ವಂಶವಾದದ ರಾಜಕೀಯ ವ್ಯವಸ್ಥೆಯನ್ನು ದೇಶಕ್ಕೆ ಪರಿಯಚಯಿಸಿದ್ದು ಕಾಂಗ್ರೆಸ್ ಪಾರ್ಟಿ. ಕುಟುಂಬಾಧಾರಿತ ನಾಯಕತ್ವವು ನೆಹರೂ, ಇಂದಿರಾ, ರಾಜೀವ್, ಸೋನಿಯಾ, ರಾಹುಲ್, ಪ್ರಿಯಾಂಕಾವರೆಗೂ ಮುಂದುವರಿದಿದೆ. ಅದು ಇಲ್ಲಿಗೇ ನಿಲ್ಲದು. ಇದೇ ಮಾದರಿಯನ್ನು ದೇಶಾದ್ಯಂತ ಇರುವ ಬಹುತೇಕ ಪ್ರಾದೇಶಿಕ ಪಕ್ಷಗಳೂ ಅನುಸರಿಸಿದವು.
ಸಮಾಜವಾದಿ ಪಾರ್ಟಿಯಲ್ಲಿ ಮುಲಾಯಂ ನಂತರ ಅಖಿಲೇಶ್, ಡಿಎಂಕೆಯಲ್ಲಿ ಕರುಣಾನಿಧಿಯ ನಂತರ ಮಗ ಸ್ಟಾಲಿನ್, ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ನಲ್ಲಿ ಅಬ್ದುಲ್ಲಾ ನಂತರ ಓಮರ್ ಅಬ್ದುಲ್ಲಾ, ಪಿಡಿಪಿಯಲ್ಲಿ ಮುಫ್ತಿ ಸಯೀದ್ ನಂತರ ಮೆಹಬೂಬಾ ಮುಫ್ತಿ, ಕರ್ನಾಟಕದ ಜೆಡಿಎಸ್ನಲ್ಲಿ ದೇವೇಗೌಡರ ನಂತರ ಮಕ್ಕಳಾದ ಕುಮಾರಸ್ವಾಮಿ, ರೇವಣ್ಣ, ಸೊಸೆಯಂದಿರಾದ ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ ಕೊನೆಗೆ ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿಯವರೆಗೆ ಅದು ಮುಂದುವರಿದಿದೆ. ಬಿಹಾರದ ಆರ್ಜೆಡಿಯಲ್ಲಿ ಲಾಲೂಪ್ರಸಾದ್ ಯಾದವ್ ನಂತರ ಅಧಿಕಾರ ಅವರ ಮಕ್ಕಳ ಪಾಲಾಗಿದೆ. ಇನ್ನು ತೆಲುಗು ದೇಶಂ, ಟಿಆರ್ಎಸ್, ತೃಣಮೂಲ ಕಾಂಗ್ರೆಸ್, ಬಿಎಸ್ಪಿಗಳಲ್ಲೂ ಮಕ್ಕಳ ಹಾಗೂ ಸಂಬಂಧಿಕರದ್ದೇ ಕಾರುಬಾರು. ಬಿಜೆಪಿಯ ಮಿತ್ರ ಪಕ್ಷಗಳಾದ ಅಕಾಲಿದಳದಲ್ಲಿ ಪ್ರಕಾಶ್ ಸಿಂಗ್ ಬಾದಲ್ ನಂತರ ಸುಖಬೀರ್ ಸಿಂಗ್ ಬಾದಲ್, ಶಿವಸೇನೆಯಲ್ಲಿ ಬಾಳಾ ಠಾಕ್ರೆ ನಂತರ ಉದ್ಧವ್ ಠಾಕ್ರೆ ನಂತರ ಆದಿತ್ಯ ಠಾಕ್ರೆಯವರೆಗೆ ಪಕ್ಷದ ಕುಟುಂಬಾಧಿಕಾರ ಮುಂದುವರಿದಿದೆ.
