ಮಂಗಳೂರು : ಬಿಜೆಪಿಯ ಭದ್ರ ಕೋಟೆ ಮಂಗಳೂರಿನಲ್ಲಿ ರಾಮನವಮಿಯ ದಿನದಂದೇ ನಮೋ ಸುನಾಮಿ ಅಬ್ಬರ ವಿರೋಧಿಗಳ ಜಂಘಾ ಬಲವನ್ನೇ ಸಂಪೂರ್ಣವಾಗಿ ಉಡುಗಿಸಿಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಗಮನದಿಂದ ಅವರನ್ನು ಪ್ರತ್ಯಕ್ಷವಾಗಿ ಕಣ್ ತುಂಬಿಕೊಳ್ಳಲು, ಅವರ ಮಾತನ್ನು ಕೇಳಿಸಿಕೊಳ್ಳಲು ಕಾದು ಕುಳಿತಿದ್ದ ಲಕ್ಷ ಲಕ್ಷ ದೇಶಭಕ್ತ ಕರಾವಳಿಗರನ್ನು ನಮೋ ನಿರಾಶೆಗೊಳಿಸಲಿಲ್ಲ. ಕಿಕ್ಕಿರಿದು ತುಂಬಿದ್ದ ಮೈದಾನಗಳಲ್ಲಿ ಜಾಗವಿಲ್ಲದೆ ಮರಗಳ ಮೇಲೂ ಹತ್ತಿ ಕುಳಿತಿದ್ದ ಅಭಿಮಾನಿಗಳಿಗೆ ಭಾಷಣ ಪ್ರಾರಂಭಕ್ಕೂ ಮೊದಲೇ ‘ದಯವಿಟ್ಟು ಮರದಿಂದ ಇಳಿಯಿರಿ. ನಿಮಗೇನಾದರೂ ನನಗೆ ತುಂಬಾ ನೋವಾಗುತ್ತದೆ. ನಾನು ನಿಮ್ಮವನು, ಮತ್ತೆ ಆಯ್ಕೆಯಾಗಿ ಮತ್ತೆ ನಿಮ್ಮನ್ನು ಭೇಟಿ ಮಾಡುತ್ತೇನೆ’ ಎನ್ನುವ ಮನವಿ ಮಾಡಿದ ಮೋದಿ “ಪೀಪಲ್ ಫಾರ್ ನಮೋ-ನಮೋ ಫಾರ್ ಪೀಪಲ್” ಎನ್ನುವ ನಂಬಿಕೆಗೆ ಕೋಟ್ಯಂತರ ಜನರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದರು.
ಮಂಗಳೂರಲ್ಲಿ ಮತ್ತೆ ಏನೇನಂದರು ಮೋದಿ?
ಮೊದಲಿಗೆ ಎಲ್ಲರಿಗೂ ರಾಮ ನವಮಿಯ ಶುಭಾಶಯ ತಿಳಿಸಿದ ಮೋದಿ.
ಅಂಬೇಡ್ಕರ್ ಜಯಂತಿಯ ಮುನ್ನಾ ದಿನ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ.
ಕಿಕ್ಕಿರಿದು ಸೇರಿದ್ದ ರಾಷ್ಟ್ರಾಭಿಮಾನಿಗಳನ್ನು ಕಂಡು ಕೇಸರಿ ಸಾಗರಕ್ಕೆ ಹೋಲಿಸಿದ ಮೋದಿ.
ದೇಶದ ಹಿತ ದೃಷ್ಟಿಯಿಂದ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನಿಮ್ಮೆಲ್ಲರ ಬೆಂಬಲವೇ ಕಾರಣ ಎಂದ ಮೋದಿ.
ಕಾಂಗ್ರೆಸ್ ಜೆಡಿಎಸ್ ಪಕ್ಷಗಳದ್ದು ಪರಿವಾರವಾದ, ನಮ್ಮದು ರಾಷ್ಟ್ರವಾದ ಎಂದು ಉದಾಹರಣೆ ಸಮೇತ ತಿಳಿಸಿದ ಮೋದಿ.
ನಮ್ಮದು ವಂಶೋದಯವಲ್ಲ, ಅಂತ್ಯೋದಯ ಎಂದ ಮೋದಿ.
ಗುಡ್ಡಗಾಡು ಪ್ರದೇಶಗಳಲ್ಲಿ ಜನರ ಸೇವೆ ಮಾಡುವ ಬಡವರು, ಹರಿದ ಚಪ್ಪಲಿ ಧರಿಸುವ ನಮ್ಮ ನಡುವಿನ ಹಿರಿಯ ಸಾಧಕರು ಈಗ ಪದ್ಮಶ್ರೀ ಪಡೆಯುವಂತಾಯಿತು ಎಂದು ಸ್ಮರಿಸಿದ ಮೋದಿ.
ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸ್ಮಾರಕ ನಿರ್ಮಿಸಿದ್ದೇವೆ. ಆದರೆ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮಾರಕವೇಕೆ ನಿರ್ಮಿಸಲಿಲ್ಲ ಎಂದು ಪ್ರಶ್ನಿಸಿದ ಮೋದಿ.
