ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಗೌರವ ಹೆಚ್ಚಿಸುವಂತಹ ವಿದೇಶಾಂಗ ನೀತಿಯನ್ನು ಮೋದಿ ಸರಕಾರ ಅಳವಡಿಸಿಕೊಂಡಿದೆ. ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಜನಪ್ರಿಯತೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಹೆಚ್ಚಿಸಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವ ನಿಟ್ಟಿನಲ್ಲಿ ಮೋದಿ ಸರಕಾರವು ಕಳೆದ ಐದು ವರ್ಷಗಳಲ್ಲಿ ಆ ರಾಷ್ಟ್ರಗಳಿಗೆ ನೀಡುತ್ತಿರುವ ಅಭಿವೃದ್ಧಿ ಅನುದಾನವನ್ನು ದ್ವಿಗುಣಗೊಳಿಸಿದೆ. ದಕ್ಷಿಣ ಏಷಿಯಾ, ಆಫ್ರಿಕಾ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಭಾರತ ನೀಡುತ್ತಿರುವ ಅನುದಾನ ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ. 2013 -14 ನೇ ಸಾಲಿನಲ್ಲಿ ಭಾರತವು ಇತರ ದೇಶಗಳಿಗೆ 11 ಬಿಲಿಯನ್ ಡಾಲರ್ ಅಭಿವೃದ್ಧಿ ಅನುದಾನವನ್ನು ನೀಡಿತ್ತು, ಈ ಮೊತ್ತ 2018-19 ನೇ ಸಾಲಿನಲ್ಲಿ 28 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಏಷ್ಯಾ ಮತ್ತು ಆಫ್ರಿಕಾದ 63 ರಾಷ್ಟ್ರಗಳ 278 ಯೋಜನೆಗಳಿಗೆ 28 ಬಿಲಿಯನ್ ಡಾಲರ್ ಹಣಕಾಸು ನೆರವನ್ನು ಭಾರತ ಒದಗಿಸಿದೆ.
1950 ಮತ್ತು 1960 ರಲ್ಲಿ ಪಡೆದುಕೊಳ್ಳುತ್ತಿದ್ದಂತೆ ಭಾರತ ಈಗ ಇತರ ರಾಷ್ಟ್ರಗಳಿಂದ ಅಭಿವೃದ್ಧಿ ಅನುದಾನವನ್ನು ತೆಗೆದುಕೊಳ್ಳುತ್ತಿಲ್ಲ. ಭಾರತ ಈಗ ಹಿಂದಿನಂತೆ ಸಂಕಷ್ಟದಲ್ಲಿರುವ ದೇಶವಲ್ಲ, ಅಭಿವೃದ್ಧಿ ಅನುದಾನ, ವಿದೇಶಿ ರಾಷ್ಟ್ರಗಳ ದಯೆ ಈಗ ಭಾರತಕ್ಕೆ ಬೇಕಾಗಿಲ್ಲ. ಪ್ರಸ್ತುತ ನಾವು ವಿಶ್ವದ ಆರನೇ ಅತೀ ದೊಡ್ಡ ಆರ್ಥಿಕತೆ ಆಗಿದ್ದೇವೆ. ಶೀಘ್ರದಲ್ಲೇ ಐದನೇ ಸ್ಥಾನಕ್ಕೆ ಏರುವ ನಿರೀಕ್ಷೆಯಲ್ಲಿದ್ದೇವೆ. ಯುಕೆಯನ್ನು ಹಿಂದಿಕ್ಕುವ ಉತ್ಸಾಹದಲ್ಲಿದ್ದೇವೆ. ವಿಶ್ವದ ಅತಿ ದೊಡ್ಡ ಆರ್ಥಿಕತೆಯಲ್ಲಿ ಒಂದಾಗಿರುವ ಮತ್ತು ವಿಶ್ವದ ಅತಿ ವೇಗದ ಆರ್ಥಿಕತೆಯಾಗಿರುವ ಭಾರತ ತನ್ನ ಆಂತರಿಕ ಬಿಕ್ಕಟ್ಟುಗಳನ್ನು ನಿರ್ವಹಣೆ ಮಾಡಲು ಬೇಕಾದಷ್ಟು ಸಂಪನ್ಮೂಲಗಳನ್ನು ಹೊಂದಿದೆ.
