ವಿಧಾನ ಸೌಧದ ಮೇಲೆ “ಕಳ್ಳರಿದ್ದಾರೆ ಎಚ್ಚರಿಕೆ” ಎನ್ನುವ ಫಲಕವೊಂದನ್ನು ತೂಗು ಹಾಕಿದರೆ?
ನಮ್ಮ ನಾಡಿನ ಬಹುತೇಕ ಪ್ರಜೆಗಳು ಭ್ರಷ್ಟ ರಾಜಕಾರಣಿಗಳನ್ನು ಕಳ್ಳರೆಂದೇ ಭಾವಿಸಿದ್ದಾರೆ. ಹಾಗಿರುವುದರಿಂದ ಅಂತಹಾ ಭ್ರಷ್ಟ ರಾಜಕಾರಣಿಗಳ ಬಗ್ಗೆ ಎಚ್ಚರಿಕೆಯಿಂದ ಇರಲೆಂದೇ ಅಂತಹಾ ನಾಮಫಲಕವನ್ನು ಅಳವಡಿಸಿರಬಹುದೆಂದು ತಿಳಿದುಕೊಳ್ಳಬಹುದು. ಆದರೆ ಭ್ರಷ್ಟ ರಾಜಕಾರಣಿಗಳನ್ನು ಪ್ರಜೆಗಳು ನೇರವಾಗಿ ಕಳ್ಳರು ಎನ್ನುವಂತಿಲ್ಲ. ಇತ್ತೀಚೆಗಷ್ಟೇ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿಯವರ ಕಚೇರಿಯ ಸಿಬ್ಬಂದಿಯೊಬ್ಬರ ಬಳಿ ಲಂಚ ಕೊಡಲೆಂದೇ ವಿಧಾನ ಸೌಧಕ್ಕೆ ತಂದಿದ್ದೆನ್ನಲಾದ 25.76 ಲಕ್ಷ ರೂಪಾಯಿ ಮೊತ್ತದ ಹಣ ಪತ್ತೆಯಾಗಿದ್ದರೂ ಹಾಗೆಲ್ಲಾ ನೇರವಾಗಿ ರಾಜಕಾರಣಿಗಳನ್ನು ಕಳ್ಳರು ಎಂದು ಹೇಳಿಬಿಡುವಂತಿಲ್ಲ.
ಆದರೆ ಇದೀಗ ಸ್ವತಃ ವೃತ್ತಿಪರ ಕಳ್ಳರೇ ವಿಧಾನ ಸೌಧದೊಳಗೆ ಸಚಿವರ ಕೋಣೆಯಲ್ಲಿ ಕುಳಿತು ಕಳ್ಳತನ, ಮೋಸ, ದಗಾ, ವಂಚನೆಗಿಳಿದ ಬಗ್ಗೆ ವರದಿಯಾಗಿದೆ! ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಕೊಠಡಿಯಲ್ಲೇ ಕುಳಿತು, ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಕೆಲವರು ಇತ್ತೀಚೆಗಷ್ಟೇ ವಂಚನೆಗೊಳಗಾದ ಸಿಕ್ಕಿಬಿದ್ದಿದ್ದಾರೆ. ಸದ್ಯ ಎಂಟು ಮಂದಿ ವಿಧಾನ ಸೌಧದ ಕಳ್ಳರು ಬಂಧಿಸಲ್ಪಟ್ಟಿರುವ ಬಗ್ಗೆ ವರದಿಯಾಗಿದೆ.
