ಕಳೆದ ವರ್ಷ ಕೇರಳದಲ್ಲಿ ಸಂಭವಿಸಿದ ಭಾರೀ ನೆರೆಗೆ ಹಲವಾರು ಮಂದಿ ಮನೆ ಮಠ ಕಳೆದುಕೊಂಡು ಸಂತ್ರಸ್ಥರಾಗಿದ್ದರು. ದೇಶದಾದ್ಯಂತದಿಂದ ನೆರವಿನ ಮಹಾಪೂರವೇ ಆ ರಾಜ್ಯಕ್ಕೆ ಹರಿದು ಬಂದಿತ್ತು. ಭಾರತೀಯ ಸೇನೆಯ ಮೂರು ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿ ಹಲವಾರು ಮಂದಿಯ ಪ್ರಾಣವನ್ನು ಉಳಿಸಿತು. ನೆರೆ ಬಂದು ಹೋದ ಬಳಿಕವೂ ನೌಕಾ ಸೇನೆ ಸಂತ್ರಸ್ಥರ ಜೊತೆ ನಿಂತಿದೆ. ದಕ್ಷಿಣ ನಾವೆಲ್ ಕಮಾಂಡ್ ವತಿಯಿಂದ ಕೇರಳದ ಹಲವಾರು ಭಾಗಗಳಲ್ಲಿ ಪುನರ್ವಸತಿ ಚಟುವಟಿಕೆಗಳನ್ನು ಆರಂಭಿಸಿತು. ಮನೆ ಕಳೆದುಕೊಂಡವರಿಗೆ ಮನೆಯನ್ನು ನಿರ್ಮಾಣ ಮಾಡಿಕೊಡುವ ಕಾರ್ಯವನ್ನು ಕೈಗೆತ್ತಿಕೊಂಡಿತು. ಮಾರ್ಚ್ 28ರಂದು ದಕ್ಷಿಣ ನಾವೆಲ್ ಕಮಾಂಡ್ನ ಮುಖ್ಯಸ್ಥ ವೈಸ್ ಅಡ್ಮರಿಲ್ ಅನಿಲ್ ಕುಮಾರ್ ಚಾವಲ್ ಅವರು ಚೆರಿಯ ಕಡ್ಮಕ್ಕುಡಿಯಲ್ಲಿನ ಮೂರು ಕುಟುಂಬಗಳಿಗೆ ಮನೆಯನ್ನು ಹಸ್ತಾಂತರ ಮಾಡಿದ್ದಾರೆ. ಈ ಯೋಜನೆಗೆ ‘ನಾವಿಕ ಪಾಲಂ’ ಎಂದು ಹೆಸರಿಡಲಾಗಿದೆ.
ರೂ.28 ಲಕ್ಷ ರೂಪಾಯಿಯಲ್ಲಿ ಮೂರು ಮನೆಗಳನ್ನು ನಿರ್ಮಾಣ ಮಾಡಿ, ಅದನ್ನು ಪುಲಿಯಲ್ ಪರಂಬಿಲ್ನ ಬಿನು ಪಿಪಿ ಅವರಿಗೆ, ಪಶ್ನಿ ಪರಂಬಿಲ್ನ ಮರಿಯಮ್ಮ ಅವರಿಗೆ ಮತ್ತು ಜೋಸೆಫ್ ಆಂಟೋನಿ ಎಂಬುವವರಿಗೆ ಹಸ್ತಾಂತರ ಮಾಡಿದೆ. ಮನೆ ಮಾಲೀಕರ ನಿರ್ದಿಷ್ಟ ಸಲಹೆ ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ಈ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿರುವುದು ಮತ್ತೊಂದು ವಿಶೇಷ. ಪ್ರತಿ ಮನೆಯಲ್ಲೂ ಬೆಡ್ ರೂಮ್, ಡ್ರಾಯಿಂಗ್ ರೂಮ್, ಕಿಚನ್, ಎಲೆಕ್ಟ್ರಿಕ್ ಫಿಟ್ಟಿಂಗ್, ಉತ್ತಮ ಗುಣಮಟ್ಟದ ಟೈಲ್ಸ್ಗಳನ್ನು ಬಳಸಿ ಇವುಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಐಎನ್ಎಸ್ ವೆಂದುರಥಿ ಈ ವಸತಿ ನಿರ್ಮಾಣ ಯೋಜನೆಯ ಉಸ್ತುವಾರಿ ವಹಿಸಿಕೊಂಡಿತ್ತು ಮತ್ತು ಐದೂವರೆ ತಿಂಗಳುಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ.