ಅಭಿವೃದ್ಧಿ ಅನುದಾನಗಳನ್ನು ಇತರ ದೇಶಗಳಿಗೆ ನೀಡುವ ಮೂಲಕ ತನ್ನ ವಿದೇಶಾಂಗ ನೀತಿ ಅಜೆಂಡಾವನ್ನು ಕಾರ್ಯಗತಗೊಳಿಸಲು ಭಾರತಕ್ಕೆ ಆರ್ಥಿಕ ಪ್ರಗತಿ ಸಾಕಷ್ಟು ಸಹಕಾರಿಯಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೇರಿಕಾ ದೇಶಗಳಿಗೆ ಚೀನಾ ನೀಡುತ್ತಿರುವ ಅನುದಾನಗಳನ್ನು ಸರಿಗಟ್ಟಲು ಭಾರತ ಪ್ರಯತ್ನಗಳನ್ನು ನಡೆಸುತ್ತಾ ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ ಅವರು “ಚೀನಾದ ಅನುದಾನಗಳು ಕೆಲವೊಂದು ಭಾಗ ಮತ್ತು ಪ್ರದೇಶಗಳಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ಅಭಿವೃದ್ಧಿ ಅನುದಾನವನ್ನು ಏರಿಸಲು ಪ್ರಯತ್ನಗಳನ್ನು ನಡೆಸುತ್ತಿದೆ” ಎಂದಿದ್ದಾರೆ.
ಈ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳು ದಕ್ಷಿಣ ಏಷ್ಯಾ ಮತ್ತು ಆಫ್ರಿಕಾಗಳಿಗೆ ಹೆಚ್ಚು ಕೇಂದ್ರೀಕೃತವಾಗಿದೆ. ಕಳೆದ ದಶಕಗಳಲ್ಲಿ, ಅದರಲ್ಲೂ ಮುಖ್ಯವಾಗಿ ಕ್ಸಿ ಜಿನ್ಪಿಂಗ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಚೀನಾ ವಿದೇಶಾಂಗ ನೀತಿಯನ್ನು ಅತ್ಯಂತ ಆಕ್ರಮಣಕಾರಿಯಾಗಿ ಪಾಲನೆ ಮಾಡುತ್ತಿದೆ. ಬೆಲ್ಟ್ ಅಂಡ್ ರೋಡ್ ಯೋಜನೆ 2010ರಲ್ಲಿ ಜಿನ್ ಪಿಂಗ್ ಅವರ ಕನಸಿನ ಕೂಸಾಗಿತ್ತು, ಈಗ ಅದನ್ನು ಚೀನಾ ತನ್ನ ವಿದೇಶಾಂಗ ನೀತಿ ಗುರಿಗಳಿಗೆ ಅಸ್ತ್ರವಾಗಿ ಈಗ ಬಳಕೆ ಮಾಡುತ್ತಿದೆ.
ಚೀನಾವು ಆಫ್ರಿಕಾ ಖಂಡಕ್ಕೆ ಲೇಟ್ ಕಂಮರ್ ಆಗಿದ್ದರೂ ಕೂಡ, ಆರ್ಥಿಕ ಉದಾರೀಕರಣ ಪೂರ್ವದಲ್ಲಿ ಆ ದೇಶಗಳೊಂದಿಗೆ ತನ್ನ ಒಡನಾಟವನ್ನು ಹೆಚ್ಚಿಸಿಕೊಂಡಿತ್ತು. ಕಚ್ಚಾ ವಸ್ತುಗಳಿಗಾಗಿ ಚೀನಾ ಕಾರ್ಪೊರೇಟ್ಗಳ ಹಸಿವು ಆ ದೇಶವನ್ನು ಆಫ್ರಿಕಾ ಖಂಡದತ್ತ ಕೊಂಡೊಯ್ಯಿತು. ಚೀನಾದ ಸಂಪತ್ತು, ಆಫ್ರಿಕಾದಲ್ಲಿ ಭಾರತಕ್ಕಿಂತಲೂ ಕ್ಷಿಪ್ರಗತಿಯಲ್ಲಿ ಅದಕ್ಕೆ ತನ್ನ ಅಧಿಪತ್ಯವನ್ನು ವಿಸ್ತರಿಸಲು ಸಹಾಯ ಮಾಡಿತು. 2005 ಮತ್ತು 2018ರ ನಡುವೆ ಅದು 220 ಬಿಲಿಯನ್ ಡಾಲರ್ ಅನ್ನು ಅದು ಅಲ್ಲಿ ಹೂಡಿಕೆ ಮಾಡಿದೆ. ಅಲ್ಲಿ ಭಾರತದ ಪ್ರಭಾವ ಕೆಲವು ದಶಕಗಳಿಗಷ್ಟೇ ಮೀಸಲಾಗಿದೆ.
