ಟೆಕ್ಕಿ, ಆಟೋ ಡ್ರೈವರ್ ಮುಂತಾದ ವಿಭಿನ್ನ ಹಿನ್ನೆಲೆಯಿಂದ ಬಂದ ಬೆಂಗಳೂರಿಗರ ತಂಡವೊಂದು ಪ್ರತಿ ವೀಕೆಂಡ್ಗಳಲ್ಲಿ ಅಬಲರಿಗೆ, ನೊಂದವರಿಗೆ, ಹಸಿವಿನಲ್ಲಿ ಇರುವವರಿಗೆ ಅಡುಗೆಯನ್ನು ಮಾಡಿಕೊಡುವ ಮೂಲಕ ಇತರರಿಗೆ ಮಾದರಿ ಎನಿಸುವಂತಹ ಕಾರ್ಯವನ್ನು ಮಾಡುತ್ತಿದೆ.
ಪ್ರತಿ ಭಾನುವಾರ ಈ ತಂಡ ಫೋಸ ಹ್ಯುಮ್ಯಾನಿಟೇರಿಯನ್ ಹಾಸ್ಪಿಟಲ್ ಮುಂಭಾಗದಲ್ಲಿ ಪೂರಿ, ಉಪ್ಪಿಟ್ಟನ್ನು ಸಿದ್ದಪಡಿಸಿ ಆಸ್ಪತ್ರೆಗೆ ಬರುವವರಿಗೆ ಉಚಿತವಾಗಿ ನೀಡುತ್ತದೆ. ವಿವಿಧ ಅನಾಥಾಶ್ರಮಗಳಿಗೆ ಹೋಗಿ ಆಹಾರಗಳನ್ನು ವಿತರಿಸುತ್ತದೆ. ವೀಕೆಂಡ್ಗಳನ್ನು ಮೋಜು ಮಸ್ತಿಯಲ್ಲಿ ಕಳೆಯುತ್ತಾ ಮರುದಿನ ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಯುವ ಜನತೆ ಈ ತಂಡವನ್ನು ನೋಡಿ ಕಲಿಯಬೇಕಾದುದು ಸಾಕಷ್ಟಿದೆ.
“ಶೇರ್ ಎ ಸ್ಮೈಲ್” ಎನ್ಜಿಒ ಮೂಲಕ ಈ ತಂಡ ಕಾರ್ಯಾಚರಿಸುತ್ತಿದ್ದು, ಸಮೀರ್ ಹಸನ್ ಎಂಬುವವರು ಇದನ್ನು ಸ್ಥಾಪನೆ ಮಾಡಿದ್ದಾರೆ. ಹಲವಾರು ಮಂದಿ ಸ್ವಯಂ ಪ್ರೇರಣೆಯಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಫೋಸ ಹ್ಯುಮ್ಯಾನಿಟೇರಿಯನ್ ಹಾಸ್ಪಿಟಲ್ನ ಸಮಾರು ನೂರು ಮಂದಿ ರೋಗಿ ಮತ್ತವರ ಕುಟುಂಬಗಳಿಗೆ ಇವರು ಆಹಾರ ಸಿದ್ಧಪಡಿಸುತ್ತಾರೆ.
ಆಸ್ಪತ್ರೆಗೆ ಬರುವವರೊಂದಿಗೆ, ವೃದ್ಧಾಶ್ರಮ, ಅನಾಥಾಶ್ರಮದಲ್ಲಿರುವವರೊಂದಿಗೆ ಸಂಭಾಷಣೆಯನ್ನು ನಡೆಸಿ ಅವರಿಗೆ ಏನು ತಿನ್ನಲು ಬೇಕು ಎಂಬುದನ್ನು ಕೇಳಿ ಈ ಎನ್ಜಿಒ ಸದಸ್ಯರು ಆಹಾರಗಳನ್ನು ತಯಾರಿಸಿ ಹಂಚುತ್ತಾರೆ. ಆಹಾರವನ್ನು ಸ್ವತಃ ತಿನ್ನಲು ಆಗದ ರೋಗಿಗಳಿಗೆ ಇವರು ತಾವೇ ಕೈ ತುತ್ತು ತಿನ್ನಿಸುತ್ತಾರೆ. ಮಾತ್ರವಲ್ಲ ಆಹಾರದೊಂದಿಗೆ ನಗು ಮತ್ತು ಸಂತೋಷವನ್ನು ಹಂಚುತ್ತಾರೆ.
ಈ ಕಾರ್ಯಕ್ಕೆ ಹಲವಾರು ಮಂದಿ ಕೈ ಜೋಡಿಸಿದ್ದು, ಕೆಲವು ಮಹಿಳೆಯರು ಬೆಳಗಿನ ಜಾವ ಬೇಗ ಬಂದು ತರಕಾರಿಗಳನ್ನು ಹೆಚ್ಚಿ ಅಡುಗೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿ ತಮ್ಮ ಮನೆಗೆ ತೆರಳಿ ಅಡುಗೆ ಮಾಡುತ್ತಾರೆ.
ಇಷ್ಟು ಮಾತ್ರವಲ್ಲದೆ, ಈ ತಂಡವು ಮೈಸೂರು, ಬೆಂಗಳೂರು, ತುಮಕೂರು ಸುತ್ತಮುತ್ತಲ ಸುಮಾರು 1400 ಶಾಲಾ ಮಕ್ಕಳಿಗೆ ಶಾಲಾ ಶುಲ್ಕ ಪಾವತಿಸಲು ಸಹಾಯ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಅದಕ್ಕಾಗಿ ಅನುದಾನಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದೆ. ಶಾಲೆ ಪುನರಾರಂಭಕ್ಕೂ ಮುಂಚಿತವಾಗಿ ಇವರು ಫಂಡ್ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದಾರೆ.
ಶೇರ್ ಎ ಸ್ಮೈಲ್ ಎನ್ಜಿಓ ಮಾಡುತ್ತಿರುವ ಕಾರ್ಯ ಮಾನವೀಯತೆಯ ಮತ್ತೊಂದು ರೂಪವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.