ಇತಿಹಾಸ ನಾಗರಿಕತೆಯೊಂದರ ಪೂರ್ವ ಬದುಕಿನ ಕನ್ನಡಿ ಇದ್ದಂತೆ. ಶ್ರೇಷ್ಟ ನಾಗರಿಕತೆಯೊಂದರ ಇತಿಹಾಸವು ಅದರ ಮುಂದಿನ ಪೀಳಿಗೆಗಳ ಅಭಿಮಾನ ಹೆಮ್ಮೆಗೆ ಕಾರಣವಾಗುತ್ತದೆ. ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯುಳ್ಳ ಭಾರತದ ಇತಿಹಾಸ ಇಂದಿಗೂ ಪ್ರೇರಣಾದಾಯಿಯಾಗಿದೆ. ಹಲವು ಶತಮಾನಗಳ ಪರಕೀಯ ಆಳ್ವಿಕೆ, ಸಂಸ್ಕೃತಿಯ ಮೇಲೆ ನಡೆದ ದಾಳಿಯ ನಡುವೆಯೂ ಈ ದೇಶದ ಸಂಸ್ಕೃತಿ ಜೀವಂತವಾಗಿ ಉಳಿದುಕೊಂಡು ಬಂದದ್ದು ಇದರ ಹಿರಿಮೆಗೆ ಸಾಕ್ಷಿ. ಆದರೆ ಪರಕೀಯ ಆಳ್ವಿಕೆ ನಮ್ಮಲ್ಲಿ ಉಂಟು ಮಾಡಿದ ವಿಸ್ಮೃತಿಗೆ ನಮ್ಮ ಇತಿಹಾಸದ ನಿಜರೂಪ ಮರೆಗೆ ಸರಿದಿದೆ. ಸ್ವಾತಂತ್ರ್ಯವನ್ನು ಪಡೆದ ಮೇಲೂ ನಮ್ಮ ಬುದ್ಧಿಗೆ ಕವಿದಿದ್ದ ಈ ವಿಸ್ಮೃತಿಯ ಪರದೆ ಸರಿಯಲೇ ಇಲ್ಲ. ನಮ್ಮದೇಶದ ಪ್ರತಿಷ್ಟಿತ ಸಂಶೋಧನಾ ಸಂಸ್ಥೆಗಳಲ್ಲಿ ಕುಳಿತು ದೇಶದ ಭವಿಷ್ಯದ ಪೀಳಿಗೆಗಳನ್ನು ದಾರಿತಪ್ಪಿಸಿದ ವಿದ್ವಂಸಕ ಬುದ್ಧಿಜೀವಿಗಳ ಪಾತ್ರವೂ ಇದೆ. ಕೆಲವು ಸ್ವಾಭಿಮಾನಿಗಳು ದಿಟ್ಟವಾಗಿ ಈ ದುಷ್ಟಕೂಟವನ್ನು ಎದುರಿಸಿ ಸತ್ಯಕ್ಕೆ ನಿಷ್ಠರಾಗಿ ಬದುಕಿದ್ದಾರೆ.
