ಸ್ವರಾಜ್ಯ ನಮ್ಮ ಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ ಎಂಬ ಘರ್ಜನೆಯಿಂದ ಜನಪ್ರಿಯವಾಗಿದ್ದವರು ಲೋಕಮಾನ್ಯ ಬಾಲ ಗಂಗಾಧರ ತಿಲಕ ಅವರು. ಅವರ ಸಾಧನೆ, ಸೇವೆಗಳು ಇಂದಿಗೂ ಜನ ಸಾಮಾನ್ಯರ ನೆನಪಿನಲ್ಲಿ ಹಸುರಾಗಿದೆ. ಲೋಕಮಾನ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಬಾಲ ಗಂಗಾಧರ ತಿಲಕರು ಭಾರತೀಯ ರಾಷ್ಟ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿ ಜನಪ್ರಿಯ ನಾಯಕ ಎನಿಸಿದರು. ಭಾರತೀಯರ ಪ್ರಜ್ಞೆಯಲ್ಲಿ ಸಂಪೂರ್ಣ ಸ್ವರಾಜ್ಯದ ಕಿಚ್ಚು ಹಚ್ಚಿದ ತಿಲಕರು ರಾಷ್ಟ್ರೀಯತಾವಾದದ ಪಿತಾಮಹ ಎಂದೂ ಹೆಸರಾಗಿದ್ದಾರೆ. ತಿಲಕರು ಭಾರತದ ಇತಿಹಾಸ, ಸಂಸ್ಕೃತ, ಹಿಂದೂ ಧರ್ಮ, ಗಣಿತ ಹಾಗೂ ಖಗೋಳ ಶಾಸ್ತ್ರಗಳ ಆಳವಾದ ಅಭ್ಯಾಸ ಮಾಡಿದ್ದರು.
1856 ಜುಲೈ 23 ರಂದು ಮಹಾರಾಷ್ಟ್ರದ ರತ್ನಗಿರಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ತಿಲಕರು ಜನಿಸಿದರು. ಚತುರ ವಿದ್ಯಾರ್ಥಿಯಾಗಿದ್ದ ತಿಲಕರಿಗೆ ಗಣಿತದಲ್ಲಿ ವಿಶೇಷ ಪ್ರತಿಭೆಯಿತ್ತು. ಆಧುನಿಕ, ಕಾಲೇಜು ಶಿಕ್ಷಣ ಪಡೆದುಕೊಂಡ ನವಪೀಳಿಗೆಯ ಯುವಕರಲ್ಲಿ ತಿಲಕರೂ ಒಬ್ಬರಾಗಿದ್ದರು. ಪದವಿ ಪಡೆದ ಬಳಿಕ ಪುಣೆಯ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಸೇರಿದ ತಿಲಕರು, ಅನಂತರ ಅದನ್ನು ಬಿಟ್ಟು ಪತ್ರಕರ್ತರಾದರು. ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯು ಭಾರತೀಯ ಪರಂಪರೆಯನ್ನು ಅವಹೇಳಿಸುವಂಥಾದ್ದೂ ಹಾಗೂ ಭಾರತದ ವಿದ್ಯಾರ್ಥಿಗಳನ್ನು ಕೀಳುಗಳೆಯುವಂಥಾದ್ದು ಎಂಬ ನಿರ್ಧಾರಕ್ಕೆ ಬಂದ ಅವರು, ಈ ಪದ್ಧತಿಯ ತೀವ್ರ ಟೀಕಾಕಾರರಾದರು. ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪುಣೆಯಲ್ಲಿ ಡೆಕ್ಕನ್ ಎಜುಕೇಷನ್ ಸೊಸೈಟಿಯನ್ನು ಸ್ಥಾಪಿಸಿದರು.
