ಸಂಗೀತ ಮತ್ತು ನೃತ್ಯ ಕಲಾಪ್ರಕಾರಗಳಲ್ಲಿ ದಿಗ್ಗಜಗಳಾದ ನಾಲ್ಕು ಮಹಿಳೆಯರು ಕಳೆದ ಶತಮಾನದ ಪ್ರಾರಂಭದಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಸಂಗೀತದ ತ್ರಿಮೂರ್ತಿಗಳಲ್ಲಿ ಹಿರಿಯರಾದ ಎಂ.ಎಸ್.ಸುಬ್ಬಲಕ್ಷ್ಮಿ ಮತ್ತು ಡಿ.ಕೆ.ಪಟ್ಟಮ್ಮಾಳ್ ಅವರಲ್ಲಿ ಮೂರು ವರ್ಷಗಳ ಅಂತರವಿದ್ದರೆ, ನೃತ್ಯ ಪ್ರವೀಣೆ ಬಾಲಸರಸ್ವತಿ ಅವರಿಬ್ಬರ ಮಧ್ಯದವರು. ಸಂಗೀತದ ತ್ರಿಮೂರ್ತಿಗಳಲ್ಲಿ ಕಿರಿಯವರಾದ ಎಂ.ಎಲ್.ವಸಂತಕುಮಾರಿ ಸುಮಾರು ಹತ್ತು ವರ್ಷಗಳ ನಂತರ ಜನಿಸಿದರು (ಕ್ರಮವಾಗಿ 1916, 1918, 1919, 1928 ರಲ್ಲಿ ಜನನ). ಸಾಮಾಜಿಕವಾಗಿ ವೈವಿಧ್ಯಮಯ ಹಿನ್ನೆಲೆಯ ಕುಟುಂಬಗಳಲ್ಲಿ ಜನಿಸಿದ ಇವರ ಜೀವನ ಮತ್ತು ಸಾಧನೆಯ ಹಿನ್ನೋಟ ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿದ್ದ ಸಾಮರಸ್ಯ ಮತ್ತು ಪ್ರತಿಭೆಗೆ ಸಮಾಜದಲ್ಲಿದ್ದ ಮನ್ನಣೆಯ ಒಳನೋಟಗಳನ್ನು ಒದಗಿಸುತ್ತದೆ. ದೇವದಾಸಿ ಹಿನ್ನೆಲೆಯಿದ್ದು ಸದಾಶಿವ ಅಯ್ಯರ್ ಅವರನ್ನು ವರಿಸಿದ್ದ ಎಂ.ಎಸ್, ಆಚಾರವಂತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಸಂಪ್ರದಾಯದ ಜೀವನವನ್ನು ನಡೆಸಿದ ಪಟ್ಟಾಮ್ಮಾಳ್, ದೇವದಾಸಿ ಪರಂಪರೆಯಲ್ಲೇ ಮುಂದುವರೆದ ಬಾಲಸರಸ್ವತಿ ಮತ್ತು ಅಯ್ಯರ್ ಮನೆಯಿಂದ ಬಂದು ಮಧ್ಯಮ ವರ್ಗದ ಜೀವನ ನಡೆಸಿದ ಎಂ.ಎಲ್. ವಸಂತಕುಮಾರಿ ಇವರುಗಳ ಜೀವನವನ್ನು ಸಂಗೀತ ಸಮುದಾಯಗಳಲ್ಲಿ ಸಾಂಪ್ರದಾಯಿಕ ಗೌರವದಿಂದ ನೋಡಿದರೆ, ಪಾಶ್ಚಿಮಾತ್ಯ ಲಿಬರಲ್ ಮಸೂರಗಳಿಂದ ವಿಶ್ಲೇಷಿಸುವ ಪ್ರವೃತ್ತಿ ಮಾಧ್ಯಮಗಳಲ್ಲಿ ಕಂಡುಬರುತ್ತಿದೆ. ಕರ್ನಾಟಕ ಸಂಗೀತವು ಪುರುಷರ ಮತ್ತು ಮೇಲ್ಜಾತಿಯವರ ಹತೋಟಿಯಲ್ಲಿದೆಯೆಂಬುದನ್ನು ಟಿ.ಎಂ.. ಕೃಷ್ಣ ಅಂಥಹಾ ನುರಿತ ಸಂಗೀತಗಾರರೂ ಸೇರಿದಂತೆ ಹಲವರು ಚರ್ಚಿಸುತ್ತಿರುವ ಇಂದಿನ ಸಂದರ್ಭದಲ್ಲಿ ಸಂಗೀತ-ನಾಟ್ಯದ ದಿಗ್ಗಜರ ಜೀವನದ ಮರು ವಿಶ್ಲೇಷಣೆ ಅಗತ್ಯವಾಗಿದೆ. ಈ ವರ್ಷ ಪಟ್ಟಮ್ಮಾಳ್ ಅವರ ಜನ್ಮಶತಮಾನೋತ್ಸವ ನಡೆಯುತ್ತಿದ್ದು ಇಂಥಹಾ ವಿಶ್ಲೇಷಣೆಗೆ ಸೂಕ್ತವಾದ ಘಟನೆಗಳ ಮೂಲಕ ಅವರನ್ನು ಇಲ್ಲಿ ಸ್ಮರಿಸಲಾಗಿದೆ.
