ಜಗತ್ತಿನ ಪ್ರಾಚೀನ ನಾಗರಿಕತೆಯಾದ ಭಾರತಕ್ಕೆ ತನ್ನ ಹಿರಿತನ, ಸಾಂಸ್ಕೃತಿಕ ವೈಶಿಷ್ಟ್ಯ ಹೆಮ್ಮೆಯಾಗಬೇಕಾಗಿತ್ತು. ಈ ದೇಶಕ್ಕೆ ಒಂದು ಮಹಾನ್ ಚರಿತ್ರೆ ಇದೆ, ಶ್ರೇಷ್ಠ ಸಂಸ್ಕೃತಿ ಇದೆ ಎನ್ನುವ ನಾಗರಿಕರ ಅರಿವು ಆತ್ಮಗೌರಕ್ಕೆ ಕಾರಣವಾಗಿ ರಾಷ್ಟ್ರದ ಭವಿಷ್ಯತ್ತಿನ ಪೀಳಿಗೆಗಳ ಅಭಿಮಾನದ ನಡಿಗೆಯ ರಾಜಪಥವಾಗಬೇಕಾಗಿತ್ತು. ಆದರೆ ನಮ್ಮ ಚರಿತ್ರೆಯ ಪಠ್ಯಪುಸ್ತಕಗಳಲ್ಲಿ, ವಿಶ್ವವಿದ್ಯಾಲಯಗಳ ಇತಿಹಾಸ ವಿಭಾಗಗಳ ಶೋಧನೆಗಳ ಸಾರಗಳಲ್ಲಿ, ಇಂಡಿಯನ್ ಹಿಸ್ಟರಿ ಕಾಂಗ್ರೆಸ್ನ ಸಮ್ಮೇಳನಗಳ ಕಾರ್ಯಸೂಚಿಗಳಲ್ಲಿ ‘ನಮಗೊಂದು ಅಸ್ಮಿತೆಯಿದೆ’ ಎನ್ನುವುದನ್ನೇ ಕಾಣಿಸದಂತೆ ಮಾಡುವ ಸಂಚು ನಮ್ಮ ದೇಶದಲ್ಲಿ ನಿರಂತರವಾಗಿ ಕ್ರಿಯಾಶೀಲವಾಗಿದೆ. ಚರಿತ್ರೆಯನ್ನು ವಿರೂಪಗೊಳಿಸಿ, ಕೆಡಿಸಿ ನಮ್ಮ ದಾರಿತಪ್ಪಿಸುವ ಚಚುವಟಿಕೆ ನಮ್ಮ ದೇಶದಲ್ಲಿ ನಡೆಯುತ್ತಿದೆ. ಈ ಜಾಲ ದಶಕಗಳಿಂದ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬೇರುಬಿಟ್ಟಿದೆ. ಹೊಸ ಕಥನಗಳನ್ನು ನಿರೂಪಿಸುವ, ವ್ಯಾಖ್ಯಾನಿಸುವ ವಿದ್ವಾಂಸರೆಂದು ಪರಿಗಣಿತವಾದ ಇತಿಹಾಸಕಾರರು ದೇಶದ ನೈಜ ಚರಿತ್ರೆಯನ್ನು ಕಟ್ಟಿಕೊಡುವವರಾಗಬೇಕಾಗಿತ್ತು. ಆದರೆ ಅಕಾಡೆಮಿಕ್ ವಲಯದಲ್ಲಿ ಗುರುತಿಸಲಾದ ಪ್ರತಿಷ್ಠಿತ ಇತಿಹಾಸಕಾರರು ನಿರ್ಧಿಷ್ಟ ಸೈದ್ಧಾಂತಿಕ ಪ್ರಣಾಳಿಕೆಯೊಂದಕ್ಕೆ ಕಟ್ಟುಬಿದ್ದು ಭಾರತೀಯ ಮನಸ್ಸುಗಳು ತಮ್ಮ ನೈಜ ವಾರಸಿಕೆಯನ್ನು ಅರಿಯದಂತೆ ತಡೆಯಾಗುತ್ತಾ ಬಂದರೆ? ಎನ್ನುವ ಅನುಮಾನ ದೇಶವನ್ನು ಕಾಡುತ್ತಿದೆ. ಮಾರ್ಕ್ಸ್ವಾದಿ ಐಡಿಯಾಲಜಿಯೇ ಚರಿತ್ರೆಯ ಮಾನದಂಡವೂ ಆಗಿ ಸಹಸ್ರಾರು ವರ್ಷಗಳ ಸಾಂಸ್ಕೃತಿಕ ಅಖಂಡತೆಯನ್ನು ಭಂಜಿಸುವ ವ್ಯವಸ್ಥಿತ ಕಾರ್ಯಾಚರಣೆ ಸದ್ದಿಲ್ಲದೇ ನಡೆದುಕೊಂಡು ಬಂದಿದೆ. ಭಂಜನೆಯೇ ಇತಿಹಾಸದ ಹೆಸರಿನಲ್ಲಿ ಮೆರೆಯಿತೆನ್ನುವುದೇ ದುರ್ದೈವದ ಸಂಗತಿ.
ವಿದೇಶಿ ಆಳ್ವಿಕೆಯಡಿಯಲ್ಲಿ ಭಾರತ ಸಿಲುಕಿದ್ದಾಗ ನಡೆದ ಚರಿತ್ರೆಯ ತಿರುಚುವಿಕೆಯ ಉದ್ದೇಶವನ್ನು ದೇಶ ಅರ್ಥಮಾಡಿಕೊಂಡಿದೆ. ತನ್ನತನವನ್ನು, ತನ್ನ ವಾರಸಿಕೆಯನ್ನು ಕಂಡುಕೊಂಡ ದೇಶ ಗುಲಾಮಿತನದಲ್ಲಿ ಇರಲು ಸಾಧ್ಯವಿಲ್ಲ. ಅದಕ್ಕಾಗಿ ಗುಲಾಮಿತನವೇ ನಮ್ಮ ಚರಿತ್ರೆ ಎಂಬಂತೆ ನಿರೂಪಿಸಲಾಯಿತು. ಅದಕ್ಕಾಗಿಯೇ ಆರ್ಯ ಆಕ್ರಮಣದ ಸಿದ್ಧಾಂತ, ಉತ್ತರ-ದಕ್ಷಿಣ ಬೇಧ ಸಿದ್ಧಾಂತಗಳನ್ನು ಹುಟ್ಟುಹಾಕಲಾಯಿತು. ಆದರೆ ಪರಕೀಯ ಸಂಕೊಲೆಯಿಂದ ಬಿಡಿಸಿಕೊಂಡು ಏಳು ದಶಕಗಳ ಬಳಿಕವೂ ನಾವು ನಮ್ಮತನವನ್ನು ಕಂಡುಕೊಳ್ಳುವ ಪ್ರಯತ್ನವನ್ನು ತೀವ್ರವಾಗಿ ಮಾಡಿಲ್ಲವೆಂದರೆ ಇದರ ಹೊಣೆಯನ್ನು ಯಾರು ಹೊರುವುದು? ‘ಭಾರತೀಯ ರಾಷ್ಟ್ರೀಯ ಅಸ್ಮಿತೆಯು ತನ್ನನ್ನು ತಾನು ಪ್ರಾಚೀನವೆಂದು ಗುರುತಿಸಿಕೊಳ್ಳುವ ಪ್ರಯತ್ನಕ್ಕೆ ಹಾಗೂ ಭಾರತೀಯ ಚರಿತ್ರೆಯು ಹಿಂದೂ ಸಾಂಸ್ಕೃತಿಕ ರಾಷ್ಟ್ರೀಯತೆಯ ಮೂಲವನ್ನು ಹೊಂದಿದೆ ಎನ್ನುವ ಅರಿವಿಗೆ’ ಇತಿಹಾಸಕಾರರ ಪ್ರತಿಕ್ರಿಯೆ ಏನು? ಓರ್ವ ಪ್ರತಿಷ್ಠಿತ ಇತಿಹಾಸಕಾರನೆಂದು ಗುರುತಿಸಲಾದ ಡಿ.ಎನ್.ಝಾ ಯಾವುದೇ ಅರ್ಥಪೂರ್ಣ ಆಧಾರಗಳೂ ಇಲ್ಲದೆಯೂ ಭಾರತಕ್ಕೆ ಮತ್ತು ಹಿಂದೂ ಧರ್ಮಕ್ಕೆ ಇರುವ ಪ್ರಾಚೀನತೆಯ ವಿರುದ್ಧ ವಾದಿಸಲು ಇಂಡಿಯನ್ ಹಿಸ್ಟರಿ ಕಾಂಗ್ರೆಸ್ನ ವೇದಿಕೆಯನ್ನು ನಿಸ್ಸಂಕೋಚವಾಗಿ ಬಳಸಿಕೊಳ್ಳುತ್ತಾರೆ ! ಅದೇ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯತೆಯು ಪ್ರಾಚೀನವಾದುದು ಎನ್ನುವ ಅಧ್ಯಯನಕಾರರ ಸಮರ್ಥನೆ ಹಿಂದೂ ಮೂಲಭೂತವಾದ ಎಂಬ ಟೀಕೆಗೆ ಒಳಗಾಗುತ್ತದೆ. ಭಾರತೀಯರು ಸಿಂದೂ – ಸರಸ್ವತಿ ನಾಗರಿಕತೆಯ ಕಾಲದಲ್ಲೇ ಶ್ರೇಷ್ಠವಾದ ಸಾಧನೆಯನ್ನು ಮಾಡಿದ್ದರು ಎನ್ನುವ ಸಕಾರಣವಾದ ಚರ್ಚೆಯನ್ನು ‘ರಾಷ್ಟ್ರೀಯತೆಯ ಗೀಳಾಗಿ’ ಕಾಣುವ ಎಡಪಂಥೀಯ ಇತಿಹಾಸಕಾರರು, ಭಾರತದ ಅಸ್ತಿತ್ವವು ಈ ದೇಶಕ್ಕೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ವಲಸಿಗರಾಗಿ ಬಂದವರಿಂದ ರೂಪುಗೊಂಡಿದೆ ಎನ್ನುವ ಮಾತನ್ನು ಸ್ವಯಂ ಉತ್ಪ್ರೇಕ್ಷೆ ಮತ್ತು ಉತ್ಸಾಹದಿಂದ ನಿರೂಪಿಸುತ್ತಾರೆ. ಅಂದರೆ ಭಾರತದ ಸಂಸ್ಕೃತಿ, ಹಿರಿಮೆಯ ಬಗ್ಗೆ ಮಾತನಾಡಿದರೆ ಅದು ‘ಕಲ್ಚರಲ್ ಜಿಂಗೋಯಿಸಂ’ ಆಗುತ್ತದೆ, ಅದನ್ನು ಭಗ್ನ ಗೊಳಿಸುವ ಬಗ್ಗೆ ಮಾತನಾಡಿದರೆ ಚರಿತ್ರೆಯ ವಸ್ತುನಿಷ್ಟತೆಯಾಗುತ್ತದೆ.
ಭಾರತೀಯ ಚರಿತ್ರೆಯ ನಿಗೂಢತೆಗಳನ್ನು ಬಿಡಿಸಿಕೊಂಡು ಹೋದಂತೆ ಗಾಢವಾಗಿ ಕಾಣಿಸಿಕೊಳ್ಳುವ ಹಿಂದೂ ಅಸ್ಮಿತೆಯನ್ನು ಒಪ್ಪಿಕೊಳ್ಳಲಾಗದ ಎಡಪಂಥೀಯ ಸೈದ್ಧಾಂತಿಕತೆಯು ಈ ಗುರುತುಗಳನ್ನೇ ‘ಅಸಂಗತ ತರ್ಕವಾಗಿ, ಕೋಮುವಾದಿ ವಿವರಣೆಯಾಗಿ’ ಬಿಂಬಿಸತೊಡಗುತ್ತದೆ. ಚರಿತ್ರೆಯ ನಿರೂಪಣೆಗಳು ಕಾಲಾತೀತವಾದುದಲ್ಲ. ಹೊಸ ಹೊಸ ಶೋಧನೆಗಳಿಂದ ಕಂಡುಕೊಳ್ಳುವ ಆಧಾರಗಳನ್ನು ಬಳಸಿಕೊಂಡು ನಿರೂಪಣೆಗಳನ್ನು ಅಪ್ಡೇಟ್ ಮಾಡಿಕೊಳ್ಳುತ್ತದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಚರಿತ್ರೆಯ ಎಲ್ಲಾ ನಿರೂಪಣೆಗಳು ಎಡಪಂಥೀಯ ಸೈದ್ಧಾಂತಿಕ ಚೌಕಟ್ಟಿನಲ್ಲೇ ನಡೆದ ಪರಿಣಾಮ ಇತಿಹಾಸ ವಸ್ತುನಿಷ್ಠವಾಗಿ ದಾಖಲಾಗಲಿಲ್ಲ. ಹೊಸ ಎವಿಡೆನ್ಸ್ಗಳು ಹಳೆಯ ತರ್ಕಗಳನ್ನು ಬದಲಾಯಿಸಲು ಒತ್ತಾಯಿಸುತ್ತದೆ. ಆದರೆ ನಮ್ಮ ದೇಶದಲ್ಲಿ ಈ ಹೊಸ ನಿರೂಪಣೆಯ ಪ್ರಯತ್ನಗಳೆಲ್ಲಾ ಕೋಮುವಾದಿ, ಕೇಸರೀಕರಣದ ಹೆಸರಿನಲ್ಲಿ ನಿಗ್ರಹಿಸಲ್ಪಟ್ಟಿದೆ. ಭಾರತೀಯ ಸಾಂಸ್ಕೃತಿಕ ಅಸ್ಮಿತೆ ಸಹಜವಾಗಿಯೇ ಹಿಂದೂ ಅಸ್ಮಿತೆಯೊಂದಿಗೆ ಸೇರಿಕೊಂಡಿದೆ. ಮೊಘಲ್ ಮತ್ತು ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದಲ್ಲಿ ಉಂಟಾದ ಬೌದ್ಧಿಕ ವಿಸ್ಮೃತಿ ನಮ್ಮ ಸಾಂಸ್ಕೃತಿಕ ಕೊಂಡಿಯನ್ನು