿಯಾಗಿದ್ದುಕೊಂಡು ಒಡಿಶಾ ಜನತೆಯ ಸೇವೆಯೇ ತಮ್ಮ ಬದುಕು ಎಂಬಂತೆ ಜೀವಿಸುತ್ತಿರುವುದೇ ಜನರು ಅವರನ್ನು ಕೈಬಿಡದಿರಲು ಬಹು ಮುಖ್ಯ ಕಾರಣ.
ನವೀನ್ ಪಟ್ನಾಯಕ್ ಅವರ ಇಷ್ಟು ದೀರ್ಘಕಾಲದ ಆಳ್ವಿಕೆಯಲ್ಲಿ ಒಡಿಶಾ ಅದ್ಭುತ ಅಭಿವೃದ್ಧಿ ಕಂಡಿದೆ ಎಂದೇನೂ ಇಲ್ಲ. ಆದರೆ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಹಾಗು ಅಧಿಕಾರದಾಹದಂತಹ ಸಿದ್ಧಸೂತ್ರಗಳನ್ನು ಬದಿಗೊತ್ತಿ, ಭಿನ್ನದಾರಿ ತುಳಿದಿರುವುದು ನವೀನ್ ಪಟ್ನಾಯಕ್ರ ಜನಪ್ರಿಯತೆಯನ್ನು ಹೆಚ್ಚಿಸಿದೆ. ರಾಜಕಾರಣಿಗಳಿಗೆ ಸೇವೆಯೇ ಧ್ಯೇಯವಾದರೆ ಜನರು ಕಣ್ಮುಚ್ಚಿಕೊಂಡು ಮರು ಆಯ್ಕೆ ಮಾಡುತ್ತಾರೆಂಬುದಕ್ಕೆ ಅವರು ಉತ್ತಮ ನಿದರ್ಶನ.
ಮೋದಿ ಸರ್ಕಾರವನ್ನು ಇಡೀ ದೇಶವು ಎರಡನೇ ಬಾರಿಗೆ ಆಯ್ಕೆ ಮಾಡಿರುವುದಕ್ಕೂ ಇದೇ ಕಾರಣ. ಮೋದಿ ಸ್ವಂತಕ್ಕಾಗಿ ಏನನ್ನೂ ಮಾಡಲಾರರು. ದೇಶಕ್ಕಾಗಿಯೇ ಎಲ್ಲವನ್ನೂ ಮಾಡುತ್ತಾರೆ. ದೇಶ ಅವರ ಕೈಯಲ್ಲಿ ಸುಭದ್ರವಾಗಿರಲಿದೆ ಎಂಬ ದೃಢವಾದ ವಿಶ್ವಾಸ, ನಂಬಿಕೆ ಮೋದಿ ಸರ್ಕಾರವನ್ನು ಗೆಲ್ಲಿಸಿದ ಮತದಾರರದ್ದು.
ಈ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದ ಗುರುತರ ಹೊಣೆಗಾರಿಕೆ ಮೋದಿ ಒಬ್ಬರದೇ ಅಲ್ಲ; ಅವರ ಸಂಪುಟ ಸದಸ್ಯರದ್ದು; ಅವರು ಪ್ರತಿನಿಧಿಸುವ ಬಿಜೆಪಿಯದ್ದು.
✍ ದು. ಗು. ಲಕ್ಷ್ಮಣ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.