ಸಂಪ್ರದಾಯಬದ್ಧ ಕುಟುಂಬದಲ್ಲಿ 1919, ಮಾರ್ಚ್ 28 ರಂದು ಕಾಂಚೀಪುರದಲ್ಲಿ ಕೃಷ್ಣಸ್ವಾಮಿ ದೀಕ್ಷಿತರ ಪುತ್ರಿಯಾಗಿ ಜನನ. ಸಂಗೀತ ಶಿಕ್ಷಣವನ್ನು 4ನೇ ವರ್ಷದಲ್ಲೇ ಪ್ರಾರಂಭಿಸಿದ ಪಟ್ಟಮ್ಮಾಳ್ ಅವರಿಗೆ ತಂದೆ ದಮಳಂ ಕೃಷ್ಣಸ್ವಾಮಿ ದೀಕ್ಷಿತರೇ ಮೊದಲ ಗುರು. ಸಂಗೀತದಲ್ಲಿ ಆಳವಾದ ಜ್ಞಾನವಿಲ್ಲದಿದ್ದರೂ, ಸಂಗೀತದಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ ಕೃಷ್ಣಸ್ವಾಮಿ ದೀಕ್ಷಿತರು ಪಟ್ಟಮ್ಮಾಳ್ ಅವರ ಸಂಗೀತ ಜೀವನವನ್ನು ರೂಪಿಸಿದರು.
ಸಣ್ಣ ಹುಡುಗಿಯಾಗಿದ್ದಾಗಲೇ ಪಟ್ಟಮ್ಮಾಳ್ ಅವರ ಸಂಗೀತ ಪ್ರತಿಭೆ ಪ್ರಚಲಿತವಾಗಿತ್ತು. ಪಟ್ಟಮ್ಮಾಳ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲು ಹಲವಾರು ಜನ ಮುಂದಾಗುತ್ತಿದ್ದರು. ಪಟ್ಟಮ್ಮಾಳ್ ಅವರ ಸಂಗೀತದ ಧ್ವನಿಮುದ್ರಿಕೆಯನ್ನು ಮಾಡುವ ಪ್ರಸ್ತಾಪವೂ ಇತ್ತು. ಆದರೆ, ತಂದೆ ಕೃಷ್ಣಸ್ವಾಮಿ ದೀಕ್ಷಿತರು ಈ ಪ್ರಸ್ತಾಪಗಳನ್ನು ಮೊದಲು ಒಪ್ಪಲಿಲ್ಲ. ಸಂಗೀತ ಕಛೇರಿಯು ತಮ್ಮ ಮಗಳ ಸಾರ್ವಜನಿಕ ಪ್ರದರ್ಶನಕ್ಕೆ ಕಾರಣವಾಗುತ್ತದೆ ಎಂಬ ಅನಿಸಿಕೆ ಅವರ ಹಿಂಜರಿಕೆಗೆ ಕಾರಣವಾಗಿತ್ತು. ಸಂಗೀತವು ದೈವಿಕವಾದುದೆಂಬ ನಂಬಿಕೆಯೂ ಅವರಲ್ಲಿ ಧೃಢವಾಗಿ ಇತ್ತು. ಧ್ವನಿಮುದ್ರಿಕೆಯನ್ನು ದೇಶ-ಕಾಲ-ಶ್ರೋತೃಗಳ ಪರಿವೆ ಇಲ್ಲದೇ ಉಪಯೋಗಿಸುವುದು ಮಗಳು ಕಲಿತಿರುವ ಸಂಗೀತ ವಿದ್ಯೆಗೆ ಅವಮಾನ ಮಾಡಿದಂತೆ ಎಂಬ ಭಾವನೆಯೂ ಅವರಿಗಿತ್ತು. ಆದರೆ, ಕುಟುಂಬದ ಸದಸ್ಯರು ಮತ್ತು ಹಿತೈಷಿಗಳ ಜೊತೆಗೆ ವಿಚಾರ-ವಿನಿಮಯ ನಡೆಸಿ, ಸಾರ್ವಜನಿಕವಾಗಿ ಹಾಡಲು ಮಗಳನ್ನು ಉತ್ತೇಜಿಸುವ ನಿರ್ಧಾರಕ್ಕೆ ಬಂದರು. ಈ ನಿರ್ಧಾರಕ್ಕೆ ಬರುವಲ್ಲಿ ಶ್ರೀ. ಪಟ್ಟಮ್ಮಳ್ ಅವರ ಭಾವೀ ಪತಿ ಶ್ರೀ.ಈಶ್ವರನ್ ಅವರ ಮಾವ ಡಾ. ಶ್ರೀನಿವಾಸನ್ ಕಾಂಚೀಪುರಂ ಅವರ ಪಾತ್ರ ದೊಡ್ಡದು.
ವಿವಾಹದ ನಂತರ, ಪಟ್ಟಮ್ಮಾಳ್ ಕಛೇರಿಗಳನ್ನು ನೀಡಲು ಅಗಾಗ ಪ್ರವಾಸದಲ್ಲಿರುತ್ತಿದ್ದರು. ಆಗ, ಪಟ್ಟಮ್ಮಾಳ್ ಅವರ ಅತ್ತೆಯವರು ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಪ್ರವಾಸಕ್ಕೆ ಹೋಗುವ ಮುನ್ನ ಪಟ್ಟಮ್ಮಾಳ್ ಅವರು ಅಂಗಡಿಗೆ ಹೋಗಿ ಅತ್ತೆಯವರಿಗೆ ಮತ್ತು ಮನೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನೂ ಕೊಂಡು ಬರುತ್ತಿದ್ದರು. ಮನೆಯಲ್ಲಿದ್ದಾಗ, ಮನೆಯ ಎಲ್ಲಾ ಸದಸ್ಯರ ಬೇಕು-ಬೇಡಗಳನ್ನು ಪಟ್ಟಮ್ಮಾಳ್ ಅವರೇ ಸ್ವತಃ ನೋಡಿಕೊಳ್ಳುತ್ತಿದ್ದರು. ಮನೆಯಲ್ಲಿದ್ದ ಜಾನುವಾರುಗಳನ್ನೂ ಸಹ ಪಟ್ಟಮ್ಮಾಳ್ ನೋಡಿಕೊಳ್ಳುತ್ತಿದ್ದರು. ಮನೆಯಲ್ಲಿ ಅಡುಗೆ ಸಹಾಯಕ್ಕಾಗಿ ಅಡುಗೆಯವರೂ ಸಹ ಇದ್ದರು.
