ರೈತರು ಭಾರತೀಯ ಆರ್ಥಿಕತೆಯ ಬೆನ್ನೆಲುಬು. ಗ್ರಾಮ ಮತ್ತು ರೈತರು ಈ ದೇಶದ ಮಣ್ಣಿನ ಆತ್ಮಗಳಿದ್ದಂತೆ. ರೈತರು ಮಣ್ಣಿಗೆ ಬೀಜವನ್ನು ಹಾಕಿ ಅದನ್ನು ಅನುಕೂಲಕರ ಮತ್ತು ಅನಾನುಕೂಲ ವಾತಾವರಣದಲ್ಲೂ ಶ್ರಮಿಸಿ ಪೋಷಣೆ ಮಾಡುತ್ತಾರೆ. ರೈತರು ತಮ್ಮ ಪರಿಶ್ರಮಕ್ಕೆ ಪ್ರತಿಯಾಗಿ ಸಮರ್ಪಕವಾದ ಲಾಭವನ್ನು ಪಡೆಯಬೇಕು ಎಂಬ ನಿರೀಕ್ಷೆ ಇದ್ದೇ ಇರುತ್ತದೆ. ತರಕಾರಿ, ದವಸಧಾನ್ಯ, ಬೇಳೆಕಾಳುಗಳ ದರಗಳು ಹೆಚ್ಚಾಗುತ್ತಾ ಸಾಗಿದರೂ ರೈತರ ಆದಾಯ ಮತ್ತು ಉತ್ಪನ್ನದ ಅಂತಿಮ ದರ ನಡುವೆ ದೊಡ್ಡ ಅಂತರವಿರುತ್ತದೆ. ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಿದಾಗ ಸಾಕಷ್ಟು ಹಣವನ್ನು ಮಧ್ಯವರ್ತಿಗಳೇ ತಿಂದು ಮುಗಿಸುತ್ತಾರೆ.
ಬಂಪರ್ ಬೆಳೆ ಬಂದಾಗ, ಬರ ಅಥವಾ ಪ್ರವಾಹ ಬಂದಾಗ ಉತ್ಪನ್ನಗಳ ಬೆಲೆ ಕುಸಿಯುತ್ತದೆ ಮತ್ತು ಅನೇಕ ಸಲ ಇಂತಹ ಸಂದರ್ಭದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಧ್ಯವರ್ತಿಗಳಿಗೆ ಅತೀ ಅಗ್ಗದ ದರದಲ್ಲಿ ಮಾರಾಟ ಮಾಡಬೇಕಾಗುತ್ತದೆ. ರೈತರಿಗಾಗುವ ನಷ್ಟವನ್ನು ತಪ್ಪಿಸಲು ಪ್ರತಿ ಕೃಷಿ ಉತ್ಪನ್ನಕ್ಕೆ ಸರ್ಕಾರವು MSP(ಕನಿಷ್ಠ ಬೆಂಬಲ ಬೆಲೆ) ಅನ್ನು ಘೋಷಣೆ ಮಾಡುತ್ತದೆ. ಕನಿಷ್ಠ ಬೆಂಬಲ ಬೆಲೆಯು ಮಧ್ಯವರ್ತಿಗಳಿಂದ ಮತ್ತು ಬೆಲೆಯನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಂದ ರೈತರಿಗೆ ಮುಕ್ತಿಯನ್ನು ನೀಡುತ್ತದೆ.
ಕನಿಷ್ಠ ಬೆಂಬಲ ಬೆಲೆ ಅನ್ನು ಭಾರತ ಸರ್ಕಾರವು ಕೃಷಿ ಉತ್ಪನ್ನಗಳಿಗೆ ನಿಗದಿಪಡಿಸುತ್ತದೆ. ತೆರೆದ ಮಾರುಕಟ್ಟೆಯಲ್ಲಿ ವೆಚ್ಚಕ್ಕಿಂತ ಕಡಿಮೆ ಬೆಲೆ ಇದ್ದರೆ, ಆ ವೇಳೆ ರೈತರ ಹಿತಾಸಕ್ತಿ ಕಾಪಾಡಲು ಮತ್ತು ಬೆಳೆದ ಬೆಳೆಯಿಂದ ರೈತರಿಗೆ ಲಾಭ ಸಿಗಲಿ ಎಂಬ ಉದ್ದೇಶದಿಂದ ಇದನ್ನು ಘೋಷಣೆ ಮಾಡಲಾಗುತ್ತದೆ.
