ನವದೆಹಲಿ: ಮತದಾನ ಮಾಡುವುದನ್ನು ತಪ್ಪಿಸಿಕೊಂಡು ಬಳಿಕ ನಿರಾಸೆ ಅನುಭವಿಸಬೇಡಿ ಎಂದು ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
‘ಪ್ರಜಾಪ್ರಭುತ್ವಕ್ಕಾಗಿ ನಾಲ್ಕು ಮನವಿಗಳು’ ಎಂಬ ಶೀರ್ಷಿಕೆಯ ಬ್ಲಾಗ್ನ್ನು ಮೋದಿ ಬರೆದಿದ್ದು, ಚುನಾವಣೆ ಸಂದರ್ಭದಲ್ಲಿ ಮತದಾರರು ಅನುಸರಿಸಬೇಕಾದ ನಾಲ್ಕು ಅಂಶಗಳನ್ನು ಪ್ರತಿಪಾದಿಸಿದ್ದಾರೆ.
ಅವರ ನಾಲ್ಕು ಮನವಿಗಳು ಇಲ್ಲಿವೆ
ಈಗಲೇ ನೋಂದಣಿ ಮಾಡಿಕೊಳ್ಳಿ: ಈಗಲೇ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಿಕೊಳ್ಳಿ ಮತ್ತು ವೋಟರ್ ಐಡಿಯನ್ನು ಪಡೆದುಕೊಳ್ಳಿ, ಅದಕ್ಕೆ ನಿಮ್ಮ ಜೀವನದಲ್ಲಿ ಹೆಮ್ಮೆಯ ಸ್ಥಾನವನ್ನು ನೀಡಿದೆ ಎಂದು ಮೋದಿ ಮನವಿ ಮಾಡಿಕೊಂಡಿದ್ದಾರೆ.
21ನೇ ಶತಮಾನದಲ್ಲಿ ಜನಿಸಿದವರು ಮೊದಲ ಬಾರಿಗೆ ಮತದಾನವನ್ನು ಮಾಡುವ ಅರ್ಹತೆಯನ್ನು ಪಡೆಯಲಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಮತದಾನ ಮಾಡುವ ಮೂಲಕ ಯುವಜನತೆಗೆ ನಮ್ಮ ಪ್ರಜಾಪ್ರಭುತ್ವವನ್ನು ಸಮೃದ್ಧಗೊಳಿಸಲಿದ್ದಾರೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಸರಿಯಾಗಿ ಪರೀಕ್ಷಿಸಿಕೊಳ್ಳಿ: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ. ಒಂದು ವೇಳೆ ಹೆಸರು ಇಲ್ಲದಿದ್ದರೆ, ಸಂಬಂಧಪಟ್ಟವರಿಗೆ ಈ ವಿಷಯವನ್ನು ತಿಳಿಸಿ ಎಂಬುದು ಮೋದಿಯವರ ಎರಡನೇ ಮನವಿಯಾಗಿದೆ. ನಾಮಪತ್ರ ಸಲ್ಲಿಸಲು ಇರುವ ಕೊನೆಯ ದಿನದವರೆಗೂ ಮತದಾನದ ಪಟ್ಟಿ ಅಪ್ಡೇಟ್ ಮಾಡಲಾಗುತ್ತದೆ ಎಂದಿದ್ದಾರೆ.
ಸರಿಯಾಗಿ ಯೋಜನೆ ಹಾಕಿಕೊಳ್ಳಿ: ಮತದಾನದ ದಿನಾಂಕಕ್ಕಿಂತ ಮೊದಲು ಅಥವಾ ನಂತರವೇ ರಜಾ ಪ್ರವಾಸದ ಯೋಜನೆಯನ್ನು ಹಾಕಿಕೊಳ್ಳಿ. ಉದ್ಯೋಗದ ಸ್ಥಳ ಮತ್ತು ಮತದಾನ ಸ್ಥಳ ಬೇರೆ ಬೇರೆಯಾಗಿದ್ದರೆ ಒಂದು ದಿನ ರಜಾ ಹಾಕಿ ಮತದಾನ ಮಾಡಿ. ಒಂದು ದಿನವನ್ನು ದೇಶದ ಭವಿಷ್ಯಕ್ಕಾಗಿ ಮೀಸಲಿಡಿ ಎಂದಿದ್ದಾರೆ.
ಇತರರನ್ನೂ ಮತದಾನಕ್ಕೆ ಪ್ರೇರೇಪಿಸಿ: ಪ್ರತಿಯೊಬ್ಬರೂ ತಮ್ಮ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಕರೆ ನೀಡಿದ್ದಾರೆ. ಮತದಾನ ಮಾಡುವಂತೆ ಪ್ರೇರೇಪಿಸಿ, ಇಲ್ಲವಾದರೆ ಒತ್ತಾಯಪೂರ್ವಕವಾಗಿಯಾದರೂ ಮತಗಟ್ಟೆಗೆ ಬಂದು ಮತದಾನವನ್ನು ಮಾಡುವಂತೆ ಮಾಡಿ ಎಂದಿದ್ದಾರೆ.
ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು, ದೇಶಧ ಆಭಿವೃದ್ಧಿಗೆ ಅದು ಕೊಡುಗೆ ನೀಡಿದಂತೆ. ಮತದಾನ ಮಾಡುವ ಮೂಲಕ ಜನರು ದೇಶದ ಕನಸು ಮತ್ತು ಆಕಾಂಕ್ಷೆಗಳೊಂದಿಗೆ ಕನೆಕ್ಟ್ ಆಗಿರಬಹುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.