ಬಾಬಾಸಾಹೇಬ್ ಅಂಬೇಡ್ಕರ್ ಆಧುನಿಕ ಭಾರತದ ಕರ್ಮಯೋಗಿಯೂ, ಜ್ಞಾನಯೋಗಿಯೂ ಹೌದು. ಶತಮಾನಗಳಿಂದ ಭಾರತವನ್ನು ರೋಗ ಪೀಡಿತವಾಗಿಸಿದ್ದ ಅಸ್ಪೃಶ್ಯತೆಯ ನೋವನ್ನು ಸ್ವತಃ ಅನುಭವಿಸಿ, ಆ ನೋವಿನಿಂದ ತನ್ನ ಸಮುದಾಯವನ್ನು ಹೊರತರುವ ಶಪಥದೊಂದಿಗೆ ಹಗಲಿರುಳು ಕಾರ್ಯಪ್ರವೃತ್ತರಾಗಿದ್ದವರು. ಒಂದೆಡೆ ತೀವ್ರಸ್ವರೂಪದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಸ್ವತಂತ್ರ ಭಾರತದಲ್ಲಿ ಅಸ್ಪೃಶ್ಯರ ಸ್ಥಾನಮಾನ ಏನು? ಎನ್ನುವ ಚರ್ಚೆ ನಡೆಯುತ್ತಿತ್ತು. ಇದರ ನಡುವೆ ಅಂದಿನ ಪ್ರಮುಖ ರಾಜಕೀಯ ಪಕ್ಷವಾಗಿದ್ದ ಕಾಂಗ್ರೆಸ್ ತಾನೇ ಅಸ್ಪೃಶ್ಯರ ನಿಜವಾದ ಪ್ರತಿನಿಧಿ ಎಂದು ಅಂಬೇಡ್ಕರ್ ಮತ್ತು ಬ್ರಿಟಿಷ್ ಅಧಿಕಾರಿಗಳ ಮುಂದೆ ವಾದಿಸುತ್ತಿತ್ತು. ಹಾಗಿದ್ದರೆ ನಿಜವಾಗಿಯೂ ಕಾಂಗ್ರೇಸ್ ಅಸ್ಪೃಶ್ಯರಿಗಾಗಿ ಏನು ಮಾಡಿದೆ ?ಈ ಕುರಿತು ಬಾಬಾಸಾಹೇಬರು 1945 ರಲ್ಲಿ “ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?” ಎನ್ನುವ ಅಧ್ಯಯನಪೂರ್ಣ, ವಿಶ್ಲೇಷನಾತ್ಮಕ ಕೃತಿಯೊಂದನ್ನು ರಚಿಸಿದ್ದು ಬಹಳ ಕುತೂಹಲಕಾರಿಯಾಗಿದೆ. ದೇಶದಲ್ಲಿ ಇಂದಿಗೂ ಕಾಂಗ್ರೆಸ್ ತನ್ನನ್ನು ತಾನು ದಲಿತೋದ್ಧಾರಕ ಎನ್ನುವ ಕ್ರೆಡಿಟ್ ತೆಗೆದುಕೊಳ್ಳಲು ಬಯಸುತ್ತಿದೆ. ಆದರೆ ವಾಸ್ತವದಲ್ಲಿ ಕಾಂಗ್ರೆಸ್ ದಲಿತ ಸಮುದಾಯಕ್ಕೆ ಹೇಗೆ ನಿರಂತರವಾಗಿ ದ್ರೋಹವನ್ನು ಎಸಗಿಕೊಂಡು ಬಂದಿತ್ತೆನ್ನುವುದರ ಬಗ್ಗೆ ಈ ಕೃತಿ ಬೆಳಕು ಚೆಲ್ಲುತ್ತದೆ. 1937 ರ ಚುನಾವಣಾ ಫಲಿತಾಂಶದ ಅಂಕಿ ಅಂಶಗಳನ್ನು ಕೂಲಂಕಶವಾಗಿ ವಿಶ್ಲೇಶಿಸಿದ ವೈಜ್ಞಾನಿಕ ಕೃತಿ ಇದಾಗಿದ್ದು ಇಂದಿಗೂ ಬೋಧಪ್ರದವಾಗಿದೆ.
