ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಕರ್ನಾಟಕ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೆ ಕರಾವಳಿಗರು ಬೇಸತ್ತು ಹೋಗಿದ್ದಾರೆ. ಈ ಭಾಗದ ಬಗ್ಗೆ ಸಿಎಂ ಕುಮಾರ ಸ್ವಾಮಿ ನೀಡುತ್ತಿರುವ ಹೇಳಿಕೆಗಳು ಇಲ್ಲಿನ ಜನರನ್ನು ಇನ್ನಷ್ಟು ಆಕ್ರೋಶಿತರನ್ನಾಗಿಸಿದೆ. ‘ಬಿಜೆಪಿ ಬಿಜೆಪಿ ಎನ್ನುವ ಈ ಭಾಗದ ಜನರಿಗೆ ತಿಳುವಳಿಕೆ ಕಮ್ಮಿ’ ಎಂದು ಅವರು ಇತ್ತೀಚಿಗೆ ನೀಡಿದ ಹೇಳಿಕೆಯಂತು ಕರಾವಳಿ ಜನರ ರಕ್ತ ಕುದಿಯುವಂತೆ ಮಾಡಿದೆ.
ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರ ಮೇಲೆ ಇದ್ದ ರೌಡಿ ಶೀಟರ್ ಪ್ರಕರಣವನ್ನು, ಹಲ್ಲೆ, ಗಲಾಟೆ ಯತ್ನ ಪ್ರಕರಣಗಳನ್ನು ಇಂದಿನ ಸರ್ಕಾರ ಸದ್ದಿಲ್ಲದಂತೆ ಕೈಬಿಡಲು ಮುಂದಾಗಿರುವುದು, ಹಿಂದೂ ಸಂಘಟನೆಗಳ ಮೇಲೆ ಸುಖಾಸುಮ್ಮನೆ ಕೇಸ್ ಹಾಕುವಂತೆ ಮಾಡುತ್ತಿರುವುದು ಕೂಡ ಕರಾವಳಿ ಜನತೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಹಿಮ್ಮುಖವಾಗುವಂತೆ ಮಾಡಿದೆ. ಸುಮಾರು 142 ಮಂದಿಯ ಮೇಲಿನ ಗಂಭೀರ ಪ್ರಕರಣಗಳನ್ನು ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಕರಾವಳಿ ಜನತೆ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ.
ಉಳಾಯಿಬೆಟ್ಟು ಮತ್ತು ಕರಾಯ್ ಭಾಗದಲ್ಲಿ ಕೋಮು ಗಲಭೆ ನಡೆಸಲು ಯತ್ನಿಸಿದ್ದ ಆರೋಪಿಗಳ ಮೇಲಿನ ಪ್ರಕರಣ ಸೇರಿದಂತೆ 142 ಪ್ರಕರಣಗಳನ್ನು ಕೈಬಿಡುವಂತೆ ಸರ್ಕಾರ ಆದೇಶಿಸಿದೆ. ದರೋಡೆ, ಹಲ್ಲೆ, ಪೊಲೀಸ್ ಅಧಿಕಾರಿಗಳ ಮೇಲೆಯೇ ಹಲ್ಲೆ ಯತ್ನ ಇತ್ಯಾದಿ ಗಂಭೀರ ಆರೋಪ ಹೊತ್ತಿರುವವರ ಮೇಲಿನ ಪ್ರಕರಣವನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಆರ್ ಟಿ ಐ ಅರ್ಜಿಯಿಂದ ತಿಳಿದು ಬಂದಿದೆ.
