News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 28th November 2024


×
Home About Us Advertise With s Contact Us

7 ಸಂಗತಿಗಳು ಮೋದಿ ಚುನಾವಣಾ ಪ್ರಚಾರದ ಪ್ರಮುಖ ಅಂಶಗಳು

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರಾಷ್ಟ್ರೀಯ ಪ್ರಚಾರ ಅಭಿಯಾನಕ್ಕೆ ಚಾಲನೆಯನ್ನು ನೀಡಿದ್ದಾರೆ, ದಿನಕ್ಕೆ ಮೂರು ಮೂರು ಸಮಾವೇಶಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದಾರೆ. ಪ್ರಚಾರದ ಮೊದಲ ಭಾಗವಾಗಿ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ನೀಡಿದ್ದರು. ಈ ವೇಳೆ ಅವರು, ಚುನಾವಣೆಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಅವಧಿಗೆ ಮೋದಿ ಚುನಾವಣಾ ಅಸ್ತ್ರವನ್ನಾಗಿಸಿದ 7 ವಿಷಯಗಳ ಬಗ್ಗೆ ಇಲ್ಲಿ ಉಲ್ಲೇಖ ಮಾಡಲಾಗಿದೆ.

ರಾಷ್ಟ್ರೀಯ ಭದ್ರತೆ 

ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಪ್ರಧಾನಿಯವರು ಹೊಸ ಯುಗವನ್ನು ಪ್ರಾರಂಭಿಸಿದ್ದಾರೆ. ದೇಶದ ಭದ್ರತೆ ಮತ್ತು ಭಯೋತ್ಪಾದನೆಯ ವಿಷಯದಲ್ಲಿ ಹಿಂದಿನ ಸರ್ಕಾರದಂತೆ ಅಸಡ್ಡೆ ಮತ್ತು ಮೃದು ಧೋರಣೆಯನ್ನು ತೋರಿಸದೆ, ದಿಟ್ಟವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪುಲ್ವಾಮ ದಾಳಿಗೆ ಪ್ರತ್ಯುತ್ತರವಾಗಿ ಭಾರತ ನಡೆಸಿದ ಬಾಲಕೋಟ್ ವೈಮಾನಿಕ ದಾಳಿಯು ಉಗ್ರರಿಗೆ ಭಾರತ ಹಿಂದಿನ ಭಾರತವಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಯಾವುದೇ ರಾಜಿಯನ್ನು ನಾವು ತೋರಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರ ಈ ವೈಮಾನಿಕ ದಾಳಿಯ ಮೂಲಕ ಜಗತ್ತಿಗೆ ತೋರಿಸಿದೆ.

ವೈಮಾನಿಕ ದಾಳಿಯ ಬಳಿಕ ಮುಂದಿನ ಹೆಜ್ಜೆ ಏನು ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ನೀಡಲು ಮೋದಿ ನಿರಾಕರಿಸಿದರಾದರೂ, ಅವರ ದೇಹ ಭಾಷೆ ಅತ್ಯುನ್ನತವಾದ ಕಾರ್ಯತಾಂತ್ರಿಕ ಯೋಜನೆಯನ್ನೇ ರೂಪಿಸಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿತ್ತು. ಹಿಂದಿನ ಸರ್ಕಾರದಂತೆ ತಾಂತ್ರಿಕ ಯೋಜನೆ ಮತ್ತು ವಿಜ್ಞಾನ ಸಮುದಾಯವನ್ನು ಹಿಂದೆ ಬಿಡದೆ, ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಎಲ್ಲರನ್ನು ಒಟ್ಟು ಸೇರಿಸುವ ಆಶಯವನ್ನು ಅವರು ತೋರ್ಪಡಿಸಿದ್ದಾರೆ.