1917 ರಿಂದ 1946 ರ ವರೆಗೆ ದೇಶದಲ್ಲಿ ಕಾಂಗ್ರೆಸ್ ಹೇಗೆ ನಿರಂತರವಾಗಿ ದಲಿತರ ವಿರೋಧಿಯಾಗಿ ಕೆಲಸ ಮಾಡಿಕೊಂಡು ಬಂದಿದೆ ಎನ್ನುವುದನ್ನು ನೋಡುವ ಕುತೂಹಲವುಳ್ಳವರು ಈ ಪುಸ್ತಕವನ್ನು ಓದಲೇ ಬೇಕು. ಕಾಂಗ್ರೆಸ್ನ ಇತಿಹಾಸದಲ್ಲಿ ಅಸ್ಪೃಶ್ಯತೆಯನ್ನು ಒಂದು ನಿವಾರಿಸಬೇಕಾದ ಸಮಸ್ಯೆಯಾಗಿ ಕಂಡದ್ದೇ ಇಲ್ಲ. ಅದರ ಬದಲಾಗಿ 1886 ರಲ್ಲೇ ಕಾಂಗ್ರೆಸ್ ತನ್ನನ್ನು ತಾನು ಸಾಮಾಜಿಕ ಸುಧಾರಣೆಯ ಚರ್ಚೆಯ ವಿರುದ್ಧ ಎಂದು ಸಾರಿಕೊಂಡಿತ್ತು. ಹೀಗಿದ್ದ ಕಾಂಗ್ರೆಸ್ 1917 ರ ಅಧಿವೇಶನದಲ್ಲಿ ಅಸ್ಪೃಶ್ಯತೆಯನ್ನು ಖಂಡಿಸಿ ನಿರ್ಣಯ ಕೈಗೊಂಡರೂ ಸ್ವತಃ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅನಿಬೆಸೆಂಟರು ಅಸ್ಪೃಶ್ಯರ ಮಕ್ಕಳು ಯಾವುದೇ ಕಾರಣದಿಂದಲೂ ಸುಸಂಸ್ಕೃತರೆನ್ನಿಸಿಕೊಂಡವರ ಮಕ್ಕಳು ಓದುತ್ತಿದ್ದ ಶಾಲೆಗಳಿಗೆ ಪ್ರವೇಶ ಪಡೆಯುವುದರ ವಿರುದ್ಧವಾಗಿದ್ದರು !. ಸಾಮಾಜಿಕ ಸುಧಾರಣೆಯ ವಿಷಯದಲ್ಲಿ ಕಾಂಗ್ರೆಸ್ಗೆ ಇದ್ದ ಬದ್ಧತೆಯ ಕೊರತೆಯನ್ನು ಅಂಬೇಡ್ಕರ್ ಪ್ರಶ್ನಿಸುತ್ತಾರೆ. “1895 ಕಾಂಗ್ರೆಸ್ ಅಧಿವೇಶನದಲ್ಲಿ ಶ್ರೀ ಸುರೇಂದ್ರನಾಥ ಬ್ಯಾನರ್ಜಿಯವರು ಮಾಡಿದ ಅಧ್ಯಕ್ಷಿಯ ಭಾಷಣವೇ ಸಾಮಾಜಿಕ ಸುಧಾರಣೆಯ ಅವಶ್ಯಕತೆಯನ್ನು ಕುರಿತು ಕಾಂಗ್ರೆಸ್ ಅಧ್ಯಕ್ಷರೊಬ್ಬರು ಮಾಡಿದ ಕೊನೆಯ ಭಾಷಣವಾಯಿತು” ಎನ್ನುತ್ತಾರೆ ಅಂಬೇಡ್ಕರ್. ಇದಾಗಿ ಸುಮಾರು 22 ವರ್ಷಗಳ ನಂತರ 1917ರಲ್ಲಿ ನಿಮ್ನ ವರ್ಗಗಳಿಗೆ ಸಾಮಾಜಿಕ ಸ್ಥಾನಮಾನಗಳನ್ನು ನೀಡುವ ಗೊತ್ತುವಳಿಯನ್ನು ಕಾಂಗ್ರೆಸ್ ಕೈಗೊಂಡರೂ ಈ ಗೊತ್ತುವಳಿಯ ಹಿಂದೆ ಗುಪ್ತ ರಾಜಕೀಯ ಉದ್ದೇಶವಿತ್ತು ಎಂದಿದ್ದರು ಅಂಬೇಡ್ಕರ್. ಈ ಗೊತ್ತುವಳಿಗೆ ಅನುಸಾರವಾಗಿ ಅಸ್ಪೃಶ್ಯತಾ ನಿವಾರಣಾ ಚಳವಳಿಯನ್ನು ಆರಂಭಿಸಬೇಕಾಗಿದ್ದ ಕಾಂಗ್ರೆಸ್ ಏನನ್ನೂ ಮಾಡದೇ ಇದ್ದುದನ್ನು ಡಾ.ಅಂಬೇಡ್ಕರ್ ” ಕಾಂಗ್ರೆಸ್ ಗೊತ್ತುವಳಿಯ ಸ್ವೀಕಾರ ಒಂದು ಕ್ರೂರ ವ್ಯವಹಾರವಾಗಿತ್ತು. ಇದು ನಿಮ್ನ ವರ್ಗದವರು ಕಾಂಗ್ರೆಸ್ – ಲೀಗ್ ಯೋಜನೆಗೆ ತಮ್ಮ ಬೆಂಬಲ ನೀಡಲು ಹಾಕಿದ್ದ ಷರತ್ತನ್ನು ಔಪಚಾರಿಕವಾಗಿ ಪೂರೈಸುವ ತಂತ್ರವಾಗಿತ್ತು. ಅಸ್ಪೃಶ್ಯತೆಯ ಆಚರಣೆಯಿಂದ ಮನುಷ್ಯರ ನಡುವಣ ಅಮಾನುಷ ಆಚರಣೆಯ ಬಗ್ಗೆ ಕಾಂಗ್ರೆಸಿಗರು ಯಾವುದೇ ರೀತಿಯಲ್ಲಿ ವಿಚಲಿತರಾಗಿರಲಿಲ್ಲ” (ಪು : 18, ಸಂಪುಟ: 7) ಎನ್ನುತ್ತಾರೆ.
1922 ಬಾರ್ಡೊಲಿ ಅಧಿವೇಶನ ಅಸ್ಪೃಶ್ಯರೆಂದು ಕರೆಯಲಾಗುತ್ತಿರುವವರ ಹಿತರಕ್ಷಣೆಗಾಗಿ ಕಾರ್ಯಗತಗೊಳ್ಳುವ ಯೋಜನೆಯೊಂದನ್ನು ಸಿದ್ಧಮಾಡುವ ಗೊತ್ತುವಳಿಯನ್ನು ಮಂಡಿಸಿದ್ದರೂ 1923 ರ ಮುಂಬಯಿ ಅಧಿವೇಶನಕ್ಕಾಗುವಾಗ ” ಈ ಅಸ್ಪೃಶ್ಯತೆಯ ಪ್ರಶ್ನೆ ಹಿಂದೂ ಸಮಾಜಕ್ಕೆ ಸಂಬಂಧಿಸಿರುವುದರಿಂದ ಈ ವಿಷಯವನ್ನು ಅಖಿಲ ಭಾರತ ಹಿಂದೂ ಮಹಾಸಭೆ ಕೈಗೆತ್ತಿಕೊಳ್ಳಬೇಕೆಂದು” ತೀರ್ಮಾನಿಸಿತು. ಆ ಮೂಲಕ ಕಾಂಗ್ರೆಸ್ ಆಡಂಬರದ ಅಬ್ಬರಕ್ಕೆ ಲಜ್ಜಾಸ್ಪದ ಕೊನೆಯನ್ನು ಮಾಡಿತು.” ಕಾಂಗ್ರೆಸ್ ಅಸ್ಪೃಶ್ಯರ ಸಮಸ್ಯೆಯಿಂದ ಹೇಗೆ ತನ್ನ ಕೈ ತೊಳೆದುಕೊಂಡಿತು ಎಂಬುದು ಇದರಿಂದ ಗೊತ್ತಾಗುತ್ತದೆ. ಈ ಪ್ರಶ್ನೆಯನ್ನು ಹಿಂದೂ ಮಹಾಸಭಾಕ್ಕೆ ಬಿಟ್ಟುಕೊಡುವ ಮೂಲಕ ಅದು ಅಸ್ಪೃಶ್ಯರ ಗಾಯದ ಮೇಲೆ ಬರೆ ಎಳೆದಂತಾಗಿತ್ತು ” (ಪು : 22, ಸಂ: 7) ಎಂದಿದ್ದರು ಅಂಬೇಡ್ಕರ್. “ಕಾಂಗ್ರೆಸ್ನ ಈತೀರ್ಮಾನ ಹಿತವಂಚನೆಯಾಗಿತ್ತು. ಆ ಕಾರಣದಿಂದ ಲಜ್ಜಾಸ್ಪದ ಮತ್ತು ಅಪಮಾನಕರ ಅಂತ್ಯವನ್ನು ಕಂಡಿತು” ( ಪು: 23, ಸಂ: 7)
