ನಗರದಲ್ಲಿ ಹುಟ್ಟಿ ಬೆಳೆದರೂ ಆಕಾಂಶ ಸಿಂಗ್ಗೆ ಭಾರತದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆ ಅರಿವಿತ್ತು. ಗ್ರಾಮೀಣ ಭಾಗಕ್ಕೆ ಒಂದು ಬಾರಿ ಆಕೆ ಕಾಲಿಟ್ಟಾಗ ಈ ಅಸಮಾನತೆಯ ನಿಜವಾದ ದರ್ಶನ ಆಕೆಗಾಗಿತ್ತು.
ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಲ್ ಸೈನ್ಸ್(ಟಿಐಎಸ್ಎಸ್)ನ್ನು 2014ರಲ್ಲಿ ಪೂರ್ತಿಗೊಳಿಸಿದ ಬಳಿಕ, ಆಕೆ ಇಂಟರ್ನ್ಶಿಪ್ಗಾಗಿ ಮಧ್ಯಪ್ರದೇಶದ ಜಬುವಾ ಜಿಲ್ಲೆಗೆ ತೆರಳಿದ್ದರು. ಆ ಪ್ರದೇಶ ಅವರಿಗೆ ಒಂಥರಾ ಕಣ್ತೆರೆಯುವ ಸನ್ನಿವೇಶವನ್ನು ನೀಡಿತ್ತು. ಅಲ್ಲಿನ ಯಾವ ಮನೆಗಳಲ್ಲೂ ಟಾಯ್ಲೆಟ್ಗಳಿರಲಿಲ್ಲ, ಸರಿಯಾದ ವಿದ್ಯುತ್ ಸಂಪರ್ಕವೂ ಅಲ್ಲಿರಲಿಲ್ಲ. ಅಲ್ಲಿನ ಮಹಿಳೆಯರು ರಾತ್ರಿಯಾಗುವುದರೊಳಗೆ, ತಮ್ಮ ಗಂಡಂದಿರು ಕೃಷಿ ಕಾರ್ಯ ಮಾಡಿ ಮನೆ ಸೇರುವುದರೊಳಗೆ ಅಡುಗೆ ಮಾಡಿ ಮುಗಿಸಿರಬೇಕಿತ್ತು. ಅದು ಕೂಡ ಕಟ್ಟಿಗೆ ಅಥವಾ ಬೆರಣಿಯನ್ನು ಬಳಸಿ ಅಡುಗೆ ಮಾಡಬೇಕಿತ್ತು. ಆ ಪರಿಸರದಲ್ಲಿ ಹಲವಾರು ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳೂ ಇದ್ದವು.
ಕೃಷಿ ಜಬುವಾ ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ, ಆದರೆ ರಾಸಾಯನಿಕ ಗೊಬ್ಬರಗಳನ್ನೇ ಮಾಡಿ ಕೃಷಿ ಮಾಡುತ್ತಿದ್ದರು, ಇದು ಅಲ್ಲಿನ ಫಲವತ್ತತೆಯ ಮೇಲೆ ದೊಡ್ಡ ಹೊಡೆತವನ್ನೇ ನೀಡುತ್ತಿತ್ತು. ಅಡುಗೆ ಕೋಣೆಯ ತ್ಯಾಜ್ಯಗಳನ್ನು ನಿರ್ವಹಣೆ ಮಾಡುವ ಯಾವುದೇ ಸೌಲಭ್ಯಗಳು ಇರಲಿಲ್ಲ. ಸುತ್ತಮುತ್ತಲಿನ ಕೆರೆಗಳಿಗೆ ತಂದು ತ್ಯಾಜ್ಯಗಳನ್ನು ಹಾಕುತ್ತಿದ್ದರು. ಎಲ್ಲೆಂದರಲ್ಲಿ ಬಿಸಾಕುತ್ತಿದ್ದರು, ಇದರಿಂದಾಗಿ ಸೊಳ್ಳೆಗಳ ಕಾಟ ಯಥೇಚ್ಛವಾಗಿತ್ತು, ಜನ ಅನಾರೋಗ್ಯಕ್ಕೆ ಈಡಾಗುತ್ತಿದ್ದರು.