ನಮ್ಮ ದೇಶದ ಒಂದಿಡೀ ಪೀಳಿಗೆಯನ್ನು, ಸಮುದಾಯಗಳನ್ನು ಬ್ರೈನ್ವಾಶ್ ಮೂಲಕವೇ ವಿನಾಶದ ಕಡೆಗೆ ಕೊಂಡೊಯ್ದ ಮಾನವ ಬಾಂಬರ್ಗಳಂತಿರುವ ಅಕಡೆಮಿಕ್ ವಿದ್ವಾಂಸರ ನಡುವೆ ತಾನಿದ್ದರೂ, ಅವರುಗಳ ಪೊಳ್ಳು ಬೆದರಿಕೆಗೆ ಬಗ್ಗದೆ ಇತಿಹಾಸದ ಕಾಲಗರ್ಭದೊಳಗೆ ಮರೆಯಾಗಿದ್ದ ಸತ್ಯಗಳನ್ನು ಬಗೆದು ತೆಗೆದು ತೋರಿಸಿದ ಓರ್ವ ಸ್ವಾಭಿಮಾನಿ ಆರ್ಕಿಯಾಲಜಿಸ್ಟ್ ಕೆ.ಕೆ.ಮಹಮ್ಮದ್ ಕೂಡ ಒಬ್ಬರು. ಅವರ ಬದುಕಿನ ಪಯಣದ ಆತ್ಮಕಥನವೇ ’ನಾನೆಂಬ ಭಾರತೀಯ’ ಕೃತಿ. ವಿಶ್ವವಿದ್ಯಾಲಯಗಳ ಪೀಠಗಳಲ್ಲಿ, ಪ್ರಾಕ್ತನಶಾಸ್ತ್ರ ಇಲಾಖೆಗಳಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಲವು ದಶಕಗಳಿಂದ ಗಟ್ಟಿಯಾಗಿಯೇ ಬೇರೂರಿದ್ದ ’ ಎಮಿನೆಂಟ್ ಹಿಸ್ಟೋರಿಯನ್’ಗಳೆಂದು ಹೆಸರಾದವರೇ ಇಲ್ಲಿ ತಲೆ-ತಲೆಮಾರುಗಳ ತಲೆ ಕೆಡಿಸಿದ ಅಕೆಡೆಮಿಕ್ ಭಯೋತ್ಪಾದಕರು. ಅಧಿಕಾರ, ಪ್ರಭಾವ, ಧನಸಹಾಯ, ಮಾಧ್ಯಮಗಳ ಬೆಂಬಲವನ್ನು ಬಳಸಿಕೊಂಡು ಈ ದೇಶದಲ್ಲಿ ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚುವ ಅಥವಾ ತಿರುಚಿದ ಇತಿಹಾಸಕ್ಕೆ ಬೇಕಾದಂತೆ ಆಧಾರಗಳನ್ನು ಸೃಷ್ಟಿಸುವ ಭಯಾನಕ ಕಲೆಯನ್ನು ಕರಗತಮಾಡಿಕೊಂಡಿದ್ದ ವಿದ್ವನ್ಮಣಿಗಳ ನಡುವೆ, ಅವರೆಲ್ಲರ ಬೆದರಿಕೆ, ವರ್ಗಾವಣೆಯ ಚಿತಾವಣೆ, ಕಾರಣ ಕೇಳುವ ನೋಟಿಸ್ಗಳನ್ನು ಎದುರಿಸುತ್ತಲೇ ಎತ್ತರಕ್ಕೆ ಬೆಳೆದ ಆರ್ಕಿಯಾಲಜಿಸ್ಟ್ ಕೆ.ಕೆ.ಮಹಮ್ಮದ್ಅವರು ಸಾಂಸ್ಕೃತಿಕ ಭಾರತಕ್ಕೆ ಕವಿದ ಗ್ರಹಣ ಬಿಡಿಸಿದ ಶೂರ. ಅಂಧಕಾರ ಕಳೆದು ಹೊಸ ಬೆಳಕಿನ ಕಿಂಡಿಗಳನ್ನು ತೋರಿಸಿದವರು. ವೃತ್ತಿ ಬದುಕಿನ ಪರ್ಯಂತ ಅಧಿಕಾರಸ್ಥರ ಕೆಂಗಣ್ಣಿಗೆ ಗುರಿಯಾದರೂ, ಯಾವ ಸಂಶೋಧನೆಗಳಿಗೆ ದೇಶವೆ ಹೆಮ್ಮೆ ಪಟ್ಟು ಅಭಿಮಾನದಿಂದ ಕೀರ್ತಿಭಾಜನರನ್ನಾಗಿ ಮಾಡಬೇಕಾಗಿತ್ತೋ ಅಂತಹ ವ್ಯವಸ್ಥೆ ತನ್ನನ್ನು ದಮನಿಸಿದಾಗಲೂ ಸತ್ಯಕ್ಕೆ ವಿಮುಖವಾಗದ ಆದರ್ಶವಾದಿ ಕೆ.ಕೆ.ಮಹಮ್ಮದ್.
