ಮಹತ್ವಾಕಾಂಕ್ಷೆಯ ಮತ್ತು ದೂರದೃಷ್ಟಿಯ ಪರಿಸರ ವ್ಯವಸ್ಥೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರಗಳಿಂದ ಪರಿಣಾಮಕಾರಿಯಾಗಿ ರೂಪುಗೊಳ್ಳುತ್ತವೆ. ಯುವ ಮನಸ್ಸುಗಳನ್ನು ಚಿಂತನೆಗೆ ಹಚ್ಚುವುದು, ಉದ್ಯಮಶೀಲರಿಗೆ ಉತ್ತೇಜನ ನೀಡುವುದು, ಭಾರತೀಯ ವಿಜ್ಞಾನಿಗಳ ಪ್ರತಿಭಾಪಲಾಯನವನ್ನು ತಡೆಯುವುದು, ನಾವೀನ್ಯ ಆವಿಷ್ಕಾರಕ್ಕೆ ಒತ್ತು ನೀಡುವುದು, ಕೈಗಾರಿಕೆ ಮತ್ತು ವೈಜ್ಞಾನಿಕ ಸಂಶೋಧನೆಯ ನಡುವೆ ಸಮನ್ವಯ ಸಾಧಿಸುವುದು, ಸಾಮಾಜಿಕ ಆರ್ಥಿಕ ಪ್ರಗತಿಗಾಗಿ ಸಂಶೋಧನೆಯನ್ನು ಉತ್ತೇಜಿಸುವುದು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಭಾವ ಬೀರಲು ವಿಜ್ಞಾನ ಮತ್ತು ತಂತ್ರಜ್ಞಾನದ ಸಹಕಾರವನ್ನು ಪಡೆಯುವುದು ಈ ಪರಿಸರ ವ್ಯವಸ್ಥೆಯ ಲಕ್ಷಣಗಳಾಗಿವೆ. ಇಂತಹ ಬಹು ದೃಷ್ಟಿಯ ನೀತಿ ಸ್ಪಂದನೆಯೊಂದಿಗೆ ಸರ್ಕಾರವು ದೇಶದ ಆಡಳಿತ ಮತ್ತು ಅಭಿವೃದ್ಧಿ ವಲಯದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಜನರಿಗೆ ವಿಜ್ಞಾನ-ತಂತ್ರಜ್ಞಾನ ಮತ್ತು ಕೌಶಲ್ಯಗಳನ್ನು ಜನಕಲ್ಯಾಣಕ್ಕಾಗಿ ಬಳಸಲು ದಾರಿ ಮಾಡಿಕೊಟ್ಟಿದೆ. ಆಡಳಿತ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಪರಿಚಯಿಸಿರುವುದರಿಂದ ಪಾರದರ್ಶಕತೆ, ಹೊಣೆಗಾರಿಕೆ, ವಿಶ್ವಾಸಾರ್ಹತೆ ಮತ್ತು ಪರಿಶೀಲನೆಗಳಿಗೆ ಜಾಗ ಸಿಕ್ಕಿದೆ. ಎಲ್ಲಾ ಮಟ್ಟದಲ್ಲಿ ಉತ್ತಮ ಆಡಳಿತವನ್ನು ನೀಡಲು, ಸಮಸ್ಯೆಗಳಿಗೆ ಕಾರ್ಯಾಧಾರಿತ ಪರಿಹಾರಗಳನ್ನು ನೀಡಲು ವೈಜ್ಞಾನಿಕ ತಂತ್ರಜ್ಞಾನವು ಮಹತ್ವದ ಅವಕಾಶವನ್ನು ಕಲ್ಪಿಸಿದೆ.