2018ರ ಅಕ್ಟೋಬರ್ ತಿಂಗಳಿನಿಂದ 2019ರ ಜನವರಿಯವರೆಗೆ, ಸೆಷನ್ಸ್ ಕೋರ್ಟ್ ಮತ್ತು ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್ ಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇದ್ದ ಪ್ರಕರಣಗಳನ್ನು ಹಿಂಪಡೆದುಕೊಳ್ಳಲು ಆದೇಶಿಸಲಾಗಿದೆ ಎಂಬುದು ಆರ್ ಟಿ ಐ ಯಿಂದ ತಿಳಿದು ಬಂದಿದೆ. ಇದು ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಅಸಮಾಧಾನಕ್ಕೆ ಕಾರಣವಾಗಿದ್ದು, ಅವರು ಈ ಬಗ್ಗೆ ಪ್ರಾಸಿಕ್ಯೂಶನ್ ಡೈರೆಕ್ಟರ್ ಮತ್ತು ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಇಂದು ಸಾರ್ವಜನಿಕರು ಮತ್ತು ವಿವಿಧ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮಾಡುತ್ತಿರುವ ಅಲ್ಪಸಂಖ್ಯಾತ ಓಲೈಕೆಯಲ್ಲದೇ ಇದು ಬೇರೇನಲ್ಲ ಎಂದು ಆರೋಪಿಸಿದ್ದಾರೆ.
ದಕ್ಷಿಣಕನ್ನಡದಿಂದ ಸುಮಾರು 142 ಪ್ರಕರಣ ಪೈಕಿ 40 ಪ್ರಕರಣಗಳನ್ನು ಹಿಂಪಡೆಯಲಾಗಿದೆ, ಇದರಲ್ಲಿ ಶೇ.90ರಷ್ಟು ಮುಸ್ಲಿಂ ಆರೋಪಿಗಳ ಪ್ರಕರಣವಾಗಿದೆ. 2014ರಲ್ಲಿ ನಡೆದ ಉಳಾಯಿಬೆಟ್ಟು ಪ್ರಕರಣದ ಆರೋಪಿಯ ಮೇಲಿನ ಪ್ರಕರಣವನ್ನು ಹಿಂಪಡೆದಿದ್ದು ನಿಜಕ್ಕೂ ಅತ್ಯಂತ ನೀಚತನದ್ದಾಗಿದೆ, ಈ ಪ್ರಕರಣದಲ್ಲಿ 40 ಮುಸ್ಲಿಮರ ಮೇಲೆ ಪ್ರಕರಣ ದಾಖಲಾಗಿತ್ತು. ಆದರೆ ಈ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಹಿಂದೂಗಳ ಮೇಲೆ ದಾಖಲಾದ ಪ್ರಕರಣವನ್ನು ಇನ್ನೂ ವಾಪಾಸ್ ಪಡೆದುಕೊಂಡಿಲ್ಲ. ಸರ್ಕಾರದ ಈ ಧೋರಣೆ ಓಲೈಕೆಯಲ್ಲದೆ ಮತ್ತೇನೂ ಅಲ್ಲ. ಮಹಿಳಾ ಗೌರವಕ್ಕೆ ಧಕ್ಕೆ ತಂದ 20-25 ಜನರನ್ನು ಇನ್ನು ಬಂಧಿಸಬೇಕು, ಪ್ರಕರಣದ ವಿಚಾರಣೆ ಮುಂದುವರೆಯುತ್ತಿದೆ. ಆದರೆ ಪ್ರಕರಣವನ್ನು ಸರ್ಕಾರ ವಾಪಾಸ್ ಪಡೆದುಕೊಂಡಿದೆ.
ದಕ್ಷಿಣ ಕನ್ನಡದ ಜಿಲ್ಲಾ ನ್ಯಾಯಾಲಯವು, ಸರ್ಕಾರದ ಆದೇಶವನ್ನು ಜಾರಿಗೊಳಿಸಲು ನಿರಾಕರಿಸಿದ್ದು, ಪ್ರಕರಣ ಹಿಂಪಡೆಯುವಿಕೆಗೆ ಸೆಕ್ಷನ್ 321 ಮೂಲಕ ತಡೆ ನೀಡಿದೆ.
