ನಾವು ಭಾರತೀಯರು ಮೂರ್ಖರಂತೆ ನಾಯಕರನ್ನು ಆರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೇವೆ. ನಮ್ಮ ದೃಷ್ಟಿಕೋನದಿಂದಾಗಿ ನಾಯಕರಾಗಲು ಯೋಗ್ಯತೆ ಇಲ್ಲದವರನ್ನು ನಾಯಕರಂತೆ ವೈಭವೀಕರಿಸಿದ್ದೇವೆ. ಭೂತಕಾಲದಲ್ಲಿ, ವ್ಯಕ್ತಿಯನ್ನು ನಾಯಕನಾಗಿಸುವ ಗುಣಗಳನ್ನು ಗುರುತಿಸುವುದರಲ್ಲಿ ನಾವು ವಿಫಲರಾಗಿದ್ದು ಮಾತ್ರವಲ್ಲ, ದೌರ್ಬಲ್ಯವನ್ನು ಸದ್ಗುಣ ಎಂಬಂತೆ ಲೇಬಲ್ ಮಾಡಿಬಿಟ್ಟಿದ್ದೇವೆ! ನಾವು ನಾಯಕನ ಗುಣಗಳನ್ನು ಪ್ರಶಂಸಿಸದೇ ಇದ್ದ ಕೆಲವೊಂದು ನಿದರ್ಶನಗಳನ್ನು ಈ ಲೇಖನದಲ್ಲಿ ಉಲ್ಲೇಖ ಮಾಡಲಾಗಿದೆ.
ಯುಧಿಷ್ಠಿರ ಮತ್ತು ಭೀಮನ ನಡುವೆ, ನಮ್ಮ ಪೂರ್ವಜನರು ಯುಧಿಷ್ಠಿರನನ್ನೇ ವೈಭವೀಕರಿಸಿದ್ದಾರೆ. ಶಾಂತ ಮತ್ತು ಮೌನಿ, ಧಾರ್ಮಿಕ ಮತ್ತು ಸಹನಾಮಯಿ, ಕ್ಷಮಾ ಗುಣವುಳ್ಳ ಯುಧಿಷ್ಠಿರ ನಮ್ಮ ನಾಯಕ. ಪ್ರತಿರೋಧ ವ್ಯಕ್ತಪಡಿಸುವಂತೆ ಆತನಿಗೆ ಆತನ ತಾಯಿ ಕುಂತಿ ಪ್ರಚೋದನೆ ನೀಡಬೇಕಿತ್ತು. ಹಕ್ಕನ್ನು ಪಡೆಯಲು ಯುದ್ಧಕ್ಕೆ ಹೋಗು ಎಂದು ಆಕೆ ಉತ್ತೇಜಿಸಬೇಕಿತ್ತು. ಇನ್ನೊಂದು ಕಡೆ ಭೀಮಾ, ಪ್ರತಿ ಅಪಾಯದಲ್ಲೂ ಪಾಂಡವರನ್ನು ರಕ್ಷಿಸಲು ಆತ ತನ್ನ ಜೀವವನ್ನು ಪಣಕ್ಕಿಟ್ಟ. ವರ್ಣಾವತವೇ ಇರಲಿ, ಬಕಾಸುರ, ಹಿಂಡಿಂಬ, ಜರಾಸಂಧ, ಕೀಚಕ ಅಥವಾ ಕೌರವರೇ ಇರಲಿ, ಆತ ಪಾಂಡವರನ್ನು ಇವರೆಲ್ಲರಿಂದ ರಕ್ಷಣೆ ಮಾಡಲು ತನ್ನ ಜೀವವನ್ನು ಅಪಾಯಕ್ಕೆ ದೂಡಿದ್ದ. ಪಾಂಡವರ ನಡುವೆ ಆತ ಶ್ರೇಷ್ಠನಾಗಿ ನಿಂತರೂ, ಅಭಿಮಾನಿಗಳನ್ನು ಹೊಂದದೆ ಮೂಲೆಗೆ ಸರಿದುಬಿಟ್ಟ.
