ಕಳೆದ ವಾರ ಕಾಶ್ಮೀರಿ ಭಯೋತ್ಪಾದಕರು 350 ಕೆಜಿ ಸ್ಫೋಟಕಗಳನ್ನು ಹೊಂದಿದ್ದ ವಾಹನವನ್ನು, ಸಿಆರ್ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ 70 ಬಸ್ಗಳ ಪೈಕಿ ಒಂದಕ್ಕೆ ಗುದ್ದಿಸಿ 42 ಮಂದಿ ಯೋಧರು ಹುತಾತ್ಮರಾಗುವಂತೆ ಮಾಡಿದ್ದರು. ಈ ದಾಳಿಯ ಜವಾಬ್ದಾರಿಯನ್ನು ಪಾಕಿಸ್ಥಾನ ಮೂಲದ ಜೈಶ್-ಇ-ಮೊಹಮ್ಮದ್ ಭಯೋತ್ಪಾದನಾ ಸಂಘಟನೆ ಹೊತ್ತುಕೊಂಡಿತು. ಈ ದಾಳಿಗೆ ಪ್ರಪಂಚದಾದ್ಯಂತದಿಂದ ವ್ಯಾಪಕ ಖಂಡನೆ ವ್ಯಕ್ತವಾಯಿತು. ದೇಶದ ಗಣ್ಯರು, ಜನಸಾಮಾನ್ಯರು ಈ ದಾಳಿಯನ್ನು ಖಂಡಿಸಿದರು. ಹುತಾತ್ಮರಾದ ಯೋಧರ ಕುಟುಂಬದವರೊಂದಿಗೆ, ಗಾಯಗೊಂಡ ಯೋಧರೊಂದಿಗೆ ಇಡೀ ದೇಶವೇ ದೃಢವಾಗಿ ನಿಂತಿತು. ಆದರೆ ಭಯೋತ್ಪಾದಕ ದಾಳಿಯಲ್ಲಿ ಬಾಂಧಿಸಲ್ಪಡದ ಜನರ ಖಂಡನೆಗಳಿಂದಾಗಲಿ, ಕಟು ಹೇಳಿಕೆಗಳಿಂದಾಗಲಿ ಯುದ್ಧವನ್ನು ಜಯಿಸಲು ಸಾಧ್ಯವಿಲ್ಲ. ಯೋಜನಾ ಬದ್ಧ ಕಾರ್ಯತಂತ್ರ, ಸುದೀರ್ಘ ನೀತಿಯ ಅಳವಡಿಕೆಯ ಮೂಲಕ ಕದನಕ್ಕೆ ಸಂಪೂರ್ಣ ತಿಲಾಂಜಲಿ ಇಟ್ಟು ಯುದ್ಧವನ್ನು ಜಯಿಸಬೇಕು.
ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಆಶೀರ್ವಾದದಿಂದಾಗಿ ಕಾಶ್ಮೀರ ಇಬ್ಭಾಗವಾಗಿ ಹೋಗಿದೆ. ಮಹಾರಾಜ ಹರಿ ಸಿಂಗ್ ಭಾರತೀಯ ಒಕ್ಕೂಟದೊಂದಿಗೆ ಕಾಶ್ಮೀರವನ್ನು ಸೇರಿಸುವ ಒಪ್ಪಂದಕ್ಕೆ ಸಹಿ ಹಾಕಿದಾಗ, ಸಂವಿಧಾನದ ಅಡಿಯಲ್ಲಿ ಈ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಅತಿರೇಕದ ನಿರ್ಧಾರವನ್ನು ನೆಹರು ಕೈಗೊಂಡರು. ಸಂವಿಧಾನದ ಕಲಂ 370 ಜಮ್ಮು ಮತ್ತು ಕಾಶ್ಮೀರವನ್ನು ಸ್ವಾಯತ್ತ ರಾಜ್ಯವೆಂದು ಪರಿಗಣಿಸುತ್ತದೆ, ಆದರೆ 1954ರಲ್ಲಿ ಪ್ರಿಸಿಡೆನ್ಶಿಯಲ್ ಆರ್ಡರ್ ಮೂಲಕ ಈ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದ 35ಎ ಕಲಂ ಜಮ್ಮು ಕಾಶ್ಮೀರದ ಶಾಸಕಾಂಗಕ್ಕೆ ಅದರ ರಾಜ್ಯದ “ಶಾಶ್ವತ ನಿವಾಸಿಗಳನ್ನು” ವ್ಯಾಖ್ಯಾನಿಸಲು ಮತ್ತು ಶಾಶ್ವತ ನಿವಾಸಿಗಳಿಗೆ ವಿಶೇಷ ಹಕ್ಕುಗಳನ್ನು ಮತ್ತು ಸೌಲಭ್ಯಗಳನ್ನು ಒದಗಿಸುವ ಅಧಿಕಾರವನ್ನು ನೀಡುತ್ತದೆ. 35-ಎ ಕಲಂನಡಿ ಕಾಶ್ಮೀರಿಗಳನ್ನು ಹೊರತುಪಡಿಸಿ ಬೇರೆ ಭಾರತೀಯರು ಕಾಶ್ಮೀರದಲ್ಲಿ ಭೂಮಿಯನ್ನು ಹೊಂದುವಂತೆ ಇಲ್ಲ.
ಪಾಕಿಸ್ಥಾನದ ಆಡಳಿತ ಮತ್ತು ಪಾಕಿಸ್ಥಾನ ಮೂಲದ ಭಯೋತ್ಪಾದನಾ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಲು ಕಲಂ-35Aನ ಪ್ರಯೋಜನವನ್ನು ಬಹಳ ಹಿಂದೆಯೇ ಅರಿತುಕೊಂಡಿವೆ. ಆದ್ದರಿಂದ, ಪರಿಚ್ಛೇದವನ್ನು ರದ್ದುಪಡಿಸುವ ಅಥವಾ ಬದಲಾಯಿಸುವ ನಿಟ್ಟಿನಲ್ಲಿ ಕೆಲ ಭಾರತೀಯ ರಾಜಕೀಯ ಪಕ್ಷಗಳು ಮಾಡಿದ ಯಾವುದೇ ಪ್ರಯತ್ನಗಳನ್ನು ಕಣಿವೆಯಲ್ಲಿರುವ ಅವರ ಬೆಂಬಲಿಗರು ತೀವ್ರವಾದ ಪ್ರತಿಭಟನೆಯ ಮೂಲಕ ವಿರೋಧಿಸುತ್ತಾ ಬಂದಿದ್ದಾರೆ. ಕಲಂ 35A ಆ ರಾಜ್ಯಕ್ಕೆ ಜನಸಂಖ್ಯಾ ಸಮನ್ವಯದ ಭರವಸೆ ನೀಡುತ್ತದೆ. ಜಮ್ಮು ಮತ್ತು ಕಾಶ್ಮೀರದ ಜನಸಂಖ್ಯಾ ರಚನೆ ಪಾಕಿಸ್ಥಾನ ಮತ್ತು ಅದರ ಬೆಂಬಲಿತ ಭಯೋತ್ಪಾದಕ ಸಂಘಟನೆಗಳ ಪರವಾಗಿ ಇರುವಂತೆ ಮಾಡಲಾಗಿದೆ. ಒಂದು ವೇಳೆ ಈ ಪರಿಚ್ಛೇದವನ್ನು ನಿಷೇಧಿಸಿದರೆ ಜಮ್ಮು ಕಾಶ್ಮೀರದಲ್ಲಿ ವಿವಿಧ ಜನಾಂಗದ ಜನರ ಸಂಖ್ಯೆ ಹೆಚ್ಚಳವಾಗತ್ತದೆ. ಇದರಿಂದ ಪಾಕಿಸ್ಥಾನಕ್ಕೆ ತನ್ನ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಕಲಂ 35Aಯನ್ನು ರದ್ದುಪಡಿಸುದರಿಂದ ಕಾಶ್ಮೀರದಲ್ಲಿ ಭೂಮಿಯನ್ನು ಹೊಂದುವ ಹಕ್ಕು ಎಲ್ಲಾ ಭಾರತೀಯರಿಗೆ ಸಿಗಲಿದೆ. ಮಾತ್ರವಲ್ಲ, ಆ ರಾಜ್ಯದ ಯಾವ ಭಾಗಕ್ಕೂ ಹೋಗಿ ನೆಲೆಸಲು ಭಾರತೀಯರಿಗೆ ಸಾಧ್ಯವಾಗುತ್ತದೆ. ಇದರಿಂದ ಭಯೋತ್ಪಾದಕ ಗುಂಪುಗಳು ಆ ರಾಜ್ಯದಲ್ಲಿ ಚಟುವಟಿಕೆಗಳನ್ನು ನಡೆಸುವ ಅವಕಾಶವನ್ನು ಕಳೆದುಕೊಳ್ಳುತ್ತವೆ. ರಾಜ್ಯದ ಜನಸಂಖ್ಯಾ ವೈವಿಧ್ಯತೆಯನ್ನು ಬಳಸಿಕೊಂಡು ಭಾರತ ಸರ್ಕಾರ ಭಯೋತ್ಪಾದಕರನ್ನು ಹತ್ತಿಕ್ಕಬಹುದುದಾಗಿದೆ. ಹೆಚ್ಚಿನ ಸಂಖ್ಯೆಯ ರಾಷ್ಟ್ರೀಯತಾವಾದಿ ಭಾರತೀಯರು ಈ ಕಣಿವೆಯಲ್ಲಿ ವಾಸ ಮಾಡಲು ಆರಂಭಿಸಿದರೆ ಪ್ರತ್ಯೇಕತಾವಾದಿಗಳು ಬಾಯಿಮುಚ್ಚಿಕೊಂಡು ತೆಪ್ಪಗಿರುತ್ತಾರೆ.
ಇತ್ತೀಚಿನ ದಿನಗಳಲ್ಲಿ ಉಗ್ರರು ತಮ್ಮ ವಿನಾಶಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅತ್ಯಂತ ಧೈರ್ಯಶಾಲಿ ವಿಧಾನಗಳನ್ನೇ ಅನುರಿಸುತ್ತಿದ್ದಾರೆ ಎಂಬುದು ಪುಲ್ವಾಮ ದಾಳಿ ಸೇರಿದಂತೆ ಜಗತ್ತಿನಲ್ಲಿ ನಡೆದ ಉಗ್ರ ದಾಳಿಗಳಿಂದ ತಿಳಿದು ಬಂದಿದೆ. ಅದೇ ರೀತಿ, ಭಾರತ ಸರ್ಕಾರ ಉಗ್ರರನ್ನು ಎದುರಿಸಲು ಸಾಂಪ್ರದಾಯಿಕ ಕ್ರಮಗಳ ಬದಲು, ಹೊಸ ಯುಗದ ಮಾದರಿಗಳನ್ನು ಅನುಸರಿಸುವತ್ತ ಯೋಚಿಸಬೇಕಿದೆ. ಪುಲ್ವಾಮ ದಾಳಿಯ ನಂತರ, ಭಯೋತ್ಪಾದಕ ಸಂಘಟನೆ ಜೈಶೇ ಇ ಮೊಹಮ್ಮದ್ ಒಂದು ವೀಡಿಯೋವನ್ನು ಬಿಡುಗಡೆ ಮಾಡಿತು. ಈ ವೀಡಿಯೋದಲ್ಲಿ ದಾಳಿಕೋರ ದಾರ್ ಭಾರತೀಯರ ವಿರುದ್ಧ ವಿಷ ಕಕ್ಕಿದ್ದಾನೆ ಮತ್ತು ಮುಸ್ಲಿಮೇತರರನ್ನು “ಹಸುವಿನ ಮೂತ್ರ ಕುಡಿಯುವವರು” ಎಂದು ಹೀಯಾಳಿಸಿದ್ದಾನೆ. ಈ ರೀತಿಯಲ್ಲಿ ಬ್ರೈನ್ ವಾಶ್ಗೆ ಒಳಗಾದ ಭಯೋತ್ಪಾದಕರನ್ನು ನೆಲಕ್ಕುರುಳಿಸಲು ಸೇನೆ ಮುಂದಾದರೂ, ಅವರಿಗೆ ಬೆಂಬಲ ನೀಡುವವರು ಕೈಜೋಡಿಸಿ ದೊಡ್ಡ ಮಟ್ಟದಲ್ಲಿ ಹೊಯಿಳೆಬ್ಬಿಸಿ ದಾರಿ ತಪ್ಪಿಸುತ್ತಾರೆ. ಎನ್ಕೌಂಟರ್ ಸೈಟ್ಗೆ ಬಂದು ಕಲ್ಲು ತೂರಾಟ ಮಾಡಿ ಭಯೋತ್ಪಾದಕ ಓಡಿ ಹೋಗಲು ನೆರವು ನೀಡುತ್ತಾರೆ. ಕಲಂ 35Aನ್ನು ರದ್ದುಪಡಿಸುವುದರಿಂದ ಇಂತಹವರನ್ನು ಮಟ್ಟ ಹಾಕಬಹುದು. ಮಾತ್ರವಲ್ಲ, ದೀರ್ಘ ಅವಧಿಯಿಂದ ಬಾಕಿ ಉಳಿದಿರುವ ಕಾಶ್ಮೀರಿ ಪಂಡಿತ ಪುನರ್ವಸತಿ ಸಮಸ್ಯೆಯನ್ನೂ ಬಗೆಹರಿಸಿಕೊಳ್ಳಬಹುದು. ಇಂತಹ ಸನ್ನಿವೇಶದಲ್ಲಿ ಅವರಿಗೆ ಕಾಶ್ಮೀರದಲ್ಲಿ ಬದಕುಲು ಉತ್ಸಾಹವೂ ಇರುತ್ತದೆ.
ಪರಿಚ್ಛೇದ 35A ನ ಕಲೆಗಳನ್ನು ಮೆತ್ತಿಕೊಂಡಿರುವ ಭಾರತದ ಆತ್ಮ ಜಮ್ಮು ಕಾಶ್ಮೀರದಿಂದ ಈ ಪರಿಚ್ಛೇದವನ್ನು ಹೊರ ಹಾಕುವ ಕಾಲ ಈಗ ಸನ್ನಿಹಿತವಾಗಿದೆ. ಭಯೋತ್ಪಾದನೆಯ ವಿಧಾನ ಬದಲಾಗುತ್ತಿದೆ, ಹೀಗಾಗಿ ಅದನ್ನು ಎದುರಿಸುವ ವಿಧಾನವೂ ಬದಲಾಗಬೇಕಿದೆ. ಭಾರತ ಕೇವಲ ಭಯೋತ್ಪಾದಕರನ್ನು ಮಾತ್ರವಲ್ಲ, ಅದನ್ನು ಬೆಂಬಲಿಸುವವರ ವಿರುದ್ಧವೂ ಕ್ರಮ ಜರುಗಿಸುತ್ತದೆ ಎಂಬುದನ್ನು ತೋರಿಸಿಕೊಡಬೇಕಿದೆ. ಹುತಾತ್ಮ ಯೋಧರ ಬಲಿದಾನಕ್ಕೆ ಪ್ರತಿಕಾರ ತೀರಿಸಲು ಭಾರತ ನಿಜಕ್ಕೂ ಬಯಸುವುದಾದರೆ, ದೀರ್ಘಾವಧಿ ಸವಾಲಿನ ನೀತಿಯನ್ನು ಅದು ಅನುಸರಿಸಲೇ ಬೇಕು. ಈ ನಿಟ್ಟಿನಲ್ಲಿ ಕಲಂ-35A ನ ನಿರ್ಮೂಲನೆಯೂ ಒಂದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.