ನವದೆಹಲಿ: ಹೊಸದಾಗಿ ರಚನೆಗೊಂಡಿರುವ ಎನ್ಡಿಎ ಸರ್ಕಾರದ ಮೊದಲ ಸಂಪುಟ ಸಭೆಯು ಶುಕ್ರವಾರ ಸಂಜೆ 5 ಗಂಟೆಗೆ ಜರುಗಲಿದೆ. ರಾಷ್ಟ್ರಪತಿ ಭವನದಲ್ಲಿ ಗುರುವಾರ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತು ಸಚಿವರುಗಳು ಪ್ರಮಾಣವಚನ ಸ್ವೀಕಾರ ಮಾಡಿದ ಮರುದಿನವೇ ಸಚಿವ ಸಂಪುಟ ಸಭೆಯನ್ನು ಏರ್ಪಡಿಸಲಾಗಿದೆ.
ಈ ಸಂಪುಟ ಸಭೆಯಲ್ಲಿ ಖಾತೆ ಹಂಚಿಕೆಯ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.
ಬಿಜೆಪಿಯ ಅಭೂತಪೂರ್ವ ಗೆಲುವಿನಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ, ಬಿಜೆಪಿಯ ಚಾಣಾಕ್ಯ ಎಂದೇ ಬಿಂಬಿತಗೊಂಡಿರುವ ಅಮಿತ್ ಶಾ ಅವರು ಕೂಡ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅವರಿಗೆ ಯಾವ ಖಾತೆ ಸಿಗಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಗರಿಗೆದರಿದೆ. ಇನ್ನು ಮೋದಿ ಅವರಿಗೆ ಅತ್ಯಂತ ನಿಕಟರಾಗಿದ್ದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಅವರು ಕೂಡ ಪ್ರಮಾಣವಚನ ಸ್ವೀಕಾರ ಮಾಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಹಿಂದಿನ ಸರ್ಕಾರದಲ್ಲಿ ಉತ್ತಮ ಖಾತೆಗಳನ್ನು ಹೊಂದಿದ್ದ ಸುಷ್ಮಾ ಸ್ವರಾಜ್, ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಮನೇಕಾ ಗಾಂಧಿ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಅವರಿಗೆ ಬೇರೆ ಮಹತ್ವದ ಜವಾಬ್ದಾರಿಗಳು ಸಿಗುವ ನಿರೀಕ್ಷೆ ಇದೆ.
ಗುರುವಾರ ಸಂಜೆ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಬಿಮ್ ಸ್ಟಿಕ್ ದೇಶಗಳ ನಾಯಕರುಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಸುಮಾರು 8000 ಮಂದಿ ಅತಿಥಿಗಳು ಭಾಗಿಯಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.