ಹಿಂದು ನೆನಪಿನಿಂದ ಕಳಚಿಹಾಕುವ ಪ್ರಯತ್ನವನ್ನು ಮಾಡಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಎಡಪಂಥೀಯ ಸೈದ್ಧಾಂತಿಕತೆಯ ಹೆಸರಿನಲ್ಲಿ ಇದು ಮುಂದುವರಿಯಿತು. ಪರಿಣಾಮವಾಗಿ ‘ನಾವೊಂದು ಪ್ರಾಚೀನ ರಾಷ್ಟ್ರ’ ಎಂಬ ಸ್ಮರಣೆ ನಷ್ಟವಾಗಿ ‘ನಾವೊಂದು ನೂತನ ರಾಷ್ಟ್ರವಾಗುತ್ತಿದ್ದೇವೆ’ ಎಂಬ ಸಾಂಸ್ಕೃತಿಕ ಕುರುಡುತನದ ಸ್ಥಿತಿಗೆ ಬಂದು ನಿಂತಿತು. ಹಿಂದೂ ಎನ್ನುವುದಕ್ಕಿರುವ ಸಾಂಸ್ಕೃತಿಕ ಪ್ರಭೆಯನ್ನು, ಅದರ ವಿಸ್ತಾರವನ್ನು ಕುಬ್ಜಗೊಳಿಸಿ ಚರಿತ್ರಾಶಾಸ್ತ್ರದ ಹೆಸರಿನಲ್ಲಿ ನಿರಾಕರಿಸುತ್ತಾ ಬರಲಾಯಿತು. ಪ್ರಾಚೀನ ಗ್ರಂಥಗಳೂ ಸೇರಿದಂತೆ ಲಭ್ಯವಿರುವ ದಾಖಲೆಗಳನ್ನು, ಉಲ್ಲೇಖಗಳನ್ನು ಸಾಕ್ಷ್ಯರೂಪದಲ್ಲಿ ಸಂಶೋಧಕರು ಮುಂದಿರಿಸಿದರೆ, ವ್ಯವಸ್ಥಿತವಾಗಿ ಅವುಗಳನ್ನು ಸಾಕ್ಷ್ಯವಾಗುವ ಅವಕಾಶದಿಂದಲೇ ತಪ್ಪಿಸಲು ಕಂಡುಕೊಂಡ ದಾರಿ ಎಂದರೆ, ಅಂಥಹ ಗ್ರಂಥಗಳ, ದಾಖಲೆಗಳ ಪ್ರಾಚೀನತೆಯನ್ನೇ ನಿರಾಕರಿಸಿ ಅದರ ಕಾಲವನ್ನೇ ತಮಗನುಕೂಲವಾದ ಸಂದರ್ಭಕ್ಕೆ ಅನ್ವಯಿಸುವ ಅಥವಾ ಅಂಥಹ ಗ್ರಂಥಗಳ ಪ್ರಸಿದ್ಧಿಯನ್ನು ನಿರಾಕರಿಸುತ್ತಾ ಅವುಗಳು ಅಸ್ಪಷ್ಟ ದಾಖಲೆಗಳು ಎನ್ನುತ್ತಾ ಬರಲಾಯಿತು. ಹಾಗಾಗಿ ರಾಷ್ಟ್ರದ ನೈಜ ಸಾಕ್ಷ್ಯಗಳು ಇತಿಹಾಸ ರಚನೆಯ ಸಾಕ್ಷಿಗಳಾಗಲೆ ಇಲ್ಲ.
