ಹಸಿ ಮಣ್ಣನ್ನು ಗುದ್ದುತ್ತಾ, ಮೆಟ್ಟುತ್ತಾ ಅದರ ಮೇಲೆ ಬಲ ಪ್ರಯೋಗಿಸುತ್ತಾ ಹೋದಂತೆ ಅದು ತನ್ನ ಮೃದುತನವನ್ನು ಬಿಟ್ಟು ಗಟ್ಟಿಯಾಗುತ್ತಾ ಸಾಗುತ್ತದೆ. ಮತ್ತಾದರೂ ಅದಕ್ಕೆ ಪೆಟ್ಟು ಕೊಡುತ್ತಾ ಹೋದಂತೆ ಅದು ಕಲ್ಲಾಗಿ ಬದಲಾಗುತ್ತದೆ. ತದನಂತರವೂ ಅದರ ಮೇಲೆ ಶಕ್ತಿ ಪ್ರಯೋಗ ಆದರೆ ಆ ಕಲ್ಲು ಕ್ರಮೇಣ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಪ್ರಾರಂಭಿಸಿ ಸಾವಿರ ಚೂರಾಗಿ ಪರಿಣಮಿಸುತ್ತದೆ. ಆಗ ಕೊಡುವ ಒಂದೊಂದು ಪೆಟ್ಟಿಗೂ ಅದು ಪ್ರತಿಕ್ರಿಯಿಸುವ ರೀತಿ ಭಿನ್ನವಾಗಿರುತ್ತದೆ. ಚೂರಾದಒಂದೊಂದು ಕಲ್ಲು ಕೂಡಾ ಸಿಡಿಯುವಾಗ ಎದುರಿನವನ ಕಣ್ಣನ್ನು ಒಮ್ಮೆ ಮಿಟುಕಿಸುವಂತೆ ಮಾಡುತ್ತದೆ. ಒಟ್ಟಾರೆ ತಾತ್ಪರ್ಯ ಇಷ್ಟೆ..!!
ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಒಂದು ಪರಿಮಿತಿ ಎನ್ನುವುದಿರುತ್ತದೆ. ಆ ಪರಿಮಿತಿ ಮೀರಿದರೆ ತನ್ನ ಸ್ವರೂಪವನ್ನು ಬದಲಾಯಿಸುತ್ತದೆ. ಯಾವ ಕಲ್ಲು-ಮಣ್ಣಿಗೆ ಈ ಒಂದು ವಿಚಾರ ಅನ್ವಯಿಸುತ್ತದೋ, ಇದೇ ವಿಚಾರ ಮಾನವನ ಮನಸ್ಸಿಗೂ ಅನ್ವಯಿಸುತ್ತದೆ.
ಮನುಷ್ಯ ಒಬ್ಬ ಅಸಾಮಾನ್ಯ ಸಹನಾಶೀಲ ಜೀವಿ. ತನ್ನ ಬಾಲ್ಯದಲ್ಲಿ ಅನೇಕ ಸಿಟ್ಟುಗಳನ್ನೊಳಗೊಂಡು ಬೆಳೆಯುತ್ತಾ ಅದನ್ನು ಸಹನೆಯನ್ನಾಗಿ ಪರಿವರ್ತಿಸುತ್ತಾನೆ. ಆ ಬದಲಾವಣೆ ಯಾವುದೋ ಒಂದು ವ್ಯಕ್ತಿಯಿಂದಾಗಿ ಇರಬಹುದು, ಒಂದು ಶಕ್ತಿಯಿಂದಾಗಿ ಇರಬಹುದು, ಅಥವಾ ಘಟನೆ-ಅನುಭವಗಳಿಂದಾಗಿ ಇರಬಹುದು. ಯಾವ ಘಟನೆ-ಅನುಭವಗಳಿಂದಾಗಿ ಆತ ತನ್ನ ಸ್ವಭಾವ ಬದಲಾಯಿಸಿಕೊಂಡಿದ್ದನೋ ಅದೇ ಘಟನೆಗಳು ಆತನಿಗೆ ಪದೇ ಪದೇ ಕಾಡುವಂತಾದರೆ ಕಲ್ಲಿನ ಚೂರು ಸಿಡಿದಂತೆ ಆತನ ಮನ ದಶ ದಿಕ್ಕುಗಳಿಗೂ ಶತ ಶರವೇಗದಲ್ಲಿ ಸಂಚರಿಸುತ್ತದೆ. ಮನ ವಿಕೇಂದ್ರೀಕೃತವಾಗಿ ಗೊಂದಲದ ಗೂಡಾಗುತ್ತದೆ. ತನ್ನ ಕೈ,ಕಾಲು-ಬಾಯಿಗಳಿಗೆ ಕೆಲಸವನ್ನು ನೀಡುತ್ತದೆ. ಈ ಮೂಲಕ ಒಂದು ಹೊಸ ಅಧ್ಯಾಯಕ್ಕೆ ನಾಂದಿ ಹಾಡುತ್ತದೆ.ಯಾವ ವ್ಯಕ್ತಿಯ ಮನ ಸಹನೆಯಿಂದಾಗಿ ನೂರಾರು ಜನರ ಹೃದಯವನ್ನು ಗೆದ್ದಿತ್ತೋ, ಅದೇ ಮನ ಒಂದೇ ಒಂದು ಕ್ಷಣದ ತಪ್ಪಿಗೆ ಸಾವಿರಾರು ಜನರ ಮನದಿಂದ ದೂರ ಸರಿಯುತ್ತದೆ.