ಯುದ್ಧದಲ್ಲಿ ಜಯಿಸಿದ ಬಳಿಕ ಯೋಗ್ಯನಾದ ಯುಧಿಷ್ಠಿರನಿಗೇ ಹಸ್ತಿನಾಪುರದ ಪಟ್ಟ ಕಟ್ಟಲಾಯಿತು ಎಂಬುದನ್ನು ಮಹಾಭಾರತ ನಮಗೆ ಹೇಳುತ್ತದೆ. ಅಪರಾಧವನ್ನು ಶಿಕ್ಷಿಸಿದಾಗ ಮಾತ್ರ ಶಾಂತಿ ಸಮೃದ್ಧಿಯಾಗುತ್ತದೆ ಎಂಬುದನ್ನೂ ಮಹಾಭಾರತ ನಮಗೆ ಹೇಳಿದೆ. ಆದರೂ ನಾವು ಅಪರಾಧವನ್ನು ಕ್ಷಮಿಸುವ ಯುಧಿಷ್ಠಿರನ ನೀತಿಯನ್ನೇ ಅನುಸರಿಸುತ್ತಿದ್ದೇವೆ. ಶತಮಾನಗಳಿಂದ ಶಾಂತಿ ನಮ್ಮ ದೇಶವನ್ನು ಆಕ್ರಮಣಕ್ಕೀಡಾಗುವಂತೆ ಮಾಡಿದೆ. ನಾವು ಮಹಾಭಾರತದ ಪಾಠವನ್ನು ಗಾಳಿಗೆ ತೂರಿದ್ದೇವೆ.
ಮಹಾಭಾರತ ಕೃಷ್ಣನ ಎರಡು ವ್ಯಕ್ತಿತ್ವಗಳನ್ನು ನಮಗೆ ಪರಿಚಯಿಸುತ್ತದೆ. ಒಂದು ವ್ಯಕ್ತಿತ್ವ ಗೆರಿಲ್ಲಾ ಹೋರಾಟಗಾರನಾಗಿ, ಸಮರ್ಥ ಆಡಳಿತಗಾರನಾಗಿ, ದೂರದೃಷ್ಟಿಯುಳ್ಳ ನಾಯಕನಾಗಿ, ತತ್ವಜ್ಞಾನಿಯಾಗಿ. ಇನ್ನೊಂದು ವ್ಯಕ್ತಿತ್ವದಲ್ಲಿ, ಕನ್ಹಯ್ಯನಾಗಿ ರಾಸ್ ಗರ್ಭಾ, ದಹಿ ಹಂಡಿ ಆಡುವ ಕೃಷ್ಣ. ಪ್ರತಿ ವರ್ಷ ಸಾವಿರಾರು ಯುವಕರು ದಹಿ ಹಂಡಿ ಆಡಲು ನೆರೆಯುತ್ತಾರೆ ಮತ್ತು ನವರಾತ್ರಿಯನ್ನು ಗರ್ಭಾ ಮಾಡುತ್ತಾರೆ. ಈ ಸಂಭ್ರಮಗಳು ಕೃಷ್ಣನನ್ನು ನೆನೆಯುವ ಅತ್ಯುತ್ತಮ ವಿಧಾನಗಳು. ಆದರೆ ‘ನಾಯಕ ಕೃಷ್ಣ’ನ ಅನುಯಾಯಿಗಳೆಲ್ಲಿ?
ತತ್ವಜ್ಞಾನಿ ಕೃಷ್ಣನ ಬೋಧನೆಗಳು ಭಗವದ್ಗೀತೆಯೊಳಗೆ ಇದೆ. ಭಗವದ್ಗೀತೆಯ ಅಧ್ಯಾಯಗಳಲ್ಲೂ ನಾವು, ‘ಮಾ ಫಲೇಷು ಕದಾಚನ’ ಎಂಬ ಶಬ್ದವು ‘ಪರಿತ್ರಾಣಾಯ ಸಾಧುನಾಂ ವಿನಾಶಾಯಚ ದುಷ್ಕೃತಾಂ” ಎಂಬುದಕ್ಕಿಂತ ಹೆಚ್ಚು ಜನಪ್ರಿಯವಾಗಿರುವುದನ್ನು ನೋಡುತ್ತಿದ್ದೇವೆ. ಆದರೆ ಎರಡನೇಯ ಪದವು ಒರ್ವ ನಾಯಕನಿಗೆ ಇರಲೇ ಬೇಕಾದ ಗುಣ ಎಂದು ನಮಗನಿಸುತ್ತಿಲ್ಲವೇ? ಖಂಡಿತಾ ಇಲ್ಲ, ಅದೇ ಕಾರಣಕ್ಕೆ ಹಿಂದಿನ ಅನೇಕ ನಾಯಕರನ್ನು ನಾವು ಇಂದು ಮರೆತು ಬಿಟ್ಟಿದ್ದೇವೆ.
