ಮಂಗಳೂರು : ಮನಪಾ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಘನತ್ಯಾಜ್ಯ ನಿರ್ವಹಣೆ ಅಸಮರ್ಪಕವಾಗಿಲ್ಲ ಎಂಬ ಆಕ್ಷೇಪ, ವಿರೋಧ ಹಾಗೂ ಸದಸ್ಯರ ಪ್ರತಿಭಟನೆಗೂ ಮನಪಾ ಸಾಮಾನ್ಯ ಸಭೆ ಇಂದು ಸಾಕ್ಷಿಯಾಯಿತು.
ನೂತನ ಮೇಯರ್ ಜೆಸಿಂತಾ ವಿಜಯ ಆಲ್ಪ್ರೆಡ್ ಅಧ್ಯಕ್ಷತೆಯಲ್ಲಿ ಮನಪಾ ಸಭಾಂಗಣದಲ್ಲಿ ಇಂದು ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆ ತೀವ್ರ ಚರ್ಚೆಗೆ ಕಾರಣವಾಯಿತು. ಘನತ್ಯಾಜ್ಯ ನಿರ್ವಹಣೆಗೆ ಪ್ರಸ್ತುತ ವಿಧಿಸಲಾಗಿರುವ ದರ ಸಮರ್ಪಕವಾಗಿಲ್ಲ. 250 ರಿಂದ 400 ರೂ. ವಾರ್ಷಿಕ ತೆರಿಗೆ ಕಟ್ಟುವ ಜನಸಾಮಾನ್ಯರು ಘನತ್ಯಾಜ್ಯ ನಿರ್ವಹಣಾ ಶುಲ್ಕವಾಗಿ 480 ರೂ.ಗಳಷ್ಟು ನೀಡಬೇಕಾಗುತ್ತದೆ ಎಂದು ಮನಪಾದ ಹಿರಿಯ ಸದಸ್ಯ ಲ್ಯಾನ್ಸಿ ಲಾಟ್ ಪಿಂಟೋ ಅವರು ಸದನದ ಗಮನ ಸೆಳೆದರು.
ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಹಾಗೂ ಸದಸ್ಯ ಪ್ರೇಮಾನಂದ ಶೆಟ್ಟಿಯವರು ಮನೆಗಳಿಂದ ಕಸ ಸಂಗ್ರಹ ಸೂಕ್ತವಾಗಿ ಆಗುತ್ತಿಲ್ಲ ಎಂದು ಆಕ್ಷೇಪಿಸಿದರೆ, ಆಡಳಿತ ಪಕ್ಷದ ಸದಸ್ಯರಾದ ಕವಿತಾ ಸನಿಲ್ ತೆರೆದ ವಾಹನದಲ್ಲಿ ಕಸ ವಿಲೇವಾರಿ ನಡೆಯುತ್ತಿದೆ ಎಂದು ದೂರಿದರು. ಮುಂಬೈಯ ಆಂಟನಿ ಕಂಪನಿಗೆ 7 ವರ್ಷಗಳ ಅವಧಿಗೆ ಟೆಂಡರ್ ನೀಡಿ ಎರಡು ತಿಂಗಳು ಕಳೆದರೂ ಅವರಿನ್ನೂ ಪ್ರಾಥಮಿಕ ಹಂತದಲ್ಲೇ ಇದ್ದಾರೆ ಎಂದು ವಿಪಕ್ಷ ಸದಸ್ಯೆ ರೂಪಾ ಡಿ. ಬಂಗೇರ ಆರೋಪಿಸಿದರು.
ಈ ನಡುವೆ ಸಿಪಿಎಂ ಸದಸ್ಯ ದಯಾನಂದ ಶೆಟ್ಟಿ, ಜೆಡಿಎಸ್ನ ಅಬ್ದುಲ್ ಅಝೀಝ್ ಕುದ್ರೋಳಿ, ರಮೀಝಾ ಬಾನು ಹಾಗೂ ಎಸ್ಡಿಪಿಐ ಸದಸ್ಯ ಅಯಾರhರವರು ಅಸಮರ್ಪಕ ಘನತ್ಯಾಜ್ಯ ನಿರ್ವಹಣೆ ಕುರಿತಾದ ಭಿತ್ತಿಪತ್ರಗಳನ್ನು ಕೈಯ್ಯಲ್ಲಿ ಹಿಡಿದು ಮೇಯರ್ ಪೀಠದೆದುರು ತೆರಳಿ ವಿರೋಧ ವ್ಯಕ್ತಪಡಿಸಿದರು.
`ಲಕ್ಷದ ಕಾಮಗಾರಿ ಕೋಟಿಗೆ ಕೊಟ್ಟರೂ ಕೆಲಸ ಮಾತ್ರ ಶೂನ್ಯ, ಶುಲ್ಕ ಸಂಗ್ರಹ ಮಾಡುವ ಎಲ್ಲಾ ಮನೆಗಳಿಂದ ಕಸ ಸಂಗ್ರಹ ಆಗುತ್ತಿಲ್ಲ’, ಗುಡಿಸುವವರಿಲ್ಲ, ಕೇಳುವವರಿಲ್ಲ, ಕಾರ್ಮಿಕರಿಗೆ ಸಂಬಳ ಇಲ್ಲ, ಆಂಟನಿ ಕಂಪನಿ ವೇಸ್ಟ್ ವೇಸ್ಟ್’, `ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸಮರ್ಪಕವಾಗಿ ಆಗುತ್ತಿಲ್ಲ’ ಎಂಬ ಘೋಷಣೆಗಳನ್ನು ಒಳಗೊಂಡ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಕೆಲ ಹೊತ್ತು ಪ್ರತಿಭಟಿಸಿದರು.
ಈ ಸಂದರ್ಭ ಆಯುಕ್ತರಾದ ಹೆಫ್ಸಿಬಾ ರಾಣಿ ಕೊರ್ಲಪಟಿಯವರು ಮಾತನಾಡಿ, ವಿಶೇಷ ಕಾಳಜಿಯೊಂದಿಗೆ ಘನತ್ಯಾಜ್ಯ ನಿರ್ವಹಣೆ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಆಂಟನಿ ಸಂಸ್ಥೆಯವರು ಮುಂಬೈನಲ್ಲಿ ಕೂತು ಇಲ್ಲಿ ಕಸ ವಿಲೇವಾರಿ ಮಾಡುವ ಬದಲು ಇಲ್ಲೇಬಂದು ಕಾರ್ಯ ನಿರ್ವಹಿಸಬೇಕೆಂಬ ತಾಕೀತಿನೊಂದಿಗೆ ಅವರಿಗೆ ಪಾವತಿಯನ್ನೂ ಬಾಕಿ ಇರಿಸಲಾಗಿದೆ ಎಂದು ಹೇಳಿದರು.
ಆದರೆ ಆಯುಕ್ತರ ಉತ್ತರಿಂದ ವಿಪಕ್ಷ ಸದಸ್ಯರು ತೃಪ್ತರಾಗದೆ ತಮ್ಮ ವಿರೋಧವನ್ನು ಮುಂದುವರಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ನೂತನ ಮೇಯರ್ ಜೆಸಿಂತಾ, ತೆರೆದ ವಾಹನದಲ್ಲಿ ಮನೆಗಳಿಂದ ಕಸ ಸಂಗ್ರಹಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಘನತ್ಯಾಜ್ಯ ಶುಲ್ಕಕ್ಕೆ ಸಂಬಂಧಿಸಿ ತೆರಿಗೆ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಿ ಮುಂದಿನ ಸಭೆಯಲ್ಲಿ ನಿರ್ಧಾರವನ್ನು ಮಂಡಿಸಲಾಗುವುದು ಎಂದು ಭರವಸೆ ನೀಡಿದರು.
ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಮೇಯರ್ ಆದೇಶ : ನಗರದಲ್ಲಿನ ಅನಧಿಕೃತ ಜಾಹೀರಾತು ಫಲಕಗಳ ಕುರಿತಂತೆ ನಡೆದ ಚರ್ಚೆಯ ಹ್ನಿನೆಲೆಯಲ್ಲಿ, ಅನಧಿಕೃತ ಜಾಹೀರಾತು ಫಲಕಗಳಿದ್ದಲ್ಲಿ ಅದನ್ನು ತಕ್ಷಣ ತೆರವುಗೊಳಿಸುವಂತೆ ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್ ಆದೇಶಿಸಿದರು.