ಪಾಕಿಸ್ಥಾನಕ್ಕೆ ಮಾತಿನಿಂದಲ್ಲ, ಕ್ರಮದಿಂದ ಉತ್ತರ

ಮಾತುಗಳಲ್ಲ, ಕ್ರಮ ಪಾಕಿಸ್ಥಾನದ ವಿರುದ್ಧ ಮಾತನಾಡಿದೆ. ಪಾಕಿಸ್ಥಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಮಾತುಕತೆಯ ಆಹ್ವಾನದ ಬಗ್ಗೆ ಸಂದರ್ಶಕರಿಗೆ ಪ್ರತಿಕ್ರಿಯೆಯನ್ನು ನೀಡಿದ ಅವರು, ಮಾತಿನ ಮೂಲಕವಲ್ಲ. ಕ್ರಮದ ಮೂಲಕ ಶಾಂತಿ ಸಂಬಂಧವನ್ನು ಹೊಂದಲು ಮುಂದಾಗುವಂತೆ ಆ ದೇಶಕ್ಕೆ ಸ್ಪಷ್ಟ ಸಂದೇಶವನ್ನು ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಭಯೋತ್ಪಾದಕರ ವಿರುದ್ಧ ಕ್ರಮ ಜರುಗಿಸದೆ ಪಾಕಿಸ್ಥಾನ ಭಾರತಕ್ಕೆ ಬೇಸರ ತರಿಸಿದೆ ಎಂದಿದ್ದಾರೆ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಹೊಡೆದೋಡಿಸಿ ಮತ್ತು ಬಡತನದ ವಿರುದ್ಧ ಭಾರತದ ಜೊತೆ ಸೇರಿ ಹೋರಾಡಿ ಎಂಬ ಸಂದೇಶವನ್ನು ಖಾನ್ ಅವರಿಗೆ ನೀಡಿರುವುದಾಗಿ ಹೇಳಿದ್ದಾರೆ. ಅಲ್ಲದೇ, ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾದ ಸಂಗತಿಗಳ ಬಗ್ಗೆ ಭಾರತದ ಹೋರಾಟವೇ ಹೊರತು ಪಾಕ್ ಜನರೊಂದಿಗೆ ಅಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.

ನೀತಿ ಸಂಹಿತೆಯ ಬಗ್ಗೆ ಪ್ರತಿಪಕ್ಷಗಳ ಅಜ್ಞಾನ

ಮಿಷನ್ ಶಕ್ತಿ ಯಶಸ್ವಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಮಾಧ್ಯಮದಲ್ಲಿ ಘೋಷಣೆ ಮಾಡಿದ್ದನ್ನು ಕೆಲವರು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿದರು. ಇದು ನೀತಿ ಸಂಹಿತೆಯ ಬಗೆಗಿನ ಅವರ ಅಜ್ಞಾನವನ್ನು ಪ್ರತಿಬಿಂಬಿಸುತ್ತದೆ. ರಾಷ್ಟ್ರೀಯ ಭದ್ರತೆಯ ವಿಷಯಗಳು ಚುನಾವಣಾ ನೀತಿ ಸಂಹಿತೆಯ ಅಧೀನದಲ್ಲಿ ಬರುವುದಿಲ್ಲ ಎಂಬ ಸಾಮಾನ್ಯ ಜ್ಞಾನವೂ ಪ್ರತಿಪಕ್ಷಗಳಿಗೆ ಇಲ್ಲದಂತಾಗಿದೆ ಎಂಬ ಕಾರಣಕ್ಕೆ ಬದ್ಧತೆಯ ವಿಷಯವನ್ನು ಮರೆಮಾಚಲು ಸಾಧ್ಯವೇ?, ಒಂದು ವೇಳೆ ರಾಷ್ಟ್ರೀಯ ವಿಪತ್ತು ಸಂಭವಿಸಿದಾಗ ನೀತಿ ಸಂಹಿತೆ ಅನುಷ್ಠಾನದಲ್ಲಿದೆ ಎಂಬ ಕಾರಣಕ್ಕೆ ರಕ್ಷಣಾ ಕಾರ್ಯಾಚರಣೆ ಮಾಡದಿರಲು ಸಾಧ್ಯವೇ ? ಮೋದಿಯವರು ಎಸ್ಯಾಟ್ ಯಶಸ್ವಿಯನ್ನು ರಾಜಕೀಯ ಮೈಲೇಜ್­ಗಾಗಿ ಬಳಸಿಕೊಳ್ಳುತ್ತಾರೆ ಎಂಬ ರಾಜಕೀಯ ವಿರೋಧಿಗಳ ಆರೋಪವನ್ನು ಮೋದಿ ಸಂಪೂರ್ಣವಾಗಿ ಅಲ್ಲಗೆಳೆದಿದ್ದಾರೆ. ಈ ಘೋಷಣೆ ಆಕಸ್ಮಿಕವಾದುದಲ್ಲ, ಈ ಬಗ್ಗೆ ಮೊದಲೇ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಜಾಗತಿಕ ಕಾರ್ಯತಂತ್ರ ಮತ್ತು ಬಾಹ್ಯಾಕಾಶ ಸಮುದಾಯಗಳಿಗೆ ವಿಷಯದ ಮಾಹಿತಿ ಒದಗಿಸಲಾಗಿತ್ತು. ಇಂತಹ ಉಡಾವಣಾ ಕಾರ್ಯಾಚರಣೆಗಳು ವಿವಿಧ ರಾಷ್ಟ್ರಗಳ ನಡುವೆ ಸಂಪರ್ಕಿತಗೊಂಡಿರುತ್ತದೆ ಎಂದು ಮೋದಿ ವಿವರಿಸಿದ್ದಾರೆ.