ಈ ಹಿಂದೆ ವ್ಯಕ್ತಿಗಳು ನಾವೀನ್ಯ ಸ್ಟಾರ್ಟ್ಅಪ್ಗಳನ್ನು ಆರಂಭಿಸುವುದಕ್ಕೆ ಮುಂದಾದರೂ ಯಾವುದೇ ಬೆಂಬಲ ವ್ಯವಸ್ಥೆ ಇರಲಿಲ್ಲ. ಸಾಮರ್ಥ್ಯಗಳೊಂದಿಗೆ, ಸೃಜನಶೀಲತೆಯೊಂದಿಗೆ ಸ್ವ ಉದ್ಯೋಗವನ್ನು ಪಡೆಯುವುದು ಅತಿ ದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೆ ಈ ಸವಾಲುಗಳು ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಅಟಲ್ ಇನ್ನೋವೇಶನ್ ಮಿಷನ್ ಇತ್ಯಾದಿಗಳ ಮೂಲಕ ಪರಿಹಾರವನ್ನು ಕಂಡುಕೊಂಡಿದೆ.
ತಂತ್ರಜ್ಞಾನಗಳ ಬಳಕೆಯಿಂದ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು ಉನ್ನತ ಮಟ್ಟದಲ್ಲಿ ಸುಧಾರಣೆಯನ್ನು ಕಂಡಿದೆ. ಈಗ ಕೇಂದ್ರ ಸರಕಾರ, ರಾಜ್ಯ ಸರಕಾರ, ಸ್ಥಳಿಯ ಆಡಳಿತಗಳ ಸರ್ಕಾರಿ ಸೇವೆಗಳು ಸಾಮಾನ್ಯ ಜನರಿಗೆ ಒಂದು ಮೊಬೈಲ್ ಅಪ್ಲಿಕೇಶನ್ UMANG ಮೂಲಕ ಲಭ್ಯವಾಗುತ್ತಿದೆ. ಆನ್ಲೈನ್ ಅರ್ಜಿ ಸಲ್ಲಿಸುವಿಕೆ, ಆನ್ ಲೈನ್ ಮೂಲಕವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿಕೆ, ದಾಖಲೆಗಳ ಪರಿಶೀಲನೆ ಮತ್ತು ಸರ್ಟಿಫಿಕೇಟ್ ನೀಡುವ ಪ್ರಕ್ರಿಯೆ ಇತ್ಯಾದಿಗಳು ಸರಳೀಕೃತಗೊಂಡಿವೆ. ಗೌರ್ಮೆಂಟ್ ಇ-ಮಾರ್ಕೆಟ್ ಪ್ಲೇಸ್ನಲ್ಲಿ ಸಣ್ಣ ಉದ್ಯಮಿಗಳು ಈಗ ನೊಂದಾವಣೆ ಮಾಡಿಕೊಳ್ಳಬಹುದಾಗಿದೆ ಮತ್ತು ಸರ್ಕಾರಕ್ಕೆ ಸರಕುಗಳನ್ನು ಪೂರೈಕೆ ಮಾಡುವ ಹರಾಜು ಪ್ರಕ್ರಿಯೆಗಳಿಗೆ ಆನ್ಲೈನ್ ಮೂಲಕವೇ ಭಾಗಿಯಾಗಬಹುದಾಗಿದೆ.