ಎಡಪಂಥೀಯ ವಲಯದ ಇತಿಹಾಸಕಾರರಿಗೆ ಹಿಂದೂ ಧರ್ಮದ ಅಸ್ತಿತ್ವವನ್ನು ಒಪ್ಪಿಕೊಳ್ಳುವುದೆ ಬಹು ಕಷ್ಟಕರವಾದ ಸಂಗತಿ. ಸಾಂಸ್ಕೃತಿಕ ಪ್ರಾಚೀನತೆಗೆ ವೇದಗಳನ್ನು ಪ್ರಾಮಾಣ್ಯವಾಗಿ ನೀಡಿದರೆ ವೇದಗಳ ಕಾಲಘಟ್ಟ ಪ್ರಾಚೀನತೆಯನ್ನು ಕಳೆದುಕೊಂಡು ಇತ್ತೀಚಿನದ್ದಾಗುತ್ತದೆ! ವೇದಗಳಿಗಿರುವ ಆದಿ ಸಾಹಿತ್ಯವೆಂಬ ಮನ್ನಣೆಯನ್ನೂ ನಿರಾಕರಿಸಲಾಗುತ್ತದೆ. ‘ಭಾರತ’ ಎನ್ನುವ ಪದವನ್ನು ರಾಷ್ಟ್ರದ ನೆಲೆಯದ್ದು ಎಂದು ಹೇಳಿದಾಗ ‘ಭಾರತ ಭೂ ಪ್ರದೇಶವು ಭರತ ಎನ್ನುವ ಸಣ್ಣ ಬುಡಕಟ್ಟು ವಾಸಿಸುತ್ತಿದ್ದ ಪ್ರದೇಶವೇ ಹೊರತು ಅಖಂಡ ಭಾರತದ ಜತೆಗೆ ಸಮೀಕರಿಸಲಾಗದು’ ಎನ್ನಲಾಗುತ್ತದೆ! ‘ಭರತವರ್ಷ’ ‘ಆರ್ಯಾವರ್ತ” ಜಂಬೂದ್ವೀಪ’ಗಳು ಭಾರತವಲ್ಲ !! ಯಾಕೆಂದರೆ ಅವು ಭೌಗೋಳಿಕವಾಗಿ ದಕ್ಷಿಣ ಭಾರತವನ್ನು ಒಳಗೊಂಡಿಲ್ಲವಂತೆ!!! ‘ಭಾರತೀಯಾಃ’ ಎನ್ನುವ ಉಲ್ಲೇಖವಿದ್ದರೂ ಅದು ಭಾರತ ಎನ್ನುವ ಪ್ರದೇಶದ ನಿವಾಸಿಗಳು ಎಂದು ಕಲ್ಪಿಸಲಾಗದು ಎನ್ನುವುದಷ್ಟೇ ಅಲ್ಲ, ‘ಭಾರತ’ ಎನ್ನುವ ಪರಿಕಲ್ಪನೆ ಹತ್ತೊಂಬತ್ತನೇ ಶತಮಾನದ ಅರವತ್ತರ ದಶಕದಲ್ಲಿ ನಿರ್ಮಿತವಾಯಿತು ಎನ್ನುವ ಈ ಚರಿತ್ರಕಾರರ ವಿವರಣೆಗಳು ಭಾರತೀಯರ ಭಾವನೆಯನ್ನು ನಿರಂತರವಾಗಿ ಭಗ್ನಗೊಳಿಸುತ್ತಾ ಹೋಗುವಂತಿದೆ.