ಪಟ್ಟಮ್ಮಾಳ್ ಅವರ ಕಛೇರಿಯ ಪ್ರಮುಖ ಆಕರ್ಷಣೆ ಎಂದರೆ ಅತಿ ಕ್ಲಿಷ್ಟ ಪಲ್ಲವಿಗಳನ್ನು ಸಂಕೀರ್ಣ ತಾಳಗಳ ಜೊತೆ ವಿಸ್ತಾರವಾದ ಗಾಯನ. ಮುತ್ತುಸ್ವಾಮಿ ದೀಕ್ಷಿತರ ಮತ್ತು ಕವಿ ಸುಬ್ರಹ್ಮಣ್ಯಭಾರತಿಯಾರ್ ಕಾವ್ಯಗಳನ್ನು ರಸಸ್ಫುರಣೆ ಹಾಗೂ ಭಾವಗಳಿಗೆ ಒತ್ತುಕೊಟ್ಟು ತಮ್ಮದೇ ಆದ ನಾದಲೋಕವನ್ನು ಸೃಷ್ಟಿಸುತ್ತಿದ್ದರು. ಸಂಗೀತ ಕಲಾನಿಧಿ, ಕಾಳಿದಾಸ ಸಮ್ಮಾನ್, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮ ವಿಭೂಷಣ ಇತ್ಯಾದಿ ಸನ್ಮಾನಗಳು ಅವರನ್ನು ಅರಸಿಕೊಂಡು ಬಂದವು.
ಪಟ್ಟಮ್ಮಾಳ್ ಅವರು ಭಾರತದ ಮೊದಲ ಮಹಿಳಾ ಹಿನ್ನೆಲೆಗಾಯಕಿ ಎನ್ನುವುದು ಗೊತ್ತಿರುವ ಸಂಗತಿಯೇ. ಆದರೆ, ಸಿನೆಮಾ ರಂಗದಲ್ಲಿ ಸಹ ಅವರು ಸಂಗೀತದ ಭಕ್ತಿ ಸ್ವರೂಪ ಮತ್ತು ಸಂಪ್ರದಾಯದ ಗೌರವಗಳನ್ನು ಕಾಪಾಡಿದ ರೀತಿ ವಿಶೇಷವಾದದ್ದು. ಪಟ್ಟಮ್ಮಾಳ್ ಅವರು ದೇವರ ಕೀರ್ತನೆಗಳು ಮತ್ತು ದೇಶಭಕ್ತಿ ಗೀತೆಗಳನ್ನು ಮಾತ್ರ ಹಾಡಲು ಒಪ್ಪುತ್ತಿದ್ದರು. ಶೃಂಗಾರ ಪ್ರಧಾನ ಭಾವಗೀತೆಗಳನ್ನು ಅವರು ಹಾಡುತ್ತಿರಲಿಲ್ಲ. ದೇವಭಕ್ತಿ ಅವರ ಸಂಗೀತ ತರಬೇತಿಯಿಂದ ಬಂದಿದ್ದರೆ, ದೇಶಭಕ್ತಿ ಅವರಲ್ಲಿ ಸಹಜವಾಗಿಯೇ ಇತ್ತು. ಪಟ್ಟಮ್ಮಾಳ್ ಅವರು ರಾಷ್ಟ್ರಿಯತೆಯನ್ನು ಜೀವನುದುದ್ದಕ್ಕೂ ಬೆಂಬಲಿಸಿದರು. ಸುಮಾರು 80ರ ವಯಸ್ಸಿನಲ್ಲಿ, ಕಾರ್ಗಿಲ್ ಯುದ್ಧದ ನಂತರದಲ್ಲಿ, ಜುಲೈ 11, 1999 ರಂದು ಚೆನ್ನೈನಲ್ಲಿ 18ಗಂಟೆಗಳ ಕಾಲ ಕರ್ನಾಟಕ ಸಂಗೀತ ಕಛೇರಿನೀಡಿ ಕಾರ್ಗಿಲ್ ಸೈನಿಕರ ಕಲ್ಯಾಣನಿಧಿಗೆ ಹಣಸಂಗ್ರಹ ಮಾಡಿದರು. 1939 ರ ಸ್ವಾತಂತ್ರ್ಯ ಪೂರ್ವದಲ್ಲಿ, ಪಟ್ಟಾಮ್ಮಾಳ್ ಅವರು 20 ವರ್ಷದವರಿದ್ದಾಗ, ತ್ಯಾಗಭೂಮಿ ಎಂಬ ಚಲನಚಿತ್ರಕ್ಕೆ ದೇಶಭಕ್ತಿ ಭಾವನೆ ಮೂಡಿಸುವ ಒಂದು ಗೀತೆಯನ್ನು ಹಾಡಿದರು. ಬ್ರಿಟಿಶ್ ಸರ್ಕಾರವು ಆ ಚಲನಚಿತ್ರವನ್ನೂ ಮತ್ತು ಪಟ್ಟಮ್ಮಾಳ್ ಅವರು ಹಾಡಿದ್ದ ಗೀತೆಯನ್ನೂ ನಿರ್ಬಂಧಿಸಿದರು. ಭಾರತ ಎಂಬ ಶಬ್ದ ಕೇಳಿಯೇ ಅವರು ಭಾವಪರವಶವಾಗಿದ್ದು ಅವರ ಎರಡೂ ನೇತ್ರಗಳಲ್ಲೂ ಆನಂದ ಬಾಷ್ಪಧಾರೆಯು ಹರಿದ ಘಟನೆಗಳು ದಾಖಲಾಗಿವೆ.