ಪಿಂಚಣಿದಾರರು ತಾವು ಬದುಕಿದ್ದೇವೆ ಎಂಬ ಬಗೆಗಿನ ದಾಖಲೆಯನ್ನು ತೋರಿಸಲು ಬ್ಯಾಂಕ್ ಅಧಿಕಾರಿಗಳ ಮುಂದೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಈಗ ಇಲ್ಲ. ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆಯ ಮೂಲಕ ತಮ್ಮ ಇರುವಿಕೆಯನ್ನು ಅವರು ಸಾಬೀತುಪಡಿಸಬಹುದು. ಟೆಲಿ ಎಜುಕೇಶನ್, ಟೆಲಿಮೆಡಿಸಿನ್, ಇ-ಭಾಷಾಗಳ ಮೂಲಕ ಜನಸಾಮಾನ್ಯರನ್ನು ಅತ್ಯಂತ ಪರಿಣಾಮಕಾರಿಯಾಗಿ ಡಿಜಿಟಲ್ ಸಬಲೀಕರಣಗೊಳಪಡಿಸಲಾಗುತ್ತಿದೆ. ಭೀಮ್ ಅಪ್ಲಿಕೇಶನ್ ಮೂಲಕ ಜನರು ನಗದು ರಹಿತ ಹಣಕಾಸು ವಹಿವಾಟುಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಇದರಿಂದಾಗಿ ನಗದಿನ ಹರಿಯುವಿಕೆ ಕಡಿಮೆಯಾಗುತ್ತಿದೆ. ಭ್ರಷ್ಟಾಚಾರ ರಹಿತ ಸಮಾಜದ ನಿರ್ಮಾಣವಾಗುತ್ತಿದೆ. ಡಿಜಿಟಲ್ ಸಾಕ್ಷರತೆ ಮತ್ತು ಸೇರ್ಪಡೆ ನವಭಾರತದ ಮಹತ್ವದ ಗುರಿಯಾಗಿದೆ.
ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ನಮ್ಮ ದೇಶದ ಮೀನುಗಾರರು ಮತ್ತು ರೈತರು ಮಳೆ ಮತ್ತು ಹವಾಮಾನಕ್ಕೆ ಸಂಬಂಧಿಸಿದ ಮುನ್ಸೂಚನೆಗಳನ್ನು ಸಾಂಪ್ರದಾಯಿಕ ಜ್ಞಾನದ ಮೂಲಕವೇ ಊಹೆ ಮಾಡುತ್ತಿದ್ದರು. ಇದಕ್ಕೆ ಸಾಕಷ್ಟು ಸಮಯ ತಗುಲುತ್ತಿದ್ದವು ಮತ್ತು ನಿಖರವಾಗಿ ಯಾವ ಮಾಹಿತಿಗಳೂ ಸಿಗುತ್ತಿರಲಿಲ್ಲ. ಇದರಿಂದ ರೈತರಿಗೆ ಅನಾನುಕೂಲವೇ ಹೆಚ್ಚಾಗುತ್ತಿತ್ತು, ಅವರು ಸಂಕಷ್ಟಕ್ಕೊಳಗಾಗುತ್ತಿದ್ದರು. ಆದರೆ ಇಂದು ರೈತರು ವಿವಿಧ ತಂತ್ರಜ್ಞಾನ ಆಧಾರಿತ ಹವಮಾನ ಮುನ್ಸೂಚನೆಯನ್ನು ಪಡೆಯುತ್ತಿದ್ದಾರೆ. ಮಣ್ಣಿನ ಪರೀಕ್ಷೆ, ತಜ್ಞರ ಸಲಹೆ, ಬೆಳೆಗಳಿಗೆ ಉತ್ತಮ ದರ ಇತ್ಯಾದಿಗಳು ಒಂದು ಬಟನ್ ಮೂಲಕ ಅವರಿಗೆ ದೊರಕುತ್ತದೆ. ಸೆನ್ಸಾರ್ ಟೆಕ್ನಾಲಜಿ, ಸೆಟ್ಲೈಟ್ ಇಮೇಜುಗಳು ರೈತರಿಗೆ ಬೀಜ ಬಿತ್ತನೆ, ಬೆಳೆ, ಗೊಬ್ಬರ ಹಾಕುವಿಕೆ, ಸಾರಿಗೆ ಇತ್ಯಾದಿಗಳಿಗೆ ಸಹಾಯ ಮಾಡುತ್ತಿದೆ.