ತಿಲಕರ ರಾಜಕೀಯ ಹೋರಾಟ ಅವಿಸ್ಮರಣೀಯ ವಾದುದು. ತಿಲಕರು ಸ್ಥಾಪಿಸಿದ ಕೇಸರಿ ಮರಾಠಿ ಪತ್ರಿಕೆಯು ಬಹುಬೇಗ ಜನಸಾಮಾನ್ಯರ ಮನೆಮಾತಾಯಿತು. ಅಭಿಪ್ರಾಯ ಸ್ವಾತಂತ್ರ್ಯವನ್ನು, ಅದರಲ್ಲೂ ಮುಖ್ಯವಾಗಿ, 1905 ರ ಬಂಗಾಳದ ವಿಭಜನೆಯ ವಿರೋಧವನ್ನು ಹತ್ತಿಕ್ಕಿದ; ಭಾರತದ ನಾಗರೀಕರನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ್ ಸತ್ತೆಯ ತೀವ್ರ ಟೀಕೆಯನ್ನು ಅವರು ಕೇಸರಿಯಲ್ಲಿ ಮಾಡುತ್ತಿದ್ದರು. ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ಬಿಟ್ಟುಕೊಡಬೇಕೆಂದು ಅವರು ಪ್ರತಿಪಾದಿಸಿದರು.
1890 ರ ದಶಕದಲ್ಲಿ ತಿಲಕರು ರಾಷ್ಟ್ರೀಯ ಕಾಂಗ್ರೆಸ್ ಸೇರಿದರಾದರೂ, ಬಹುಬೇಗ ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಉದಾರೀ- ಸೌಮ್ಯವಾದೀ ಧೋರಣೆಯ ವಿರೋಧಕರಾದರು. ಗೋಪಾಲಕೃಷ್ಣ ಗೋಖಲೆಯವರ ಸೌಮ್ಯವಾದೀ ನೀತಿಯ ಕಟುಟೀಕಾಕಾರರಾದರು. ಇದರಲ್ಲಿ ತಿಲಕರಿಗೆ ಬಂಗಾಳದ ಬಿಪಿನ ಚಂದ್ರ ಪಾಲ್ ಹಾಗೂ ಪಂಜಾಬಿನ ಲಾಲಾಲಜಪತ ರಾಯರ ಬೆಂಬಲವಿತ್ತು. 1907ರಲ್ಲಿ ಸೂರತ್ ಅಧಿವೇಶನದಲ್ಲಿ ಕಾಂಗ್ರೆಸ್ ತಿಲಕ್, ಪಾಲ್ ಹಾಗೂ ರಾಯ್ ನೇತೃತ್ವದಲ್ಲಿ ಗರಂ ದಳ ಹಾಗೂ ಗೋಖಲೆಯವರ ನೇತೃತ್ವದಲ್ಲಿ ನರಂ ದಳ ಎಂದು ಇಬ್ಭಾಗವಾಯಿತು. ರಾಜದ್ರೋಹದ ಆರೋಪದ ಮೇಲೆ 1906 ರಲ್ಲಿ ಬಂಧನಕ್ಕೊಳಗಾದ ತಿಲಕರು ತಮ್ಮ ಪರವಾಗಿ ವಕಾಲತ್ತು ವಹಿಸುವಂತೆ ಕೇಳಿಕೊಂಡದ್ದು ಯುವ ವಕೀಲ ಮಹಮದ್ ಆಲಿ ಜಿನ್ನಾರನ್ನು. ಆದರೂ ಬ್ರಿಟಿಷ್ ನ್ಯಾಯಾಧೀಶರಿಂದ ಅಪರಾಧಿ ಎಂದು ಘೋಷಿಸಲ್ಪಟ್ಟು 1908 ರಿಂದ 1914 ರ ವರೆಗೆ ಬರ್ಮಾ ದೇಶದ ಮಂಡಾಲೆಯಲ್ಲಿ ಸೆರೆವಾಸ ಅನುಭವಿಸಿದರು. ಬಿಡುಗಡೆಯಾದ ನಂತರ ತಮ್ಮ ಸಹ-ರಾಷ್ಟ್ರೀಯವಾದಿಗಳನ್ನು ಕೂಡಿಕೊಂಡ ತಿಲಕರು ೧೯೧೬ರಲ್ಲಿ ಕಾಂಗ್ರೆಸ್ಸನ್ನು ಕೂಡಾ ಪುನಹ ಓಟ್ಟುಗೂಡಿಸಿದರು. ಅಖಿಲ ಭಾರತ ಹೋಂ ರೂಲ್ ಲೀಗನ್ನು ಸ್ಥಾಪಿಸುವಲ್ಲಿ ಅನಿಬೆಸೆಂಟ್ ಮತ್ತು ಮಹಮದ್ ಆಲಿ ಜಿನ್ನಾರಿಗೆ ಸಹಕಾರ ನೀಡಿದರು.