ಹಿಂದೂ ಸ್ಮೃತಿಯನ್ನು ಭಂಜನೆ ಮಾಡುವುದಕ್ಕಾಗಿಯೇ ಹೊಂಚುಹಾಕುವ ಈ ಇತಿಹಾಸಕಾರರು ಎಲ್ಲಾ ಪ್ರಾಚೀನ ದಾಖಲೆಗಳನ್ನೂ ಒಡಕಿನ ರೂಪದಲ್ಲೇ ಮಂಡಿಸುತ್ತಾ ಹೋಗುತ್ತಾರೆ. ಹಿಂದೂ ಎನ್ನುವುದನ್ನು ವೈದಿಕ – ಅವೈದಿಕ, ಜೈನ- ವೀರಶೈವ, ಶೈವ -ವೈಷ್ಣವ, ಬೌದ್ಧ – ಶಂಕರ, ಆರ್ಯ-ದ್ರಾವಿಡ,ಉತ್ತರ -ದಕ್ಷಿಣ ಎನ್ನುವ ಪರಿಭಾಷೆಗಳ ಮೂಲಕ ಎಂದಿಗೂ ಹಿಂದೂ ಎನ್ನುವುದು ಇರಲೇ ಇಲ್ಲ ಎಂದೋ, ಅವುಗಳೆಂದಿಗೂ ಒಂದಾಗಿರಲಿಲ್ಲ ಎಂದೋ ಕಥನಗಳನ್ನು ಸೃಷ್ಟಿಸುವುದರಲ್ಲೇ ಮಗ್ನರಾಗಿದ್ದಾರೆ. ಭಾರತೀಯ ವೈಶಿಷ್ಟ್ಯವೆನ್ನಬಹುದಾದ ಭಿನ್ನ ವಿಚಾರಧಾರೆಗಳ ನಡುವಿನ ಸಹಜ ಸಂವಾದ – ಚರ್ಚೆಗಳನ್ನು ಮತೀಯ ಸಂಘರ್ಷ ಎಂದೂ, ಮತ ವಿಸ್ತಾರದ ಸಂಘರ್ಷ ಎಂಬಂತೆಯೂ ಬಿಂಬಿಸಲಾಗುತ್ತದೆ. ಪರಿಣಾಮವಾಗಿ ಹಿಂದೂ ಧರ್ಮದಲ್ಲಿ ಸಹಿಷ್ಣುಗುಣ ಎನ್ನುವುದು ಇರಲೇ ಇಲ್ಲ ಎಂಬಂತೆ ಚಿತ್ರಿಸಲಾಗುತ್ತದೆ. ಇಮ್ಯಾನುಯೆಲ್ ಕಾಂಟ್, ವಿಲಿಯಂ ಜೋನ್ಸ್ ಮೊದಲಾದ ಪಾಶ್ಚಾತ್ಯ ವಿದ್ವಾಂಸರೂ ಕೂಡ ಸಾಕಷ್ಟು ಅಧ್ಯಯನದಿಂದ ಕಂಡುಕೊಂಡಿದ್ದ ಹಿಂದೂಗಳ ಸಹಿಷ್ಣು ಗುಣವನ್ನು ಯಾವ ಆಧಾರಗಳೂ ಇಲ್ಲದೆಯೇ ನಿರಾಕರಿಸಲಾಗುತ್ತದೆ ಮತ್ತು