ಚಂದ್ರಗುಪ್ತ ಮೌರ್ಯ ಮತ್ತು ಆತನ ಮೊಮ್ಮಗ ಸಾಮ್ರಾಟ್ ಅಶೋಕನ ನಡುವೆ ಆಯ್ಕೆಯನ್ನು ನೀಡಿದರೆ, ನಾವು ಅಶೋಕನ ಶಾಂತಿಯನ್ನು ವೈಭವೀಕರಿಸಲು ಮುಂದಾಗುತ್ತೇವೆ. ಚಂದ್ರಗುಪ್ತ ಭಾರತದ ಅತೀದೊಡ್ಡ ಸಾಮ್ರಾಜ್ಯದ ಸೃಷ್ಟಿಕರ್ತ. ಯುದ್ಧ ತ್ಯಜಿಸಿದ ಅಶೋಕ ನಂತರ ದಿನಗಳಲ್ಲಿ ಈ ಸಾಮ್ರಾಜ್ಯದ ಅವನತಿಗೂ ಕಾರಣನಾಗುತ್ತಾನೆ. ಆದರೂ ನಾವು, ಚಂದ್ರಗುಪ್ತನನ್ನು ಮರೆಯುತ್ತೇವೆ ಮತ್ತು ಅಶೋಕನನ್ನು ವೈಭವೀಕರಿಸುತ್ತೇವೆ!.
ಆಧುನಿಕ ನಾಯಕರ ನಡುವೆ, ರಾಷ್ಟ್ರವಾಗಿ ನಾವು ಲೋಕಮಾನ್ಯ ತಿಲಕರನ್ನು, ವೀರ ಸಾವರ್ಕರ್ ಅವರನ್ನು, ಸುಭಾಷ್ ಚಂದ್ರ ಬೋಸ್ ಮತ್ತು ಸರ್ದಾರ್ ಪಟೇಲ್ ಅವರನ್ನು ಮರೆಯುತ್ತೇವೆ. ಮಹಾತ್ಮ ಗಾಂಧಿ ಅವರನ್ನು ‘ರಾಷ್ಟ್ರಪಿತ’ ಎಂದು ವೈಭವೀಕರಿಸುತ್ತೇವೆ. ಈ ಕ್ರಮದಲ್ಲೂ, ಅಕ್ಟೋಬರ್ 2ರಂದು ಗಾಂಧಿ ಜಯಂತಿಯನ್ನು ರಜೆಯಾಗಿ ಸಂಭ್ರಮಿಸುತ್ತೇವೆ ಹೊರತು, ಸ್ವದೇಶಿ ವಸ್ತು, ಸ್ವಚ್ಛತೆ, ಗೊಸೇವಾ ಇತ್ಯಾದಿ ಶ್ರಮಗಳ ಮೂಲಕ ದಿನವನ್ನು ಆಚರಿಸಲು ಬಯಸುವುದಿಲ್ಲ.
ಕೆಲವು ವರ್ಷಗಳ ಹಿಂದೆ, ರಾಮ ಮತ್ತು ರಾವಣರ ನಡುವೆ, ಕೆಲವು ಬುದ್ಧಿಜೀವಿಗಳು ರಾವಣನನ್ನು ವೈಭವೀಕರಿಸಲು ಪ್ರಯತ್ನಿಸಿದರು ಅದಕ್ಕೆ ಅವರು ನೀಡಿದ ಕಾರಣಗಳೂ ಆಶ್ಚರ್ಯದಾಯಕವಾಗಿದ್ದವು. ಸೋತವ ಹೇಗೆ ಹೀರೋ ಆಗಲು ಸಾಧ್ಯ? ತನ್ನ ಸೈನಿಕರನ್ನು, ಸಹೋದರನನ್ನು, ಮಕ್ಕಳನ್ನು ತನ್ನ ದುರಾಸೆಗಾಗಿ ತ್ಯಾಗ ಮಾಡಿದ ರಾವಣನಂತಹ ವ್ಯಕ್ತಿ ಹೇಗೆ ಪ್ರಶಂಸೆಗೆ ಪಾತ್ರನಾದ? ತನ್ನ ಶತ್ರು ತನ್ನ ಗಡಿಯೊಳಗೆ ನುಗ್ಗಿ ಹೊಡೆಯುತ್ತಾನೆ ಎಂಬುದನ್ನು ಊಹೆ ಮಾಡಲಾಗದವ ಹೇಗೆ ಹೀರೋ ಆದ? ದೊಡ್ಡ ಸೈನ್ಯವಿದ್ದರೂ ರಾಮನನ್ನು ಗೆಲ್ಲಲಾಗದವ ಹೇಗೆ ಹೀರೋ ಆದ? ತನ್ನ ಶತ್ರು ತನ್ನ ಸಾಮ್ರಾಜ್ಯವನ್ನು ಸುಡುತ್ತಿದ್ದರು ಏನೂ ಮಾಡಲಾಗದವ ಹೇಗೆ ಹೀರೋ ಆದ? ಒಂದು ವೇಳೆ ರಾವಣನನ್ನು ನಾವು ಅನುಸರಿಸಿದರೆ ನಾವು ಅವನತಿಯತ್ತ ಸಾಗುವುದಿಲ್ಲವೇ? ಎಂದು ಈ ಹೊಸ ಜನರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಅವರ ವಿರುದ್ಧ ಜನಸಮೂಹವೇ ತಿರುಗಿ ಬಿದ್ದಿತ್ತು.