ಈ ಎಲ್ಲಾ ಸಮಸ್ಯೆಗಳು ಆಕಾಂಶ ಅವರನ್ನು ತೀವ್ರವಾಗಿ ಕಾಡಿದ್ದವು. ಗ್ರಾಮೀಣ ಭಾರತಕ್ಕೆ ವಿದ್ಯುದೀಕರಣ ಯೋಜನೆಗಳಿದ್ದವು, ಆದರೆ ಇಲ್ಲಿ ಆ ಯೋಜನೆ ಅನುಷ್ಠಾನಗೊಂಡಿರಲಿಲ್ಲ. ಕಾರ್ಪೋರೇಟ್ ಕಂಪನಿಗಳ ಗೊಬ್ಬರಗಳನ್ನು ಖರೀದಿಸಿ ತಮ್ಮ ಕಿಸೆಯಲ್ಲಿನ ಹಣವನ್ನು ಗ್ರಾಮಸ್ಥರು ಕಳೆದುಕೊಳ್ಳುತ್ತಿದ್ದರು. ಇದರಿಂದ ಅವರ ಜೀವನ ತೊಂದರೆಗೊಳಗಾಗುತ್ತಿತ್ತು. ಗ್ರಾಮಸ್ಥರಿಗೆ ಸ್ವಂತ ಬಲದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿರುವಾಗ ಯಾಕೆ ಕಾರ್ಪೋರೇಟ್ ಕಂಪನಿಗಳಿಗೆ ಹಣ ಸುರಿಯುತ್ತಾರೆ ಎಂಬ ಬಗ್ಗೆ ಆಕಾಂಶ ಗಂಭೀರ ಚಿಂತನೆ ಆರಂಭಿಸಿದರು. ಬಯೋಎಲೆಕ್ಟ್ರಿಸಿಟಿಯತ್ತ ಅವರ ಚಿಂತನೆ ಹೊರಳಿತು.
ಗ್ರಾಮೀಣ ಭಾರತ ಗೋವಿನ ಮೇಲೆ ಹೆಚ್ಚಾಗಿ ಅವಲಂಬಿತಗೊಂಡಿರುತ್ತದೆ. ಗೋವಿನ ಗೊಬ್ಬರದಿಂದ ಬಯೋ ಗ್ಯಾಸ್, ಬಯೋ ಎಲೆಕ್ಟ್ರಿಸಿಟಿಗಳ ಉತ್ಪಾದನೆಗೆ ಸಾಕಷ್ಟು ಅವಕಾಶಗಳಿವೆ. ಸಾಮಾನ್ಯ ಬಯೋಗ್ಯಾಸ್ ಪ್ಲಾಂಟ್ ಇಡೀ ಸಮುದಾಯಕ್ಕೆ ವಿದ್ಯುತ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ, ಅಡುಗೆಗೂ ಗ್ಯಾಸ್ ಒದಗಿಸಿಕೊಡುತ್ತದೆ. ತ್ಯಾಜ್ಯದಿಂದ ಜೈವಿಕ ಗೊಬ್ಬರ, ಜೈವಿಕ ರಸಗೊಬ್ಬರಗಳನ್ನೂ ತಯಾರಿಸಬಹುದಾಗಿದೆ. ಇಂತಹ ಬಯೋಗ್ಯಾಸ್ನ್ನು ಈ ಪ್ರದೇಶದಲ್ಲಿ ನಿರ್ಮಾಣ ಮಾಡುವ ಯೋಚನೆ ಆಕಾಂಶ ಅವರಿಗೆ ಹೊಳೆಯಿತು.
ಬಯೋ ಎಲೆಕ್ಟ್ರಿಸಿಟಿಗಾಗಿ ಸ್ವಯಂಭು ಯೋಜನೆಯನ್ನು ಅನುಷ್ಠಾನಕ್ಕೆ ತಂದ ಆಕಾಂಶ, ಪ್ರಾಯೋಗಿಕವಾಗಿ ಇದನ್ನು ತಮ್ಮ ತವರು ಬಿಹಾರದಲ್ಲೇ ಮೊದಲು ಅನುಷ್ಠಾನಕ್ಕೆ ತಂದರು. ಜೈವಿಕ ವಿದ್ಯುತ್ ಮೂಲಕ ಬಡವರಿಗೆ ಬೆಳಕು ನೀಡುವ ಕಾರ್ಯಕ್ರಮ ಇದಾಗಿದೆ. ಇದೀಗ ಅಲ್ಲಿನ 50 ದಲಿತ ಕುಟುಂಬಗಳು ತಿಂಗಳಿಗೆ ರೂ. 60 ರೂಪಾಯಿಯನ್ನು ನೀಡಿ ವಿದ್ಯುತ್ ಪಡೆಯುತ್ತಿವೆ.