ಪ್ರತಿಯೊಂದು ವಸ್ತುವೂ,ವ್ಯಕ್ತಿಯೂ ಒಂದು ಸ್ಥಳದಲ್ಲಿ ತುಂಬಾ ಸಮಯವಿರಲು ಸಾಧ್ಯವಿಲ್ಲ. ಕಾರಣ, ಜೀವನ ಒಂದು ಚಕ್ರವಿದ್ದಂತೆ. ಚಕ್ರ ತಿರುಗುತ್ತಾ, ಮುನ್ನಡೆಯುತ್ತಾ ಹೋದಂತೆ ಚಕ್ರ ಸವೆಯುತ್ತದೆ. ಜಗತ್ತು ಅರ್ಥವಾಗುತ್ತಾ ಸಾಗುತ್ತದೆ. ಜೀವನಾನುಭವ ಉಂಟಾಗುತ್ತಾ ಹೊಸ ತಿರುವು ಸಿಕ್ಕಿ ಬದಲಾವಣೆ ಹೊಂದುತ್ತದೆ. ಇಂದು ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ನಾಳೆ ಕೆಳಕ್ಕಿಳಿಯಬಹುದು. ಇಂದು ಕೆಳಗಿರುವವ ನಾಳೆ ನಭದೆತ್ತರಕ್ಕೆ ಜಿಗಿಯಬಹುದು. ಯಾವುದನ್ನೂ ಕೂಡಾ, ಯಾರನ್ನೂ ಕೂಡಾ ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಇಂದು ನೆಲಕ್ಕೆ ಬಿದ್ದ ಒಂದು ಚೂರು ಕಾಗದ ನಾಳೆ ನಮ್ಮ ತಲೆಯ ಮೇಲೆ ಹಾರಾಡುವ ಗಾಳಿಪಟ ಆಗಬಹುದು. ಒಂದು ಕನಿಷ್ಠ ಅಂಕುಶ ಕೂಡಾ ಬಲಿಷ್ಠ ಆನೆಯನ್ನು ಪಳಗಿಸಬಹುದು. ಪ್ರತಿಯೊಂದು ಸಣ್ಣ-ಸಣ್ಣ ವಸ್ತುವೂ, ಘಟನೆಯೂ ನಮ್ಮ ಜೀವನದ ದಿಕ್ಕನ್ನು ಬದಲಿಸಬಹುದು.
ಅನೇಕ ಬಾರಿ ನಮ್ಮ ಜೀವನ ಪಾಠ ಕಲಿಯುವುದು ನಾವೆದುರಿಸುವ ಸಣ್ಣ ಸಣ್ಣ ಸಂಕಷ್ಟಗಳಿಂದ. ಆ ಸಣ್ಣ-ಸಣ್ಣ ಸಂಕಷ್ಟಗಳೇ ನಮ್ಮ ಜೀವನದ ಅತೀ ದೊಡ್ಡ ಪ್ರಮಾದ ಆಗಬಾರದು. ಈ ರೀತಿಯ ಪರ್ವಕಾಲದಲ್ಲಿ ಘಟಿಸುವ ಆಕಸ್ಮಿಕಗಳಿಂದ ಸ್ಮಿತವನ್ನು ಕಳೆದುಕೊಳ್ಳುವಂತಾದರೆ ಅಪಾಯ ನಿಶ್ಚಿತ. ‘ಏಕ ವಿಜ್ಞಾನೆನ ಸರ್ವ ವಿಜ್ಞಾನ’ ಎಂಬ ಉಕ್ತಿಯೊಂದಿದೆ. ಅದರರ್ಥ ಒಂದು ವಸ್ತುವಿನ ಮೂಲ ತತ್ವವನ್ನು ತಿಳಿದರೆ ಅದರ ಅನೇಕ ಮಗ್ಗಲುಗಳನ್ನು ತಿಳಿಯಬಹುದು, ಆ ದಿಕ್ಕಿನತ್ತ ವಿಚಾರ ಮಾಡಬಹುದು ಎಂದು. ಹೇಗೆ ಮಣ್ಣಿನ ಮುದ್ದೆಗೆ ಅನೇಕ ರೀತಿಯ ಆಕಾರವನ್ನು ಕೊಟ್ಟು ಆಕೃತಿಯನ್ನು ನಿರ್ಮಿಸಬಹುದೋ, ಹಾಗೆಯೇ ನಮ್ಮ ಮನದ ಮೂಲ ತತ್ವ ತಿಳಿದು ಅನೇಕ ಕಡೆಗಳಿಂದ ವಿಷಯ ಸಂಗ್ರಹಿಸಿ, ಅವಶ್ಯಕತೆ ಬಿದ್ದಲ್ಲಿ ವಿಜ್ಞಾನದ ಜೊತೆ ಸಮ್ಮಿಳಿಸಿ, ಸತ್ವ ಸಹಿತ ವಿಚಾರವನ್ನು ಮಂಡಿಸಬೇಕು. ಈ ಮೂಲಕ ನಾಲ್ಕಾರು ಜನರ ಜೀವನದ ಜ್ಞಾನ ಜ್ಯೋತಿಯನ್ನು ಉರಿಸುವಂತಾಗಬೇಕು. ಮನ ಹಗೆಯ ಹೊಗೆಯನ್ನುಗುಳದೆ ಸುಗಂಧಕಡ್ಡಿಯ ಸುವಾಸನೆ ಬೀರುವಂತಾಗಬೇಕು. ತನ್ಮೂಲಕ ಜೀವನಕ್ಕೊಂದು ಅರ್ಥ ಬರಬೇಕು ಎಂಬುದೇ ಆಶಯ. ಅಪೇಕ್ಷೆ…!!
✍ ಸತೀಶ ಹೆಗಡೆ, ಶಿರಸಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.