ಇದಕ್ಕೆ ಎದುರಾಗಿ ಶಂಕರಾಚಾರ್ಯರನ್ನು ಬುದ್ಧನ ಶತ್ರುವಾಗಿಸಿ, ಶಂಕರಾಚಾರ್ಯರ ಪಂಥದೊಂದಿಗೆ ಅವರ ವಿಚಾರ ಸಾರಲು ಒಂದು ಮಿಲಿಟರಿ ಗುಂಪಿತ್ತು ಎನ್ನುತ್ತಾ, ವೈದಿಕ ಪಂಥೀಯರ ದೇವಾಲಯಗಳು ಶಸ್ತ್ರಸಹಿತ ಮಿಲಿಟರಿಯನ್ನು ಹೊಂದಿದ್ದು ಅವೈದಿಕರನ್ನು ಹಿಂಸಾತ್ಮಕವಾಗಿ ನಡೆಸಿಕೊಳ್ಳುತ್ತಿತ್ತು ಎನ್ನುವ, ದಕ್ಷನ ಕಥೆಯನ್ನು ಶೈವ ವೈಷ್ಣವ ಸಂಘರ್ಷದ ಕಥೆಯಾಗಿಸಿಕೊಳ್ಳುವ ಮೂಲಕ ಹಿಂದೂ ಧರ್ಮ ನಿರಂತರ ಅಸಹಿಷ್ಣುವಾಗಿತ್ತು ಮತ್ತು ಹಿಂಸೆಯ ಮೂಲಕವೇ ಅದು ಬೆಳೆದು ಬಂದಿದೆ ಎಂಬ ಇತಿಹಾಸವನ್ನು ರಚಿಸಲಾಗುತ್ತದೆ. ಆ ಮೂಲಕ ಹಿಂಸೆಯಿಂದಲೇ ಮತ ವಿಸ್ತಾರ ಮಾಡಿದ ಇಸ್ಲಾಂಗಿಂತ ಪೂರ್ವದಲ್ಲೇ ಹಿಂದೂಗಳು ಪರಸ್ಪರ ಮತವಿಸ್ತಾರಕ್ಕಾಗಿ ಹೊಡೆದಾಡಿಕೊಳ್ಳುತ್ತಿದ್ದರು ಎಂಬ ನಿಲುವಿಗೆ ಬರಲಾಗುತ್ತದೆ. ಹಿಂದೂ ಧರ್ಮದ ವಿಶ್ವಾತ್ಮಕ ತತ್ವಗಳನ್ನು, ಸಹಿಷ್ಣುಗುಣವನ್ನು ನಿರಾಕರಿಸುವ ಮೂಲಕ ಇತಿಹಾಸಕಾರರೊಳಗೆ ಮುಸುಕು ಹಾಕಿದ ಧಾರ್ಮಿಕ ಆಕ್ರಮಣಕಾರಿ ಮನೋಭಾವ ಇಲ್ಲಿ ನಿರಂತರವಾಗಿ ಕೆಲಸ ಮಾಡಿರುವುದನ್ನು ಗಮನಿಸಬಹುದು. ಈ ಮಾನಸಿಕತೆ ಮೊಘಲ್ ಅಥವಾ ಬ್ರಿಟಿಷ್ ಮಾನಸಿಕತೆಗಿಂತ ಭಿನ್ನವಲ್ಲ.
