ನವದೆಹಲಿ: 2020ರ ಅಂಡರ್ 17 ಮಹಿಳಾ ವಿಶ್ವಕಪ್ ಅನ್ನು ಭಾರತ ಆಯೋಜಿಸಲಿದೆ. ಈ ಬಗ್ಗೆ ಫೀಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿಯೊ ಅವರು ಶುಕ್ರವಾರ ಘೋಷಿಸಿದ್ದಾರೆ.
ಅಮೆರಿಕದ ಮಿಯಾಮಿಯಲ್ಲಿ ನಡೆದ ಫೀಫಾ ಮಂಡಳಿಯ ಸಭೆಯ ಬಳಿಕ ಪ್ರತಿಕ್ರಿಯೆಯನ್ನು ನೀಡಿರುವ ಇನ್ಫಾಂಟಿಯೊ ಅವರು, ಫೀಫಾ ಅಂಡರ್ 17 ಮಹಿಳಾ ವಿಶ್ವಕಪ್ ಅನ್ನು 2020 ರಲ್ಲಿ ಭಾರತ ಆಯೋಜನೆಗೊಳಿಸಲಿದೆ ಎಂಬುದನ್ನು ಘೋಷಣೆ ಮಾಡಲು ಅತೀವ ಸಂತೋಷವಾಗುತ್ತದೆ ಎಂದಿದ್ದಾರೆ.
ಭಾರತ ಆಯೋಜಿಸುತ್ತಿರುವ ಎರಡನೇ ಫೀಫಾ ಯು-17 ಮಹಿಳಾ ವಿಶ್ವಕಪ್ ಇದಾಗಿದೆ. 2017 ರಲ್ಲಿ ಭಾರತ ಮೊದಲ ಬಾರಿಗೆ ಮಹಿಳಾ ವಿಶ್ವಕಪ್ನ್ನು ಆಯೋಜನೆಗೊಳಿಸಿತ್ತು.
2020 ರಲ್ಲಿ ಮತ್ತೊಮ್ಮೆ ಈ ಅವಕಾಶ ಸಿಕ್ಕಿರುವುದನ್ನು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ನ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಅವರು ಖಚಿತಪಡಿಸಿದ್ದು, ಅಂಡರ್ 17 ಮಹಿಳಾ ವಿಶ್ವಕಪ್ನ್ನು ಆಯೋಜಿಸುವ ಹಕ್ಕು ಭಾರತಕ್ಕೆ ನೀಡಿದ್ದಕ್ಕೆ ಫೀಫಾಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಇದರಿಂದ ದೇಶದಲ್ಲಿನ ಮಹಿಳಾ ಫುಟ್ಬಾಲ್ನ ಚಿತ್ರಣವೇ ಘನತೆಯುತ ಮಟ್ಟದಲ್ಲಿ ಬೆಳವಣಿಗೆಯಾಗಲಿದೆ ಎಂದಿದ್ದಾರೆ.
ದೇಶದಲ್ಲಿ ಮಹಿಳಾ ಫುಟ್ಬಾಲ್ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನಾವು ನೀಡುತ್ತಾ ಬಂದಿದ್ದೇವೆ. ಅಂಡರ್ 17 ಮಹಿಳಾ ವಿಶ್ವಕಪ್ ಆಯೋಜಿಸಲು ನಾವು ಬಿಡ್ ಮಾಡಿದ್ದೆವು. ಈಗ ಅದರ ಹಕ್ಕು ನಮಗೆ ದೊರೆತಿದೆ.
ಕಳೆದ ವರ್ಷ ಇದರ ಬಿಡ್ಡಿಂಗ್ ಪ್ರಕ್ರಿಯೆ ಆರಂಭಗೊಂಡಿತ್ತು. ಫ್ರಾನ್ಸ್ ಕೂಡ ವಿಶ್ವಕಪ್ ಆಯೋಜನೆಗೆ ಆಸಕ್ತಿಯನ್ನು ತೋರಿಸಿತ್ತು. ಆದರೆ ಅಂತಿಮವಾಗಿ ಈ ಅವಕಾಶ ಭಾರತಕ್ಕೆ ಸಿಕ್ಕಿದ್ದು ಹೆಮ್ಮೆಯ ಸಂಗತಿಯಾಗಿದೆ. ವಿಶ್ವಕಪ್ ಅನ್ನು ಎಲ್ಲಿ ಆಯೋಜಿಸಬೇಕು ಎಂಬ ಬಗ್ಗೆ ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ದಾಸ್ ಹೇಳಿದ್ದಾರೆ.
ನಮ್ಮ ಯೋಚನೆಯಲ್ಲಿ ನಾಲ್ಕು ಸ್ಥಳಗಳಿದ್ದು ಇವುಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸುತ್ತೇವೆ ಎಂದು ಹೇಳಿದ್ದಾರೆ. ಆಯೋಜಕ ಸ್ಥಾನವನ್ನು ಪಡೆದುಕೊಂಡಿರುವ ಕಾರಣ ಭಾರತ ಈ ವಿಶ್ವಕಪ್ಗೆ ಆಟೋಮ್ಯಾಟಿಕ್ ಆಗಿ ಅರ್ಹತೆ ಪಡೆದುಕೊಂಡಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.