ರೈತರು ಮತ್ತು ರೈತರ ಸೌಲಭ್ಯಗಳಿಗೆ ಸುಧಾರಣೆ ಮಾಡುವ ಯಾವುದೇ ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರಗಳು ಗ್ರಾಮೀಣ ಆರ್ಥಿಕತೆಯ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವವನ್ನು ಬೀರುತ್ತದೆ. 106ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ರೈತರು ಮತ್ತು ಮೀನುಗಾರರು ಎದುರಿಸುತ್ತಿರುವ ಸವಾಲುಗಳನ್ನು ತೊಡೆದುಹಾಕಲು ವಿಜ್ಞಾನ ಮತ್ತು ತಂತ್ರಜ್ಞಾನಗಳು ಅತ್ಯವಶ್ಯಕ ಎಂದು ಪ್ರತಿಪಾದಿಸಿದ್ದರು. ವಾರ್ನಿಂಗ್ ಸಿಸ್ಟಮ್, ಆಸ್ತಿಗಳ ಜಿಯೋ ಟ್ಯಾಗಿಂಗ್, ಬೆಳೆ ಬೆಳೆಯುವ ಸ್ಥಳ, ಉತ್ತಮ ವಿಪತ್ತು ನಿರ್ವಹಣೆ, ಪೂರ್ವಸಿದ್ಧತೆಗಳು ಸ್ಪೇಸ್ ಟೆಕ್ನಾಲಜಿ ಮೂಲಕ ತ್ವರಿತ ಮತ್ತು ಪರಿಣಾಮಕಾರಿಯಾಗಿ ನಡೆಯುತ್ತದೆ.
ಮೋದಿ ಸರಕಾರದ ಯೋಜನೆಗಳ ವಿಶಿಷ್ಟವಾದ ಗುಣವೆಂದರೆ, ಅಲ್ಲಿ ಮೂಲಭೂತ ವಿಜ್ಞಾನ ಮತ್ತು ಅನ್ವಯಿಕ ವಿಜ್ಞಾನದ ಸ್ಪಷ್ಟವಾದ ಮಿಶ್ರಣವಿರುವುದು, ಸುಲಲಿತ ವ್ಯವಹಾರದೊಂದಿಗೆ ಸುಲಲಿತ ಜೀವನವನ್ನು ಜೋಡಿಸುವುದು. ಉದಾಹರಣೆಗೆ, GOBAR (Galvanizing Organic Bio-Agro Resources) – DHAN ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ಜೀವನವನ್ನು ಉತ್ತೇಜಿಸಲು ತ್ಯಾಜ್ಯದ ಪರಿಕಲ್ಪನೆಯನ್ನು ಬಳಸಿಕೊಳ್ಳುತ್ತಿದೆ. ಸ್ವಚ್ಛವಾದ ಹಳ್ಳಿಗಳನ್ನು ನಿರ್ಮಿಸಲು ಇದು ಪ್ರಯೋಜನಕಾರಿಯಾಗಿದೆ. ಬಯಲು ಮಲವಿಸರ್ಜನೆ ಮತ್ತು ಅದರಿಂದ ಬರುವ ರೋಗಗಳು ಇದರ ಅರಿವು, ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು ಮತ್ತು ಸುಸ್ಥಿರ ಹಳ್ಳಿಗಳನ್ನು ಪರಿಣಾಮವಾಗಿ ಸೃಷ್ಟಿಯಾಗುವುದು ಈ ಯೋಜನೆಯಿಂದ ಹೆಚ್ಚು ಪರಿಣಾಮಕಾರಿಯಾಗಿದೆ.