ತಿಲಕರು ನಾಡಿಗೆ ನೀಡಿರುವ ತಾತ್ವಿಕ ಹಾಗೂ ಸಾಮಾಜಿಕ ಕೊಡುಗೆಗಳು ಅನನ್ಯವಾಗಿವೆ. ಮೂಲತಃ ಅದ್ವೈತ ವೇದಾಂತದ ಪ್ರತಿಪಾದಕರಾಗಿದ್ದರೂ, ಸಾಂಪ್ರದಾಯಿಕ ಅದ್ವೈತ ವೇದಾಂತದ ಪ್ರತಿಪಾದಕರಾಗಿದ್ದರೂ, ಸಾಂಪ್ರದಾಯಿಕ ಅದ್ವೈತದ ಜ್ಞಾನವೊಂದರಿಂದಲೇ ಮುಕ್ತಿ ಎಂಬ ನಂಬುಗೆಯು ಅವರಿಗೆ ಒಪ್ಪಿಗೆಯಿರಲಿಲ್ಲ. ಅದಕ್ಕೆ ಸರಿಸಮನಾಗಿ ಹಾಗೂ ಪೂರಕವಾಗಿ ಅವರು ಕರ್ಮಯೋಗವನ್ನೂ ಸೇರಿಸಿದರು. ವಿವಾಹಕ್ಕೆ ಕನಿಷ್ಠ ವಯೋಮಿತಿಯೇ ಮೊದಲಾಗಿ ತಿಲಕರು ಅನೇಕ ಸಾಮಾಜಿಕ ಸುಧಾರಣೆಗಳನ್ನು ಮುಂದಿಟ್ಟರು. ಮದ್ಯಪಾನ ನಿಷೇಧದ ಪರವಾಗಿ ಅವರಿಗೆ ಅತ್ಯಂತ ಕಳಕಳಿಯಿತ್ತು. ಶಿಕ್ಷಣ ಹಾಗೂ ರಾಜಕೀಯ ಜೀವನದ ಬಗ್ಗೆ ಅವರ ವಿಚಾರಗಳು ಬಹಳ ಪ್ರಭಾವಶಾಲಿಯಾಗಿದ್ದವು- ದೇವನಾಗರಿ ಲಿಪಿಯಲ್ಲಿ ಬರೆಯಲಾಗುವ ಹಿಂದಿ ಭಾಷೆಯು ಭಾರತದ ರಾಷ್ಟ್ರಭಾಷೆಯಾಗಬೇಕು ಎಂದು ಮೊದಲು ಸೂಚಿಸಿದವರು ತಿಲಕರು. ಗಾಂಧೀಜಿ ಇದನ್ನು ಮುಂದೆ ಬಲವಾಗಿ ಅನುಮೋದಿಸಿದರು. ಆದರೆ ತಿಲಕರು ಸಂಪೂರ್ಣವಾಗಿ ಭಾರತದಿಂದ ನಿರ್ಮೂಲನ ಮಾಡಬೇಕೆಂದು ಇಚ್ಛೆಪಟ್ಟಿದ್ದ ಇಂಗ್ಲೀಷ್ ಭಾಷೆ, ಇಂದಿಗೂ ಸಂವಹನದ ಒಂದು ಮುಖ್ಯ ಸಾಧನವಾಗಿ ಉಳಿದುಕೊಂಡು ಬಂದಿದೆ. ಆದರೂ ಹಿಂದಿ (ಮತ್ತು ಇತರ ಭಾರತೀಯ ಭಾಷೆಗಳ) ಜನಸಾಮಾನ್ಯರ ಮಟ್ಟದಲ್ಲಿ ಬಳಕೆ ಮತ್ತು ಬ್ರಿಟಿಷರ ಕಾಲದಿಂದ ಇಂದಿನವರೆಗೂ ನೀಡಲಾಗುತ್ತಿರುವ ಪ್ರೋತ್ಸಾಹಕ್ಕೆ ತಿಲಕರು ಅಂದು ಪ್ರಾರಂಭಿಸಿದ ಪುನರುಜ್ಜೀವನವೇ ಕಾರಣ ಎನ್ನಲಾಗುತ್ತದೆ.