ಪ್ರಸಿದ್ದ ಮೃದಂಗ ಪಟು ಶ್ರೀ. ಫಾಲ್ಗಾಟ್ ಮಣಿ ಅಯ್ಯರ್ ಅವರು ಎಂದೂ ಮಹಿಳಾ ಸಂಗೀತಗಾರ್ತಿಯರಿಗೆ ಮೃದಂಗ ನುಡಿಸಿದವರಲ್ಲ. ಪಟ್ಟಮ್ಮಾಳ್ ಅವರೂ ಸಹ ಶ್ರೀ. ಮಣಿಅವರನ್ನು ಕೇಳುವ ಯೋಚನೆ ಮಾಡಿರಲಿಲ್ಲ. ಆದರೆ ಫಾಲ್ಗಾಟ್ ಮಣಿ ಅಯ್ಯರ್ ಅವರು ಸಂಗೀತದಲ್ಲಿ ಸಂಪ್ರದಾಯಬದ್ಧವಾಗಿ ಸಾಧನೆಮಾಡುವ ಸಂಗೀತಗಾರರನ್ನು ಗೌರವದಿಂದ ಕಾಣುತ್ತಿದ್ದರು. ಪಟ್ಟಮ್ಮಾಳ್ ಅವರ ಪ್ರಸಿದ್ಧಿಯಲ್ಲೂ ವಿನಯವಂತಿಕೆ, ಸಂಪ್ರದಾಯ ಶ್ರದ್ಧೆ ಇವುಗಳು ಫಾಲ್ಗಾಟ್ ಮಣಿ ಅಯ್ಯರ್ ಅವರ ಅಪಾರ ಪ್ರಶಂಸೆಗೆ ಪಾತ್ರವಾಗಿದ್ದವು. 1967ರಲ್ಲಿ ತಾವಾಗಿಯೇ ಪಟ್ಟಮ್ಮಾಳ್ ಅವರ ಸಂಗೀತಕ್ಕೆ ಮೃದಂಗ ನುಡಿಸಲು ಮುಂದಾದರು. ಮಣಿ ಅಯ್ಯರ್ ಅವರು ಪಟ್ಟಮ್ಮಾಳ್ ಅವರ ಪುತ್ರನ ಮಾವ ಆಗಿದ್ದರೂ ಬಂಧುತ್ವದ ಕಾರಣಕ್ಕಾಗಿ ಅವರು ಮೃದಂಗ ನುಡಿಸುವ ನಿರ್ಧಾರ ತೆಗೆದುಕೊಳ್ಳಲಿಲ್ಲ.
(ಸಂಗೀತ ವಿದುಷಿ ಡಿ.ಕೆ.ಪಟ್ಟಮ್ಮಾಳ್ ಅವರ ಜನ್ಮ ಶತಮಾನೋತ್ಸವದ ನಿಮಿತ್ತ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ದಿನಾಂಕ 17 ಮಾರ್ಚ್ 2019, ಭಾನುವಾರ ನಡೆಯಲಿರುವ ವಿಚಾರ ಸಂಕಿರಣದ ನಿಮಿತ್ತ ಶ್ರೀ ವಿವೇಕ್ ಶ್ರೀಧರ ಬರೆದ ಲೇಖನ. ಕರಡು ಸಹಾಯ ಶ್ರೀಧರನ್.ಎಂ.ಕೆ )
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.