ನೇವಿ ವೈಫ್ಸ್ ವೆಲ್ಫೇರ್ ಅಸೋಸಿಯೇಶನ್ (ದಕ್ಷಿಣ ರೀಜನ್)ನ ಅಧ್ಯಕ್ಷೆ ಸಪ್ನಾ ಚಾವ್ಲಾ ಅವರು ಮತ್ತು ಇತರ ಹಿರಿಯ ಅಧಿಕಾರಿಗಳು ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಿದರು. ವೈಸ್ ಅಡ್ಮಿರಲ್ ಚಾವ್ಲಾ ಅವರು, ಮನೆಗಳನ್ನು ಸುತ್ತಾಡಿ ಪರಿಶೀಲನೆ ಮಾಡಿದರು ಮತ್ತು ಕುಟುಂಬಗಳ ಜೊತೆ ಸೌಹಾರ್ದವಾಗಿ ಮಾತುಕತೆ ನಡೆಸಿದರು. ಅಲ್ಲದೇ ಅವರಿಗೆ ಸಿಹಿ ತಿಂಡಿಗಳನ್ನೂ ವಿತರಿಸಿದರು.
ಇಷ್ಟು ಮಾತ್ರವಲ್ಲದೇ, ಚೆರಿಯ ಕಡ್ಮಕ್ಕುಡಿಯಲ್ಲಿನ 50 ಮನೆಗಳಿಗೆ ಸೋಲಾರ್ ಅಳವಡಿಸುವ ಕಾರ್ಯವನ್ನೂ ಕೈಗೆತ್ತಿಕೊಂಡಿದೆ. ಇದರಲ್ಲಿ 30 ಮನೆಗಳಿಗೆ ಈಗಾಗಲೇ ಸೋಲಾರ್ ಅಳವಡಿಕೆಯ ಕಾರ್ಯ ಪೂರ್ಣಗೊಂಡಿದೆ. ಹೊಸದಾಗಿ ನಿರ್ಮಾಣವಾದ ಮೂರು ಮನೆಗಳಿಗೂ ಸೋಲಾರ್ ಅಳವಡಿಸಲಾಗಿದೆ. ಹೀಗಾಗಿ ಚೆರಿಯ ಕಡ್ಮಕ್ಕುಡಿ ಗ್ರಾಮ ಮುಂದಿನ ಕೆಲವು ತಿಂಗಳುಗಳಲ್ಲಿ ಸಂಪೂರ್ಣವಾಗಿ ಹಸಿರೀಕರಣಗೊಳ್ಳಲಿದೆ.
ನೌಕಾ ಕಮಾಂಡ್, ಚೆರಿಯ ಕಮ್ಮಕ್ಕುಡಿಯನ್ನು ಪಿಝಲ ಐಸ್ಲ್ಯಾಂಡ್ನೊಂದಿಗೆ ಜೋಡಿಸುವ ಸಲುವಾಗಿ ಸ್ಟೀಲ್ ಆರ್ಚ್ ಬ್ರಿಡ್ಜ್ ನಿರ್ಮಾಣ ಮಾಡುತ್ತೇವೆ ಎಂದು ಘೋಷಿಸಿ, ಅದಕ್ಕೆ ಶಂಕುಸ್ಥಾಪನೆ ನೆರವೇರಿಸಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ನೆರೆ ಬಂದು ಹೋದ ಬಳಿಕ ಹೊಸ ಬ್ರಿಡ್ಜ್ ಸ್ಥಾಪನೆಗೆ ಇಲ್ಲಿನ ಜನರು ನಿರಂತರ ಬೇಡಿಕೆಯನ್ನು ಇಟ್ಟಿದ್ದರು. ಹಳೆಯ ಬ್ರಿಡ್ಜ್ ಅವಸಾನದ ಅಂಚಿನಲ್ಲಿತ್ತು, ಇತ್ತೀಚಿಗಷ್ಟೇ ಇದನ್ನು ಬಳಕೆಗೆ ಯೋಗ್ಯವಲ್ಲ ಎಂದು PWD ಘೋಷಣೆ ಮಾಡಿತ್ತು. ಇದೀಗ ನೌಕೆ ಹೊಸ ಬ್ರಿಡ್ಜ್ ನಿರ್ಮಾಣಕ್ಕೆ ಶಂಖುಸ್ಥಾಪನೆ ಮಾಡಿದೆ. ಹಳೆಯದರ ಪಕ್ಕದಲ್ಲೇ ಹೊಸ ಬ್ರಿಡ್ಜ್ ನಿರ್ಮಾಣವಾಗಲಿದೆ. ಇದು 50 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿರಲಿದೆ. 4 ಟನ್ ಭಾರದ ಸರಕುಗಳನ್ನು ಹೊಂದಿದ ವಾಹನಗಳು ಇದನ್ನು ಹಾದುಹೋಗಬಹುದಾಗಿದೆ. ಗ್ರಾಮಸ್ಥರಿಗೆ ಇದು ಅತ್ಯಗತ್ಯವಾದ ಸಂಪರ್ಕವನ್ನು ಕಲ್ಪಿಸಿಕೊಡಲಿದೆ.
ಈ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ, ನೌಕಾಸೇನೆಯು ತಾವು ರಕ್ಷಣಾ ಕಾರ್ಯಾದಲ್ಲಿ ಮಾತ್ರ ನಿಸ್ಸೀಮರಲ್ಲ, ಜನಸಾಮಾನ್ಯರ ಸೇವೆಯಲ್ಲೂ ನಿಸ್ಸೀಮರು ಎಂಬುದನ್ನು ತೋರಿಸಿಕೊಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.