ಮೋದಿ ಸರಕಾರದ ಅಡಿಯಲ್ಲಿ ಭಾರತವು ಆಫ್ರಿಕಾ ಖಂಡಗಳೊಂದಿಗಿನ ತನ್ನ ಒಡನಾಟವನ್ನು ಹೆಚ್ಚಿಸಿಕೊಂಡಿದೆ. ವಿದ್ಯುತ್, ಕೃಷಿ, ಟೆಲಿಕಮ್ಯುನಿಕೇಶನ್ ಮುಂತಾದ ಕ್ಷೇತ್ರಗಳಲ್ಲಿ ಅಲ್ಲಿ ಹೂಡಿಕೆಯನ್ನು ಮಾಡುತ್ತಿದೆ. ಭಾರತ ಮತ್ತು ಜಪಾನ್ ಜಂಟಿಯಾಗಿ ಏಷ್ಯಾ ಆಫ್ರಿಕಾ ಗ್ರೋಥ್ ಕಾರಿಡಾರ್ ಅನ್ನು ಆಫ್ರಿಕಾದ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಮತ್ತು ಸಾಮರ್ಥ್ಯ ನಿರ್ಮಾಣಕ್ಕಾಗಿ ಘೋಷಣೆ ಮಾಡಿದೆ. ಕೀನ್ಯಾದಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸುವ ಸಲುವಾಗಿ ಭಾರತ ಜಪಾನಿನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಯುಎಇ ಸಹಾಯದೊಂದಿಗೆ ಇಥಿಯೋಪಿಯಾದಲ್ಲಿ ಐಸಿಟಿ ಸೆಂಟರ್ ಅನ್ನು ಭಾರತ ಸ್ಥಾಪನೆ ಮಾಡಲಿದೆ. ಕಳೆದ ಒಂದೂವರೆ ದಶಕಗಳಿಂದ ಆಫ್ರಿಕಾ ಖಂಡದಲ್ಲಿ ಚೀನಾವು ಅತಿ ದೊಡ್ಡ ಪ್ರಭಾವ ಬೀರುವ ರಾಷ್ಟ್ರವಾಗಿ ಹೊರಹೊಮ್ಮಿದೆ, ಇದನ್ನು ಸರಿಗಟ್ಟಲು ಮೋದಿ ಸರಕಾರದಲ್ಲಿ ಭಾರತವು ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ. ಆಫ್ರಿಕನ್ ಯೂನಿಯನ್ ಮತ್ತು ಭಾರತದ ನಡುವೆ ಫೈಬರ್ ಆಪ್ಟಿಕ್ಸ್ ಮತ್ತು ವೈರ್ಲೆಸ್ ನೆಟ್ವರ್ಕ್ಗಳನ್ನು ಸ್ಥಾಪಿಸಲು ಭಾರತ ಯೋಜನೆ ಹಾಕಿಕೊಂಡಿದೆ. ಇ- ಗವರ್ನೆನ್ಸ್, ಇ-ಕಾಮರ್ಸ್ ಮತ್ತು ಇನ್ಫೋಟೇನ್ಮೆಂಟ್ ಕ್ಷೇತ್ರದಲ್ಲಿ ಆಫ್ರಿಕನ್ ದೇಶಗಳಿಗೆ ನೆರವು ನೀಡಲು ಮುಂದಾಗಿದೆ.
ಶೀಘ್ರ ಭವಿಷ್ಯದಲ್ಲಿ ಆತ್ಮೀಯ ವಿದೇಶಿ ಒಡನಾಟವನ್ನು ಹೊಂದುವ ಸಲುವಾಗಿ ಭಾರತಕ್ಕೆ ಆರ್ಥಿಕ ಪ್ರಗತಿಯು ಹಣಕಾಸು ದಾರಿಯನ್ನು ಒದಗಿಸಲಿದೆ. ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ದೇಶಗಳಲ್ಲಿ ಭಾರತದ ಪ್ರಸ್ತುತತೆಯನ್ನು ಹೆಚ್ಚಿಸಲು ಮೋದಿ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.