ವಿಪಕ್ಷ ನಾಯಕ ಸುಧೀರ್ ಶೆಟ್ಟಿಯವರು ಅನಧಿಕೃತ ಜಾಹೀರಾತು ಫಲಕಗಳ ಬಗ್ಗೆ ಪ್ರಸ್ತಾಪಿಸಿದರು. ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರವರು ಪರಿಷತ್ನಲ್ಲಿ ಮಂಗಳೂರು ನಗರದಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳ ಕುರಿತಾದ ಪ್ರಶ್ನೆಗೆ 19 ಅನಧಿಕೃತ ಫಲಕಗಳಿರುವುದಾಗಿ ಮನಪಾ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ನಾನು ವೈಯಕ್ತಿಕವಾಗಿ ಈ ಬಗ್ಗೆ ಪಾವಂಜೆಯಿಂದ ಕೆಪಿಟಿ ಹಾಗೂ ಕೆಪಿಟಿಯಿಂದ ಏರ್ಪೋರ್ಟ್ವರೆಗಿನ ಎರಡು ರಸ್ತೆಯನ್ನು ಸಮೀಕ್ಷೆ ಮಾಡಿದಾಗ 36 ಫಲಕಗಳು ಕಂಡುಬಂದಿವೆ ಎಂದು ಭಾವಚಿತ್ರದ ದಾಖಲೆಯನ್ನು ಸಭೆಗೆ ಮಂಡಿಸಿದರು.
ಕೇಬಲ್ ಅಳವಡಿಕೆ ಬಗ್ಗೆ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಲು ನಿರ್ಣಯ :ರಸ್ತೆಗಳನ್ನು ಅಗೆದು ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ, ಮನಪಾದಿಂದ ಒಪ್ಪಿಗೆ ಪಡೆಯದೆ ಅವ್ಯಾಹತವಾಗಿ ಕೇಬಲ್ಗಳನ್ನು ಅಳವಡಿಸುತ್ತಿರುವ ಬಗ್ಗೆ ಚರ್ಚೆಯ ಕುರಿತಂತೆ ಪ್ರತಿಕ್ರಿಯಿಸಿದ ಮೇಯರ್ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಲು ನಿರ್ಣಯಿಸಿದರು.
ಸಭೆಯಲ್ಲಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರಿನಾಥ್, ದೀಪಕ್ ಪೂಜಾರಿ, ಪ್ರಕಾಶ್ ವಿ. ಸಾಲ್ಯಾನ್, ಕೇಶವ ಉಪಸ್ಥಿತರಿದ್ದರು.
ನರ್ಮ್ ಬಸ್ ಬಗ್ಗೆ 1 ವಾರದಲ್ಲಿ ಜಿಲ್ಲಾಧಿಕಾರಿಗೆ ಕೋರಿಕೆ ಪಟ್ಟಿ : ನಗರದಲ್ಲಿ ನರ್ಮ್ ಯೋಜನೆಯಡಿ ೩೫ ಬಸ್ಸುಗಳನ್ನು ಓಡಿಸಲಿದ್ದಾರೆ. ಪತ್ರಿಕೆಯೊಂದರ ಮಾಹಿತಿಯ ಪ್ರಕಾರ ಕೆಎಸ್ಆರ್ಟಿಸಿಯವರು ಈಗಾಗಲೇ ಸಿಟಿ ಬಸ್ಸುಗಳು ಬಹುತೇಕವಾಗಿ ಇರುವ ಮಾರ್ಗಗಳಲ್ಲೇ ಆ ಬಸ್ಸುಗಳನ್ನು ಓಡಿಸಲು ಮುಂದಾಗಿದ್ದಾರೆ ಎಂದು ಮನಪಾ ಸದಸ್ಯ ಅಬ್ದುಲ್ ರವೂಫ್ ಸಭೆಯಲ್ಲಿ ಪ್ರಸ್ತಾಪಿಸಿದರು. ಸಭೆಯಲ್ಲಿದ್ದ ಕೆಎಸ್ಆರ್ಟಿಸಿ ಅಧಿಕಾರಿ ಸ್ಪಷ್ಟನೆ ನೀಡಿ, ಇಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದ್ದು, ಸಾರ್ವಜನಿಕ ಪ್ರಯಾಣಿಕರಿಗೆ ಅಗತ್ಯವಿರುವ ಮಾರ್ಗಗಳ ಕುರಿತಂತೆ ಬೇಡಿಕೆ ಸಲ್ಲಿಸುವಂತೆ ಕೋರಲಾಗಿದೆ. ಎಪ್ರಿಲ್ 9 ರವರೆಗೆ ಕಾಲಾವಕಾಶವಿದೆ ಎಂದರು. ಈ ಸಂದರ್ಭ ಮೇಯರ್ ಮಾತನಾಡಿ, ನಗರದಲ್ಲಿ ಯಾವ ಮಾರ್ಗಗಳಲ್ಲಿ ಬಸ್ಸಿನ ಅಗತ್ಯವಿದೆ ಎಂಬುದನ್ನು ನಿಗದಿಪಡಿಸಿ ಒಂದು ವಾರದೊಳಗೆ ಜಿಲ್ಲಾಧಿಕಾರಿಗೆ ಕೋರಿಕೆ ಸಲ್ಲಿಸಲಾಗುವುದು ಎಂದು ನಿರ್ಧಾರ ಪ್ರಕಟಿಸಿದರು.