ವಂಶಾಡಳಿತ 

ಈ ಚುನಾವಣೆಯಲ್ಲೂ ವಂಶಾಡಳಿತ ಮಹತ್ವದ ವಿಷಯವಾಗಿರಲಿದೆ. ಒಂದು ಕುಟುಂಬದ ಹಲವು ಸದಸ್ಯರು ಒಂದೇ ಪಕ್ಷದಲ್ಲಿ ಇರುವ ಬಗ್ಗೆ ಮತ್ತು ಕೆಲವು ಕುಟುಂಬಗಳು ರಾಜಕೀಯ ಪಕ್ಷವನ್ನು ಒಂದು ಕುಟುಂಬ ಉದ್ಯಮದಂತೆ ನಡೆಸುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಟುಂಬದ ಹೊರಗಿರುವ ಪಕ್ಷದ ಕಾರ್ಯಕರ್ತರಿಗೆ ಅಥವಾ ಸದಸ್ಯರಿಗೆ ಪಕ್ಷದಲ್ಲಿ ಯಾವುದೇ ಅತ್ಯುನ್ನತ ಸ್ಥಾನಗಳು ಸಿಗುತ್ತಿಲ್ಲ ಎಂಬ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಟಿಡಿಪಿ ಮತ್ತು ಸಮಾಜವಾದಿ ಪಕ್ಷಗಳು ಇಂತಹ ಧೋರಣೆಯನ್ನು ಹೊಂದಿವೆ ಎಂಬುದನ್ನು ಅವರು ಉಲ್ಲೇಖ ಮಾಡಿದ್ದಾರೆ. ಕಾಂಗ್ರೆಸ್ ಕೂಡ ಗಾಂಧಿ ಕುಟುಂಬದ ಉದ್ಯಮ ಎಂಬುದನ್ನು ಅವರು ಉಲ್ಲೇಖ ಮಾಡಿದ್ದಾರೆ.

ಕಾಂಗ್ರೆಸ್­ನ ದೊಡ್ಡ ಘೋಷಣೆ

ರಾಹುಲ್ ಗಾಂಧಿ ಅವರು ಇತ್ತೀಚೆಗೆ ಮಾಡಿರುವ ಬಡವರಿಗೆ ಕನಿಷ್ಠ ಆದಾಯದ ಭರವಸೆಯ ಬಗ್ಗೆ ಸಂದರ್ಶಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿಯವರು, 2014 ಮತ್ತು 2009ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಇದೇ ರೀತಿಯ ಭರವಸೆಯನ್ನು ನೀಡಿತ್ತು ಎಂಬುದನ್ನು ಮೋದಿ ಬಹಿರಂಗಪಡಿಸಿದ್ದಾರೆ. ಆದರೆ ಕಾಂಗ್ರೆಸ್ ನೀಡಿದ ಭರವಸೆಯನ್ನು ಈಡೇರಿಸಿದ್ದು ಮಾತ್ರ ತಮ್ಮ ಸರಕಾರ ಎಂದಿದ್ದಾರೆ. ಕಳೆದ ಐದು ದಶಕಗಳಿಂದ ಕಾಂಗ್ರೆಸ್ ಪಕ್ಷ ಬಡತನ ನಿರ್ಮೂಲನೆಯ ಬಗ್ಗೆ ಘೋಷಣೆಯನ್ನು ಮಾಡುತ್ತಲೇ ಬಂದಿದೆ, ಆದರೆ ನಮ್ಮ ಸರಕಾರ ಐದು ವರ್ಷದಲ್ಲಿ ಅಪಾರ ಪ್ರಮಾಣದ ಬಡವರನ್ನು ಬಡತನದ ಕಪಿಮುಷ್ಟಿಯಿಂದ ಹೊರಕ್ಕೆ ತಂದಿದೆ ಎಂದಿದ್ದಾರೆ.