ಮಹಮ್ಮದ್ ನಿರಂತರವಾಗಿ ಸತ್ಯದ ಪ್ರತಿಪಾದನೆಗಾಗಿ ಕಮ್ಯುನಿಸ್ಟ್ ಇತಿಹಾಸಕಾರರೊಡನೆ, ಇಸ್ಲಾಂ ಮೂಲಭೂತವಾದಿಗಳೊಡನೆ, ಬಲಪಂಥೀಯ ಎಕ್ಸ್ಟ್ರಿಮಿಸ್ಟ್ಗಳ ಜತೆಗೆ ಹೋರಾಡುತ್ತಲೇ ಬರಬೇಕಾಯಿತು. ಕೃತಿಯ ತುಂಬಾ ಅಂತಹ ನೆನಪುಗಳೇ ತುಂಬಿಕೊಂಡಿದೆ. ಭಾರತೀಯ ಇತಿಹಾಸ ಅಧ್ಯಯನಕ್ಷೇತ್ರದಲ್ಲಿ ದೊಡ್ಡ ವಿದ್ವಾಂಸನೆಂದು ಕಮ್ಯುನಿಸ್ಟ್ ಒಲವಿನ ವಿದ್ವಾಂಸರಿಂದ ಮೆಚ್ಚುಗೆ ಪಡೆದ ಇರ್ಫಾನ್ ಹಬೀಬ್ ಎಂಬ ಎಡಪಂಥೀಯ ಇತಿಹಾಸಕಾರನ ಕುಯುಕ್ತಿಗಳ ಚಿತ್ರಣದೊಂದಿಗೆ ಈ ಕೃತಿಯ ಮುಖ್ಯ ಭಾಗ ಆರಂಭಗೊಳ್ಳುತ್ತದೆ. ಕಮ್ಯುನಿಸ್ಟ್ ಸಿದ್ಧಾಂತವನ್ನು ಒಪ್ಪದ ಯಾರನ್ನಾದರೂ ನಿರ್ಧಯವಾಗಿಯೇ ಮಟ್ಟ ಹಾಕುತ್ತಿದ್ದ ಹಬೀಬ್, ಭೂ ಉತ್ಖನನ ನಡೆಸುತ್ತಿದ್ದ ಮಹಮ್ಮದ್ ಅವರನ್ನು ತುಳಿಯಲು ಅವರ ಸಂಶೋಧನೆಯ ಫಲಿತವನ್ನೆ ಯಾವ ಆಧಾರಗಳೂ ಇಲ್ಲದಿದ್ದರೂ ನಿರಾಕರಿಸಿದ್ದರು. ಇತಿಹಾಸದ ಅಧ್ಯಯನದಲ್ಲಿ ತಮಗಿಂತ ಭಿನ್ನದಾರಿಯ ಸ್ವತಂತ್ರ ಚಿಂತನೆಯನ್ನು ಎಂದಿಗೂ ಸಹಿಸದ ಈ ಕಮ್ಯುನಿಸ್ಟ್ ವಿಚಾರಧಾರೆ, ತಾನು ಒಪ್ಪದ ವಿಚಾರವಂತರನ್ನು ಜಾತೀಯವಾದಿಗಳೆಂದು ಕರೆದು ಅವಮಾನಿಸುತ್ತಾ ಮತ್ತೊಂದೆಡೆ ಅದೇ ವ್ಯಕ್ತಿ ಅಧಿಕಾರದ ಲಾಭಕ್ಕಾಗಿ ಅವರ ಗುಂಪಿಗೆ ಸೇರಿದ ಕೂಡಲೇ ಜಾತ್ಯತೀತ ಎಂಬ ಅರ್ಹತೆಯನ್ನು ಪಡೆದುಕೊಳ್ಳುತ್ತಿದ್ದ ! ICHR ಅಧ್ಯಕ್ಷ ಸ್ಥಾನವನ್ನು ವಹಿಸಿದ್ದಾಗಲೇ ಬಾಬರಿ ಮಸೀದಿಯ ಪರವಾದ ಗುಂಪಿನ ವಕ್ತಾರಿಕೆಯನ್ನು ವಹಿಸಿದ್ದ ಹಬೀಬ್ ಬೌದ್ಧಿಕ ವಲಯದಲ್ಲಿ ಜಾತ್ಯಾತೀತನಾಗಿ ಕಾಣಿಸಿಕೊಳ್ಳುವ ವೈರುಧ್ಯವನ್ನು ಕೃತಿ ವಿಡಂಬಿಸುತ್ತದೆ.
