ಆಗ್ರಾ: ಪ್ರವಾಸಕ್ಕೆ ತೆರಳುವ ತಾಯಂದಿರಿಗೆ ತಮ್ಮ ಪುಟಾಣಿ ಮಗುವಿನ ಹಸಿವನ್ನು ತಣಿಸುವುದೇ ಒಂದು ದೊಡ್ಡ ಸವಾಲಿನ ಕೆಲಸವಾಗುತ್ತದೆ. ಜನಜಂಗುಳಿಯ ನಡುವೆ ಸ್ತನ್ಯಪಾನ ಮಾಡಿಸಲು ಖಾಸಗಿ ಜಾಗವನ್ನು ಹುಡುಕುವುದು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿಗಳಿವೆ. ಆದರೆ ಇನ್ನು ಮುಂದೆ ಅಂತಹ ಸಂಕಷ್ಟ ಎದುರಾಗದಂತೆ ಕ್ರಮಗಳನ್ನು ತೆಗೆದುಕೊಳ್ಳಲು ಪುರಾತತ್ವ ಇಲಾಖೆ ಮುಂದಾಗಿದೆ. ತಾಜ್ ಮಹಲ್, ಫತೇಪುರ್ ಸಿಕ್ರಿ, ಆಗ್ರಾ ಕೋಟೆಗಳಲ್ಲಿ ಎದೆಹಾಲುಣಿಸಲು ಪ್ರತ್ಯೇಕ ಕೊಠಡಿಗಳನ್ನು ರಚನೆ ಮಾಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ಭಾರತೀಯ ಪುರಾತತ್ವ ಇಲಾಖೆ ಸುಪರಿಂಟೆಂಡೆಂಟ್ ವಸಂತ್ ಸರ್ವಂಕರ್ ಅವರು, “ಪ್ರವಾಸಿ ತಾಣಗಳಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು ಪರದಾಡುತ್ತಿರುತ್ತಾರೆ. ಜನಜಂಗುಳಿ ಜಾಸ್ತಿಯಿದ್ದಾಗ ಈ ಸಮಸ್ಯೆ ಇನ್ನೂ ಹೆಚ್ಚಾಗಿರುತ್ತದೆ. ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿರುವ ನಾವು ತಾಯಿ ಮಗುವಿಗಾಗಿ ಪ್ರತ್ಯೇಕ ಜಾಗದ ವ್ಯವಸ್ಥೆಯನ್ನು ಕಲ್ಪಿಸಲು ನಿರ್ಧರಿಸಿದ್ದೇವೆ” ಎಂದಿದ್ದಾರೆ.
“ಭಾರತದಲ್ಲಿಯೇ ಮೊದಲ ಬಾರಿಗೆ ಇಂತಹ ವ್ಯವಸ್ಥೆಯನ್ನು ನಾವು ಮಾಡುತ್ತಿದ್ದೇವೆ” ಎಂದಿದ್ದಾರೆ.
ಮೂರು ಪ್ರಮುಖ ಪ್ರವಾಸಿ ತಾಣಗಳಲ್ಲಿ ಈ ವ್ಯವಸ್ಥೆಯನ್ನು ಶೀಘ್ರ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ. ಪ್ರತ್ಯೇಕ ಕೊಠಡಿ ನಿರ್ಮಾಣವಾಗಲಿದ್ದು, ಇದರಲ್ಲಿ ಬೆಳಕಿನ ವ್ಯವಸ್ಥೆ, ಕುರ್ಚಿ, ಮೇಜು, ಫ್ಯಾನ್ ಇರಲಿದೆ ಎಂದಿದ್ದಾರೆ.
ಭಾರತದಲ್ಲಿ ಬಹಿರಂಗ ಸ್ಥಳಗಳಲ್ಲಿ ಮಗುವಿಗೆ ಹಾಲುಣಿಸಲು ಯಾವುದೇ ನಿರ್ಬಂಧಗಳಿಲ್ಲ. ಹಿಂದಿನಿಂದಲೂ ತಾಯಂದಿರು ಮುಕ್ತವಾಗಿಯೇ ಹಾಲುಣಿಸುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ ಬದಲಾದ ಸನ್ನಿವೇಶದಲ್ಲಿ ವಿಕಾರ ಮನಸ್ಥಿತಿಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಾಯಂದಿರಿಗೆ ಹಾಲುಣಿಸಲು ಸುರಕ್ಷಿತ ನೆಲೆ ಕಲ್ಪಿಸುವುದು ಅತ್ಯಂತ ಅವಶ್ಯಕ ಎನಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.