ನೀರಿನ ಸಮಸ್ಯೆಗೆ ಸಿಗದ ಪರಿಹಾರ!: ಸಭೆಯಲ್ಲಿ ಮನಪಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕುರಿತಂತೆ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಸದಸ್ಯರಾದ ಸುಮಿತ್ರಾ, ರೇವತಿ, ಪ್ರತಿಭಾ ಕುಳಾಯಿ ಮೊದಲಾದವರು ತಮ್ಮ ವಾರ್ಡ್ಗಳಲ್ಲಿ ನೀರಿನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರಕುತ್ತಿಲ್ಲ ಎಂದು ದೂರಿದರು.
ಸದಸ್ಯ ತಿಲಕ್ ರಾಜ್ ಮಾತನಾಡಿ, ಹಲವಾರು ಅನಧಿಕೃತ ಸಂಪರ್ಕಗಳಿರುವ ಬಗ್ಗೆ ಅಧಿಕಾರಿಗಳೇ ಒಪ್ಪಿಕೊಂಡರೂ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು. ಆದರೆ ಸದಸ್ಯರ ಆಕ್ಷೇಪ ಮುಂದುವರಿದಂತೆಯೇ ಮೇಯರ್ರವರು ಪ್ರಶ್ನಾವಳಿ ಅವಧಿಯನ್ನು ಕೊನೆಗೊಳಿಸಿ ಕಾರ್ಯಸೂಚಿ ಮಂಡಿಸಲು ಮುಖ್ಯ ಸಚೇತರಿಗೆ ಅವಕಾಶ ನೀಡಿದರು.
ದೇರೆಬೈಲ್ ಕೊಂಚಾಡಿ ಬೋರುಗುಡ್ಡೆ ನಿವಾಸಿಗಳ ಅಳಲು : ಅತ್ತ ಸಭಾಂಗಣದಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಆಗುತ್ತಿದ್ದರೆ ಇತ್ತ ನೀರಿನ ಸಮಸ್ಯೆಯಿಂದ ಕಂಗಾಲಾದ ದೇರೆಬೈಲ್ ಕೊಂಚಾಡಿಯ ಬೋರುಗುಡ್ಡೆ ನಿವಾಸಿಗಳು ಸಭಾಂಗಣದ ಹೊರಗಡೆ ನೀರಿನ ಸಮಸ್ಯೆ ಬಗ್ಗೆ ಪತ್ರಕರ್ತರ ಜತೆ ಅಳಲು ತೋಡಿಕೊಂಡರು. “ನಾಲ್ಕು ದಿನಗಳಿಂದ ನೀರು ಇಲ್ಲ. ಈ ಬಗ್ಗೆ ಸ್ಥಳೀಯ ಮನಪಾ ಸದಸ್ಯರ ಗಮನಕ್ಕೆ ತರಲಾಗಿದೆ. ಏನೂ ಕ್ರಮ ಕೈಗೊಳ್ಳಲಾಗಿಲ್ಲ. ಟ್ಯಾಂಕರ್ ವ್ಯವಸ್ಥೆಯನ್ನೂ ಮಾಡಲಾಗಿಲ್ಲ” ಎಂದು ಅವಲತ್ತುಕೊಂಡ ನಿವಾಸಿಗಳು, ಸಭಾಂಗಣದಿಂದ ಸಭೆ ಮುಗಿಸಿ ಹೊರ ಬಂದ ಸ್ಥಳೀಯ ಮನಪಾ ಸದಸ್ಯರನ್ನೂ ಈ ಬಗ್ಗೆ ತರಾಟೆಗೆ ತೆಗೆದುಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.