ಇಡೀ ರಾಷ್ಟ್ರದಲ್ಲೇ ಈ ರೀತಿಯ ವಂಶವಾದೀ ರಾಜಕಾರಣದ ಟ್ರೆಂಡ್ ಇರುವಾಗ ಇಡೀ ದೇಶದ ಜನರು ಕೂಡಾ ವಂಶವಾದದ ರಾಜಕಾರಣದ ವ್ಯವಸ್ಥೆಗೆ ಮನಸ್ಸನ್ನು ಹೊಂದಿಸಿಕೊಂಡರು. ಶಾಸಕ ಅಥವಾ ಎಂಪಿಯಾಗಿದ್ದ ಗಂಡ ಸತ್ತರೆ ಆತನ ಹೆಂಡತಿಗೆ, ಮಗ ಅಥವಾ ಸಮೀಪದ ಬಂಧುವಿಗೆ ಚುನಾವಣೆಗೆ ಅಥವಾ ಉಪಚುನಾವಣೆಗೆ ಪಕ್ಷದ ಟಿಕೆಟ್ ಕೊಡುವುದು, ಮೃತ ವ್ಯಕ್ತಿಯ ಅನುಕಂಪದ ಅಲೆಯಲ್ಲಿ ಗೆಲ್ಲುವುದು ಭಾರತದ ರಾಜಕಾರಣದ ಮಾಮೂಲಿ ವ್ಯವಸ್ಥೆಯೇ ಆಗಿದೆ. ಆದರೆ ಭಾರತದ ರಾಜಕಾರಣ ವ್ಯವಸ್ಥೆಯಲ್ಲಿ ಬಿಜೆಪಿ ಮತ್ತು ಕಮ್ಯುನಿಸ್ಟ್ ಪಕ್ಷಗಳು ಮಾತ್ರ ಈ ವಂಶವಾದದ ರಾಜಕೀಯ ನಾಯಕತ್ವ ವ್ಯವಸ್ಥೆಯಿಂದ ಹೊರತಾಗಿರುವ ಪ್ರಮುಖ ರಾಜಕೀಯ ಪಕ್ಷಗಳು.
ಅದರೂ ಜನರಲ್ಲಿ ಪ್ರಸಿದ್ಧ ರಾಜಕಾರಣಿ ಸತ್ತಾಗ ಆತನ ಮಡದಿಗೆ ಟಿಕೇಟ್ ಕೊಡಬೇಕು ಅನ್ನುವಷ್ಟರ ಮಟ್ಟಿಗಿನ ಮನೋಭಾವ. ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣದ ಲೋಕಸಭಾ ಟಿಕೆಟ್ ಕೊಟ್ಟ ವಿಚಾರದಲ್ಲೂ ಹೀಗೇ ಆಯಿತು.
ಬಿಜೆಪಿಯ ರಾಷ್ಟ್ರ ಹಾಗೂ ಕರ್ನಾಟಕದಲ್ಲಿ ತನ್ನದೇ ಚಾಪು ಮೂಡಿಸಿದ್ದ ಅನಂತ್ಕುಮಾರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಲೋಕಸಭಾ ಸ್ಥಾನವನ್ನು ತುಂಬುವ ವಿಚಾರವಾಗಿ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ಕುಮಾರ್ ಅವರಿಗೆ ಕ್ಷೇತ್ರದ ಟಿಕೆಟ್ ಕೊಡಬೇಕು ಅನ್ನುವ ಕೂಗು ಪಕ್ಷದಲ್ಲಿ ಬಲವಾಗಿ ಕೇಳಿಬಂತು. ತೇಜಸ್ವಿನಿ ಅನಂತ್ಕುಮಾರ್ ಅವರೂ ಅರ್ಹರೇ! ಅದಮ್ಯ ಚೇತನ ಅನ್ನುವ ಸಂಸ್ಥೆಯನ್ನು ಕಟ್ಟಿ ಸಂಕಷ್ಟದಲ್ಲಿರುವ ಸಾವಿರಾರು ಜನರಿಗೆ ಉಪಕಾರ ಮಾಡಿದವರು ಅವರು. ಹೀಗಾಗಿ ಪಕ್ಷದ ಟಿಕೆಟ್ ಅವರಿಗೇ ಸಿಗಬಹುದೆಂದು ನಿರೀಕ್ಷೆ ಹಲವರದಾಗಿತ್ತು. ಆದರೆ ಎಲ್ಲರ ನಿರೀಕ್ಷೆಗಳ ಹೊರತಾಗಿ ಯುವ ನಾಯಕ, ಸಂಘಟಕ, ತೇಜಸ್ವಿ ಸೂರ್ಯ ಅವರಿಗೆ ಪಕ್ಷ ಟಿಕೆಟ್ ಕೊಟ್ಟಾಗ ಪಕ್ಷದ ಕೆಲವರಲ್ಲೇ ಅಪಸ್ವರ.
ಯಾರಿಗೂ ತೇಜಸ್ವಿ ಸೂರ್ಯ ಅವರ ಸಾಮರ್ಥ್ಯದ ಬಗ್ಗೆ ಸಂಶಯವಿಲ್ಲ, ಆದರೆ ದಿ. ಅನಂತ್ ಕುಮಾರ್ ಅವರ ಪತ್ನಿ ಮೇಲೆ ಅನುಕಂಪ. ಆದರೆ ಸ್ವತಃ ಅನಂತ್ ಕುಮಾರ್ ಅವರೇ ಸ್ವಂತ ಪರಿಶ್ರಮದಿಂದ ರಾಜಕೀಯದಲ್ಲಿ ಮೇಲೆ ಬಂದವರು. ಅವರು ಕೂಡಾ ವಂಶವಾದೀ ರಾಜಕಾರಣದ ಕಟು ವಿರೋಧಿಗಳು. ಹೀಗಾಗಿ ಕರ್ನಾಟಕದ ಬಿಜೆಪಿಯ ಭವಿಷ್ಯದ ದೃಷ್ಟಿಯಿಂದ ಯುವ ನಾಯಕನಿಗೇ ಮಣೆ ಹಾಕಲಾಯಿತು.
ಒಂದು ವೇಳೆ ತೇಜಸ್ವಿನಿಯವರಿಗೇ ಬಿಜೆಪಿ ಟಿಕೆಟ್ ಕೊಟ್ಟಿದ್ದರೆ ಇತರ ನಾಯಕರ ವಿಚಾರದಲ್ಲೂ ವಂಶವಾದಕ್ಕೇ ಬಿಜೆಪಿ ಮಣೆಹಾಕಬೇಕಾದ ಪರಿಸ್ಥಿತಿ ಒದಗಿ ಬರುತ್ತಿತ್ತು. ಹಾಗಾಗಿ ಬಿಜೆಪಿ ನಾಯಕತ್ವವು ಪರಿಸ್ಥಿತಿಯನ್ನು ತೂಗಿ ಅಳೆದು ತಳಮಟ್ಟದ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟಿತು.
ಆದರೆ ತೇಜಸ್ವಿನಿ ಅನಂತ ಕುಮಾರ್ ಅವರು ಕೂಡಾ ಈ ವಿಚಾರದಲ್ಲಿ ಬಹಳ ಸಂಯಮದಿಂದ ವರ್ತಿಸಿದ್ದಾರೆ. ರಾಷ್ಟ್ರವನ್ನು ಪರಮ ವೈಭವಕ್ಕೆ ಕೊಂಡೊಯ್ಯುವ ನರೇಂದ್ರ ಮೋದಿಯವರ ಪ್ರಯತ್ನಕ್ಕೆ ತನ್ನ ಬೆಂಬಲ ಸದಾ ಇದೆ ಎಂದು ನುಡಿದು ತಮ್ಮ ಔನ್ನತ್ಯವನ್ನು ಮತ್ತೊಮ್ಮೆ ಮೆರೆದಿದ್ದಾರೆ. ವಂಶವಾದ ರಾಜಕೀಯವನ್ನು ವಿರೋಧಿಸಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಮಣೆ ಹಾಕಿದ ಬಿಜೆಪಿ ತನ್ನ ಖ್ಯಾತಿಗೆ ತಕ್ಕಂತೆ ನಡೆದುಕೊಂಡಿದೆ. ಅಷ್ಟೆ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.