ನಗರ ಪ್ರದೇಶಗಳಲ್ಲಿ, ಸ್ಮಾರ್ಟ್ ಸಿಟಿ ಮತ್ತು AMRUT ನಂತಹ ಯೋಜನೆಗಳು ಸುಸ್ಥಿರ ಜೀವನ ವಾತಾವರಣವನ್ನು ರಚಿಸುವ ಸಲುವಾಗಿ ಸ್ವಚ್ಛ ಇಂಧನ ಮೂಲಸೌಕರ್ಯಗಳನ್ನು ಬಳಸಿಕೊಳ್ಳುತ್ತಿವೆ. ನಾವು ಗ್ರಾಮೀಣ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡಲು ವಿಶೇಷ ಒತ್ತನ್ನು ನೀಡಿದಾಗ, ಯಾವುದೇ ರೀತಿಯ ಸೋಂಕು ಹರಡುವುದನ್ನು ತಡೆಯಲು ನೀರಿನ ನಿರಂತರ ಪರಿಶೀಲನೆ ಅನಿವಾರ್ಯವಾಗುತ್ತದೆ. ಇದಕ್ಕಾಗಿ “ಕುಡಿಯುವ ನೀರಿನ ಸೋಂಕುನಿವಾರಕ ವ್ಯವಸ್ಥೆ”ಯನ್ನು ತಂತ್ರಜ್ಞಾನವನ್ನು ಬಳಸಿ ಅನುಷ್ಠಾನಗೊಳಿಸಲಾಗಿದೆ, ಇದು ಶುದ್ಧ ಪೈಪ್ಡ್ ನೀರನ್ನು ಒದಗಿಸುವುದರ ಜೊತೆಗೆ ನಮ್ಮ ಜನರನ್ನು ನೀರಿನಿಂದ ಬರುವ ರೋಗಗಳಿಂದ ರಕ್ಷಿಸುವ ದ್ವಿ ಪ್ರಯೋಜನವನ್ನು ಹೊಂದಿದೆ.
ಭದ್ರತೆ, ಆರ್ಥಿಕತೆ ಮತ್ತು ಸಾಮಾಜಿಕ ಮೂಲಸೌಕರ್ಯಗಳು ನಮ್ಮ ದೇಶದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತದೆ, ಹೀಗಾಗಿ ಅವುಗಳನ್ನು ರಕ್ಷಣೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಇತ್ತೀಚೆಗೆ ಭಾರತ ‘ಮಿಷನ್ ಶಕ್ತಿ’ ಅಡಿಯಲ್ಲಿ ಉಪಗ್ರಹ ವಿರೋಧಿ (ಎಎಸ್ಎಟಿ) ಕ್ಷಿಪಣಿ ಸಾಮರ್ಥ್ಯವನ್ನು ಪಡೆದುಕೊಂಡ 4ನೇ ದೇಶವಾಗಿ ಹೊರಹೊಮ್ಮಿತು. ನಮ್ಮ ಸಂವಹನ ಉಪಗ್ರಹಗಳು, ಭೂ ಅವಲೋಕನ ಉಪಗ್ರಹಗಳು, ನ್ಯಾವಿಗೇಷನ್ ಉಪಗ್ರಹಗಳು, ವೈಜ್ಞಾನಿಕ ಸಂಶೋಧನೆ ಮತ್ತು ಪರಿಶೋಧನೆಗೆ ಮೀಸಲಾದ ಉಪಗ್ರಹಗಳ ರಕ್ಷಣೆಯನ್ನು ಈ ಮಿಶನ್ ಖಾತ್ರಿಪಡಿಸಿದೆ.
ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಸ್ಫೂರ್ತಿಯನ್ನು ಪಡೆದುಕೊಳ್ಳುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಇದೇ ಕಾರಣಕ್ಕೆ, ಲಾಲ್ ಬಹದ್ದೂರ್ ಶಾಸ್ತ್ರೀ ಅವರ ‘ಜೈ ಜವಾನ್, ಜೈ ಕಿಸಾನ್’ ಘೋಷಣೆಗೆ ‘ಜೈ ವಿಜ್ಞಾನ್’ ಅನ್ನೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸೇರಿಸಿದರು. ಈ ಕನಸಿನ ಬೆನ್ನತ್ತಿದ ಮೋದಿ ಸರ್ಕಾರ, ಭಾರತವನ್ನು ಮೂಲ ವಿಜ್ಞಾನದ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೇರಿಸುವ ಪ್ರಯತ್ನವನ್ನು ನಡೆಸಿದೆ. ಮೋದಿ ಸರ್ಕಾರವು, ತಂತ್ರಜ್ಞಾನ ಆಧಾರಿತ ಪರಿವರ್ತನೆಗೆ ಹೆಚ್ಚಿನ ಒತ್ತು ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.