ನಾಲ್ಕರಿಂದ ಐದು ತಿಂಗಳುಗಳ ಕಾಲ ಸಮಸ್ತಿಪುರ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಸ್ವಯಂಭುವನ್ನು ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ಆಕಾಂಶ ನಡೆಸಿದ್ದರು. ಗ್ರಾಮಸ್ಥರಿಗೆ ಬಯೋ ಗ್ಯಾಸ್ ಮೌಲ್ಯ ತಿಳಿಯಿತು, ಆದರೆ ಅದಕ್ಕಾಗಿ ಮತ್ತಷ್ಟು ಖರ್ಚು ಮಾಡುವುದು ನಮಗೆ ತೊಂದರೆಯುಂಟು ಮಾಡಬಹುದು ಎಂಬುದು ಅವರ ಆತಂಕವಾಗಿತ್ತು. ಆದರೂ ಛಲ ಬಿಡದೆ ಯೋಜನೆಯೊಂದಿಗೆ ಮುಂದುವರೆದ ಆಕಾಂಶ ಅವರು, ಆಯುಷ್ಮಾನ್ ಫೌಂಡೇಶನ್ನಿಂದ ತಾಂತ್ರಿಕ ಸಹಾಯವನ್ನು ಪಡೆದು ಬಯೋ ಪ್ಲಾಂಟ್ ನಿರ್ಮಿಸಿಯೇ ಬಿಟ್ಟರು.
ಅವರ ಪ್ರಯತ್ನದ ಫಲವಾಗಿ ಇಂದು ಸಮಸ್ತಿಪುರದಲ್ಲಿ ಎರಡು ಬಯೋಗ್ಯಾಸ್ ಪ್ಲಾಂಟ್ಗಳಿವೆ, ಒಂದು ಎರಡು ಗಂಟೆಗಳ ಬಯೋಎಲೆಕ್ಟ್ರಿಸಿಟಿ ಸಾಮರ್ಥ್ಯವನ್ನು ಹೊಂದಿದೆ. ಮತ್ತೊಂದು ನಾಲ್ಕು ಗಂಟೆ ವಿದ್ಯುತ್ ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ.
ಸ್ವಯಂಭುಗೆ ಸಿಂಗಾಪುರದ ಡಿಬಿಎಸ್ ಬ್ಯಾಂಕ್ನಿಂದ ಆರಂಭಿಕ ನೆರವು ಸಿಕ್ಕಿದೆ. ಫಲಾನುಭವಿಗಳಿಂದ, ಸರ್ಕಾರ ಮತ್ತು ಎನ್ಜಿಓಗಳಿಂದ ಆಕಾಂಶ ಅವರಿಗೆ ಬಯೋ ಪ್ಲಾಂಟ್ ನಿರ್ವಹಿಸಲು ಆರ್ಥಿಕ ನೆರವು ಸಿಕ್ಕಿದೆ. ಈ ಪ್ಲಾಂಟ್ನಿಂದಾಗಿ ಆ ಪ್ರದೇಶದಲ್ಲಿ ಸಾಕಷ್ಟು ಪರಿವರ್ತನೆಗಳಾಯಿತು, ಫಲಾನುಭವಿಗಳು ಯಾವುದೇ ಅಡೆತಡೆ ಇಲ್ಲದೆ ದರವನ್ನು ಪಾವತಿಸಲಾರಂಭಿಸಿದ್ದರೆ, ರಾಸಾಯನಿಕ ಗೊಬ್ಬರಗಳನ್ನು ತೊರೆದು ಜೈವಿಕ ಗೊಬ್ಬರಗಳತ್ತ ಮುಖ ಮಾಡಿದ್ದಾರೆ. ಅಡುಗೆ ಕೋಣೆಗಳಲ್ಲಿ ಕಟ್ಟಿಗೆಯ ಬದಲು ಗ್ಯಾಸ್ನಲ್ಲಿ ಆಹಾರಗಳು ತಯಾರಾಗುತ್ತಿವೆ.