1921 ರಲ್ಲಿ ಕಾಂಗ್ರೆಸ್ ಅಸ್ಪ್ರಶ್ಯತಾ ನಿವಾರಣೆಗಾಗಿ ’ತಿಲಕ್ ಸ್ವರಾಜ್ಯ ನಿಧಿ’ಯನ್ನು ಆರಂಭಿಸಿ ಸಾರ್ವಜನಿಕರಿಂದ ಸಂಗ್ರಹಿಸಿದ 1.30 ಕೋಟಿಯೂ ಸೇರಿಂದಂತೆಒಟ್ಟು 1.80 ಕೋಟಿಯನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ಲೂಟಿ ಮಾಡಿತು. ಅಸ್ಪೃಶ್ಯರ ಸ್ಥಿತಿಗತಿಯ ಸುಧಾರಣೆಗಾಗಿ ಆದ್ಯತೆಯ ಮೇಲೆ ಹಣ ನೀಡಬೇಕಾಗಿದ್ದ ಕಾಂಗ್ರೆಸ್, ಅನೇಕರ ಉಪಜೀವನಕ್ಕಾಗಿ ಈ ನಿಧಿಯನ್ನು ಖರ್ಚು ಮಾಡಿತು. ಅಂತಿಮವಾಗಿ ಪ್ರತ್ಯೇಕ ಅಸ್ಪೃಶ್ಯ ನಿಧಿಯಗಾತ್ರ 5 ಲಕ್ಷ ಇರಬೇಕು ಎಂದು ನಿಗದಿ ಮಾಡಿದ ಕಾಂಗ್ರೆಸ್ ಅಸ್ಪೃಶ್ಯ ಉದ್ಧಾರ ಅಪ್ರಮುಖ ಹಾಗೂ ಲಾಭದಾಯಕವಲ್ಲದ ಕಾರ್ಯ’ ಎಂದು ಪರಿಗಣಿಸಿ ಆ ಮೊತ್ತವನ್ನು ೨ ಲಕ್ಷಕ್ಕೆ ಇಳಿಸಿತು. 60 ದಶಲಕ್ಷ ಅಸ್ಪೃಶ್ಯರಿಗಾಗಿ ಕಾಂಗ್ರೆಸ್ ನಿಗದಿ ಮಾಡಿದ ನಿಧಿ 2 ಲಕ್ಷ ರೂಪಾಯಿಗಳು!. ಅಸ್ಪೃಶ್ಯರ ಉದ್ಧಾರ ಪ್ರಮುಖ ಕಾರ್ಯಕ್ರಮವೆಂದು ಘೋಷಿಸಿಕೊಂಡಿದ್ದ ಬಾರ್ಡೋಲಿ ಕಾರ್ಯಕ್ರಮಕ್ಕೆ ಖರ್ಚು ಮಾಡಿದ್ದ ಒಟ್ಟು 49.5 ಲಕ್ಷ ರೂಪಾಯಿಗಳಲ್ಲಿ ಅಸ್ಪೃಶ್ಯರ ಉದ್ಧಾರಕ್ಕಾಗಿ ಖರ್ಚು ಮಾಡಿದ್ದ ರೂಪಾಯಿಗಳು 43,884 ಮಾತ್ರ. ಇದಕ್ಕಿಂತ ಹೆಚ್ಚಿನ ಕಪಟಾಚರಣೆ ಇರಲು ಸಾಧ್ಯವೇ ? ಕಾಂಗ್ರೆಸ್ ಅಸ್ಪೃಶ್ಯರ ಬಗ್ಗೆ ವ್ಯಕ್ತಪಡಿಸಿದ ಪ್ರೀತಿ ಎಲ್ಲಿ ಹೋಯಿತು?” (ಪು: 37) ಎಂದು ಕೇಳುತ್ತಾರೆ.
