ಹಸಿರು ಕಾಡುಗಳು ನಾಶವಾಗುತ್ತಿವೆ, ಎಲ್ಲೆಲ್ಲೂ ಕಾಂಕ್ರೀಟ್ ಕಾಡುಗಳೇ ಬೃಹದಾಕಾರವಾಗಿ ಬೆಳೆಯುತ್ತಿವೆ. ಇದರಿಂದ ಭೂಮಿ ಬರಡಾಗುತ್ತಿದೆ, ಕೆರೆಗಳು ಬತ್ತಿ ಹೋಗುತ್ತಿವೆ. ಅಳಿದುಳಿದ ಕೆರೆಗಳಿಗೆ ಕಾರ್ಖಾನೆಗಳ ಮಲಿನ ನೀರುಗಳು ಸೇರಿ ವಿಷಯುಕ್ತವಾಗುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಐಷಾರಾಮಿ ಕಾರಿನಲ್ಲಿ ಕುಳಿತುಕೊಂಡು ನೀರನ್ನು ಭಿಕ್ಷೆಯಾಗಿ ಬೇಡುವ ಕಾಲ ಬರದೆ ಇರಲಾರದು.
ನೀರು ಸಂರಕ್ಷಣೆಯ ಅಗತ್ಯತೆಯನ್ನು ಮನಗಂಡಿರುವ ಗ್ರೇಟರ್ ನೋಯ್ಡಾದ 26 ವರ್ಷದ ಎಂಜಿನಿಯರ್ ರಾಮ್ವೀರ್ ತನ್ವಾರ್ ಅವರು, ಬಹುರಾಷ್ಟ್ರೀಯ ಕಂಪನಿಯಲ್ಲಿನ ಉದ್ಯೋಗವನ್ನು ತೊರೆದು ಕೆರೆಗಳ ಪುನರುಜ್ಜೀವನ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರು 10 ಕೆರೆಗಳನ್ನು ಸಂರಕ್ಷಣೆ ಮಾಡಿದ್ದಾರೆ. ಮೆಕಾನಿಕಲ್ ಎಂಜಿನಿಯರ್ ಆಗಿರುವ ಅವರು, ನೀರಿನ ಕೊರತೆಯ ವಿರುದ್ಧ ಹೋರಾಡಲು ಗ್ರಾಮ ಗ್ರಾಮಗಳಿಗೆ ತೆರಳಿ ನೀರಿನ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ತಾನು ವಾಸವಿದ್ದ ಪ್ರದೇಶದಲ್ಲಿ ನೀರಿನ ಹಾಹಾಕಾರವನ್ನು ನೋಡಿದ ಬಳಿಕ ಇವರು ನೀರು ಸಂರಕ್ಷಣೆಯ ಅಭಿಯಾನವನ್ನು ಆರಂಭಿಸಿದರು.
“ನಾನು 2014 ರಲ್ಲಿ ನನ್ನ ಬಿಟೆಕ್ ಅನ್ನು ಪೂರ್ಣಗೊಳಿಸಿದೆ ಮತ್ತು 2016 ರಲ್ಲಿ ಎಂ.ಟೆಕ್ ಅನ್ನು ಮಾಡಿದೆ. ವಿದ್ಯಾರ್ಥಿ ದಿನಗಳಿಂದಲೇ, ನೀರನ್ನು ಸಮರ್ಪಕವಾಗಿ ಬಳಸುವುದರ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ನಾನು ಪ್ರಾರಂಭಿಸಿದ್ದೆ. ದೊಡ್ಡ ನಗರಗಳಲ್ಲಿ ಜನರು ಒಂದು ಲೀಟರ್ ಕುಡಿಯುವ ನೀರಿಗೆ 20 ರೂಪಾಯಿಗಳನ್ನು ಪಾವತಿ ಮಾಡಿ ಖರೀದಿಸುತ್ತಾರೆ. ಆದರೆ ಕೆಲವು ಗ್ರಾಮಗಳಲ್ಲಿ ಜನರು ನೂರಾರು ಲೀಟರ್ ನೀರನ್ನು ಸುಖಾಸುಮ್ಮನೆ ಪೋಲು ಮಾಡುತ್ತಾರೆ. ನೀರು ಪುಕ್ಕಟೆಯಾಗಿ ಅವರಿಗೆ ಸಿಕ್ಕಿರುವುದು ಇದಕ್ಕೆ ಕಾರಣವಾಗಿದೆ. ವ್ಯರ್ಥವಾಗುತ್ತಿರುವ ನೀರಿನ ಮೌಲ್ಯವನ್ನು ಲೆಕ್ಕಹಾಕಿ ನಾನು ಅಘಾತಕ್ಕೊಳಗಾಗಿದ್ದೆ. ಹೀಗಾಗಿ ಸಕ್ರಿಯ ಅಭಿಯಾನವನ್ನು ನಡೆಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಲು ಆರಂಭಿಸಿದ್ದೇನೆ’ ಎಂದು ತನ್ವಾರ್ ಹೇಳಿದ್ದಾರೆ.
ನೀರಿನ ಬಗ್ಗೆ ಅರಿವು ಮೂಡಿಸಲು ಅವರು ಜಲ್-ಚೌಪಲ್ ಅಥವಾ ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ಆರಂಭಿಸಿದರು. ಮಾಹಿತಿಗಳು ಹರಿದಾಡಿದಂತೆ, ನೆರೆಯ ಗ್ರಾಮಗಳ ಜನರು ಕೂಡ ಈ ಸಭೆಗಳಲ್ಲಿ ಭಾಗಿಯಾಗಲು ಪ್ರಾರಂಭಿಸಿದರು. ಅವರ ಪ್ರಯತ್ನಗಳ ಬಗ್ಗೆ ಅರಿತ ಜಿಲ್ಲಾಡಳಿತವು ಅವರನ್ನು ಮತ್ತಷ್ಟು ಉತ್ತೇಜಿಸಿತು, ಅವರ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಮತ್ತು ಕೆರೆಗಳನ್ನು ಪುನರುಜ್ಜೀವನಗೊಳಿಸಲು ಪ್ರೇರೇಪಿಸಿತು.
ಮೊದಲು ತನ್ವಾರ್ ಅವರು ಕೆರೆಗಳನ್ನು ಸಾಮಾನ್ಯ ಮಟ್ಟದಲ್ಲಿ, ಕಡಿಮೆ ಖರ್ಚಿನಲ್ಲಿ ಸ್ವಚ್ಛ ಮಾಡಲು ಆರಂಭಿಸಿದರು ಮತ್ತು ಬಳಿಕ ರೈತರಿಗೆ ಮೀನುಗಾರಿಕೆಯನ್ನು ಮಾಡಲು ಉತ್ತೇಜಿಸಿದರು.
“ನಾನು ಅನುಪಮ್ ಮಿಶ್ರಾ ಅವರ ಪುಸ್ತಕವನ್ನು ಓದಿದ್ದೇನೆ, ಅದರಲ್ಲಿ ಕೃತಕ ಕೊಳಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಲಾಗಿದೆ. ಪುಸ್ತಕವನ್ನು ಓದಿದ ನಂತರ ಇಂತಹ ಕೊಳಗಳ ಹೆಚ್ಚಿನ ಪ್ರಯೋಜನದ ಬಗ್ಗೆ ನಮಗೆ ಅರಿವಾಯಿತು. ನಮ್ಮ ಹಿರಿಯರು ಕೊಳಗಳನ್ನು ಯಾಕೆ ನಿರ್ಮಿಸಿದ್ದರು ಎಂದು ತಿಳಿಯಿತು. ಕೊಳ ಎಂಬುದು ಸಂರಕ್ಷಿಸಲ್ಪಡಬೇಕಾದ ಗೌರವಯುತ ಪರಂಪರೆಯಾಗಿದೆ, ಅದನ್ನು ಕೊಳಚೆ ಗುಂಡಿಯನ್ನಾಗಿ ಪರಿವರ್ತಿಸಬಾರದು” ಎಂದು, ತನ್ವಾರ್ ಹೇಳುತ್ತಾರೆ.
ನಿಯಮಿತ ಸಭೆಗಳನ್ನು ನಡೆಸಿದ ನಂತರ, ತನ್ವಾರ್ ಅವರು ಗ್ರಾಮದ ಮುಖ್ಯಸ್ಥರನ್ನು ಮನವೊಲಿಸಲು ಯಶಸ್ವಿಯಾದರು ಮತ್ತು ಅವರನ್ನು, ಗ್ರಾಮಸ್ಥರನ್ನು ನೀರಿನ ಸಂರಕ್ಷಣೆಯ ಅಭಿಯಾನದಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡಿದರು.
“ನಾವು ಕೊಳಗಳನ್ನು ಪುನರುಜ್ಜೀವನಗೊಳಿಸಲು ಪ್ರಾರಂಭಿಸಿದ ಬಳಿಕ, ನಾವು ಸ್ಥಳೀಯ ಹಳ್ಳಿಗರನ್ನೂ ಈ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಿದೆವು, ಇದರಿಂದಾಗಿ ಅವರು ಭಾವನಾತ್ಮಕವಾಗಿ ಕೆರೆಗಳ ಜೊತೆ ಸಂಬಂಧ ಹೊಂದುತ್ತಾರೆ ಮತ್ತು ಅದರ ಬಗ್ಗೆ ಅಪಾರ ಕಾಳಜಿಯನ್ನೂ ವಹಿಸುತ್ತಾರೆ. ಈ ಮೂಲಕ ಕೆರೆಗಳು ಮಲಿನಗೊಳ್ಳುವುದರ ವಿರುದ್ಧ ಹೋರಾಟ ನಡೆಸುತ್ತಾರೆ” ಎಂದು ತನ್ವಾರ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.