ಚರಿತ್ರೆಯನ್ನು ನೋಡಬೇಕಾದ ದೃಷ್ಟಿಕೋನದ ಬಗ್ಗೆ ಈ ಕೃತಿಕಾರರು ಮಾಡುವ ಚರ್ಚೆ ಗಮನಾರ್ಹವಾದುದು. ಒಂದೆಡೆ ಎಡಪಂಥೀಯ ಇತಿಹಾಸಕರರು ಭಾರತೀಯ ಪ್ರಾಚೀನ ಚರಿತ್ರೆಯನ್ನು ಶೋಷಣೆ, ಅಪಮಾನ, ಅನಾಗರಿಕತೆಯ ಚರಿತ್ರೆ ಎಂಬಂತೆ ಚಿತ್ರಿಸುತ್ತಾ ಪ್ರಾಚೀನ ಕಾಲ ಅಂಧಕಾರದ ಕಾಲವೆಂಬಂತೆ ನಿರೂಪಿಸುತ್ತಾರೆ. ಈ ಕಾರಣದಿಂದಾಗಿಯೇ ಶಿಕ್ಷಿತ ಭಾರತೀಯರಿಗೆ ತಮ್ಮ ಪೂರ್ವಜರ ಚರಿತ್ರೆ ಅಭಿಮಾನ ಹೆಮ್ಮೆಯನ್ನು ಹುಟ್ಟಿಸುವ ಬದಲು ಅಪಮಾನದ ಸಂಕೇತವಾಗಿಸಿ ತಲೆತಗ್ಗಿಸುವಂತೆ ಮಾಡಿದೆ. ಆದರೆ ಮಹಮ್ಮದ್ ಅವರು ಇದಕ್ಕಿಂತ ಭಿನ್ನವಾಗಿ ನಮ್ಮ ಪ್ರಾಚೀನ ಸ್ಮಾರಕ-ಪಳೆಯುಳಿಕೆಗಳು ಪ್ರತಿಯೊಬ್ಬ ಭಾರತೀಯನ ಸಾಂಸ್ಕೃತಿಕ ಒಲವಿನ ಪ್ರತಿಬಿಂಬ ಎಂದು ಭಾವಿಸುತ್ತಾರೆ. ಶ್ರೀರಾಮ, ಶ್ರೀಕೃಷ್ಣನನ್ನು ತಮ್ಮ ಧರ್ಮದಲ್ಲಡಕಗೊಳಿಸದ ಮುಸಲ್ಮಾನರೂ, ದಾರಾಷುಕು, ಮಿರ್ಜಾಗಾಲೀಬ್ ಇವರುಗಳನ್ನು ಅಂಗೀಕರಿಸದ ಹಿಂದೂಗಳೂ ಪರಿಪೂರ್ಣ ಭಾರತೀಯರೆನಿಸಲಾರರು ಎನ್ನುತ್ತಾರೆ. ದೌರ್ಭಾಗ್ಯವಶಾತ್ ಕಮ್ಯುನಿಸ್ಟ್ ಇತಿಹಾಸಕಾರರು ಭಾರತೀಯರೊಳಗೆ ಸಹಜವಾಗಿಯೇ ಸಿದ್ಧಿಸಿದ್ದ ಭಾವೈಕ್ಯತೆಯನ್ನು ಕೆಡಿಸಿ ಕೋಮುದೃಷ್ಟಿಯಿಂದ ಚರಿತ್ರೆಯನ್ನು ನಿರೂಪಿಸಿದ ಅಪಾಯಯಕಾರಿ ವಿದ್ಯಮಾನವನ್ನು ಬಯಲುಗೊಳಿಸುತ್ತಾರೆ. ಹಿಂದೂ ದೇಗುಲಗಳ ಪೂಜಾ ಮೂರ್ತಿಗಳನ್ನು ಛಿದ್ರ ಮಾಡಿದ ನಿದರ್ಶನಗಳು ಕಣ್ಮುಂದಿದ್ದರೂ, ಈ ಇತಿಹಾಸಕಾರರು ಮಹಮ್ಮದ್ ಘಜನಿ, ಮಹಮ್ಮದ್ಗೋರಿ, ಔರಂಗಜೇಬ್ ಮೊದಲಾದವರು ಹಿಂದೂ ದೇಗುಲಗಳನ್ನು ಆಕ್ರಮಿಸಿದ್ದು ಬರಿಯ ಸಂಪತ್ತಿನ ಲೂಟಿಗಾಗಿ ಹೊರತು ಮತೀಯ ಕಾರಣಕ್ಕಾಗಿ ಅಲ್ಲ ಎನ್ನುವ ವಾದ, ಸುಳ್ಳು ನಿರೂಪಣೆಗಳಿಂದ ಮುಸ್ಲಿಂ ಮೂಲಭೂತವಾದಿಗಳನ್ನು ತೃಪ್ತಿಪಡಿಸಲಾರಂಬಿಸಿದ ಇತಿಹಾಸಕಾರರ ಕುಯುಕ್ತಿಗಳನ್ನು ದಾಖಲೆಗಳ ಸಹಿತವಾಗಿ ಮುಂದಿಡುತ್ತಾರೆ. ಕುತುಬ್ ಮಿನಾರ್ ಸಮೀಪದ ಮಸೀದಿ ನಿರ್ಮಾಣಕ್ಕಾಗಿ 27 ಹಿಂದೂದೇಗುಲದ ಭಾಗಗಳನ್ನು ಬಳಸಿರುವ ದಾಖಲೆಗಳು ಮಸೀದಿಯಲ್ಲೇ ದೊರೆತರೂ ಒಪ್ಪಲಾಗದ ದಾರ್ಷ್ಟ್ಯ ಕಮ್ಯುನಿಸ್ಟ್ ಇತಿಹಾಸಕಾರರಲ್ಲಿದೆ ಎನ್ನುತ್ತಾರೆ. ಚರಿತ್ರೆಯ ತಪ್ಪುಗಳನ್ನು ತಪ್ಪು ಎಂದೂ ಒಪ್ಪಲಾಗದ ಮನಸ್ಥಿತಿಯನ್ನು ಕಮ್ಯುನಿಸ್ಟ್ ಸಿದ್ಧಾಂತದಡಿಯಲ್ಲಿ ನಿರ್ಮಿಸಲಾಗಿದ್ದು, ಮಾರ್ಕಿಸ್ಟ್ ಇತಿಹಾಸಗಾರರು ಉರುಳಿಸಿದ ದಾಳಕ್ಕೆ ಸೌಮ್ಯವಾದಿ ಮುಸಲ್ಮಾನರೂ ಸೇರಿದಂತೆ ಇಡೀ ಮುಸ್ಲಿಂ ಜನಾಂಗವೇ ಸಿಲುಕಿ ನರಳಾಡುವಂತಾಗಿದೆ ಎನ್ನುವಾಗ ನಮ್ಮ ದೇಶದ ವರ್ತಮಾನದ ಚಿತ್ರಣವೆಲ್ಲವೂ ಕಣ್ಮುಂದೆ ಒಮ್ಮೆ ಹಾದು ಹೋದಂತಾಗುತ್ತದೆ.
ಆಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ಅಧ್ಯಯನಕ್ಕೆ ನಿಯುಕ್ತರಾದಾಗ ಅಲ್ಲಿ ಹಿಂದೂ ದೇಗುಲಗಳ ಅನೇಕ ಶಿಲ್ಪಕೆತ್ತನೆಗಳನ್ನು ಗುರುತಿಸಿ ಇದರ ಆಧಾರದಲ್ಲೇ ಆ ತಾಣದಲ್ಲಿ ಮಸೀದಿಯು ನಿರ್ಮಾಣವಾಗುವ ಮೊದಲು ದೇಗುಲವಿತ್ತೆನ್ನುವುದನ್ನು ಪ್ರತಿಪಾದಿಸುತ್ತಾ, ಹಿಂದೂಗಳಿಗೆ ಬಿಟ್ಟುಕೊಡಬೇಕೆನ್ನುವ ನಿಲುವು ತಾಳುತ್ತಾರೆ. ಆದರೆ ವಾಮಪಂಥೀಯ ಇತಿಹಾಸಜ್ಞರು ಮುಸ್ಲಿಂ ತೀವ್ರವಾದಿಗಳಿಗೆ ಬೆಂಬಲವಾಗಿ ಮಸೀದಿಯನ್ನು ಬಿಟ್ಟುಕೊಡದಂತೆ ಪಟ್ಟುಹಿಡಿದದ್ದು ಭಾರತೀಯ ಚರಿತ್ರೆಯಲ್ಲಿ ದೌರ್ಭಾಗ್ಯಕರ ಸಂಗತಿ ಎನ್ನುತ್ತಾರೆ. ಜೆ.