ಪೂನಾ ಒಪ್ಪಂದವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಅಸ್ಪೃಶ್ಯರ ಮೇಲೆ ಮಾಡಿಕೊಂಡು ಬಂದ ಪ್ರಹಾರದ ಬಗ್ಗೆ ಅಂಬೇಡ್ಕರ್ ಅವರಲ್ಲಿ ತೀವ್ರವಾದ ಆಕ್ರೋಶವಿತ್ತು. ಒಪ್ಪಂದವನ್ನೇ ತಿರಸ್ಕರಿಸುವ ಸಂಚು ಮಾಡಿ ಅದು ಸಾಧ್ಯವಿಲ್ಲವೆಂದು ತಿಳಿದಾಗ ಯಾವುದೇ ರೀತಿಯಲ್ಲಿ ಅದು ಅಸ್ಪೃಶ್ಯರಿಗೆ ಉಪಯೋಗವಾಗದಂತೆ ಮಾಡುವ ಪಿತೂರಿ ಸ್ಪಷ್ಟವಾಗಿ ಕಾಣುತ್ತದೆ. ಆ ಮೂಲಕ ಪಕ್ಷವು ಭಾರತದ ಇತಿಹಾಸದಲ್ಲೇ ದಲಿತರ ರಾಜಕೀಯ ಬೇಡಿಕೆಗಳ ಬಗ್ಗೆ ವರ್ತಿಸಿದ ಅತ್ಯಂತ ಹೀನ ನಡವಳಿಕೆ ಬಯಲಾಗುತ್ತದೆ. ಕಾಂಗ್ರೆಸ್ ಮಂತ್ರಿ ಮಂಡಲವನ್ನು ರಚಿಸುವ ಸಂದರ್ಭದಲ್ಲಿ ಮೇಲ್ವರ್ಗದವರನ್ನು ನೇಮಿಸಿಕೊಳ್ಳುವಾಗ ಅತ್ಯಂತ ಹೆಚ್ಚಿನ ಶಿಕ್ಷಣ ಪಡೆದವರನ್ನೂ , ಅಸ್ಪೃಶ್ಯ ಸಮುದಾಯದವರನ್ನು ಆಯ್ಕೆ ಮಾಡಿಕೊಳ್ಳುವಾಗ ಕಡಿಮೆ ಪ್ರಮಾಣದ ಅಕ್ಷರಸ್ಥರನ್ನೂ ನೇಮಿಸಿಕೊಂಡು, ಬುದ್ಧಿ ಶಕ್ತಿಯ ಬಲದಿಂದ ಮಂತ್ರಿಮಂಡಲದಲ್ಲಿ ಅಸ್ಪೃಶ್ಯರು ಎಂದೂ ಪ್ರಬಲರಾಗದಂತೆ ನೋಡಿಕೊಂಡಿತ್ತು. ಅಸ್ಪೃಶ್ಯರಿಗೆ ಶಾಸಕಾಂಗದಲ್ಲಿ ಪ್ರಾತಿನಿಧ್ಯ ನೀಡುವ ಉದ್ದೇಶವೇ ಅವರು ತಮ್ಮ ಕುಂದುಕೊರತೆಗಳನ್ನು ಪ್ರಕಟಪಡಿಸಿ ತಮಗಾಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳುವುದಾಗಿದ್ದರೂ, ಕಾಂಗ್ರೆಸ್ ಹೀಗಾಗದಂತೆ ಯಶಸ್ವಿಯಾಗಿ ತಡೆಯಿತು. ಇದಕ್ಕಾಗಿಯೇ ಅಂಬೇಡ್ಕರ್ ” ಕಾಂಗ್ರೆಸ್ ಪೂನಾ ಒಪ್ಪಂದದ ಸಾರವನ್ನು ಹೀರಿ ಸಿಪ್ಪೆಯನ್ನು ಅಸ್ಪೃಶ್ಯರ ಮುಖಕ್ಕೆ ಎಸೆಯಿತು” (ಪು: 101) ಎನ್ನುತ್ತಾರೆ.