ನಿಧಾನವಾಗಿಯಾದರೂ ಖಂಡಿತವಾಗಿಯೂ ಚಿತ್ರಣ ಬದಲಾಗುತ್ತಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಕೊನೆಗೂ ನಾವು ಆಳವಾದ ವಿದೇಶಿ ನೀತಿ ಮತ್ತು ವಿದೇಶಿ ಬೋಧನೆಗಳಿಂದ ಹೊರಬರುತ್ತಿದ್ದೇವೆ. ನಾವು ನಮ್ಮ ನಾಯಕರನ್ನು ಇತ್ತೀಚಿಗೆ ಆಯ್ಕೆ ಮಾಡುತ್ತಿರುವ ವಿಧಾನದಿಂದ ಇದು ಸ್ಪಷ್ಟಗೊಳ್ಳುತ್ತಿದೆ. ನೇತಾಜಿಯವರ NIA ನೀಡಿದ ಕೊಡುಗೆಗಳನ್ನು ಈಗ ಸಂಭ್ರಮಿಸಲಾಗುತ್ತಿದೆ. ಸರ್ದಾರ್ ಅವರ ಏಕೀಕರಣ ಪ್ರಯತ್ನವನ್ನು ಮುಕ್ತವಾಗಿ ಪ್ರಶಂಸಿಸಲಾಗುತ್ತಿದೆ. ಗಾಂಧೀಜಿಯವರ ಸ್ವಚ್ಛತಾ ಅಭಿಯಾನ ರಾಷ್ಟ್ರವ್ಯಾಪಿ ಚಳುವಳಿಯಾಗಿದೆ. ಹಿನ್ನಲೆಯಲ್ಲಿದ್ದ ರಾಷ್ಟ್ರನಾಯಕರನ್ನು ಈಗ ಪರಿಗಣಿಸಲಾಗುತ್ತಿದೆ. ನಾವು ಎಚ್ಚರಗೊಳ್ಳುತ್ತಿದ್ದೇವೆ!
2019 ನಮಗೆ ಹೊಸ ಜಾಗೃತ ಜನರನ್ನು ನೀಡಿದೆ ಮತ್ತು ಹೊಸ ನಾಯಕನನ್ನು ಆಯ್ಕೆ ಮಾಡುವ ಅವಕಾಶವನ್ನೂ ನೀಡಿದೆ-ಈ ನಾಯಕ ಪಾಕಿಸ್ಥಾನವನ್ನು ಭಯದಿಂದ ನರಳುವಂತೆ ಮಾಡಿದ ನಾಯಕನಾಗಿರಲಿ; ಚೀನಾದ ವಿರುದ್ಧ ಸೆಟೆದು ನಿಲ್ಲುವ ಧೈರ್ಯ ಮಾಡಿದ ನಾಯಕನಾಗಿರಲಿ; ಆರ್ಥಿಕವಾಗಿ ಹಿಂದುಳಿದವರ ಬಗ್ಗೆ ಕಾಳಜಿ ವಹಿಸಿದ ನಾಯಕನಾಗಿರಲಿ; ನಮ್ಮ ಭದ್ರತಾ ಪಡೆಗಳ ಬಲವನ್ನು ದುಪ್ಪಟ್ಟುಗೊಳಿಸಿದ ನಾಯಕನಾಗಿರಲಿ; ಹಿಂದೆ ಭಯಗ್ರಸ್ಥವಾಗಿದ್ದ ದೇಶದಲ್ಲಿ ಶಾಂತಿಯನ್ನು ಹರಡಿಸಿದ ನಾಯಕನಾಗಿರಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.