ಎನ್.ಯು.ವಿನ ವಾಮಪಂಥೀಯ ಇತಿಹಾಸಕಾರರಾದ ಎಸ್.ಗೋಪಾಲ್, ರೋಮಿಲ್ಲಾಥಾಪರ್, ಬಿ.ಎಸ್. ಚಂದ್ರ ಮೊದಲಾದವರುಗಳೆಲ್ಲಾ ಈ ಸಮಸ್ಯೆಯನ್ನು ಉಲ್ಬಣಗೊಳಿಸಲು ಹೂಡಿದ ಸಂಚನ್ನು ನಿರೂಪಿಸುವಾಗ, ದೇಶದೆಲ್ಲೆಡೆ ಆಯೋಧ್ಯೆ-ಬಾಬರಿ ಮಸೀದಿ ಪ್ರಕರಣದಲ್ಲಿ ನೂರಾರು ಅಮಾಯಕರು ಸಾವಿಗೊಳಗಾಗಲು ಕಾರಣರಾದ ಸಂಚುಕೋರರು ಯಾರು ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ. ಭೂಉತ್ಖನನದ ದಾಖಲೆಗಳ ಆಧಾರದಲ್ಲಿ ಅಲ್ಲಿ ಮಂದಿರವೇ ಇತ್ತು ಎನ್ನುವುದನ್ನು ಪ್ರತಿಪಾದಿಸಲು ಹೋಗಿ ಉದ್ಯೋಗದಿಂದಲೇ ಸಸ್ಪೆಂಡ್ ಆಗುವ ಹಂತ ತಲುಪಿ, ಕೊನೆಗೆ ವರ್ಗಾವಣೆ ಶಿಕ್ಷೆಯೊಂದಿಗೆ ದಂಡಿಸಲ್ಪಡುತ್ತಾರೆ !!
ಭಾರತದಲ್ಲಿ ಮಾತ್ರ ನಿಜವಾದ ಜಾತ್ಯಾತೀತತೆ ಇರುವುದು.ಅದೂ ಹಿಂದೂಗಳು ಇಲ್ಲಿ ಬಹುಸಂಖ್ಯಾತರಾಗಿರುವುದರಿಂದ ಸಾಧ್ಯವಾದದ್ದು. ಒಂದು ವೇಳೆ ಭಾರತ ಮುಸ್ಲಿಂ ಬಾಹುಳ್ಯದ ರಾಷ್ಟ್ರವಾಗಿದ್ದಲ್ಲಿ ಇದು ಜಾತ್ಯಾತೀತ ರಾಷ್ಟ್ರವೇ ಆಗಿರುತ್ತಿರಲಿಲ್ಲ ಎನ್ನುತ್ತಾರೆ. ಹಿಂದೂಗಳು ಮುಸ್ಲಿಂ ಮೂಲಭೂತವಾದಿತನದ ವಿರುದ್ಧ ಸಿಡಿದೇಳುವ ಪ್ರವೃತ್ತಿ ಪ್ರತಿಭಟನೆಯ ಸ್ವರೂಪದ್ದೇ ಹೊರತು ದೌರ್ಬಲ್ಯವಲ್ಲ. ಹಿಂದೂಗಳ ಔದಾರ್ಯದ ಗುಣವನ್ನೂ, ವರ್ತಮಾನದಲ್ಲಿ ಮುಸ್ಲಿಂ ಸಮುದಾಯದಲ್ಲಿ ತಲೆ ಎತ್ತುತ್ತಿರುವ ಮೂಲಭೂತವಾದಿತನವನ್ನೂ ತೌಲನಿಕವಾಗಿ ವಿಶ್ಲೇಷಿಸುತ್ತಾರೆ. ಒಬ್ಬ ಮುಸಲ್ಮಾನನಿಗೆ ಮಕ್ಕಾ ಮದೀನಾಗಳು ಎಷ್ಟು ಪವಿತ್ರ ಕ್ಷೇತ್ರಗಳೋ, ಹಿಂದೂಗಳಿಗೆ ರಾಮಜನ್ಮಭೂಮಿ ಆಯೋಧ್ಯೆ ಕೂಡ ಪವಿತ್ರವಾಗಿದೆ. ಆಯೋಧ್ಯೆಯನ್ನು ಮರಳಿ ಕೇಳುವ ಹಿಂದೂಗಳ ನ್ಯಾಯಯುತವಾದ, ಹೃದಯಂತರಾಳದ ಬೇಡಿಕೆಯನ್ನು ಮುಸ್ಲಿಮರು ಮನ್ನಿಸಬೇಕು. ಯಾಕೆಂದರೆ ಆಯೋಧ್ಯೆಯ ಭೂಮಿಯೊಂದಿಗೆ ಪ್ರವಾದಿ ಮಹಮ್ಮದ್ ಅವರಿಗಾಗಲೀ, ಸಹಾಬಿಗಳೊಂದಿಗಾಗಲಿ, ಔಲಿಯಾಗಳಿಗಾಗಲೀ ಯಾವುದೇ ಸಂಬಂಧವಿಲ್ಲ. ಕೇವಲ ಒಂದು ಕಾಲದ ರಾಜ ಬಾಬರ್ಗಷ್ಟೇ ನಂಟಿರುವ ಸ್ಥಳವಾಗಿದ್ದು, ಅದಕ್ಕಾಗಿ ಹಿಂದೂಗಳ ಜತೆಗೆ ವೈರತ್ವವನ್ನು ಕಟ್ಟಿಕೊಳ್ಳುವ ಅಗತ್ಯವೇನಿದೆ ಎಂದು ಕೇಳುತ್ತಾರೆ. ಸಾಮಾನ್ಯ ಹಿಂದೂವಿನ ಧಾರ್ಮಿಕ ಶ್ರದ್ಧೆ ಆಯೋಧ್ಯೆಯ ಶ್ರೀರಾಮನ ದರ್ಶನದಲ್ಲಿ ಧನ್ಯತೆಯನ್ನು ಪಡೆಯುವುದರಿಂದ ಅದನ್ನು ಕಳೆದುಕೊಂಡ ಹಿಂದೂವಿನ ಸಂಕಟಕ್ಕೆ ಮಹಮ್ಮದ್ ಮರುಗುತ್ತಾರೆ. ಮುಸಲ್ಮಾನರಿಗಾಗಿಯೇ ಪಾಕೀಸ್ತಾನವು ನಿರ್ಮಾಣಗೊಂಡ ಬಳಿಕವೂ ಹಿಂದೂಗಳ ಭಾರತ ಜಾತ್ಯಾತೀತವಾಗಿ ಉಳಿದದ್ದು ಹಿಂದೂಗಳ ಉದಾರತೆಯ ಕಾರಣದಿಂದ. ಇಂತಹ ವಿಶಾಲ ಮನೋಭಾವವನ್ನು ವಿಶ್ವದಲ್ಲಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎನ್ನುತ್ತಾರೆ. ಇಂತಹ ಸಹಿಷ್ಣು ಭಾರತ ವಿಶ್ವಗುರುವಾಗಬೇಕು ಎಂದು ಬಯಸುವ ಮಹಮ್ಮದ್ ಅವರ ನಮ್ಮ ದೇಶದ ಸಾಂಸ್ಕೃತಿಕ ಸಂಪತ್ತಿನ ಪುನರ್ ನವೀಕರಣವಾಗಬೇಕು. ನಮ್ಮ ಸಂಸ್ಕೃತಿಯೇ ಭಾರತದ ಅಕ್ಷಯ ಸಂಪತ್ತು. ಇದನ್ನು ಜಗತ್ತಿನ ಮುಂದೆ ತೆರದಿಡಬೇಕಾಗಿದೆ. ಆದರೆ ನಮ್ಮನ್ನು ಆಳುವವರಿಗೆ ಈ ಕುರಿತ ದೂರಾಲೋಚನೆ ಇಲ್ಲವಾದ ಪರಿಣಾಮ ನಾವು ಇನ್ನೂ ಈ ಕುರಿತು ಮುಂದೆ ಸಾಗಿಲ್ಲ ಎನ್ನುವ ನೋವು ಅವರನ್ನು ಕಾಡುತ್ತದೆ.