ದಲಿತರ ದೇವಾಲಯ ಪ್ರವೇಶದ ಕುರಿತಾದ ಕಾಂಗ್ರೆಸ್ನ ಹೋರಾಟವೂಒಂದು ನಾಟಕವಾಗಿತ್ತು.” ಏಕೆಂದರೆ ದೇವಾಲಯಗಳು ಮುಕ್ತವಾದದ್ದೇ ಹಲವಾರು. ಈ ಹಲವಾರು ದೇವಾಲಯಗಳೂ ಪಾಳುಬಿದ್ದವು, ನಾಯಿಕತ್ತೆಗಳಿಗೆ ಆಶ್ರಯ ನೀಡಿದವು. ಕೇವಲ ಪ್ರಚಾರಕ್ಕೆಂದೇ ಈ ವಿಧವಾದ ದೇವಾಲಯಗಳನ್ನು ಹರಿಜನ ಪ್ರವೇಶಕ್ಕೆ ಮುಕ್ತಗೊಳಿಸಿದ ಕಾಂಗ್ರೆಸ್ ಪಕ್ಷವು ತನ್ನ ಹಿತ ಸಾಧನೆಗಾಗಿಯಾವ ವಿಧವಾದ ಸುಳ್ಳನ್ನೂ ಸಾರಲು ಸಿದ್ಧ ಎಂಬ ಸಂಗತಿಯನ್ನು ಪ್ರಪಂಚಕ್ಕೆ ಅರಿವು ಮಾಡಿಕೊಟ್ಟಿತು” (ಪು: 114) ಎನ್ನುತ್ತಾರೆ ಅಂಬೇಡ್ಕರ್. ಕಾಂಗ್ರೆಸ್ ನೇತೃತ್ವದಲ್ಲಿ ಆರಂಭಗೊಂಡ ’ಹರಿಜನ ಸೇವಕ ಸಂಘ’ ರಾಜಕೀಯೇತರ ಉದ್ದೇಶಕ್ಕಾಗಿದೆ ಎಂದು ಹೇಳಿಕೊಂಡರೂ ಅಸ್ಪೃಶ್ಯರಿಗೆ ಅಲ್ಪ ಸೇವೆಯನ್ನು ನೀಡಿ ಅವರು ಕೃತಜ್ಞತಾ ಭಾವದಲ್ಲಿದ್ದಾಗ ಅವರನ್ನು ಕಾಂಗ್ರೆಸ್ ಪ್ರಭಾವಕ್ಕೆ ಗುರಿಪಡಿಸುವ, ಕಾಂಗ್ರೆಸ್ ಧೋರಣೆಯನ್ನು ಹೇರುವ ಮೂಲಕ ಸಂಘವನ್ನು ’ಅಸ್ಪೃಶ್ಯರನ್ನು ಕಾಂಗ್ರೆಸ್ ಪರ ತರಬೇತಿ ತಾಣವನ್ನಾಗಿ ನಿರ್ಮಿಸುವ ಆಸೆಯನ್ನು ಹೊಂದಿತ್ತು’ ಎಂದು ಅಂಬೇಡ್ಕರ್ ಆರೋಪಿಸುತ್ತಾರೆ. ಇದೇ ಹೊತ್ತಿಗೆ ಕಾಂಗ್ರೆಸ್ ವಿರೋಧಿ ಅಸ್ಪೃಶ್ಯರನ್ನು ಕಪ್ಪು ಪಟ್ಟಿಗೆ ದಾಖಲಿಸಿತು. ಕಾಂಗ್ರೆಸ್ನೊಡನೆ ಸಂಘರ್ಷಕ್ಕೆ ಇಳಿದವರನ್ನು ಸಂಕಷ್ಟಕ್ಕೆ ಗುರಿಮಾಡಲಾಗಿತ್ತು. ಈ ಕಾರಣಕ್ಕಾಗಿ ’ಅಸ್ಪೃಶ್ಯರನ್ನು ಕರುಣೆಯಿಂದಲೇ ಕೊಲ್ಲಬಯಸಿದ ಹೀನ ಸಂಸ್ಥೆ ಕಾಂಗ್ರೆಸ್’ ಎಂದು ಹೇಳುತ್ತಿದ್ದರು.