ತಿಲಕರ ಮತ್ತೊಂದು ದೊಡ್ಡ ಕಾಣಿಕೆಯೆಂದರೆ, ಸಾರ್ವಜನಿಕ ಗಣೇಶೋತ್ಸವ. ಭಾದ್ರಪದ ಶುಕ್ಲ ಚುತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ 11 ದಿನಗಳ ಈ ಉತ್ಸವ, ಖಾಸಗೀ ಧಾರ್ಮಿಕ ಆಚರಣೆಯನ್ನು ಜನಸಾಮಾನ್ಯರು ಒಟ್ಟುಗೂಡಿ ಆಚರಿಸುವ, ನಾಯಕರುಗಳಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಮಹಾರಾಷ್ಟ್ರದಲ್ಲಿ ಇಂದಿಗೂ ಮುಂದುವರಿಯುತ್ತಿದೆ. ಪರದೇಶೀ ವಸ್ತುಗಳನ್ನು ಬಹಷ್ಕರಿಸುವಂತೆ ಅವರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು.
ತಿಲಕರು ಒಂದು ಕಾಲದಲ್ಲಿ ತೀವ್ರವಾದಿ ಕ್ರಾಂತಿಕಾರಿಯೆಂದು ಪರಿಗಣಿಸಲ್ಪಟ್ಟಿದ್ದರೂ, ನಂತರದ ವರ್ಷಗಳಲ್ಲಿ ಅವರು ಗಮನಾರ್ಹವಾಗಿ ಬದಲಾಗಿದ್ದರು. ಭಾರತ ಸ್ವಾತಂತ್ರ ಗಳಿಸಲು, ಮಾತುಕತೆಗಳ ಮೂಲಕವೇ ಹೆಚ್ಚು ಪರಿಣಾಮಕಾರಿ ಎಂಬ ಬಗ್ಗೆ ಅವರಿಗೆ ಒಲವಿತ್ತು. ಸ್ವರಾಜ್ಯ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಜನಸಾಮಾನ್ಯರವರೆಗೆ ಕೊಂಡೊಯ್ದ ತಿಲಕರನ್ನು ಸ್ವಾತಂತ್ರ್ಯ ಚಳುವಳಿಯ ಜನಕ ಎಂದು ಪರಿಗಣಿಸಲಾಗಿದೆ.
ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮದ ಬಗ್ಗೆ ಲೇಖನಗಳಿಂದ ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆಯ ಹಾಗೂ ನಾಗರೀಕತೆಗಳ ಅರಿವು ಮಾಡಿಕೊಟ್ಟು, ಅವರ ಪ್ರಜ್ಞೆಯಲ್ಲಿ ತಮ್ಮ ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸಿದರು. ತಿಲಕರನ್ನು ಭಾರತದ ರಾಜಕೀಯ ಹಾಗೂ ಆಧ್ಯಾತ್ಮಿಕ ನಾಯಕರನ್ನಾಗಿಯೂ, ಮಹಾತ್ಮಾ ಗಾಂಧಿಯವರನ್ನು ಇವರ ಉತ್ತರಾಧಿಕಾರಿ ಯಾಗಿಯೂ ಅನೇಕರು ಪರಿಗಣಿಸುತ್ತಾರೆ. 1920 ರ ಆಗಸ್ಟ್ 1 ರಂದು ತಿಲಕರು ತೀರಿಕೊಂಡಾಗ, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ 2೦೦೦೦೦ ಜನರಲ್ಲಿ ಒಬ್ಬರಾದ ಮಹಾತ್ಮಾ ಗಾಂಧಿಯವರು ತಿಲಕರನ್ನು ಆಧುನಿಕ ಭಾರತದ ಜನಕ ಎಂದು ಬಣ್ಣಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.