ಅಧಿಕಾರಸ್ಥರ, ಕಮ್ಯುನಿಸ್ಟ್ರ ಕೆಂಗಣ್ಣಿಗೆ ಸದಾ ಗುರಿಯಾಗುತ್ತಲೇ ಬಂದ ಮಹಮ್ಮದ್ ಅವರಿಗೆ ಅವರ ಜೀವಮಾನದ ಸಾಧನೆಗಾಗಿ 2019 ರಲ್ಲಿ ಪದ್ಮಶ್ರಿ ಪ್ರಶಸ್ತಿ ನೀಡಲಾಯಿತು. ಸತ್ಯನಿಷ್ಟ ಇತಿಹಾಸಕಾರರು, ಆರ್ಕಿಯಾಲಜಿಸ್ಟ್ಗಳು ಕಲೆಹಾಕಿದ ಸಾವಿರಾರು ದಾಖಲೆಗಳು ಸರಿಯಾದ ವಿಮರ್ಶೆಗೂ ಒಳಗಾಗದೆ ಮ್ಯೂಸಿಯಂಗಳ ಒಳಗಿದೆ. ಭಾರತೀಯರ ಹೆಮ್ಮೆಯ ಇತಿಹಾಸವನ್ನು ಮರು ರೂಪಿಸಬಹುದಾಗಿದ್ದ ಈ ದಾಖಲೆಗಳು ವ್ಯವಸ್ಥಿತವಾಗಿಯೆ ಮೂಲೆ ಸೇರಿದೆ. ವಿದ್ವತ್ ಕ್ಷೇತ್ರದ ಭಯೋತ್ಪಾದನೆಗೆ ನಲುಗಿದ ದಾಖಲೆಗಳನ್ನು ಹೊರತೆಗೆದು ನೈಜ ಇತಿಹಾಸವನ್ನು ರಚಿಸಬೇಕೆನ್ನುವ ಕೂಗು ಹಲವು ದಶಕಗಳಿದ್ದಾದರೂ ಈ ಕಾರ್ಯಕ್ಕೆ ಇನ್ನೂ ರಭಸ ಬಂದಿಲ್ಲ. ಭೂಮಿಯೊಳಗೆ ಹೂತುಹೋದ, ಮ್ಯೂಸಿಯಂನ ಕಪಾಟುಗಳಲ್ಲಿ ಮರೆಗೆ ಸಂದಂತಾಗಿರುವ ನಮ್ಮ ಇತಿಹಾಸದ ಸುವರ್ಣ ಪುಟಗಳನ್ನು ಮತ್ತೆ ತೆರೆದು ದೇಶದ ಜನಸಾಮಾನ್ಯರಿಗೂ ತಲುಪುವಂತಾದರೆ, ನಮ್ಮ ಪಠ್ಯಗಳಲ್ಲಿ ಇನ್ನೂ ಉಳಿದುಕೊಂಡ ಸುಳ್ಳಿನ ಕಂತೆಗಳ ಇತಿಹಾಸದ ಪಾಠಗಳ ಸಾಲಿನಲ್ಲಿ ನಮ್ಮದೇ ನೈಜ ಇತಿಹಾಸದ ವಿವರಣೆಗಳು ಕಾಣುವಂತಾದರೆ ಅದೇ ಮಹಮ್ಮದ್ರಂಥಹ ಸತ್ಯನಿಷ್ಟನೊಬ್ಬನ ತಪಸ್ಸಿನಂತಹ ಹೋರಾಟಕ್ಕೆ ಬೆಲೆ ಬರುವಂತಾಗುವುದು. ಅಂತಹ ದಿನಗಳು ಆದಷ್ಟು ಬೇಗನೇ ಬರಲಿ. ಮಹಮ್ಮದ್ರಂಥ ಸ್ವಾಭಿಮಾನಿಗಳ ಸಂತತಿ ಸಾವಿರವಾಗಲಿ. ಸಾವಿರದಂತಾಗಲಿ.
✍ ಡಾ.ರೋಹಿಣಾಕ್ಷ ಶಿರ್ಲಾಲು
ಕನ್ನಡ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.