2014ರಲ್ಲಿ ದತ್ತಪೀಠ ಯಾತ್ರಾರ್ಥಿಗಳು ಉಳಾಯಿಬೆಟ್ಟುವಿನಲ್ಲಿ ರ್ಯಾಲಿ ನಡೆಸುತ್ತಿದ್ದಾಗ, ಮುಸ್ಲಿಮರ ಗುಂಪೊಂದು ಕಲ್ಲು ತೂರಾಟ ನಡೆಸಿತ್ತು. ಈ ವೇಳೆ ಪ್ರಕರಣ ವಿಕೋಪಕ್ಕೆ ತೆರಳಿತ್ತು. ಪೊಲೀಸರು ಕಲ್ಲು ತೂರಿದವರ ಮೇಲೆ ಕೇಸ್ ಹಾಕಿದ್ದರು. ಆದರೆ ಆಗ ಶಾಸಕರಾಗಿದ್ದ ಮೊಯ್ಯುದ್ದೀನ್ ಬಾವ ಮತ್ತು ಸಚಿವರಾಗಿದ್ದ ರಮಾನಾಥ ರೈ ಅವರು ಆರೋಪಿಗಳ ಪರ ನಿಂತು ವಕಾಲತ್ತು ವಹಿಸಿದರು. ಸುಳ್ಳು ಕೇಸ್ ಹಾಕಲಾಗಿದೆ ಎಂದು ವಾದಿಸಿದರು. ಸಂಬಂಧಿಸಿದ ಪೊಲೀಸ್ ಅಧಿಕಾರಿಯನ್ನೇ ವರ್ಗಾವಣೆ ಮಾಡಿದರು. ಆದರೆ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ ಹಿಂದೂ ಸಂಘಟನೆಗಳ ಮುಖಂಡರಾದ ಎಂಬಿ ಪುರಾಣಿಕ್, ಸತ್ಯಜಿತ್ ಸುರತ್ಕಲ್, ಜಗದೀಶ್ ಶೇಣವ, ಶರಣ್ ಪಂಪ್ವೆಲ್ ಮುಂತಾದವರ ವಿರುದ್ಧ ಪ್ರಕರಣವನ್ನು ದಾಖಲು ಮಾಡಲಾಯಿತು. ಆದರೆ ಸರ್ಕಾರ ಓಲೈಕೆಗಾಗಿ ಮುಸ್ಲಿಮರ ಮೇಲಿನ ಪ್ರಕರಣವನ್ನು ಕೈಬಿಡುವಂತೆ ಆದೇಶಿಸಿದೆ. ಆದರೆ ಅದೃಷ್ಟವಶಾತ್ ನ್ಯಾಯಾಲಯ ಈ ಆದೇಶಕ್ಕೆ ತಡೆ ತಂದಿದೆ.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವಂತೆ ಸರ್ಕಾರದ ಓಲೈಕೆ ರಾಜಕಾರಣ ಮಿತಿ ಮೀರುತ್ತಿದೆ, ಉತ್ತರಕನ್ನಡ, ಉಡುಪಿ ಜಿಲ್ಲೆಯಲ್ಲೂ ಇದೆ ಪರಿಸ್ಥಿತಿ. ಜಾತಿ, ಧರ್ಮವನ್ನು ನೋಡಿಕೊಂಡು ಅಪರಾಧಕ್ಕೆ ಶಿಕ್ಷೆ ನೀಡುವ ಸ್ಥಿತಿ ಬಂದಿರುವುದು ನಿಜಕ್ಕೂ ದುರಾದೃಷ್ಟಕರ. ಓಲೈಕೆಗಾಗಿ ಯಾವ ಕರಾವಳಿಗರನ್ನು ಸರ್ಕಾರ ತುಳಿಯುವ ಕಾರ್ಯ ಮಾಡಿತೋ, ಲೋಕಸಭಾ ಚುನಾವಣೆಯಲ್ಲಿ ಅದೇ ಕರಾವಳಿಗರು ಮೈತ್ರಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.