ಉದ್ಯೋಗದ ನೈಜ ಚಿತ್ರಣ

ಸಂದರ್ಶಕ ಉದ್ಯೋಗ ಸೃಷ್ಟಿಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮೋದಿ, ಕೆಲವೊಂದು ಮಾಧ್ಯಮಗಳು ಕೆಲವು ರಾಜಕೀಯ ಹಿತಾಸಕ್ತಿಯ ಕಾರಣಕ್ಕೆ ಉದ್ಯೋಗ ಸೃಷ್ಟಿಯ ಬಗ್ಗೆ ವಾಜಪೇಯಿ ಸರಕಾರವಿದ್ದಾಗಲೂ ನಕಲಿ ವರದಿಯನ್ನು ಸೃಷ್ಟಿ ಮಾಡಿದ್ದವು ಮತ್ತು ಜನರನ್ನು ತಪ್ಪು ದಾರಿಗೆ ಎಳೆದಿದ್ದವು ಎಂಬುದನ್ನು ವಿವರಿಸಿದರು. ಅಲ್ಲದೇ EPFO ಡಾಟಾವನ್ನು ಉಲ್ಲೇಖಿಸಿ ಅವರು ಉದ್ಯೋಗ ಸೃಷ್ಟಿಯ ಅಂಕಿಅಂಶವನ್ನು ವಿವರಿಸಿದ್ದಾರೆ. ರಸ್ತೆಗಳ ನಿರ್ಮಾಣ ಮತ್ತು ರೈಲ್ವೆಗಳ ಅಭಿವೃದ್ಧಿ , ಸೋಲಾರ್ ಎನರ್ಜಿ ಇಂಡಸ್ಟ್ರಿಗೆ ಉತ್ತೇಜನ ಇತ್ಯಾದಿಗಳು ಭಾರತದಲ್ಲಿ ಉದ್ಯೋಗ ಸೃಷ್ಟಿಯನ್ನು ದುಪ್ಪಟ್ಟುಗೊಳಿಸಿವೆ ಎಂದು ಅವರು ಹೇಳಿದ್ದಾರೆ.

ಮುತ್ಸದ್ಧಿ ರಾಜಕಾರಣಿಯಾಗಿ ವ್ಯಕ್ತಿತ್ವ ಅನಾವರಣ

ಎಲ್ಲದಕ್ಕೂ ಮಿಗಿಲಾಗಿ ಸಂದರ್ಶನವು ಓರ್ವ ಮುತ್ಸದ್ದಿ ರಾಜಕಾರಣಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿತು. ಪಕ್ಷಕ್ಕಿಂತ ದೇಶ ಮಿಗಿಲು ಎಂಬುದನ್ನು ಅವರು ಸಂದರ್ಶನದುದ್ದಕ್ಕೂ ಸಾರಿದರು. “ಸರಕಾರಕ್ಕಾಗಿ ಬಹುಮತ, ದೇಶಕ್ಕಾಗಿ ಸರ್ವ ಮತ” ಎಂದು ಅವರು ಕರೆ ನೀಡಿದಾಗ ತನ್ನ ಅತಿ ಕಟುವಾದ ರಾಜಕೀಯ ವಿರೋಧಿಗಳೊಂದಿಗೂ ದೇಶಕ್ಕಾಗಿ ದುಡಿಯುವ ಅವರ ಉತ್ಸಾಹ ಪ್ರದರ್ಶನಗೊಂಡಿತು. ಈ ಘೋಷಣೆಯ ಮೂಲಕ ಮೋದಿ ಅವರು ರಾಜಕೀಯ ವರ್ಗಕ್ಕೆ ಒಂದು ಅತ್ಯುನ್ನತವಾದ ಸಂದೇಶವನ್ನು ರವಾನಿಸಿದರು. ಪುಲ್ವಾಮದಲ್ಲಿ ಮತ್ತು ಬಾಲಕೋಟ ವೈಮಾನಿಕ ದಾಳಿಯ ವಿಷಯದಲ್ಲಿ ಪಡೆಗಳ ಶೌರ್ಯವನ್ನು ಪ್ರಶ್ನಿಸಿದ ಪ್ರತಿಪಕ್ಷ ನಾಯಕರುಗಳ ಧೋರಣೆಗೆ ವಿರುದ್ಧವಾದಂತಹ ನಡೆಯನ್ನು ಮೋದಿ ಎಲ್ಲಿ ತೋರಿಸಿದ್ದಾರೆ. ಸಂದರ್ಶನದ ಮೂಲಕ ಮೋದಿಯವರು ರಚನಾತ್ಮಕ ರಾಷ್ಟ್ರ ನಿರ್ಮಾಣದ ಅಜೆಂಡಾವನ್ನು ಲೋಕಸಭಾ ಚುನಾವಣೆಗೆ ಇಟ್ಟುಕೊಂಡಿರುವುದನ್ನು ಸಾಬೀತುಪಡಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top