ವರದಿಗಳ ಪ್ರಕಾರ ಕರ್ನಾಟಕ ಸರ್ಕಾರದ ಸಚಿವ ಎಂದೇ ಪರಿಚಯಿಸಿಕೊಳ್ಳುತ್ತಿದ್ದ ಕಾರ್ತಿಕೇಯನ್ ಎನ್ನುವ ಕಳ್ಳ ತನ್ನ ಇಬ್ಬರು ಸಹಚರರ ಮೂಲಕ ಮಿಕಗಳನ್ನು ಗುರುತಿಸುತ್ತಿದ್ದ. ಸಚಿವ ಎಂದ ಮೇಲೆ ಹಿಂದೆ, ಮುಂದೆ ಎಲ್ಲವೂ ಇರಬೇಕಲ್ಲವೇ? ಅದಕ್ಕಾಗಿಯೇ ನಾಲ್ಕು ಜನ ಕಳ್ಳರನ್ನು ಗನ್ ಮ್ಯಾನ್ಗಳಂತೆ ಅಕ್ಕ ಪಕ್ಕದಲ್ಲಿ ಇಟ್ಟುಕೊಂಡಿದ್ದ. ಅವರಲ್ಲಿ ಒಬ್ಬ ಕಳ್ಳ ದಾಖಲೆಗಳನ್ನು ಪರಿಶೀಲಿಸುವ ಪರಿಶೀಲನಾ ಅಧಿಕಾರಿಯಂತೆ ನಟಿಸುತ್ತಿದ್ದ.
ಶಾಸಕರ ಬಳಕೆಗೆ ಮೀಸಲಿರುವ ಹೆಚ್ಚುವರಿ ಕಾರುಗಳನ್ನೇ ಪಡೆದು ಆ ಕಾರು ತನ್ನದೇ ಎನ್ನುವಂತೆ ನಂಬಿಸುತ್ತಾ ತನ್ನ ಮಿಕಗಳನ್ನು ನಂಬಿಸುತ್ತಿದ್ದ ಆ ಕಳ್ಳ, ಸಚಿವರು ಕೊಠಡಿಯಲ್ಲಿರದ ಸಮಯದಲ್ಲಿ ಒಳ ಹೋಗಿ ಕುಳಿತು ಉದ್ಯಮಿಗಳನ್ನು ಕರೆಸಿಕೊಂಡು ಸಚಿವರಂತೆ ಮಾತಾಡಿಸಿ ಅವರಿಂದ ಹಣ ಕೀಳುತ್ತಿದ್ದ! ವಿಧಾನ ಸೌಧದ ಸಚಿವರ ಕೊಠಡಿಯೊಳಗೆ ಕುಳಿತು, ಸಚಿವನೆಂದು ನಂಬಿಸಿ ತಮಿಳುನಾಡಿನ ಗೋಡಂಬಿ ವ್ಯಾಪಾರಿ ರಮೇಶ್ ಎಂಬುವರಿಂದ ಸುಮಾರು 1.12 ಕೋಟಿ ರೂ. ಪಡೆದು ಓಡಿ ಹೋಗಿದ್ದ ಕಳ್ಳರ ತಂಡ ಇನ್ನೂ ಹಲವಾರು ಉದ್ಯಮಿಗಳಿಗೆ ಇದೇ ರೀತಿ ವಂಚಿಸಿರುವ ಅನುಮಾನಗಳಿವೆಯಂತೆ!
ಆದರೆ ಇದುವರೆಗೂ ಯಾವ ಸಚಿವರ ಕೊಠಡಿಯೊಳಗೆ ಆ ಕಳ್ಳರಿದ್ದರೆನ್ನುವ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ. ಹಾಗಾಗಿ ಈಗಿರುವ ಎಲ್ಲಾ ಸಚಿವರ ಕೊಠಡಿಗಳ ಬಗ್ಗೆಯೂ ಎಚ್ಚರಿಕೆಯಿಂದಿರುವುದು ಒಳ್ಳೆಯದು. ಹಾಗೆಯೇ ಸಾಮಾನ್ಯ ಜನರು ಸ್ವಂತ ಕಾರಿನಲ್ಲೇ ವಿಧಾನ ಸೌಧದೊಳಗೆ ಹೋಗಲು ನಾನಾ ಪ್ರಶ್ನೆಗಳನ್ನು ಕೇಳುವ, ಸೀಟು, ಢಿಕ್ಕಿಯಿಂದ ಹಿಡಿದು ತಳಭಾಗದಲ್ಲೂ ಕನ್ನಡಿಯಿಟ್ಟು ಪರಿಶೀಲಿಸುವ ವ್ಯವಸ್ಥೆಯಿರುವ ವಿಧಾನ ಸೌಧದಲ್ಲಿ ಕಳ್ಳರಿಗೆ ಮಾತ್ರ ಅಷ್ಟು ಸುಲಭವಾಗಿ ಶಾಸಕರ ಕಾರುಗಳೇ ಲಭ್ಯವಾಗುತ್ತವೆಯೆಂದರೆ ಜನ ಸಾಮಾನ್ಯರು ಶಾಸಕರ ಮತ್ತು ಮಂತ್ರಿಗಳ ಬಗ್ಗೆ ಒಂದು ಮಟ್ಟದ ಅನುಮಾನ ಇಟ್ಟುಕೊಂಡಿರಲೇಬೇಕು. ಇಲ್ಲದಿದ್ದರೆ ವಂಚನೆಗೊಳಗಾಗುವ ಸಂಭವವಿರುತ್ತದೆ. ನಾಡಿನ ಜನ ಸಾಮಾನ್ಯನೊಬ್ಬ ಸಚಿವರ ಭೇಟಿಗೆ ನೇರವಾಗಿ ವಿಧಾನ ಸೌಧದ ಅವರ ಕಚೇರಿಯೊಳಗೆ ಹೋಗುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇರುವಾಗ ಕಳ್ಳರು ಮಾತ್ರ ವಿಧಾನ ಸೌಧದೊಳಗಿನ ಸಚಿವರ ಕೋಣೆಯೊಳಗೆ ಹೋಗಿ ಸಚಿವರ ಕುರ್ಚಿಯಲ್ಲೇ ಕುಳಿತು, ಸಚಿವರೆಂದೇ ಹೇಳಿಕೊಂಡು ಕಳ್ಳತನಕ್ಕಿಳಿಯುತ್ತಾರೆಂದರೆ ಮುಂದಿನ ದಿನಗಳಲ್ಲಿ ಯಾರಾದರೂ “ನಾನೊಬ್ಬ ಕರ್ನಾಟಕ ಸರ್ಕಾರದ ಸಚಿವ” ಎಂದು ಹೇಳಿಕೊಂಡರೆ ಜನ ಸಾಮಾನ್ಯರು ಅವರ ಗುರುತು ಪತ್ರವನ್ನು ತೋರಿಸುವಂತೆ ಒತ್ತಾಯಿಸುವ ಮೂಲಕ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು.
ಯಾವುದೋ ದೇವಸ್ಥಾನವೊಂದರಲ್ಲಿ ಜೇಬುಗಳ್ಳರು ಭಕ್ತರ ಜೇಬುಗಳಿಂದ ಹಣ ಕದ್ದ ಪ್ರಕರಣವನ್ನು ಮುಂದಿಟ್ಟುಕೊಂಡು ಅಲ್ಲಿಗೆ ಬರುವ ಭಕ್ತಾದಿಗಳನ್ನು ಎಚ್ಚರಿಸಲು “ಜೇಬುಗಳ್ಳರಿದ್ದಾರೆ ಎಚ್ಚರಿಕೆ” ಎನ್ನುವ ಫಲಕಗಳನ್ನು ಆ ದೇವಾಲಯದ ಕಂಬಗಳ ಮೇಲೆ ಹಾಕುವ ಸರ್ಕಾರ, ಅದೇ ರೀತಿ ವಿಧಾನ ಸೌಧದಲ್ಲೇ ಸಚಿವರ ವೇಷದಲ್ಲಿ ಕುಳಿತು ಜನರಿಂದ ಕೋಟಿ ಕೋಟಿ ಹಣ ಕದಿಯುವ ಇಂತಹಾ ಪ್ರಕರಣವನ್ನೇ ಮುಂದಿಟ್ಟುಕೊಂಡು “ಕಳ್ಳರಿದ್ದಾರೆ ಎಚ್ಚರಿಕೆ” ಅಥವಾ “ವಂಚಕರಿದ್ದಾರೆ ಎಚ್ಚರಿಕೆ” ಎನ್ನುವ ಫಲಕಗಳನ್ನು ವಿಧಾನ ಸೌಧದ ಮೇಲೆ ಹಾಕುವ ಮೂಲಕ ಅಲ್ಲಿಗೆ ಬರುವ ಪ್ರಜೆಗಳನ್ನು ಎಚ್ಚರಿಸುವುದು ಸೂಕ್ತವಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.