ಜಗತ್ತಿನ ಇತಿಹಾಸದಲ್ಲಿ ಭೌಗೋಳಿಕವಾಗಿ ತನ್ನನ್ನು ಮರು ಸ್ಥಾಪಿಸಿಕೊಂಡ ಇಸ್ರೇಲ್ ದೇಶ ಮತ್ತೆ ಹಿಬ್ರೂವಿಗೆ ಹೊರಳಿಕೊಂಡಾಗ ಇಸ್ರೇಲಿನ ಉತ್ಕೃಷ್ಟತೆ ಪ್ರಕಟವಾಗುತ್ತದೆ. ತನ್ನತನವನ್ನು ಕಂಡುಕೊಳ್ಳುತ್ತದೆ. ಆಫ್ರಿಕಾ ಮರಳಿ ತನ್ನ ಬೇರುಗಳಿಗೆ ಹಿಂತಿರುಗುವುದು ನಿರ್ವಸಾಹತೀಕರಣ (ಡಿಕಲೋನಿಯಲೈಝೇಷನ್) ಎಂಬ ಚಳವಳಿಯಾಗುತ್ತದೆ. ಈ ಎರಡೂ ದೇಶಗಳಲ್ಲಿ ಈ ಬಿಡುಗಡೆಯ ಪ್ರಕ್ರಿಯೆಯಲ್ಲಿ ಇತಿಹಾಸಕಾರರು ಮತ್ತು ಸಾಹಿತಿಗಳು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಮರಳಿ ತನ್ನ ಬೇರುಗಳನ್ನು ಹುಡುಕಿಕೊಳ್ಳುವ ಪ್ರಕ್ರಿಯೆಗೆ ಈ ಎರಡೂ ವರ್ಗ ದೊಡ್ಡ ತಡೆಯಾಗಿ ನಿಂತಿರುವುದು ವಿಪರ್ಯಾಸವೇ ಸರಿ. ಭಾರತ ಮರಳಿ ತನ್ನ ಬೇರುಗಳನ್ನು ಹುಡುಕಿಕೊಳ್ಳುವುದೆಂದರೆ ಹರಪ್ಪಾ, ಸಿಂದೂ, ಸರಸ್ವತೀ ನಾಗರಿಕತೆಗಳ ಮೂಲಗಳಿಂದ ಸಾಸ್ಕೃತಿಕ ವಿಸ್ತಾರದ ವಿವಿಧ ಆಯಾಮಗಳನ್ನು ಹುಡುಕಿಕೊಳ್ಳುತ್ತಾ ಹಿಂದೂ ಎನ್ನುವ ಹೆಮ್ಮೆಯನ್ನು ಮರಳಿ ಕಂಡುಕೊಳ್ಳುವ ಒಂದು ಸಾಂಸ್ಕೃತಿಕ ಚಳವಳಿ. ಈ ಅಭಿಮಾನ ಅಕಾಡಮಿಕ್ ವಲಯದ ಸಂಶೋಧನೆಗಳಲ್ಲಿ ಕಾಣಿಸಿಕೊಳ್ಳುವಂತಾಗಬೇಕು. ಹಿಂದೂ ಭಂಜನೆಯ ಸಂಚುಗಳ ಮೂಲ ಒಂದೆಡೆ ಎಡಪಂಥೀಯ ಚಿಂತಕ ವಲಯದಲ್ಲಿದ್ದರೆ, ಇನ್ನೊಂದೆಡೆ ಪಾಶ್ಚಾತ್ಯ ಮಿಷನರಿ ಪ್ರಾಯೋಜಿತವಾದ ಚಟುವಟಿಕೆಗಳಲ್ಲಿದೆ. ಇದನ್ನು ಅರಿತುಕೊಂಡು ಈ ಸಂಚುಕೋರ ಪಂಗಡಗಳಿಂದ ಅಕಾಡೆಮಿಕ್ ವಲಯವನ್ನು ಬಿಡುಗಡೆಗೊಳಿಸಿದರೆ ಹಿಂದೂ ಅಸ್ಮಿತೆ ನಮ್ಮ ಹೆಮ್ಮೆಯಾಗುತ್ತದೆ. ಭಾರತೀಯತೆಯ ಪ್ರಾಚೀನತೆ ನಮ್ಮ ಅಭಿಮಾನವಾಗುತ್ತದೆ.
✍ ಡಾ. ರೋಹಿಣಾಕ್ಷ ಶಿರ್ಲಾಲು
ಕನ್ನಡ ಉಪನ್ಯಾಸಕರು
ವಿವೇಕಾನಂದ ಕಾಲೇಜು, ನೆಹರು ನಗರ ಪುತ್ತೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.