ಕಾಂಗ್ರೆಸ್ ತನ್ನನ್ನು ತಾನು ಅಸ್ಪೃಶ್ಯರ ಪ್ರತಿನಿಧಿ ಎಂಬಂತೆ ಬಿಂಬಿಸಿಕೊಂಡರೂ 1937 ರ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸುವ ಅಂಬೇಡ್ಕರ್ ಕಾಂಗ್ರೆಸ್ನ ವಾದ ಹೇಗೆ ಸುಳ್ಳಿನ ಕಂತೆ, ಸತ್ಯಕ್ಕೆ ದೂರ ಎನ್ನುವುದನ್ನು ನಿರೂಪಿಸುತ್ತಾರೆ. ಈ ಫಲಿತಾಂಶದಲ್ಲಿ ಅಸ್ಪೃಶ್ಯರು ಕಾಂಗ್ರೆಸ್ ಪಕ್ಷವನ್ನು ತಮ್ಮ ಮೊದಲನೇ ಶತ್ರು ಎಂದೇ ಪರಿಗಣಿಸಿದ್ದು ಸ್ಪಷ್ಟವಾಗಿ ಕಂಡುಬರುತ್ತದೆ ಎನ್ನುತ್ತಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಅಸ್ಪೃಶ್ಯರನ್ನು ’ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕೈಗೊಂಬೆಗಳು’ ಎಂದು ಕರೆದು ಅವಮಾನಿಸಿತ್ತು. ಕಾಂಗ್ರೆಸನ್ನು ವಿರೋಧಿಸಿದ ಕಾರಣಕ್ಕಾಗಿ ಅಂಬೇಡ್ಕರನ್ನು ದೇಶದ್ರೋಹಿ ಎಂದೂ ಕರೆದಿತ್ತು. (ಧನಂಜಯಖೀರ್ : ಪು:210) ಅಸ್ಪೃಶ್ಯರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದಂತೆ ಮಾಡುವುದು, ಸ್ವಾತಂತ್ರ್ಯೋತ್ತರ ಭಾರತದಲ್ಲೂ ಸ್ವಾತಂತ್ರ್ಯ ಇಲ್ಲದ ಗುಲಾಮರಂತೆ ಉಳಿಸುವ ತಂತ್ರವಾಗಿತ್ತು. ಸ್ವತಂತ್ರ ಭಾರತದ ಸಂವಿಧಾನದಲ್ಲೂ ಅಸ್ಪೃಶ್ಯರ ಹಿತಾಸಕ್ತಿಗೆ ಧಕ್ಕೆ ಬಾರದಂತಹ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲೂ ಕಾಂಗ್ರೆಸ್ ನಿರಾಕರಿಸಿತ್ತು. ಅಸ್ಪೃಶ್ಯರ ಹಿತದದೃಷ್ಟಿಯಿಂದ ಸಂವಿಧಾನದಲ್ಲಿ ರಕ್ಷಣೆಯನ್ನು ನೀಡಬೇಕು ಎಂದು ಅಖಿಲ ಭಾರತ ಪರಿಶಿಷ್ಟ ವರ್ಗದ ಮಹಾಸಭೆ ನಿರ್ಣಯ ಅಂಗೀಕರಿಸಿ, ಅದರಂತೆ ಶಾಸನ ಸಭೆ, ಆಡಳಿತಾಂಗ, ಸಾರ್ವಜನಿಕ ಸೇವೆಗಳಲ್ಲಿ ಅಸ್ಪೃಶ್ಯರಿಗೆ ಕನಿಷ್ಠ ಪ್ರತಿನಿಧಿತ್ವದ ಭರವಸೆ ನೀಡಬೇಕು ಎಂದು ಮೀಸಲಾತಿಯನ್ನು