ಸ್ವಯಂಭು ತಂಡ ಕೇವಲ ಸಮುದಾಯ ಬಯೋ ಪ್ಲಾಂಟ್ ನಿರ್ಮಾಣ ಮಾತ್ರವಲ್ಲದೇ, ವೈಯಕ್ತಿಕ ಬಯೋ ಪ್ಲಾಂಟ್ ನಿರ್ಮಾಣ ಕಾರ್ಯದಲ್ಲೂ ತೊಡಗಿಕೊಂಡಿದೆ. ಐಐಟಿ ಪಾಟ್ನಾದ ವಿದ್ಯಾರ್ಥಿಗಳ ಜೊತೆ ಸೇರಿ ಒಂದು ಅಂತಹ ವೈಯಕ್ತಿಕ ಬಯೋ ಪ್ಲಾಂಟ್ನ್ನು ನಿರ್ಮಾಣ ಮಾಡಲಾಗಿದೆ.
ಪ್ಲಾಂಟ್ಗಳಿಂದ ಬರುವ ಗೊಬ್ಬರವನ್ನು ಬಳಸಿ ಅಗರ್ಬತ್ತಿ, ಧೂಪ, ಹೂವಿನ ಕುಂಡ ಇತ್ಯಾದಿಗಳನ್ನು ಮಾಡಬಹುದಾಗಿದೆ. ಈ ಉತ್ಪನ್ನಗಳನ್ನು ಮಾಡುವ ಮೂಲಕ ಮಹಿಳೆಯರು ಆದಾಯವನ್ನೂ ಗಳಿಸಬಹುದು, ಅಡುಗೆ ಕೋಣೆಯಲ್ಲಿ ಬಯೋಗ್ಯಾಸ್, ಮನೆಯಲ್ಲಿ ಬಯೋ ಎಲೆಕ್ಟ್ರಿಸಿಟಿ ಇರುವುದರಿಂದ ಅವರಿಗೆ ಸಾಕಷ್ಟು ಸಮಯದ ಉಳಿತಾಯವಾಗುತ್ತದೆ. ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಉತ್ಪನ್ನಗಳನ್ನು ಮಾಡಬಹುದು ಎಂಬುದಾಗಿ ಆಕಾಂಶ ಹೇಳುತ್ತಾರೆ.
ಬಯೋ ಎಲೆಕ್ಟ್ರಿಸಿಟಿ ಪ್ರಾಜೆಕ್ಟ್ನ್ನು ವಿಸ್ತರಿಸುವ ನಿಟ್ಟಿನಲ್ಲಿ ಸ್ವಯಂಭು ಸಂಸ್ಥೆ ಯೋಜನೆಗಳನ್ನು ಹಾಕಿಕೊಂಡಿದೆ. ಜಮ್ಮು ಕಾಶ್ಮೀರ, ಉತ್ತಾರಖಂಡಗಳಲ್ಲಿ ಇದಕ್ಕಾಗಿ ಸಮೀಕ್ಷೆಯನ್ನೂ ನಡೆಸುತ್ತಿದೆ.
ಪದವಿಗಳನ್ನು ಪಡೆದುಕೊಂಡು ಉದ್ಯೋಗಕ್ಕಾಗಿ ಮೆಟ್ರೋಪಾಲಿಟನ್ ಸಿಟಿಗಳಿಗೆ ಓಡುವ ಯುವಜನತೆಯ ಸಾಲಿನಲ್ಲಿ ಆಕಾಂಶ ವಿಭಿನ್ನರಾಗಿ ನಿಲ್ಲುತ್ತಾರೆ. ತಮ್ಮ ಬಯೋ ಪ್ಲಾಂಟ್ ಯೋಜನೆಯಿಂದ ಪ್ರದೇಶವೊಂದನ್ನು ಬೆಳಗಿಸಿದ, ಅಲ್ಲಿನ ಜನಜೀವನವನ್ನು ಉತ್ತಮಪಡಿಸಿದ ಸಾರ್ಥಕತೆ ಅವರಿಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.