ಕೃಷಿ ಉತ್ಪನ್ನಗಳ ದರಗಳು ಬಿದ್ದಾಗ ರೈತರು ಪ್ರತಿಭಟನೆ ನಡೆಸುವುದು ಸಾಮಾನ್ಯ. MSP ಯಲ್ಲಿ ಹೆಚ್ಚಳ ಮಾಡಬೇಕು ಎಂಬುದು ಅವರ ನಿರಂತರವಾದ ಬೇಡಿಕೆಯಾಗಿರುತ್ತದೆ.
ಕೇಂದ್ರ ಸರ್ಕಾರವು ಕೃಷಿ ಉತ್ಪನ್ನಗಳಿಗೆ ಸಾಕಷ್ಟು ಉತ್ತೇಜನವನ್ನು ನೀಡಿದೆ. ಬೆಳೆಗಳಿಗೆ ವಿಶಾಲವಾದ ಆನ್ಲೈನ್ ಮಾರುಕಟ್ಟೆಗೆ ಪ್ರವೇಶವನ್ನು ನೀಡಿದೆ. “ಒಂದು ರಾಷ್ಟ್ರ ಮತ್ತು ಒಂದು ಮಾರುಕಟ್ಟೆ” ಎನ್ನುವ ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸಿದೆ. ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಭವಿಷ್ಯದಲ್ಲಿ ಈ ಮಾರುಕಟ್ಟೆಯು ಅಂತರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಕಾರ್ಯನಿರ್ವಹಿಸುವುದು ನಿಶ್ಚಿತವಾಗಿದೆ.
ಜುಲೈ 2017 ರಲ್ಲಿ, ರಾಷ್ಟ್ರೀಯ ಇ-ಮಾರ್ಕೆಟ್ ಸರ್ವಿಸಸ್ (ReMS) ರಚನೆಯ ಮೂಲಕ ಕೃಷಿ ಮಾರುಕಟ್ಟೆಯಲ್ಲಿ ಪ್ರಮುಖ ಸುಧಾರಣೆಗಳನ್ನು ಪ್ರಾರಂಭಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಆದರೆ ಕೇಂದ್ರ ಕೃಷಿ ಸಚಿವಾಲಯ ಪ್ರಾರಂಭಿಸಿದ ರಾಷ್ಟ್ರೀಯ ಎಲೆಕ್ಟ್ರಾನಿಕ್ ಪ್ಲಾಟ್ಫಾರ್ಮ್, ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್ (eNAM) ಗೆ ಸೇರ್ಪಡೆಗೊಳ್ಳಲು ಕರ್ನಾಟಕವು ನಿರಾಕರಿಸಿದೆ. ಈ ನಿರಾಕರಣೆಗೆ, ಅಂತಾರಾಜ್ಯ ವ್ಯಾಪಾರವನ್ನು ದೇಶದಾದ್ಯಂತ ಇನ್ನೂ ಸುಗಮಗೊಳಿಸಲಾಗಿಲ್ಲ ಎಂಬ ಕಾರಣವನ್ನು ಅದು ಮುಂದಿಟ್ಟಿದೆ.
ರೈತರ ರಾಷ್ಟ್ರೀಯ ಆಯೋಗ (NCF) ಅಧ್ಯಕ್ಷ ಪದ್ಮಶ್ರೀ ಎಂ.ಎಸ್. ಸ್ವಾಮಿನಾಥನ್ ಅವರು, ತಮ್ಮ 2006ರ ವರದಿಯಲ್ಲಿ, ಕೃಷಿ ಆಧಾರಿತ ಅಧ್ಯಯನದ ಜೊತೆಜೊತೆಗೆ ರೈತರ ಕಲ್ಯಾಣದ ಕಡೆಗೂ ಸರಿಯಾದ ಗಮನ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದರು. NCF ರೈತರ ಆದಾಯವನ್ನು ಹೆಚ್ಚಿಸಲು ಹಲವು ಶಿಫಾರಸುಗಳನ್ನು ಮಾಡಿದೆ. ಈ ಸಲಹೆಗಳನ್ನು ಪರಿಗಣಿಸಲು ಸರ್ಕಾರ ಸುಮಾರು ಒಂದು ದಶಕಗಳನ್ನೇ ತೆಗೆದುಕೊಂಡಿತು. 2014 ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ಬಳಿಕ, ಈ ಸಲಹೆಗಳನ್ನು ಆಧರಿಸಿ ಬಹಳಷ್ಟು ಸುಧಾರಣಾ ಯೋಜನೆಗಳನ್ನು ಜಾರಿಗೆ ತಂದಿದೆ.