ಆಗ್ರಹಿಸಲಾಗಿತ್ತು. ಆದರೆ ಕಾಂಗ್ರೆಸ್ ಅದನ್ನು ನಿರಾಕರಿಸಿ ಅಸ್ಪೃಶ್ಯರನ್ನು ಜಾತಿವಾದಿ ಪ್ರಚಾರಕರು ಎಂದು ಆಪಾದಿಸಿತ್ತು. ಕಾಂಗ್ರೆಸ್ ರಾಷ್ಟ್ರೀಯತೆಯ ಸೋಗಿನಲ್ಲಿ ಜಾತೀಯತೆಯನ್ನು ಪ್ರೋತ್ಸಾಹಿಸುತ್ತಿತ್ತು. ಈ ಕಾರಣದಿಂದಲೇ ಅಂಬೇಡ್ಕರ್ “ಈ ದೇಶದಲ್ಲಿ ಯಾರಾದರೂ ಜಾತಿವಾದಿಗಳಿದ್ದಲ್ಲಿ ಅದು ಕಾಂಗ್ರೆಸ್” (ಪು: 167) ಎಂದಿದ್ದು. ದೇವಾಲಯ ಪ್ರವೇಶದ ಹಕ್ಕನ್ನು ಪ್ರತಿಪಾದಿಸುವ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಿಂದೆ ಸರಿದು ತನಗೆ ಅಸ್ಪೃಶ್ಯರ ಹಿತ ಮತ್ತು ಚುನಾವಣೆಯ ಗೆಲುವು ಇವುಗಳಲ್ಲಿ ಅಸ್ಪೃಶ್ಯರ ಹಿತಕ್ಕಿಂತ ಚುನಾವಣೆಯ ಗೆಲುವೇ ಮುಖ್ಯವೆಂಬಂತೆ ವರ್ತಿಸಿದ್ದೂ ಈಗ ಇತಿಹಾಸ.
ಅಂಬೇಡ್ಕರ್ ಕಾಂಗ್ರೆಸ್ನ ಈ ಕಪಟ ನಡವಳಿಕೆಯನ್ನು ಕಂಡೇ ತಮ್ಮ ಜೀವಿತಾವಧಿಯಲ್ಲಿ ಕಾಂಗ್ರೆಸ್ನಿಂದ ದೂರ ಉಳಿದು ಹೋರಾಟದಿಂದಲೇ ತಮ್ಮ ಸಮುದಾಯದ ನೋವಿಗೆ ನ್ಯಾಯಯುತವಾದ ಪರಿಹಾರವನ್ನು ಕಂಡುಕೊಳ್ಳಬಯಸಿದ್ದು. ಕಾಂಗ್ರೆಸ್ ಸೇರುವುದು ಆತ್ಮಹತ್ಯೆಗೆ ಸಮ ಎಂದೂ ಇದೇ ಕಾರಣಕ್ಕೆ ಘೋಷಿಸಿದ್ದು. ದಮನಕ್ಕೊಳಗಾಗಿದ್ದ ಸಮುದಾಯದಿಂದ ಧೀಮಂತ ನಾಯಕನೊಬ್ಬ ಕಾಣಿಸಿಕೊಂಡ ಈ ವೈಶಿಷ್ಟ್ಯಪೂರ್ಣ ಬೆಳವಣಿಗೆಯನ್ನು ಸ್ವಾಗತಿಸುವಷ್ಟು ವಿವೇಕ, ದೂರದೃಷ್ಟಿ ಕಾಂಗ್ರೆಸ್ಗೆ ಇರಲಿಲ್ಲ. ಕಾಂಗ್ರೆಸ್ ಆ ಕಾಲದುದ್ದಕ್ಕೂ ಅಂಬೇಡ್ಕರ್ ಅವರನ್ನು ಸಂದೇಹಿಸುತ್ತಾ, ಬ್ರಿಟಿಷ್ ಏಜೆಂಟರೆಂದು, ದೇಶದ್ರೋಹಿ ಎಂದು ಆಪಾದಿಸುತ್ತಾ ಕಳೆದದ್ದು ಇತಿಹಾಸದ ಪುಟಗಳಲ್ಲಿ ಅಡಗಿದ ಸತ್ಯ.
ಡಾ. ರೋಹಿಣಾಕ್ಷ ಶಿರ್ಲಾಲು
ಕನ್ನಡ ಉಪನ್ಯಾಸಕರು, ವಿವೇಕಾನಂದ ಕಾಲೇಜು ಪುತ್ತೂರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.