ಆತಂಕವಾದಿಗಳ ಮನೆಗೆ ನುಗ್ಗಿ ಹೊಡೆಯುವಾಗ ಕಾಂಗ್ರೆಸ್ ಪಕ್ಷ ಸೇನೆಯನ್ನು ಅನುಮಾನಿಸುತ್ತದೆ. ಸೇನಾ ಮುಖ್ಯಸ್ಥರನ್ನೇ ಗಲ್ಲಿಯ ಗೂಂಡಾ ಎಂದು ಕರೆಯುತ್ತದೆ ಎಂದು ಆಕ್ರೋಶ ಹೊರ ಹಾಕಿದ ಮೋದಿ.
ಕೇರಳದಲ್ಲಿ ಮಹಾ ಘಟಬಂಧನದ ಪಕ್ಷಗಳು ಅಯ್ಯಪ್ಪನ ಹೆಸರು ಹೇಳಿದರೆ ಅವರನ್ನು ಬಂಧಿಸಿ ಜೈಲಿಗೆ ಕಳಿಸುತ್ತಿವೆ.ನಮ್ಮ ಅಭ್ಯರ್ಥಿಯನ್ನೂ ಅದೇ ಕಾರಣಕ್ಕೆ ಬಂಧಿಸಿ ಹಿಂಸಿಸಿದೆ. ಇದೆ ಏನು ಪ್ರಜಾ ಪ್ರಭುತ್ವ ಎಂದು ಘಟ ಬಂಧನದ ಪಕ್ಷಗಳನ್ನು ಪ್ರಶ್ನಿಸಿದ ಮೋದಿ.
ಇತರ ರಾಜ್ಯಗಳ ಲಕ್ಷಾಂತರ ರೈತರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ.ಆದರೆ ಕರ್ನಾಟಕ ಸರ್ಕಾರ ರೈತರ ಪಟ್ಟಿಯನ್ನೇ ಕೊಡದೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಮೋದಿ.
ಈ ಚುನಾವಣೆ ಫಲಿತಾಂಶ ಹೊರಬಂದು ಮತ್ತೊಮ್ಮೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವ ತೀರ್ಮಾನವನ್ನು ನಾವು ಈಗಾಗಲೇ ಕೈಗೊಂಡಿದ್ದೇವೆ ಎನ್ನುವ ತೀರ್ಮಾನ ಪ್ರಕಟಿಸಿದ ಮೋದಿ.
ಇಂದು ಕೇವಲ ಮಂಗಳೂರಷ್ಟೇ ಅಲ್ಲದೆ ಇಡೀ ಕರಾವಳಿಯಲ್ಲಿ ಮೈ ಬೀ ಚೌಕಿದಾರ್ ಘೋಷಣೆ ಮುಗಿಲುಮುಟ್ಟಿತ್ತು. ವಿಮಾನ ನಿಲ್ದಾಣದಿಂದ ಕಾರ್ಯಕ್ರಮದ ಮೈದಾನದವರೆಗೂ ಎರಡೂ ಬದಿಗಳಲ್ಲಿ ನಿಂತಿದ್ದ ಲಕ್ಷಾಂತರ ಜನರನ್ನು ಕಂಡ ಮೋದಿಯವರು ಮತ್ತೆ ಮೈದಾನದಲ್ಲೂ ಅಷ್ಟೇ ಸಂಖ್ಯೆಯ ಅಭಿಮಾನಿಗಳನ್ನು ಕಂಡು ಪುಳಕಗೊಂಡಿದ್ದರು. ಮಂಗಳೂರಿನ ಜನರ ಮೇಲೆ ಮೋದಿಯವರಿಟ್ಟಿರುವ ಪ್ರೀತಿಗೆ ಅವರು ತೆರಳುವಾಗ ಎಲ್ಲ ಭದ್ರತಾ ನಿಯಮಗಳನ್ನೂ ಮೀರಿ ತಮ್ಮ ಕಾರಿನ ಬಾಗಿಲು ತೆರೆದು ನಿಂತು ಕರಾವಳಿಗರ ಕಡೆಗೆ ಕೈ ಬೀಸುತ್ತಾ ಸಾಗಿದ್ದೇ ಸಾಕ್ಷಿ.
ಆ ಮೂಲಕ ಭ್ರಷ್ಟಾಚಾರ, ಕೋಮುವಾದ, ಜಾತಿವಾದಗಳನ್ನೇ ಉಸಿರಾಗಿಸಿಕೊಂಡಿರುವ ವಿರೋಧ ಪಕ್ಷಗಳ ಒಗ್ಗಟ್ಟಿನ ಹೋರಾಟ ಫಲ ಕೊಡುವ ಎಲ್ಲಾ ಸಾಧ್ಯತೆಯನ್ನೂ ತಮ್ಮ ಒಂದೇ ಭೇಟಿಯಿಂದ ಕಿತ್ತುಕೊಂಡು ಹೋಗಿದ್ದಾರೆ ಮೋದಿ.
ಈ ನಡುವೆ ಗೋ ಬ್ಯಾಕ್ ಮೋದಿ ಎನ್ನುವ ಚಳುವಳಿ ಮಾಡುವುದಾಗಿ ಹೇಳಿಕೊಂಡಿದ್ದ ವಿರೋಧ ಪಕ್ಷಗಳು ಎಲ್ಲಿದ್ದರು, ಎಲ್ಲಿ ಹೋದರು, ಎಲ್ಲಿ ಘೋಷಣೆ ಕೂಗಿದರು ಎನ್ನುವುದು ಯಾರಿಗೂ ಕಾಣಿಸಲಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.