ಸ್ವಾಮಿನಾಥನ್ ಕಮಿಷನ್ ವರದಿಯ ಅನುಷ್ಠಾನವೆಂದರೆ, ರೈತರ ಜೀವನ ಮಟ್ಟವನ್ನು ಸುಧಾರಿಸುವುದು ಮತ್ತು ಕೃಷಿ ಕ್ಷೇತ್ರದ ಉನ್ನತೀಕರಣವನ್ನು ಅರ್ಥೈಸಿಕೊಳ್ಳುವುದು ಎಂದು ಕೃಷಿ ಸಚಿವ ರಾಧಾ ಮೋಹನ್ ಸಿಂಗ್ 2018ರ ಆಗಸ್ಟ್ 8 ರಂದು ಹೇಳಿದ್ದರು.
ರಾಷ್ಟ್ರೀಯ ಕೃಷಿ ಮಾರುಕಟ್ಟೆ (eNAM) ಒಂದು ಪ್ಯಾನ್-ಇಂಡಿಯಾ ಎಲೆಕ್ಟ್ರಾನಿಕ್ಸ್ ಟ್ರೇಡಿಂಗ್ ಪೋರ್ಟಲ್ ಆಗಿದ್ದು, ಇದು ಕೃಷಿ ಸರಕುಗಳಿಗೆ ಏಕೀಕೃತ ರಾಷ್ಟ್ರೀಯ ಮಾರುಕಟ್ಟೆಯನ್ನು ಒದಗಿಸುವ ಸಲುವಾಗಿ ರಚನೆಗೊಂಡ APMC ಬಜಾರ್ಗಳ ನೆಟ್ವರ್ಕ್ ಆಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC)) ರಾಜ್ಯ ಸರ್ಕಾರಗಳು ಸ್ಥಾಪಿಸಿದ ಮಾರುಕಟ್ಟೆ ಮಂಡಳಿ ಆಗಿದೆ.
eNAM ಪೋರ್ಟಲ್ ಭಾರತದಾದ್ಯಂತ ಎಲ್ಲಾ ಎಪಿಎಂಸಿಗಳ ಏಕೈಕ ವಿಂಡೋ ಸೇವೆಯನ್ನು ಒದಗಿಸುತ್ತದೆ, ಇದು ಉತ್ತಮ ದರಗಳನ್ನು, ಲಭ್ಯತೆ ಮತ್ತು ಸರಕುಗಳ ಸಂಗ್ರಹ, ಖರೀದಿ ಮತ್ತು ಮಾರಾಟವನ್ನು ಒದಗಿಸುತ್ತದೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮೂಲಕ ಭಾರತದ ಸರ್ಕಾರದ ಹೂಡಿಕೆಯೊಂದಿಗೆ eNAM electronic trading platform ಅನ್ನು ರಚನೆ ಮಾಡಲಾಗಿದೆ. ಇದು ಸರ್ಕಾರಿ ಮತ್ತು ಖಾಸಗಿ ಮಾರುಕಟ್ಟೆ ಯಾರ್ಡ್ಗಳನ್ನು ಕನೆಕ್ಟ್ ಮಾಡುವ ಸ್ಪರ್ಧಾತ್ಮಕ ವೇದಿಕೆಯಾಗಿದೆ, ಇದು ರೈತರಿಗೆ ಉತ್ತಮವಾದ ಲಾಭದ ಭರವಸೆ ನೀಡುತ್ತದೆ. ಇದಕ್ಕಾಗಿ ವಿಶೇಷ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಲಾಗಿದೆ, ಇದರಿಂದ ಯಾವುದೇ APMC ಮಾರುಕಟ್ಟೆ ತಮ್ಮ ಅಸ್ತಿತ್ವದಲ್ಲಿರುವ ಅಪ್ಲಿಕೇಶನ್ನೊಂದಿಗೆ eNAMಗೆ ಸಂಪರ್ಕ ಸಾಧಿಸಬಹುದು. ಯಾವುದೇ APMC ಮಾರುಕಟ್ಟೆಗೆ ಉಚಿತ ಮತ್ತು APMC ಕಾಯಿದೆಗಳು / ನಿಯಮಗಳು ಪ್ರಕಾರ ಗ್ರಾಹಕೀಕರಣ ಲಭ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.